ಎಲ್ಎಸಿ ಗಡಿ ಉಲ್ಲಂಘನೆ ಹೊಸದೇನಲ್ಲ – ಅರುಣಾಚಲ ಸಿಎಂ ಪೆಮಾ ಖಂಡು
ಇಟಾನಗರ: ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆಯುತ್ತಿರುವ ಶೀಥಲ ಸಮರದ ಕುರಿತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು (Pema Khandu) ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಗಡಿಯಲ್ಲಿ ಉಲ್ಲಂಘನೆಗಳು ನಡೆಯುತ್ತಿರುವುದು ಹೊಸದೇನಲ್ಲ. ಆದ್ರೆ ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದ್ದಾರೆ

ಇಟಾನಗರ: ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆಯುತ್ತಿರುವ ಶೀಥಲ ಸಮರದ ಕುರಿತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು (Pema Khandu) ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಗಡಿಯಲ್ಲಿ ಉಲ್ಲಂಘನೆಗಳು ನಡೆಯುತ್ತಿರುವುದು ಹೊಸದೇನಲ್ಲ. ಆದ್ರೆ ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದ್ದಾರೆ. ಇಲ್ಲಿನ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಮೆಕ್ಮೋಹನ್ ರೇಖೆಯನ್ನು ಮಾನ್ಯ ಮಾಡುವುದಿಲ್ಲ. ಹೀಗಾಗಿ ಗಡಿಯಲ್ಲಿ ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಗಡಿ ಉಲ್ಲಂಘನೆ ನಡೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಗಡಿ ಇನ್ನೂ ಸ್ಪಷ್ಟವಾಗಿ ನಿರ್ಧಾರವಾಗದ ಕಾರಣ ಇದು ಹೊಸ ವಿಷಯವೇನಲ್ಲ. ಆದ್ರೆ ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ನಮ್ಮ ಸಶಸ್ತ್ರ ಪಡೆಗಳು ಗಡಿಯನ್ನು ಅತ್ಯುತ್ತಮವಾಗಿ ಕಾಯುತ್ತಿವೆ ಎಂದು ಖುಂಡು ಹೇಳಿದ್ದಾರೆ. ಅರುಣಾಚಲ ಪ್ರದೇಶವು (Arunachal Pradesh) ಟಿಬೆಟ್ ಗಡಿಯುದ್ದಕ್ಕೂ ಸುಮಾರು 1,200 ಕಿಲೋಮೀಟರ್ ಉದ್ದದ ಗಡಿಯನ್ನ ಹಂಚಿಕೊಂಡಿದೆ. ಚೀನಾ ಮೆಕ್ಮೋಹನ್ ರೇಖೆಯನ್ನ ಒಪ್ಪಿಕೊಳ್ಳದ ಕಾರಣ, ಕೆಲವೊಮ್ಮೆ ಚೀನಾದ ಗಸ್ತು ಪಡೆಗಳು ಈ ಭಾಗಕ್ಕೆ ಪ್ರವೇಶಿಸುತ್ತವೆ. ಅದೇ ರೀತಿ ನಮ್ಮ ಸೈನಿಕರೂ ಆ ಭಾಗಕ್ಕೆ ತೆರಳುವ ಸಂದರ್ಭಗಳಿವೆ ಎಂದು ಅವರು ವಿವರಿಸಿದ್ದಾರೆ. ಅರುಣಾಚಲದ ಹಲವು ಕಡೆಗಳಲ್ಲಿ ಸೇನೆಗಳ ಮುಖಾಮುಖಿ ಮೇಲಿನ ಸುಬನ್ಸಿರಿ ಜಿಲ್ಲೆಯ ತಕ್ಸಿಂಗ್ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಚಟುವಟಿಕೆಗಳಿಂದ ಉದ್ವಿಗ್ನತೆ ಉಂಟಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಭಾರತ ಮತ್ತು ಚೀನಾ ನಡುವೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿತ್ತು. ಇದಾದ ಸುಮಾರು ಒಂದು ತಿಂಗಳ ಬಳಿಕ, ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಕಳೆದ ವಾರ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಸೇನೆಗಳ ನಡುವೆ ಮುಖಾಮುಖಿ ನಡೆದಿದ್ದು, ಕೆಲವು ಕಡೆಗಳಲ್ಲಿ ಪರಿಸ್ಥಿತಿ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದರು. ಐಟಿಬಿಪಿ ಮುಖ್ಯಸ್ಥರ ಈ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಗಡಿಯಲ್ಲಿನ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ತಕ್ಷಣ ಉತ್ತರ ನೀಡಬೇಕು ಎಂದು ಆಗ್ರಹಿಸಿತ್ತು. ಸಿಯಾಂಗ್ ಅಣೆಕಟ್ಟು ಯೋಜನೆಗೆ ವಿರೋಧ ಇದೇ ವೇಳೆ, ಸಿಯಾಂಗ್ ಅಣೆಕಟ್ಟು ಯೋಜನೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆಯೂ ಮುಖ್ಯಮಂತ್ರಿ ಪೆಮಾ ಖಂಡು ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆ ಕೇವಲ ಜಲವಿದ್ಯುತ್ ಉತ್ಪಾದನೆಗೆ ಸೀಮಿತವಾಗಿಲ್ಲ. ಇದು ಮುಖ್ಯವಾಗಿ ರಕ್ಷಣಾತ್ಮಕ ಉದ್ದೇಶ ಹೊಂದಿರುವ ಯೋಜನೆಯಾಗಿದ್ದು, ಜಲವಿದ್ಯುತ್ ಉತ್ಪಾದನೆ ಅದರ ಒಂದು ಭಾಗವಾಗಿದೆ. ಸದ್ಯ ಯೋಜನೆ ಚರ್ಚೆಯ ಹಂತದಲ್ಲಿದೆ. ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗಡಿ ಪ್ರವಾಸೋದ್ಯಮಕ್ಕೆ ಒತ್ತು ಇದೇ ವೇಳೆ ಅರುಣಾಚಲ ಪ್ರದೇಶದಲ್ಲಿ ಯುದ್ಧಭೂಮಿ ಪ್ರವಾಸೋದ್ಯಮ ಮತ್ತು ಗಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆಯೂ ಮುಖ್ಯಮಂತ್ರಿ ಮಾತನಾಡಿದ್ದಾರೆ. ರಾಜ್ಯದ ಗಡಿ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಬಹುತೇಕ ಪ್ರವಾಸಿ ತಾಣಗಳು ಗಡಿ ಭಾಗಗಳಲ್ಲಿವೆ. ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲೂ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಮ್ಮ ಬಹುತೇಕ ಪ್ರವಾಸಿ ತಾಣಗಳು ಗಡಿ ಪ್ರದೇಶಗಳಲ್ಲಿವೆ. ಆದರೆ, ಇದು ಆಯಕಟ್ಟಿನ ರಾಜ್ಯವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಲು ಅಗತ್ಯ ಅನುಮತಿಗಳು ಬೇಕಾಗುತ್ತವೆ. ಪ್ರವೇಶದ ಮೇಲೆಯೂ ನಿಯಂತ್ರಣವಿದೆ ಅಂತಲೂ ಪೆಮಾ ಖಂಡು ತಿಳಿಸಿದ್ದಾರೆ.