ಇತಿಹಾಸಕ್ಕೆ ಹೊಸ ತಿರುವು ನೀಡುವ ಶಾಸನ ಪತ್ತೆ
ಶಿರಾಳಕೊಪ್ಪ (ಶಿಕಾರಿಪುರ): ಕರ್ನಾಟಕ ಇತಿಹಾಸದ ಪುಟಗಳಲ್ಲಿ ಇದುವರೆಗೆ ತೆರೆಮರೆಯಲ್ಲಿ ಉಳಿದಿದ್ದ ರಾಷ್ಟ್ರಕೂಟರ ವಂಶಾವಳಿ ತಿಳಿಸುವ ಕಲ್ಲಿನ ಶಾಸನ ‘ಲಿಪಿ ಸಹಿತ ಗೋಸಾನ ಶಾಸನ’ವೊಂದು ಸಮೀಪದ ನೇರಲಗಿ ಗ್ರಾಮದಲ್ಲಿ ಈಚೆಗೆ ಪತ್ತೆಯಾಗಿದೆ.ಗ್ರಾಮದ ರವಿಕುಮಾರ್ ಎಂಬವರ ತೋಟದಲ್ಲಿದ್ದ ಈ ಶಾಸನ 104 ಸೆಂ.ಮೀ. ಎತ್ತರ, 62 ಸೆಂ.ಮೀ. ಅಗಲ, 24 ಸೆಂ.ಮೀ. ದಪ್ಪದ ಕಲ್ಲಿನಲ್ಲಿ ಕೆತ್

ಶಿರಾಳಕೊಪ್ಪ (ಶಿಕಾರಿಪುರ): ಕರ್ನಾಟಕ ಇತಿಹಾಸದ ಪುಟಗಳಲ್ಲಿ ಇದುವರೆಗೆ ತೆರೆಮರೆಯಲ್ಲಿ ಉಳಿದಿದ್ದ ರಾಷ್ಟ್ರಕೂಟರ ವಂಶಾವಳಿ ತಿಳಿಸುವ ಕಲ್ಲಿನ ಶಾಸನ ‘ಲಿಪಿ ಸಹಿತ ಗೋಸಾನ ಶಾಸನ’ವೊಂದು ಸಮೀಪದ ನೇರಲಗಿ ಗ್ರಾಮದಲ್ಲಿ ಈಚೆಗೆ ಪತ್ತೆಯಾಗಿದೆ.ಗ್ರಾಮದ ರವಿಕುಮಾರ್ ಎಂಬವರ ತೋಟದಲ್ಲಿದ್ದ ಈ ಶಾಸನ 104 ಸೆಂ.ಮೀ. ಎತ್ತರ, 62 ಸೆಂ.ಮೀ. ಅಗಲ, 24 ಸೆಂ.ಮೀ. ದಪ್ಪದ ಕಲ್ಲಿನಲ್ಲಿ ಕೆತ್ತನೆಯಾಗಿದೆ. ಮೇಲ್ಭಾಗ ಅರ್ಧ ವೃತ್ತಾಕಾರದಲ್ಲಿದ್ದು ತಳಭಾಗ ಚೌಕಾಕಾರದಲ್ಲಿದೆ. ಪೂರ್ವ, ಪಶ್ಚಿಮ ಭಾಗದಲ್ಲಿ ಪೂರ್ಣಕುಂಭದ ಕೆತ್ತನೆ ಇದ್ದು, ಮೇಲ್ಭಾಗದಲ್ಲಿ 7 ಸಾಲು ಹಾಗೂ ಕೆಳ ಪಟ್ಟಿಯಲ್ಲಿ 3 ಸಾಲುಗಳ ಬರಹವಿದೆ. ಒಂದಷ್ಟು ಮತ್ತರು ಭೂಮಿ ಮತ್ತು ಗೋವುಗಳನ್ನು ದಾನ ನೀಡಿದ ವಿವರವಿದ್ದು, ದಾನಿಯ ಹೆಸರಿನ ಭಾಗ ನಶಿಸಿ ಹೋಗಿದೆ.ಸಂಸ್ಕೃತದ ಗೋಸಹಸ್ರ ಪದದ ಕನ್ನಡ ತದ್ಭವವೇ ‘ಗೋಸಾನ’. ಷೋಡಶ ಮಹಾದಾನಗಳಲ್ಲಿ ಒಂದಾದ ‘ಸಾವಿರ ಗೋವುಗಳ ದಾನ’ ನೆರವೇರಿಸಿದ ನೆನಪಿಗಾಗಿ ಇಂತಹ ಕಲ್ಲುಗಳನ್ನು ನೆಡಲಾಗುತ್ತಿತ್ತು. ದಾನಿಯು ಕೇವಲ ಹಾಲು ಕುಡಿದು ವ್ರತವನ್ನಾಚರಿಸಿ, ಬಂಗಾರದ ನಂದಿ ಹಾಗೂ ಹತ್ತು ಹಸುಗಳನ್ನು ಮಂಟಪಕ್ಕೆ ತಂದು ಪೂಜಿಸಿ ಗುರುಗಳು, ಪುರೋಹಿತರಿಗೆ ಹಂಚಿ ಉಳಿದ 900 ಹಸುಗಳನ್ನು ಬ್ರಾಹ್ಮಣರಿಗೆ ಸಮರ್ಪಿಸುವ ಧಾರ್ಮಿಕ ವಿಧಿ ವಿಧಾನ ಇದಾಗಿತ್ತು. ಶಿಕಾರಿಪುರ, ಸೊರಬ, ಹಾನಗಲ್ಲು, ಹಿರೇಕೇರೂರು ಭಾಗದಲ್ಲಿ ಇಂತಹ ಕಲ್ಲುಗಳು ಕಂಡು ಬಂದಿವೆ. ಆದರೆ ಈ ಕಲ್ಲಿನಲ್ಲಿ ಅಕ್ಷರಗಳಿದ್ದು, ಈ ಸ್ವರೂಪದ್ದು ಈವೆರೆಗೆ ಸಿಕ್ಕಿರಲಿಲ್ಲ.‘ಇಮ್ಮಡಿ ಅಮೋಘವರ್ಷನ ಮಗನಾದ ಜಗತ್ತುಂಗನು ಅಧಿಕಾರಕ್ಕೆ ಬರಲೇ ಇಲ್ಲ ಎಂಬುದು ಬಹುತೇಕ ಇತಿಹಾಸಕಾರರ ಅಭಿಪ್ರಾಯವಾಗಿತ್ತು. ದೊರೆತಿರುವ ಈ ಶಾಸನದಲ್ಲಿ ಜಗತ್ತುಂಗನನ್ನು ರಾಜರಿಗೆ ಸಲ್ಲುವ ಪರಮೋಚ್ಛ ಬಿರುದುಗಳಾದ ‘ಪೃಥ್ವಿ ವಲ್ಲಭ, ಮಹಾರಾಜಾಧಿರಾಜ, ಪರಮೇಶ್ವರ ಭಟಾರ’ ಎಂದು ಉಲ್ಲೇಖಿಸಲಾಗಿದೆ. ಇದನ್ನು ಗಮನಿಸಿದರೆ, ಆತ ಒಂದಷ್ಟು ಕಾಲ ಅಧಿಕಾರದಲ್ಲಿ ಇದ್ದ ಎಂಬುದು ಈ ಶಾಸನದಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ಅಮೋಘವರ್ಷನ ಮತ್ತೊಬ್ಬ ಪುತ್ರ 3ನೇ ಕೃಷ್ಣನನ್ನು ‘ಅಕಾಲವರ್ಷ’ ಎಂಬ ಬಿರುದಿನೊಂದಿಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಆತ ಜಗತ್ತುಂಗನ ಅಡಿಯಲ್ಲಿ ದಂಡನಾಯಕನಾಗಿ ಬನವಾಸಿ 12000 ನಾಡನ್ನು ಆಡಳುತ್ತಿದ್ದ ವಿಚಾರವೂ ಶಾಸನದಲ್ಲಿ ದೃಢಪಟ್ಟಿದೆ’ ಎಂದು ಇತಿಹಾಸ ಸಂಶೋಧಕ ರಮೇಶ್ ಬಿ.ಹಿರೇಜಂಬೂರು ಹೇಳಿದ್ದಾರೆ.ಜಮೀನಿನಲ್ಲಿ ಬಿದ್ದಿದ್ದ ಕಲ್ಲನ್ನು ಉರಗ ಸಂರಕ್ಷಕ ಅರುಣ್ಕುಮಾರ್ ಗಮನಿಸಿ ಇತಿಹಾಸ ಸಂಶೋಧಕರ ಗಮನಕ್ಕೆ ತಂದಿದ್ದರು. ಶಾಸನ ತಜ್ಞ ಶ್ರೀನಿವಾಸ ಪಾಡಿಗರ್, ಶ.ಶೇಜೇಶ್ವರ ನಾಯಕ್, ಮಂಜಪ್ಪ ಚುರ್ಚಿಗುಂಡಿ, ಶ್ರೀಪಾದ್ ಬಿಚ್ಚುಗತ್ತಿ ಮಾರ್ಗದರ್ಶನ ನೀಡಿದ್ದು ಅರುಣ್ಕುಮಾರ್ ಗೌಡ್ರು, ರವಿಕುಮಾರ್ ಗೌಳೇರ್ ಬಸವರಾಜ್ ನೆರವಾಗಿದ್ದಾರೆ. ಶಿರಾಳಕೊಪ್ಪ ಸಮೀಪದ ನೇರಲಗಿ ಗ್ರಾಮದಲ್ಲಿ ಈಚೆಗೆ ಪತ್ತೆ ಲಿಪಿ ಸಹಿತ ಗೋಸಾನ ಶಾಸನಕ್ಕೆ ವಿಶೇಷ ಮಹತ್ವ ಜಗತ್ತುಂಗನ ದಂಡನಾಯಕನಾಗಿದ್ದ 3ನೇ ಕೃಷ್ಣ