ವೆಬ್ ಎಕ್ಸ್ಕ್ಲೂಸಿವ್: ಏಳುಬೀಳಿನ ಹಾದಿಯಲ್ಲಿ ‘ಮಿಣಜಗಿ ಪರಸಿ’ ಗಣಿಗಾರಿಕೆ
ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ದಡದಲ್ಲಿರುವ ಮಿಣಜಗಿಯಲ್ಲಿ ಹೇರಳವಾಗಿ ಲಭಿಸುವ ಪರಸಿ ಕಲ್ಲನ್ನು ಮನೆ, ಮಠ, ದೇವಸ್ಥಾನದ ನೆಲ ಹಾಸಿಗೆಗೆ, ಚಾವಣಿಗೆ, ಗೋಡೆ ಕಟ್ಟಲು ಬಳಸುತ್ತಾರೆ.ಮಿಣಜಗಿಯ ನೆಲದಲ್ಲಿ ಪದರು ಪದರಾಗಿ ಸಿಗುವ ಕಪ್ಪು-ಬೂದು ಬಣ್ಣದ ಪರಸಿ ಕಲ್ಲು ಅಥವಾ ಪದರು ಶಿಲೆ (Slate Stone) ತುಂಬಾ ಗಟ್ಟಿ ಮತ್ತು ನೀರು ಹೀರಿಕೊಳ್ಳುವುದಿಲ್ಲ.

ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ದಡದಲ್ಲಿರುವ ಮಿಣಜಗಿಯಲ್ಲಿ ಹೇರಳವಾಗಿ ಲಭಿಸುವ ಪರಸಿ ಕಲ್ಲನ್ನು ಮನೆ, ಮಠ, ದೇವಸ್ಥಾನದ ನೆಲ ಹಾಸಿಗೆಗೆ, ಚಾವಣಿಗೆ, ಗೋಡೆ ಕಟ್ಟಲು ಬಳಸುತ್ತಾರೆ.ಮಿಣಜಗಿಯ ನೆಲದಲ್ಲಿ ಪದರು ಪದರಾಗಿ ಸಿಗುವ ಕಪ್ಪು-ಬೂದು ಬಣ್ಣದ ಪರಸಿ ಕಲ್ಲು ಅಥವಾ ಪದರು ಶಿಲೆ (Slate Stone) ತುಂಬಾ ಗಟ್ಟಿ ಮತ್ತು ನೀರು ಹೀರಿಕೊಳ್ಳುವುದಿಲ್ಲ. ಇದು ಸುಣ್ಣದ ಕಲ್ಲಿನ (Limestone) ಒಂದು ವಿಶೇಷ ತಳಿ. ಹಳ್ಳಿ ಜನ ಇದನ್ನು ‘ಮಿಣಜಗಿ ಪರಸಿ’ ಎನ್ನುತಾರೆ. ಬಿಸಿಲು-ಮಳೆ ಎರಡಕ್ಕೂ ಬಾಳಿಕೆ ಬರುವುದರಿಂದ ವಿಜಯಪುರ-ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಗಳಲ್ಲಿ ನೆಲಕ್ಕೆ ಹಾಸಲು, ಕಟ್ಟಡ ಕಟ್ಟಲು ಹೆಚ್ಚಾಗಿ ಬಳಸುತ್ತಾರೆ.ಈ ಕಲ್ಲುಗಳನ್ನು ಬಳಸಿಕೊಂಡು ಕಟ್ಟಿದ ಕಟ್ಟಡಕ್ಕೆ ಪ್ಲಾಸ್ಟರ್ ಮಾಡದಿದ್ದರೂ, ಸಿಮೆಂಟ್ ಬಳಸದಿದ್ದರೂ ಗಟ್ಟಿಯಾಗುತ್ತವೆ ಎಂಬುದು ಜನರ ನಂಬಿಕೆ. ಮಿಣಜಗಿ, ತಾಳಿಕೋಟೆ, ಮುದ್ದೇಬಿಹಾಳ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಪರಸಿ ಕ್ವಾರಿಗಳು ಇವೆ. ಮಿಣಜಗಿ-ತಾಳಿಕೋಟೆ ಭಾಗದಲ್ಲಿ ಒಂದೊಂದು ಕ್ವಾರಿಯಲ್ಲಿ 15-20 ಜನ ಕಾರ್ಮಿಕರು ನೇರವಾಗಿ ದುಡಿಯುತ್ತಾರೆ. ಸುಮಾರು 2 ಸಾವಿರದಿಂದ 3 ಸಾವಿರ ಕುಟುಂಬಗಳು ‘ಪರಸಿ ಕ್ವಾರಿ’ಯನ್ನು ಅವಲಂಬಿಸಿವೆ.ಮಿಣಜಗಿ ಪರಸಿ ಕಲ್ಲುಗಳ ಬೆಲೆಯು ಮುಖ್ಯವಾಗಿ ಕಲ್ಲಿನ ಗಾತ್ರ, ದಪ್ಪ, ಕಟಿಂಗ್ ವಿಧಾನ (ಮಷಿನ್ ಕಟ್ ಅಥವಾ ಹ್ಯಾಂಡ್ ಕಟ್) ಮತ್ತು ಕಲ್ಲಿನ ಗುಣಮಟ್ಟದ ಮೇಲೆ ನಿರ್ಧಾರವಾಗುತ್ತದೆ. ಇವುಗಳು ಅಂತರರಾಷ್ಟ್ರಿಯ ಬ್ರ್ಯಾಂಡೆಡ್ ಟೈಲ್ಸ್ಗಳಿಗಿಂತ ಭಿನ್ನವಾಗಿದ್ದು, ಸ್ಥಳೀಯವಾಗಿ ಕೈಗೆಟುಕುವ ದರದಲ್ಲಿ ಸಿಗುತ್ತವೆ.ರಫ್ ಮತ್ತು ಹ್ಯಾಂಡ್ ಕಟ್ ಕಲ್ಲಿಗೆ ಪ್ರತಿ ಚದರ ಅಡಿಗೆ ಬೆಲೆ ₹ 8 ರಿಂದ ₹15 ಇದೆ. ತೋಟದ ಮನೆಗಳು, ಕಾಂಪೌಂಡ್ ಆವರಣ ಅಥವಾ ನೆಲಹಾಸಿಗೆ ಇವುಗಳನ್ನು ಬಳಸುತ್ತಾರೆ.ಇದೇ ರೀತಿ, ಮಷಿನ್ ಕಟ್ ಕಲ್ಲುಗಳನ್ನು ಮನೆಯ ಮುಂಭಾಗದ ವರಾಂಡಾ ಅಥವಾ ಮನೆಗಳ ಒಳಗಡೆ ಬಳಸಲು ಅಚ್ಚುಕಟ್ಟಾಗಿ ಕತ್ತರಿಸಲಾಗುತ್ತದೆ. ಇವುಗಳ ಬೆಲೆ ಗಾತ್ರಕ್ಕೆ ಅನುಗುಣವಾಗಿ ಪ್ರತಿ ಚದರ ಅಡಿಗೆ ₹15 ರಿಂದ ₹35 ಇದೆ.ಸಣ್ಣ ಮತ್ತು ಮಧ್ಯಮ ಗಾತ್ರದ (ಉದಾಹರಣೆಗೆ 1x1 ಅಥವಾ 2x1 ಅಡಿ) ಕಲ್ಲುಗಳು ಗಣಿ ಪ್ರದೇಶಗಳಲ್ಲಿ ನೇರವಾಗಿ ಖರೀದಿಸಿದರೆ ಪ್ರತಿ ಪೀಸ್ಗೆ ₹8 ರಿಂದ ₹12ಕ್ಕೆ ದೊರೆಯುತ್ತವೆ.ದೊಡ್ಡ ಸೈಜಿನ ಕಲ್ಲುಗಳು (3x2 ಅಥವಾ 4x2 ಅಡಿ) ಅವುಗಳ ದಪ್ಪಕ್ಕೆ ತಕ್ಕಂತೆ ಪ್ರತಿ ಪೀಸ್ಗೆ ₹25 ರಿಂದ ₹60 ರ ವರೆಗೂ ಲಭಿಸುತ್ತವೆ.20 ಎಂಎಂನಿಂದ 40ಎಂಎಂ ವರೆಗಿನ ದಪ್ಪದ ಕಲ್ಲುಗಳು ಲಭಿಸುತ್ತವೆ. ಹೆಚ್ಚು ದಪ್ಪವಿರುವ ಕಲ್ಲುಗಳಿಗೆ ಬೆಲೆ ಕೊಂಚ ಹೆಚ್ಚಿರುತ್ತದೆ.ನೇರವಾಗಿ ಮಿಣಜಗಿ ಗ್ರಾಮದ ಕ್ವಾರಿ(ಖಣಿ)ಗಳಿಗೆ ಹೋಗಿ ಟ್ರ್ಯಾಕ್ಟರ್ ಅಥವಾ ಲಾರಿ ಲೋಡ್ ಆಧಾರದಲ್ಲಿ ಖರೀದಿಸಿದರೆ ಬೆಲೆ ತುಂಬಾ ಕಡಿಮೆ ಇರುತ್ತದೆ. ಅದೇ ಕಲ್ಲುಗಳನ್ನು ಬೆಂಗಳೂರು, ಹುಬ್ಬಳ್ಳಿ ಅಥವಾ ಇತರೆ ದೂರದ ನಗರಗಳ ರಿಟೇಲ್ ಮಾರುಕಟ್ಟೆಗಳಲ್ಲಿ ಖರೀದಿಸಿದರೆ ಸಾಗಾಣಿಕೆ ವೆಚ್ಚ ಸೇರಿ ಪ್ರತಿ ಚದರ ಅಡಿಗೆ ಬೆಲೆ ₹40 ರಿಂದ ₹60 ಆಗುತ್ತದೆ.ಈ ಮೊದಲು ಪರಸಿ ಕಲ್ಲು ಮನೆ ನೆಲಕ್ಕೆ ಬಳಸಲು ತುಂಬಾ ಬೇಡಿಕೆ ಇತ್ತು. ಈಗ ಟೈಲ್ಸ್, ಗ್ರಾನೈಟ್ ಬಂದಿದ್ದರಿಂದ ಬೇಡಿಕೆ ಸ್ವಲ್ಪ ಕಡಿಮೆ ಆಗಿದೆ. ಆದರೂ ವಿಜಯಪುರ, ಬಾಗಲಕೋಟೆ, ಸೊಲ್ಲಾಪುರ, ಸಾಂಗ್ಲಿ ಕಡೆ ಇನ್ನೂ ಬೇಡಿಕೆ ಇದೆ.ಕೂಲಿ ದಿನಕ್ಕೆ ₹400ರಿಂದ ₹500, ಸುರಕ್ಷತಾ ಸಾಮಗ್ರಿ (ಮಾಸ್ಕ್, ಹೆಲ್ಮೆಟ್) ಸರಿಯಾಗಿ ಬಳಸುತ್ತಿಲ್ಲ. ಪರಿಣಾಮ, ಸಿಲಿಕಾ ಧೂಳಿನಿಂದ ಕಾರ್ಮಿಕರಲ್ಲಿ ಆರೋಗ್ಯ ಸಮಸ್ಯೆ ಜಾಸ್ತಿ ಕಂಡುಬರುತ್ತಿದೆ.ಮೊದಲು ಕೈಯಿಂದ ಕಲ್ಲು ಸೀಳುತ್ತಿದ್ದರು. ಈಗ ಕಟ್ಟರ್ ಮಷಿನ್ ಬಂದಿವೆ. ಹಾಗಾಗಿ ಕೆಲಸಗಾರರ ಬೇಡಿಕೆಯೂ ಕಡಿಮೆ ಆಗಿದೆ.ಮಿಣಜಗಿ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಪರಸಿ ಕ್ವಾರಿಗಳ ಮೇಲೆ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಪರಿಸರ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದ್ದ ಕೆಲವು ಗಣಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದೆ. ಈ ವರ್ಷ ಮಿತಿಗಿಂತ ಹೆಚ್ಚು ಕಲ್ಲು ತೆಗೆದಿದ್ದಾರೆ ಎಂಬ ಕಾರಣಕ್ಕೆ ಸರ್ಕಾರ 46 ಕ್ವಾರಿ ಮಾಲೀಕರಿಗೆ ₹26 ಕೋಟಿ ದಂಡ ಹಾಕಿದ್ದು, ಇದರಿಂದ ಕ್ವಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ ಪರಿಣಾಮ ಕೆಲ ತಿಂಗಳು ಕೆಲಸ ಸ್ಥಗಿತ ಆಗಿತ್ತು. ಪ್ರಸ್ತುತ ಹೊಸ ಗಣಿ ಗುತ್ತಿಗೆ ಪಡೆಯಲು ಅಥವಾ ಹಳೆಯದನ್ನು ನವೀಕರಿಸಲು ಪರಿಸರ ಇಲಾಖೆಯ ಕ್ಲಿಯರೆನ್ಸ್ (Environmental Clearance) ಕಡ್ಡಾಯಗೊಳಿಸಲಾಗಿದೆ. ಇದು ಸಣ್ಣ ಪ್ರಮಾಣದ ಪರಸಿ ಕಲ್ಲು ಗಣಿ ಮಾಲೀಕರಿಗೆ ಪ್ರಕ್ರಿಯೆಯನ್ನು ಕೊಂಚ ಸಂಕೀರ್ಣಗೊಳಿಸಿದೆ.ಸದ್ಯಕ್ಕೆ ಮುಷ್ಕರ ಮತ್ತು ಸರ್ಕಾರದ ನಿಯಮಗಳ ಬಿಗಿಯಿಂದಾಗಿ ಮಾರುಕಟ್ಟೆಗೆ ಕಲ್ಲಿನ ಸರಬರಾಜು ಕೊಂಚ ಕಡಿಮೆಯಾಗಿದ್ದು, ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಆದಾಗ್ಯೂ, ಮನೆ ನಿರ್ಮಾಣ ಕಾರ್ಯಗಳಿಗೆ ಮಿಣಜಗಿ ಪರಸಿ ಕಲ್ಲಿಗೆ ಇರುವ ಬೇಡಿಕೆ ಹಾಗೆಯೇ ಮುಂದುವರಿದಿದೆ.‘ಮಿಣಜಗಿ ಪರಸಿ’ ಉದ್ಯಮದ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕ್ವಾರಿ ಮಾಲೀಕ ಬಸನಗೌಡ ಬಾಗೇವಾಡಿ, ‘ಮಿಣಜಗಿ ಗ್ರಾಮದ ಬರಡು ಜಮೀನಿನಡಿಯಲ್ಲಿರುವ ಗಟ್ಟಿ ಪದರುಪದರಾಗಿ ಬಿಚ್ಚಿಕೊಳ್ಳುವ ಕಲ್ಲುಗಳನ್ನು ನೂರಾರು ವರ್ಷಗಳಿಂದ ಮನೆ, ಮಠ ನಿರ್ಮಾಣಕ್ಕೆ ಬಳಸಲಾಗುತ್ತಿದೆ’ ಎಂದರು.‘ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ಪರಿಣಾಮವಾಗಿ 1984ರಿಂದ 2007ರ ವರೆಗೆ ಮಿಣಜಗಿ ಪರಸಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆದುನಿಂತಿತ್ತು. ಮೂರು ಸಾವಿರಕ್ಕೂ ಅಧಿಕ ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ಒದಗಿಸಿತ್ತು’ ಎನ್ನುತ್ತಾರೆ ಅವರು.‘ಪರಸಿ ಗಣಿಗಾರಿಕೆಯು ಯಾವುದೇ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿಲ್ಲ. ಸುಮಾರು 200ರಿಂದ 300 ಎಕರೆ ಸ್ವಂತ (ಖಾಸಗಿ) ಭೂಮಿಯಲ್ಲೇ ನಡೆಯುತ್ತಿದೆ. ಸುಮಾರು ಒಂದು ಎಕರೆ ಪ್ರದೇಶದಿಂದ ಹತ್ತಾರು ಎಕರೆಗಳ ಒಡೆತನದದ ಕ್ವಾರಿಗಳು ಇವೆ’ ಎಂದು ತಿಳಿಸಿದರು.‘ಗ್ರಾಮದ ಸುತ್ತಲಿನ ಹತ್ತಾರು ಹಳ್ಳಿಗಳಿಂದ ನಿತ್ಯ ನೂರಾರು ಕೂಲಿಕಾರ್ಮಿಕರಿಗೆ ಇದು ಉದ್ಯೋಗ ಭದ್ರತೆ ಒದಗಿಸಿತ್ತು. ಗುಳೆ ಹೋಗುವುದನ್ನು ತಪ್ಪಿಸಿತು. ಆದರೆ, ಸರ್ಕಾರದ ಹೊಸ ಗಣಿ ನೀತಿಯೂ ಈ ಉದ್ಯಮಕ್ಕೆ ಪೆಟ್ಟು ನೀಡಿದೆ. ಈ ಕಲ್ಲುಗಳಿಗೆ ಅನುಮತಿ ಕೊಡಲು ಇವುಗಳನ್ನು ಪಾಲಿಸ್ ಪರಸಿಗಳೆಂದು ಪರಿಗಣಿಸಿ ಆದೇಶ ಮಾಡಿದ್ದರಿಂದ ಅಷ್ಟು ಪ್ರಮಾಣದ ಆದಾಯ, ಲಾಭ ಇಲ್ಲದೇ ಗಣಿ ಕೆಲಸ ನಿಂತು ಹೋಗುವ ಸ್ಥಿತಿ ತಲುಪಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಆಲಮಟ್ಟಿ ನೀರಾವರಿ ಯೋಜನೆಯ ನಂತರ ಈ ಭಾಗದ ಭೂಮಿಗಳು ನೀರಾವರಿಯಾದುದರಿಂದ ಮತ್ತು ಈ ಹಿಂದೆ ಸರ್ಕಾರಿ ಶಾಲೆ, ಕಟ್ಟಡಗಳಿಗೆ, ಮನೆಗಳಿಗೆ ಮಿಣಜಗಿ ಪರಸಿ ಬಳಕೆಯಾಗುತ್ತಿದ್ದವು. ಈಗ ಎಲ್ಲ ಕಟ್ಟಡ ನಿರ್ಮಾಣದಲ್ಲಿ ಆರ್.ಸಿ.ಸಿ ಬಳಕೆಯಾಗುತ್ತಿವೆ ಮತ್ತು ಕಾಂಕ್ರಿಟ್ ಇಟ್ಟಿಗೆಗಳು ಬಂದಿದ್ದು, ಅವುಗಳ ಬಳಕೆ ಹೆಚ್ಚಾಗಿ ಮಿಣಜಗಿ ಪರಸಿ ಬೇಡಿಕೆ ಕುಸಿದಿದೆ’ ಎಂದು ಹೇಳಿದರು.‘ಸದ್ಯ ಎಲ್ಲ ಸೇರಿ 50–60 ಪರಸಿ ಗಣಿಗಳಿವೆ. ಹಿಂದೆ ಬಂಡೆಗಳ ಸಾಗಾಟಕ್ಕೆ ಇದ್ದ ಲಾರಿಗಳ ಸಂಖ್ಯೆ ಅರ್ಧದಷ್ಟು ಇಳಿದು ನೂರರ ಆಸುಪಾಸು ಬಂದಿವೆ. ಈಗ ಸುಮಾರು 300ರಷ್ಟು ಮಾತ್ರ ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಜನರಿಗೂ ಆಸಕ್ತಿ ಕಡಿಮೆಯಾಗಿದೆ, ಬೇಡಿಕೆಯೂ ಕಡಿಮೆಯಾಗಿದೆ, ಏಳೆಂಟು ವರ್ಷಗಳಲ್ಲಿ ಈ ಗಣಿಗಾರಿಕೆಯೇ ಇನ್ನಿಲ್ಲವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಸರ್ಕಾರ, ಮಿಣಜಗಿ ಪರಸಿಯನ್ನು ‘ಕಟ್ಟಡ ಕಲ್ಲು’ ಎಂದು ಪರಗಣಿಸಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಸಾವಿರಾರು ಕಾರ್ಮಿಕರಿಗೆ, ಕುಟುಂಬಗಳಿಗೆ ಆಧಾರವಾಗಿರುವ ಮಿಣಜಗಿ ಪರಸಿ ಗಣಿಗಾರಿಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಇದರಿಂದ ಸರ್ಕಾರಕ್ಕೂ ರಾಜಧನ ಲಭಿಸಲಿದೆ’ ಎಂದು ಅವರು ಹೇಳಿದರು.