ನನಗಿಂತ ಕೆಟ್ಟವನು ಇನ್ನೊಬ್ಬನಿಲ್ಲ: ಗೋಹತ್ಯೆ, ನುಸುಳುಕೋರರಿಗೆ ಸುವೇಂದು ಎಚ್ಚರಿಕೆ
ರಾಯ್ಗಂಜ್ (ಪಶ್ಚಿಮ ಬಂಗಾಳ): ‘ರಾಜ್ಯದಲ್ಲಿ ಗೋಹತ್ಯೆ ನಡೆದರೆ ನನಗಿಂತ ಕೆಟ್ಟವನು ಇನ್ನೊಬ್ಬನಿರುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಉತ್ತರ ದಿನಾಜ್ಪುರ ಜಿಲ್ಲೆಯ ರಾಯ್ಗಂಜ್ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ‘ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುತ್ತೇವೆ. ಹಾಗೆಯೇ ಪ

ರಾಯ್ಗಂಜ್ (ಪಶ್ಚಿಮ ಬಂಗಾಳ): ‘ರಾಜ್ಯದಲ್ಲಿ ಗೋಹತ್ಯೆ ನಡೆದರೆ ನನಗಿಂತ ಕೆಟ್ಟವನು ಇನ್ನೊಬ್ಬನಿರುವುದಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಉತ್ತರ ದಿನಾಜ್ಪುರ ಜಿಲ್ಲೆಯ ರಾಯ್ಗಂಜ್ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ‘ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುತ್ತೇವೆ. ಹಾಗೆಯೇ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡುವುದನ್ನು ಖಚಿತಪಡಿಸುತ್ತೇವೆ’ ಎಂದು ಹೇಳಿದ್ದಾರೆ.‘ಹಿಂದೂಗಳಿಗೆ ಪವಿತ್ರವಾಗಿರುವ ‘ಗೋಮಾತೆ’ಯ ಮೇಲೆ ಯಾರೂ ಕೈ ಎತ್ತಬಾರದು, ಹಾನಿ ಮಾಡಬಾರದು. ಒಂದು ವೇಳೆ ಹಾಗೇನಾದರೂ ಮಾಡಿದ್ದೇ ಆದಲ್ಲಿ, ನನಗಿಂತ ಕೆಟ್ಟವನು ಇನ್ನೊಬ್ಬನಿರುವುದಿಲ್ಲ’ ಎಂದಿದ್ದಾರೆ. ‘ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು’ ಎಂಬಂತಹ ಘೋಷಣೆಗಳನ್ನು ಕೂಗುವವರಿಗೆ ಗಡಿ ಪ್ರದೇಶಗಳಲ್ಲಿ ಸಕ್ರಿಯವಾಗಿರಲು ಅವಕಾಶ ನೀಡಬಾರದು. ತುಕ್ಡೆ-ತುಕ್ಡೆ ಗ್ಯಾಂಗ್ಗಳು ಮತ್ತು ಕಾಕ್ರೋಚ್ಗಳು (ಜಿರಲೆಗಳು) ತಮ್ಮ ನೆಲೆಯನ್ನು ವಿಸ್ತರಿಸಲು ಸಾಧ್ಯವಾಗದಂತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.‘ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸುವೇಂದು, ಹಿಂದೂ ಧರ್ಮದ ಒಬ್ಬನೇ ಒಬ್ಬ ನಿರಾಶ್ರಿತನೂ ಜೈಲಿಗೆ ಹೋಗದಂತೆ ನೋಡಿಕೊಳ್ಳುತ್ತೇವೆ. ಅಲ್ಲದೆ, ಇದುವರೆಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸದವರು ತಕ್ಷಣವೇ ಅರ್ಜಿ ಸಲ್ಲಿಸಬೇಕು’ ಎಂದು ಅವರು ಹೇಳಿದ್ದಾರೆ.‘ರಾಜ್ಯದಲ್ಲಿ ಯಾವುದೇ ದೇಶವಿರೋಧಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಇದಕ್ಕೆ ಪೂರಕವಾಗಿ ಅಕ್ರಮ ನಡೆಸಲಾಗುತ್ತಿದ್ದ ಮದರಸಾಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ’ ಎಂದಿದ್ದಾರೆ.