ಕೆಪಿಎಸ್ಸಿ: 2011ರ ನೇಮಕ ರದ್ದು
ನವದೆಹಲಿ: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಕ್ಕೆ ಕರ್ನಾಟಕ ಸರ್ಕಾರ ತಂದಿದ್ದ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಘೋಷಿಸಿದೆ.‘ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಎತ್ತಿ ಹಿಡಿಯಲ್ಪಟ್ಟ ನೇಮಕ

ನವದೆಹಲಿ: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಕ್ಕೆ ಕರ್ನಾಟಕ ಸರ್ಕಾರ ತಂದಿದ್ದ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಘೋಷಿಸಿದೆ.‘ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಎತ್ತಿ ಹಿಡಿಯಲ್ಪಟ್ಟ ನೇಮಕಾತಿಯ ರದ್ದತಿಯನ್ನು ಕಾನೂನು ತರುವ ಮೂಲಕ ಅಮಾನ್ಯಗೊಳಿಸಲು ಅವಕಾಶ ಇಲ್ಲ’ ಎಂದಿರುವ ನ್ಯಾಯಪೀಠ, ‘ಸಾಂವಿಧಾನಿಕ ನ್ಯಾಯಾಲಯದ ತೀರ್ಪುಗಳನ್ನು ಅಮಾನ್ಯಗೊಳಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ.2011ರ ಅಕ್ರಮವನ್ನು ಸಕ್ರಮಗೊಳಿಸಲು ಬಗೆ ಬಗೆಯ ಕಸರತ್ತು ನಡೆಸಿದ್ದ ರಾಜ್ಯ ಸರ್ಕಾರಕ್ಕೆ ಈ ತೀರ್ಪಿನಿಂದಾಗಿ ತೀವ್ರ ಮುಖಭಂಗವಾಗಿದೆ. ಈ ಅಕ್ರಮದ ಅಗಾಧತೆ, ಆಳ ಅಗಲದ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿ ರಾಜ್ಯ ಸರ್ಕಾರವನ್ನು ಎಚ್ಚರಿಸಿತ್ತು. ‘ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ– 2022’ ಅನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಶ್ರೀನಿವಾಸ ಟಿ., ಲೋಕೇಶ್ ಹಾಗೂ ಇತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ವಿನೋದ್ ಚಂದ್ರನ್ ಅವರ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ತೀರ್ಪನ್ನು ಪ್ರಕಟಿಸಿತು. ‘2011ರ ನೇಮಕಾತಿ ಪ್ರಕ್ರಿಯೆಯನ್ನು ಮಾನ್ಯಗೊಳಿಸಲು ಯಾವುದೇ ಕಾರಣಗಳು ಗೋಚರಿಸುತ್ತಿಲ್ಲ; ಏಕೆಂದರೆ, ಈ ಪ್ರಕ್ರಿಯೆಯು ದೋಷಗಳು ಅಥವಾ ಅಕ್ರಮಗಳಿಂದ ಕೂಡಿತ್ತು. ಅಲ್ಲದೇ, ವ್ಯಾಪಕ ಭ್ರಷ್ಟಾಚಾರ ಮತ್ತು ಎದ್ದು ಕಾಣುವಂತಹ ಸ್ವಜನಪಕ್ಷಪಾತದಿಂದಾಗಿ ಇಡೀ ಆಯ್ಕೆ ಪ್ರಕ್ರಿಯೆ ಕಲುಷಿತಗೊಂಡಿತ್ತು. ಈ ಕಾರಣದಿಂದಾಗಿ ಆ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು’ ಎಂದು ಪೀಠ ಹೇಳಿದೆ. ಈ ಕಾನೂನನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಇದು ಅಚ್ಚರಿ ಮತ್ತು ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಹೇಳಿದೆ. ‘ಕಾನೂನಿನ ಪ್ರತಿ ಅಂಶವನ್ನು ಗಾಳಿಗೆ ತೂರಿ, ಶಾಸಕಾಂಗವು ತನ್ನ ಅಧಿಕಾರದ ವ್ಯಾಪ್ತಿ ಮೀರಿ ಜಾರಿಗೆ ತಂದಿರುವ ಕಾಯ್ದೆಯನ್ನು ಎತ್ತಿ ಹಿಡಿದಿರುವುದು ಅಸಂಬದ್ಧವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡಿದೆ.362 ಹುದ್ದೆಗಳ ಭರ್ತಿಗೆ ಲೋಕಸೇವಾ ಆಯೋಗವು 2011ರ ನವೆಂಬರ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆ ಬಳಿಕ ಪರೀಕ್ಷೆಗಳನ್ನು ನಡೆಸಿತ್ತು. ನಂತರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಪಟ್ಟಿ ಪ್ರಕಟಗೊಳ್ಳುತ್ತಲೇ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ಅಂದಿನ ಅಡ್ವೊಕೇಟ್ ಜನರಲ್ಗೆ (ಎ.ಜಿ.) ಪತ್ರ ಬರೆದಿದ್ದರು. ಎ.ಜಿ. ಶಿಫಾರಸಿನ ಅನ್ವಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿತ್ತು. ನಂತರ, ಸರ್ಕಾರವು ಅಕ್ರಮಗಳ ತನಿಖೆಯ ಹೊಣೆಯನ್ನು ಸಿಐಡಿಗೆ 2014ರ ಜೂನ್ 27ರಂದು ವಹಿಸಿತ್ತು. ತನಿಖೆ ನಡೆಸಿದ ಸಿಐಡಿ ಮಧ್ಯಂತರ ವರದಿ ನೀಡಿತ್ತು. ಅದರ ಆಧಾರದಲ್ಲಿ ಆಗಿನ ಸರ್ಕಾರವು ನೇಮಕಾತಿ ಅಧಿಸೂಚನೆಯನ್ನು ವಾಪಸು ಪಡೆದಿತ್ತು.ಈ ಕ್ರಮದ ವಿರುದ್ಧ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದ ಕೆಎಟಿಯು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಪತ್ರ ಕೊಡುವಂತೆ ಸೂಚಿಸಿತ್ತು. ಆದರೆ, ಕೆಎಟಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು.ಅಕ್ರಮ, ಭ್ರಷ್ಟಾಚಾರದ ಆರೋಪಗಳ ಸುಳಿಗೆ ಸಿಲುಕಿ ತನಿಖೆ ಹಾಗೂ ವಿಚಾರಣೆಗೆ ಒಳಗಾಗಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಎಂಟು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿರುವ ಈ ಆಯ್ಕೆಪಟ್ಟಿಗೆ ಸಿಂಧುತ್ವದ ಮುದ್ರೆ ಒತ್ತಲು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಕಾಯ್ದೆ ತಂದಿತ್ತು.ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ‘ಈ ಕಾಯ್ದೆಯು ಸುಪ್ರೀಂ ಕೋರ್ಟ್ನ ತೀರ್ಪನ್ನೇ ಪರಿಣಾಮಕಾರಿಯಾಗಿ ರದ್ದುಗೊಳಿಸಿತು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಶಾಸಕಾಂಗವು ಮೇಲ್ಮನವಿ ಪ್ರಾಧಿಕಾರದಂತೆ ವರ್ತಿಸಲು ಸಾಧ್ಯವಿಲ್ಲ’ ಎಂದರು. ರಾಜ್ಯ ಸರ್ಕಾರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ ಹಿರಿಯ ವಕೀಲರಾದ ಸಿ. ಎ. ಸುಂದರಂ ಮತ್ತು ಆನಂದ್ ಸಂಜಯ್ ಎಂ. ನುಲಿ ವಾದಿಸಿದರು. ‘ಸಾಂವಿಧಾನಿಕ ನ್ಯಾಯಾಲಯಗಳಿಂದ ಕಳಂಕಿತರೆಂದು ಘೋಷಿಸಲ್ಪಟ್ಟ ಮತ್ತು ಹುಟ್ಟುತ್ತಲೇ ಮೃತಪಟ್ಟ ಕಾಯ್ದೆಯಡಿ ನೇಮಕಗೊಂಡ ಅಭ್ಯರ್ಥಿಗಳು ಯಾವುದೇ ಹುದ್ದೆಗಳಲ್ಲಿ ಇರಲು ಸಾಧ್ಯವಿಲ್ಲ’ ಎಂದು ಪೀಠ ಕಟುವಾಗಿ ಹೇಳಿದೆ. ‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳಿಗೆ ನ್ಯಾಯ ಒದಗಿಸಲು ಈ ಕಾಯ್ದೆ ತಂದಿರುವುದಾಗಿ ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದರೆ, ಇದರ ಸಂಪೂರ್ಣ ಪ್ರಕ್ರಿಯೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಕಳಂಕಿತವಾಗಿರುವುದರಿಂದ ಈ ಸಮರ್ಥನೆಗೆ ಯಾವುದೇ ಅರ್ಥವಿಲ್ಲ. ಈ ಪ್ರಕ್ರಿಯೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು’ ಎಂದು ನ್ಯಾಯಪೀಠ ಪ್ರತಿಪಾದಿಸಿದೆ. ಕೆಪಿಎಸ್ಸಿ ಸದಸ್ಯರನ್ನು ಮಾತ್ರ ಆರೋಪಿಗಳನ್ನಾಗಿ ಸಿಐಡಿ ತನಿಖಾ ವರದಿಯಲ್ಲಿ ಹೆಸರಿಸಲಾಗಿದೆ ಎಂಬ ವಾದವನ್ನೂ ನ್ಯಾಯಪೀಠ ತಿರಸ್ಕರಿಸಿತು. ‘ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು, ಅವರ ವಿರುದ್ಧದ ಕಾನೂನು ಕ್ರಮವು ವಿಚಾರಣೆಯ ಹಂತಕ್ಕೆ ತಲುಪಿಲ್ಲ ಎಂಬ ಅಂಶವು ಅನುವು ಮಾಡಿಕೊಡುತ್ತದೆ ಎಂಬುದನ್ನು ನಾವು ಒಪ್ಪುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ. ‘ಸಂಪೂರ್ಣ ಆಯ್ಕೆ ಪ್ರಕ್ರಿಯೆಯೇ ರದ್ದುಗೊಂಡಿದ್ದರಿಂದ, ಸಿಐಡಿ ವರದಿಯ ಆಧಾರದಲ್ಲಿ ದೋಷಪೂರಿತ ಮತ್ತು ದೋಷರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಯಾವುದೇ ಅವಕಾಶ ಇಲ್ಲ’ ಎಂದು ಪೀಠ ತಿಳಿಸಿದೆ. ಕೃಷ್ಣ ಬೈರೇಗೌಡ, ಸಂಸದೀಯ ವ್ಯವಹಾರಗಳ ಸಚಿವ‘ಸುಪ್ರೀಂ’ ತೀರ್ಮಾನದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಮುಂದೇನು ಮಾಡಬಹುದು ಎಂಬ ಬಗ್ಗೆ ಸಲಹೆ ನೀಡುವಂತೆ ಸಿ.ಎಂ ಸೂಚಿಸಿದ್ದಾರೆನ್ಯಾಯಪೀಠಕಾಯ್ದೆ ಅಸಾಂವಿಧಾನಿಕವಾಗಿದೆ. ದೋಷಪೂರಿತ ಪ್ರಕ್ರಿಯೆ ಅಡಿಯಲ್ಲಿ ಮಾಡಲಾದ ನೇಮಕಾತಿಗಳು ಕೊನೆಗೊಳ್ಳಲಿವೆಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ದೇಶನ ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅಡಿಯಲ್ಲಿ, ಖಾಲಿ ಇರುವ ‘ಗ್ರೂಪ್ ಎ’ ಮತ್ತು ‘ಗ್ರೂಪ್ ಬಿ’ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲದ ನೇಮಕಗೊಂಡ ಅಭ್ಯರ್ಥಿಗಳು, ಆರು ಮೇಲ್ಮನವಿದಾರರು ಹಾಗೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮುಂದೆ ಬಾಕಿ ಇರುವ ಪ್ರಕರಣಗಳಲ್ಲಿನ ಅರ್ಜಿದಾರರಿಗೆ, ಇತರ ಅಭ್ಯರ್ಥಿಗಳೊಂದಿಗೆ ಪರೀಕ್ಷೆಗೆ ಹಾಜರಾಗಲು ‘ಒಂದು ಬಾರಿಯ ಅವಕಾಶ’ವಾಗಿ ವಯೋಮಿತಿ ಸಡಿಲಿಸುವಂತೆ ಆದೇಶಿಸಿದೆ. ಒಂದು ವೇಳೆ ಆಯ್ಕೆಯಾದರೆ, ಅವರ ಸೇವಾ ಜ್ಯೇಷ್ಠತೆಯು ಹೊಸ ನೇಮಕಾತಿಯ ದಿನಾಂಕದಿಂದ ಮಾತ್ರ ಪರಿಗಣಿಸಲ್ಪಡುತ್ತದೆ. ಅವರು ಈಗಾಗಲೇ ಸಲ್ಲಿಸಿದ ಸೇವಾವಧಿಯನ್ನು ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳಿಗಾಗಿ ಮಾತ್ರ ಪರಿಗಣಿಸಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.46 ಅಭ್ಯರ್ಥಿಗಳು ಕಳಂಕಿತರು ಆಯ್ಕೆಯಾದ 362 ಅಭ್ಯರ್ಥಿಗಳ ಪೈಕಿ 46 ಮಂದಿ ಕಳಂಕಿತರು (ಅಕ್ರಮದಲ್ಲಿ ಭಾಗಿಯಾಗಿ ದವರು). 2022ರ ಕಾಯ್ದೆಯ ಪ್ರಕಾರ, 191 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಅವರಲ್ಲಿ 14 ಮಂದಿ ಕಳಂಕಿತರು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.