ಫಾರ್ಮಾ ವಲಯದಲ್ಲಿ ಇದೆಯೇ ಅವಕಾಶ?
ದೇಶದ ಫಾರ್ಮಾ ವಲಯವು ಬೆಳವಣಿಗೆಯ ಹೊಸ ಹಂತವೊಂದನ್ನು ಪ್ರವೇಶಿಸುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು, ಜಾಗತಿಕ ಮಟ್ಟದಲ್ಲಿ ಕೆಲವು ಹಕ್ಕುಸ್ವಾಮ್ಯಗಳ ಅವಧಿ ಪೂರ್ಣಗೊಂಡಿರುವ ಕಾರಣದಿಂದಾಗಿ ಹೊಸ ಅವಕಾಶಗಳು ಸಿಕ್ಕುತ್ತಿರುವುದು, ಸಂಕೀರ್ಣವಾದ ಔಷಧಗಳು ಹಾಗೂ ಗುತ್ತಿಗೆ ಆಧಾರಿತ ಉತ್ಪಾದನೆಗೆ ಆದ್ಯತೆ ಹೆಚ್ಚುತ್ತಿರುವುದು ಫಾರ್ಮಾ ವಲಯದ ಬೆಳವಣಿಗೆ

ದೇಶದ ಫಾರ್ಮಾ ವಲಯವು ಬೆಳವಣಿಗೆಯ ಹೊಸ ಹಂತವೊಂದನ್ನು ಪ್ರವೇಶಿಸುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು, ಜಾಗತಿಕ ಮಟ್ಟದಲ್ಲಿ ಕೆಲವು ಹಕ್ಕುಸ್ವಾಮ್ಯಗಳ ಅವಧಿ ಪೂರ್ಣಗೊಂಡಿರುವ ಕಾರಣದಿಂದಾಗಿ ಹೊಸ ಅವಕಾಶಗಳು ಸಿಕ್ಕುತ್ತಿರುವುದು, ಸಂಕೀರ್ಣವಾದ ಔಷಧಗಳು ಹಾಗೂ ಗುತ್ತಿಗೆ ಆಧಾರಿತ ಉತ್ಪಾದನೆಗೆ ಆದ್ಯತೆ ಹೆಚ್ಚುತ್ತಿರುವುದು ಫಾರ್ಮಾ ವಲಯದ ಬೆಳವಣಿಗೆಗೆ ನೆರವಾಗಿವೆ. ಇವುಗಳ ಜೊತೆಗೆ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಬಯೋಫಾರ್ಮಾ ವಲಯದ ಸಾಮರ್ಥ್ಯವನ್ನು ವಿಸ್ತರಿಸಲು ಸರ್ಕಾರ ಒದಗಿಸುತ್ತಿರುವ ಸಹಾಯವು ಹೆಚ್ಚುವರಿ ನೂಕುಬಲವನ್ನು ಫಾರ್ಮಾ ವಲಯಕ್ಕೆ ನೀಡುತ್ತಿದೆ.ಇವೆಲ್ಲವೂ ಒಟ್ಟಾಗಿ ಮಧ್ಯಮಾವಧಿಗೆ ಹಾಗೂ ದೀರ್ಘಾವಧಿಗೆ ಫಾರ್ಮಾ ವಲಯದ ಗಳಿಕೆ ಸಾಮರ್ಥ್ಯವನ್ನು ಬಲಪಡಿಸುವ ನಿರೀಕ್ಷೆ ಇದೆ. ದೇಶದಲ್ಲಿನ ಬಳಕೆಗೆ ದೇಶದೊಳಗೆ ತಯಾರಾಗುವ ಔಷಧಗಳು (domestic formulations), ರಫ್ತು ವಹಿವಾಟು, ಸಂಕೀರ್ಣವಾದ ಜೆನೆರಿಕ್ ಔಷಧಗಳು, ಬಯೋಸಿಮಿಲರ್ಗಳು ಮತ್ತು ಗುತ್ತಿಗೆ ಆಧಾರಿತ ತಯಾರಿಕೆ ವಿಭಾಗಗಳಲ್ಲಿ ಹೆಚ್ಚಿನ ಅವಕಾಶಗಳು ಈ ವಲಯಕ್ಕೆ ಇವೆ.ಬೆಳವಣಿಗೆಗೆ ಪೂರಕ ಇವು: ಜಾಗತಿಕ ಮಟ್ಟದಲ್ಲಿ (ಪ್ರಮಾಣದ ಲೆಕ್ಕದಲ್ಲಿ) ಭಾರತವು ಮೂರನೆಯ ಅತಿದೊಡ್ಡ ಔಷಧ ತಯಾರಿಕಾ ದೇಶ. ಭಾರತವು ವಿಶ್ವದ ಜೆನೆರಿಕ್ ಔಷಧಗಳ ಪೈಕಿ ಶೇ 20ರಷ್ಟುನ್ನು ತಾನೇ ಪೂರೈಸುತ್ತದೆ. ದೇಶದ ಔಷಧ ಉದ್ಯಮ ವಲಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಂಪನಿಗಳಿವೆ, 10,500ಕ್ಕೂ ಹೆಚ್ಚು ತಯಾರಿಕಾ ಘಟಕಗಳು ಇವೆ. ಸರಿಸುಮಾರು 60 ಸಾವಿರ ಜೆನೆರಿಕ್ ಬ್ರ್ಯಾಂಡ್ಗಳು ದೇಶದಲ್ಲಿವೆ. ಇವುಗಳ ವಾರ್ಷಿಕ ಒಟ್ಟು ವಹಿವಾಟು 2024–25ನೆಯ ಹಣಕಾಸು ವರ್ಷದಲ್ಲಿ ₹4.72 ಲಕ್ಷ ಕೋಟಿಯಷ್ಟು ಆಗಿತ್ತು. (ಮೂಲ: https://www.ibef.org/)ದೇಶದಲ್ಲಿನ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿರುವುದು ಉದ್ಯಮವು ಈಗಾಗಲೇ ಹೊಂದಿರುವ ಬಲಿಷ್ಠ ನೆಲೆಗೆ ಪೂರಕವಾಗಿ ಒದಗಿಬರುತ್ತಿದೆ. ದೇಶದ ಔಷಧ ಮಾರುಕಟ್ಟೆಯ ಗಾತ್ರವು 2030ರ ವೇಳೆಗೆ 130 ಬಿಲಿಯನ್ ಡಾಲರ್ಗೆ () ಹಿಗ್ಗುವ ಅಂದಾಜು ಇದೆ. ಮಾರುಕಟ್ಟೆಯ ಗಾತ್ರವು 2021ರಲ್ಲಿ 42 ಬಿಲಿಯನ್ ಡಾಲರ್ ಆಗಿತ್ತು, 2025ರಲ್ಲಿ ಅದು 58 ಬಿಲಿಯನ್ ಡಾಲರ್ ಆಗಿತ್ತು. ದೇಶದಲ್ಲಿ ಆರೋಗ್ಯಸೇವೆಗಳ ಲಭ್ಯತೆ ಹೆಚ್ಚುತ್ತಿರುವುದು, ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಪ್ರಮಾಣ ಹೆಚ್ಚುತ್ತಿರುವುದು ಹಾಗೂ ಹೊಸ ಉತ್ಪನ್ನಗಳ ಬಿಡುಗಡೆಯು ಇದಕ್ಕೆ ಕಾರಣ. ಈಚೆಗಿನ ಬೆಳವಣಿಗೆ ಅಂಕಿ–ಅಂಶಗಳು ಕೂಡ ಉತ್ತೇಜನಕಾರಿಯಾಗಿ ಇವೆ. ಮಾರುಕಟ್ಟೆಯು 2026ರ ಜೂನ್ನಲ್ಲಿ ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಶೇ 13.3ರಷ್ಟು ಬೆಳವಣಿಗೆ ಕಂಡಿದೆ. ಅಂದರೆ ಮಾರುಕಟ್ಟೆಯ ಬೆಳವಣಿಗೆ ಪ್ರಮಾಣವು ಸತತ ಆರು ತಿಂಗಳುಗಳಿಂದ ಎರಡು ಅಂಕಿಗಳ ಮಟ್ಟದಲ್ಲಿದೆ.ದೇಶಿ ಮಾರುಕಟ್ಟೆಯಲ್ಲಿನ ಬೇಡಿಕೆಯಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿನ ಕೆಲವು ಬೆಳವಣಿಗೆಗಳು ಕೂಡ ದೇಶದ ತಯಾರಕರಿಗೆ ಇನ್ನೊಂದಿಷ್ಟು ಅವಕಾಶಗಳನ್ನು ತೆರೆದುಕೊಟ್ಟಿವೆ. ಕೆಲವು ಪ್ರಮುಖ ಔಷಧಗಳ ಹಕ್ಕುಸ್ವಾಮ್ಯದ ಅವಧಿ ಮುಗಿಯುತ್ತಿರುವುದು ಜೆನೆರಿಕ್ ಹಾಗೂ ಬಯೋಸಿಮಿಲರ್ಗಳ ತಯಾರಕರಿಗೆ ಅವಕಾಶಗಳನ್ನು ತೆರೆದುಕೊಡುತ್ತಿದೆ. 2024ರಿಂದ 2026ರವರೆಗಿನ ಅವಧಿಯಲ್ಲಿ ಕೊನೆಗೊಳ್ಳುವ ಹಕ್ಕುಸ್ವಾಮ್ಯಗಳ ಕಾರಣದಿಂದಾಗಿ ಬಯೋಸಿಮಿಲರ್ಗಳಲ್ಲಿ ಸೃಷ್ಟಿಯಾಗುವ ಅವಕಾಶಗಳ ಮೊತ್ತವು 4 ಬಿಲಿಯನ್ ಡಾಲರ್ಗಿಂತ () ಹೆಚ್ಚು ಅಂದಾಜಿಸಲಾಗಿದೆ. ಕಡಿಮೆ ವೆಚ್ಚದ ಪರ್ಯಾಯ ಆಯ್ಕೆಗಳು ಮಾರುಕಟ್ಟೆಯನ್ನು ಪ್ರವೇಶಿಸಿದಂತೆಲ್ಲ ಸಂಕೀರ್ಣವಾದ ಔಷಧ, ಚುಚ್ಚುಮದ್ದು, ಬಯೋಲಾಜಿಕ್ಸ್ ತಯಾರಿಸುವ ಸಾಮರ್ಥ್ಯವಿರುವ ಭಾರತದ ಕಂಪನಿಗಳಿಗೆ ಅನುಕೂಲ ಆಗುತ್ತದೆ. (ಮಾಹಿತಿ ಮೂಲ: ಫಾರ್ಮಾ ಇಲಾಖೆ ಮತ್ತು ನೀತಿ ಆಯೋಗ)ಸೆಮಾಗ್ಲುಟೈಡ್ಗೆ ಇದ್ದ ಪೇಟೆಂಟ್ ರಕ್ಷಣೆಯ ಅವಧಿ ಕೊನೆಗೊಂಡ ಕಾರಣದಿಂದಾಗಿ ಮಧುಮೇಹ ಮತ್ತು ಸ್ಥೂಲಕಾಯದ ಚಿಕಿತ್ಸೆಯಲ್ಲಿ ಬಳಸುವ ಜಿಎಲ್ಪಿ–1 ಔಷಧಗಳು ಮುನ್ನೆಲೆಗೆ ಬರುತ್ತಿರುವುದು ಬೆಳವಣಿಗೆಗೆ ಇನ್ನೊಂದು ಅವಕಾಶವನ್ನು ಒದಗಿಸುತ್ತಿದೆ. ಆದರೆ ಅವುಗಳ ಬೆಲೆ, ಸ್ಪರ್ಧಾತ್ಮಕತೆ ಮತ್ತು ತಯಾರಿಕಾ ಸಾಮರ್ಥ್ಯವು ವಾಣಿಜ್ಯ ಯಶಸ್ಸನ್ನು ನಿರ್ಧರಿಸಲಿದೆ. ಜಾಗತಿಕ ಮಟ್ಟದ ಔಷಧ ಕಂಪನಿಗಳು ಸಂಶೋಧನೆ, ಅಭಿವೃದ್ಧಿ ಮತ್ತು ತಯಾರಿಕಾ ಚಟುವಟಿಕೆಯನ್ನು ಭಾರತದ ಕಂಪನಿಗಳಿಗೆ ವಹಿಸುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಔಷಧಗಳ ಅಭಿವೃದ್ಧಿ ಮತ್ತು ತಯಾರಿಕೆಯ ಕ್ಷೇತ್ರದಲ್ಲಿರುವ ಸಂಸ್ಥೆಗಳು ಕೂಡ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಇನ್ನೊಂದೆಡೆ, ಭಾರತದ ತಯಾರಿಕಾ ಕಂಪನಿಗಳು ಸಾಂಪ್ರದಾಯಿಕವಾದ ಜೆನೆರಿಕ್ ಔಷಧಗಳ ಆಚೆಗೂ ಕಣ್ಣು ಹಾಯಿಸಿ ಹೆಚ್ಚಿನ ಮೌಲ್ಯದ ಉತ್ಪನ್ನಗಳ ತಯಾರಿಕೆ ಮತ್ತು ಹೆಚ್ಚಿನ ಮೌಲ್ಯದ ಸೇವೆಗಳನ್ನು ಒದಗಿಸಲು ಮುಂದಾಗಿವೆ. ರಫ್ತು ವಹಿವಾಟುಗಳನ್ನು ವೈವಿಧ್ಯಮಯ ಆಗಿಸಿಕೊಳ್ಳುವ ಕೆಲಸವು ಇದಕ್ಕೆ ಇನ್ನಷ್ಟು ಬಲ ಕೊಡಬಹುದು.ನೀತಿಗಳಲ್ಲಿನ ಬೆಂಬಲವು ನೆರವಿಗೆ ಬರಬಹುದಾದ ಇನ್ನೊಂದು ಸಂಗತಿ. ಎಪಿಐಗಳನ್ನು (ಆ್ಯಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್ಗ್ರೇಡಿಯೆಂಟ್ಸ್) ದೇಶದಲ್ಲಿಯೇ ತಯಾರಿಸಲು ಹಾಗೂ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಯ ಅಡಿ ನೆರವು ಒದಗಿಸಲಾಗುತ್ತಿದೆ. ಬಯೋಫಾರ್ಮಾ ಶಕ್ತಿ ಯೋಜನೆಯ ಅಡಿಯಲ್ಲಿ ಸಂಶೋಧನೆ, ತಂತ್ರಜ್ಞಾನ ಮತ್ತು ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ನಿಯಮಗಳ ಮಾನದಂಡಕ್ಕೆ ಹೆಚ್ಚು ಹೊಂದಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳುತ್ತಿರುವುದು ಕೂಡ ವಿದೇಶಿ ಮಾರುಕಟ್ಟೆಗಳ ಲಭ್ಯತೆಯನ್ನು ಸುಲಭವಾಗಿಸಬಹುದು.ಬೇಡಿಕೆ, ರಫ್ತು ಮತ್ತು ನೀತಿಗಳಲ್ಲಿನ ಬೆಂಬಲವು ಉದ್ಯಮದ ವಾರ್ಷಿಕ ಬೆಳವಣಿಗೆ ಅಂದಾಜು ಆಗಿರುವ ಶೇ 9–11ರ ಮಟ್ಟವನ್ನು ತಲುಪಲು ನೆರವಾಗಬಹುದು.ಸಾಧನೆ ಹೇಗಿದೆ?:ಬೆಳವಣಿಗೆಯ ಮುನ್ನೋಟವು ಸುಧಾರಣೆ ಕಾಣುತ್ತಿರುವುದು ನಿಫ್ಟಿ ಫಾರ್ಮಾ ಸೂಚ್ಯಂಕದ ಗಳಿಕೆಯಲ್ಲಿ ಕಾಣುತ್ತಿದೆ. ಈ ಸೂಚ್ಯಂವು 2023ರಲ್ಲಿ ಶೇ 35ರಷ್ಟು, 2024ರಲ್ಲಿ ಶೇ 40ರಷ್ಟು ಗಳಿಕೆ ಕಂಡಿದೆ. ಇದಕ್ಕೂ ಮೊದಲು, ಅಂದರೆ 2020ರಲ್ಲಿ ಸೂಚ್ಯಂಕವು ಶೇ 62ರಷ್ಟು ಜಿಗಿದಿತ್ತು. ಈ ವರ್ಷದ ಸೆಪ್ಟೆಂಬರ್ 30ರ ಅಂಕಿ–ಅಂಶದ ಪ್ರಕಾರ ಈ ಸೂಚ್ಯಂಕದ ಒಂದು, ಮೂರು ಹಾಗೂ ಐದು ವರ್ಷಗಳ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು ಕ್ರಮವಾಗಿ ಅಂದಾಜು ಶೇ 24ರಷ್ಟು, ಶೇ 20ರಷ್ಟು ಹಾಗೂ ಶೇ 13ರಷ್ಟು ಇತ್ತು.ಸೂಚ್ಯಂಕದ ಮೌಲ್ಯ ಕೂಡ ಬೆಳವಣಿಗೆಯ ನಿರೀಕ್ಷೆಗಳನ್ನು ಪ್ರತಿಫಲಿಸುತ್ತಿದೆ. ಸೂಚ್ಯಂಕದ ಪಿ.ಇ ಅನುಪಾತವು 40.90 ಪಟ್ಟು ಇತ್ತು. ಇದೇ ವೇಳೆ ನಿಫ್ಟಿ–500 ಸೂಚ್ಯಂಕದ ಈ ಅನುಪಾತವು 21.77 ಪಟ್ಟು. ನಿಫ್ಟಿ ಫಾರ್ಮಾ ಸೂಚ್ಯಂಕದ ಪಿ.ಬಿ. ಅನುಪಾತವು 4.98 ಆಗಿದೆ. ಗಳಿಕೆಯಲ್ಲಿನ ಏರಿಕೆಯನ್ನು ಹೂಡಿಕೆದಾರರು ಈಗಾಗಲೇ ಮನಸ್ಸಿನಲ್ಲಿ ಇರಿಸಿಕೊಂಡಿದ್ದಾರೆ ಎಂಬುದನ್ನು ಈ ಮಟ್ಟಗಳು ಹೇಳುತ್ತಿವೆ. ಅಂತರರಾಷ್ಟ್ರೀಯ ಹಾಗೂ ದೇಶಿ ಮಾರುಕಟ್ಟೆಯಲ್ಲಿನ ಅವಕಾಶಗಳು ವಿಸ್ತರಣೆ ಕಾಣುತ್ತಿರುವುದು ಕೂಡ ಇದಕ್ಕೆ ನೆರವಿಗೆ ಬಂದಿವೆ.ಹೂಡಿಕೆಗೆ ಹಾದಿ:ಹೂಡಿಕೆದಾರರು ಸಕ್ರಿಯವಾಗಿ ನಿರ್ವಹಣೆ ಕಾಣುವ ಫಾರ್ಮಾ ಫಂಡ್ಗಳ ಮೂಲಕ ಅಥವಾ ಫಾರ್ಮಾ ಆಧಾರಿತ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳ (ಇಟಿಎಫ್) ಮೂಲಕ ಈ ವಲಯದಲ್ಲಿ ಹೂಡಿಕೆ ಮಾಡಬಹುದು. ಸಕ್ರಿಯವಾಗಿ ನಿರ್ವಹಣೆ ಕಾಣುವ ಫಂಡ್ಗಳು ಅವುಗಳ ನಿರ್ವಹಣೆ ಮಾಡುವವರಿಗೆ, ವಲಯದಲ್ಲಿನ ಅವಕಾಶಗಳಿಂದ ಉತ್ತಮ ಲಾಭ ಪಡೆಯುವ ಸ್ಥಿತಿಯಲ್ಲಿರುವ ಕಂಪನಿಗಳನ್ನು ಆಯ್ಕೆ ಮಾಡಲು ನೆರವಾಗುತ್ತವೆ. ಹೀಗಾಗಿ ಈ ಫಂಡ್ಗಳ ಗಳಿಕೆಯ ಪ್ರಮಾಣವು ಫಂಡ್ ನಿರ್ವಾಹಕರ ಷೇರು ಆಯ್ಕೆ ತೀರ್ಮಾನವನ್ನು ಗಣನೀಯ ಮಟ್ಟದಲ್ಲಿ ಆಧರಿಸಿರುತ್ತವೆ.ಆದರೆ ಸಕ್ರಿಯ ನಿರ್ವಹಣೆಯ ಅಗತ್ಯವಿಲ್ಲದ ಇಟಿಎಫ್ಗಳು ಫಾರ್ಮಾ ಸೂಚ್ಯಂಕಕ್ಕೆ ಅನುಗುಣವಾಗಿ ಇರುತ್ತವೆ. ಉದಾಹರಣೆಗೆ ಹೇಳುವುದಾದರೆ ನಿಫ್ಟಿ ಫಾರ್ಮಾ ಸೂಚ್ಯಂಕವನ್ನು ಆಧರಿಸಿದ ಫಂಡ್ 20 ಕಂಪನಿಗಳಲ್ಲಿ ಹಣ ತೊಡಗಿಸುತ್ತದೆ. ಈ ಪೈಕಿ ಮೊದಲ ಮೂರು ಸ್ಥಾನಗಳಲ್ಲಿ ಇರುವ ಕಂಪನಿಗಳಿಗೆ ಸಿಗುವ ಆದ್ಯತೆ ಒಟ್ಟು ಸೂಚ್ಯಂಕದ ಸರಿಸುಮಾರು ಶೇ 39ರಷ್ಟು ಆಗಿರುತ್ತದೆ. ಹೀಗಾಗಿ, ಇಟಿಎಫ್ಗಳು ಪಾರದರ್ಶಕವಾದ, ನಿಯಮ ಆಧಾರಿತವಾದ ಹೂಡಿಕೆ ಮಾರ್ಗವನ್ನು ಕಲ್ಪಿಸುತ್ತವೆ. ಇವುಗಳಿಗೆ ನಿಗದಿಯಾಗಿರುವ ವೆಚ್ಚ ಕೂಡ ಸಾಮಾನ್ಯವಾಗಿ ಕಡಿಮೆ ಇರುತ್ತದೆ.ದೇಶದ ಫಾರ್ಮಾ ವಲಯದ ಕಂಪನಿಗಳು ಒದಗಿಸಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಯಕೆ ಇರುವ ಹೂಡಿಕೆದಾರರಿಗೆ ಇಟಿಎಫ್ ಮೂಲಕ ಹಣ ತೊಡಗಿಸುವುದು ಸುಲಭವಾದ ಮಾರ್ಗವಾಗಬಹುದು.ಲೇಖಕಿ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿಯ ಹಿರಿಯ ಅಧಿಕಾರಿ