ತಾಯಿ, ಶಿಶು ಆಸ್ಪತ್ರೆಗೆ ಅಗತ್ಯ ಸೌಲಭ್ಯಕ್ಕೆ ಕ್ರಮ
ಕುಷ್ಟಗಿ: ‘ಇಲ್ಲಿಯ ತಾಯಿ ಮತ್ತು ಶಿಶು ಆಸ್ಪತ್ರೆ (ಎಂಸಿಎಚ್)ಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಸ್ವಚ್ಛತೆ ಸಿಬ್ಬಂದಿ ನೇಮಕಕ್ಕೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರ ಅತೃಪ್ತಿಯ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಸ

ಕುಷ್ಟಗಿ: ‘ಇಲ್ಲಿಯ ತಾಯಿ ಮತ್ತು ಶಿಶು ಆಸ್ಪತ್ರೆ (ಎಂಸಿಎಚ್)ಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಸ್ವಚ್ಛತೆ ಸಿಬ್ಬಂದಿ ನೇಮಕಕ್ಕೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರ ಅತೃಪ್ತಿಯ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.‘ಆಸ್ಪತ್ರೆ ಸ್ವಚ್ಛತೆ ಅಗತ್ಯವಾಗಿದ್ದು ಡಿ–ದರ್ಜೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ನೇಮಕಾತಿ ಆದೇಶ ಇಷ್ಟರಲ್ಲೇ ಹೊರಬೀಳಲಿದ್ದು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ನಂತರ ಆಸ್ಪತ್ರೆ ನೈರ್ಮಲ್ಯ ವ್ಯವಸ್ಥೆಗೆ ವಿಶೇಷ ಗಮನಹರಿಸಲು ಸಾಧ್ಯವಾಗುತ್ತದೆ’ ಎಂದರು.ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ವ್ಯವಸ್ಥೆ ಕುರಿತು ಸ್ವತಃ ಮಹಿಳೆಯರು, ಬಾಣಂತಿಯರು ಮತ್ತು ಇತರೆ ರೋಗಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದ ಅವರು, ‘ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ತಿಳಿದಿದೆ. ಅಲ್ಲದೆ ವೈದ್ಯರು ತಮ್ಮಿಂದ ಹಣ ಪಡೆದಿಲ್ಲ ಎಂಬುದನ್ನು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜನರು ತಮ್ಮ ಬಳಿ ಸ್ಪಷ್ಟಪಡಿಸಿದ್ದಾರೆ. ಗುಣಮಟ್ಟದ ಸೌಲಭ್ಯಗಳು ಜನರಿಗೆ ತಲುಪುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ವಿವರಿಸಿದರು.‘ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳು ಇವೆ ಆಮ್ಲಜನಕ ಘಟಕ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಯ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುವರಿ ಮೂಲಸೌಕರ್ಯಗಳ ಪಟ್ಟಿ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಅನುದಾನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ‘ಜಿಲ್ಲಾಧಿಕಾರಿ ಅನುಮೋದನೆ ದೊರೆತ ತಕ್ಷಣ ಎಂಸಿಎಚ್ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ರಕ್ತನಿಧಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ನಾಲ್ಕು ವೈದ್ಯರು ಇಲ್ಲಿಗೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಯಾವುದೇ ರೋಗಿಗಳಿಗೆ ಚಿಕಿತ್ಸೆಯಲ್ಲಿ ತೊಂದರೆಯಾಗದಂತೆ ಗಮನಹರಿಸಲಾಗಿದೆ. ಲಭ್ಯವಿರುವ ಉತ್ತಮ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ವಹಿಸುತ್ತೇವೆ’ ಎಂದು ಹೇಳಿದರು.ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ಡಾ.ಮಹಾಂತೇಶ, ಡಾ.ರವೀಂದ್ರ ಡಾ.ವಿ.ಜಿ ಹಳ್ಳಳ್ಳಿ, ಗಿರೀಶ್ ಕುಂಬಾರ ಮತ್ತು ಸಿಬ್ಬಂದಿ ಇದ್ದರು.ತಾಯಿ–ಶಿಶು ಆಸ್ಪತ್ರೆಯಲ್ಲಿ ಹೆರಿಗೆಗೆ ಹಣ ಪಡೆಯಲಾಗುತ್ತದೆ ಎಂಬ ಆರೋಪ ಕೇಳಿಬಂದಿದ್ದವು. ಆದರೆ, ಹಣ ಪಡೆದಿಲ್ಲ ಎಂದು ಸ್ವತಃ ರೋಗಿಗಳೇ ಹೇಳಿದ್ದಾರೆಡಾ.ಸುರೇಶ ಇಟ್ನಾಳ, ಜಿಲ್ಲಾಧಿಕಾರಿ261030-35-377721509