ಚಳ್ಳಕೆರೆ | ಊಟದಲ್ಲಿ ಹುಳು ಪತ್ತೆ: ವಸತಿ ನಿಲಯದ ಅವ್ಯವಸ್ಥೆಗೆ ನ್ಯಾಯಾಧೀಶರು ಗರಂ
ಚಳ್ಳಕೆರೆ: ನಗರದ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಹುಳಗಳು ಕಂಡುಬರುತ್ತಿವೆ ಹಾಗೂ ಅಡುಗೆ ಸಿಬ್ಬಂದಿ ಗುಟ್ಕಾ, ಪಾನ್ಮಸಾಲ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ವಸತಿ ನಿಲಯಕ್ಕೆ ಭೇಟಿ ನೀಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್.ಸಂಗಮಿತ್ರಾ ಅವರು ನಿಲಯದ ನಿರ್ವಹಣೆ

ಚಳ್ಳಕೆರೆ: ನಗರದ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಹುಳಗಳು ಕಂಡುಬರುತ್ತಿವೆ ಹಾಗೂ ಅಡುಗೆ ಸಿಬ್ಬಂದಿ ಗುಟ್ಕಾ, ಪಾನ್ಮಸಾಲ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ವಸತಿ ನಿಲಯಕ್ಕೆ ಭೇಟಿ ನೀಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್.ಸಂಗಮಿತ್ರಾ ಅವರು ನಿಲಯದ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.‘ಬಚ್ಪನ್ ಅಭಿಯಾನ’ ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ಹಾಗೂ ಮಾದಕ ದ್ರವ್ಯ ಸೇವನೆಯ ಸಂತ್ರಸ್ತರಿಗೆ ಕಾನೂನು ನೆರವು ಒದಗಿಸಲು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದ ಭಾಗವಾಗಿ ನ್ಯಾಯಾಧೀಶರು ವಸತಿ ನಿಲಯಕ್ಕೆ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಊಟದ ಗುಣಮಟ್ಟ, ಸ್ವಚ್ಛತೆ ಹಾಗೂ ವಸತಿ ನಿಲಯದ ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿಗಳು ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದರು.ವಿದ್ಯಾರ್ಥಿಗಳ ಅಹವಾಲು ಆಲಿಸಿದ ನ್ಯಾಯಾಧೀಶರು, ನಿಲಯಪಾಲಕರು ಹಾಗೂ ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ‘ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಮತ್ತು ವಸತಿ ಸೌಲಭ್ಯಗಳಿಗಾಗಿ ಹಣ ವೆಚ್ಚ ಮಾಡುತ್ತಿದ್ದರೂ ಗುಣಮಟ್ಟದ ಆಹಾರ ಒದಗಿಸುವಲ್ಲಿ ಲೋಪವಾಗುತ್ತಿರುವುದೇಕೆ’ ಎಂದು ಪ್ರಶ್ನಿಸಿದರು. ‘ನಿಮ್ಮ ಮನೆಯ ಮಕ್ಕಳಿಗೆ ಇಂತಹ ಆಹಾರ ನೀಡುತ್ತೀರಾ’ ಎಂದು ಕೇಳುವ ಮೂಲಕ ಸಿಬ್ಬಂದಿಯ ಜವಾಬ್ದಾರಿಯನ್ನು ನೆನಪಿಸಿದರು.‘ಅಡುಗೆ ಸಿಬ್ಬಂದಿಯ ವರ್ತನೆಯನ್ನು ನಿಯಂತ್ರಿಸುವುದರ ಜತೆಗೆ, ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲು ನಿಲಯಪಾಲಕರು ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.‘ವಸತಿ ನಿಲಯದಲ್ಲಿ ಸ್ವಚ್ಛತೆ, ಶಿಸ್ತು ಹಾಗೂ ಆಹಾರದ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು’ ಎಂದು ಸೂಚಿಸಿದರು.‘ವಸತಿ ನಿಲಯಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ ವಿದ್ಯಾರ್ಥಿಗಳು ಭಯಪಡದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ನ್ಯಾಯಾಂಗದ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು. ತಮ್ಮ ಸಮಸ್ಯೆಗಳನ್ನು ನಿರ್ಭೀತಿಯಿಂದ ತಿಳಿಸಲು ವಕೀಲರ ಸಂಘದ ದೂರವಾಣಿ ಸಂಖ್ಯೆಗಳನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.ಕಾನೂನು ನೆರವು ಅಭಿರಕ್ಷಕರಾದ ಗೀತಾಂಜಲಿ ಹಾಗೂ ಪ್ಯಾನಲ್ ವಕೀಲರಾದ ಶಿಲ್ಪಾ ಡಿ. ಮತ್ತು ಶ್ರೀನಿವಾಸ್ ಉಪಸ್ಥಿತರಿದ್ದರು.