ಮನೀಷಾ ಮುಡಿಗೆ ವಿಶ್ವ ಕಿರೀಟ
ಅಸ್ತಾನಾ: ಭಾರತದ ಕುಸ್ತಿಪ್ರೇಮಿಗಳು ದೀರ್ಘ ಸಮಯದಿಂದ ಕಾದಿದ್ದ ಕ್ಷಣವು ಕೊನೆಗೂ ಬಂದಿತು. ಭಾರತದ ಮನೀಷಾ ಭಾನವಾಲಾ ವಿಶ್ವ ಕಿರೀಟ ಧರಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವಾಗಿದ್ದಾರೆ. ಅಷ್ಟೇ ಅಲ್ಲ; ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ದೇಶದ ಎರಡನೇ ಪೈಲ್ವಾನ ಕೂಡ ಹೌದು. 2010ರಲ್ಲಿ ಪುರುಷರ 66 ಕೆ.ಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಅವರು ವಿ

ಅಸ್ತಾನಾ: ಭಾರತದ ಕುಸ್ತಿಪ್ರೇಮಿಗಳು ದೀರ್ಘ ಸಮಯದಿಂದ ಕಾದಿದ್ದ ಕ್ಷಣವು ಕೊನೆಗೂ ಬಂದಿತು. ಭಾರತದ ಮನೀಷಾ ಭಾನವಾಲಾ ವಿಶ್ವ ಕಿರೀಟ ಧರಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವಾಗಿದ್ದಾರೆ. ಅಷ್ಟೇ ಅಲ್ಲ; ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ದೇಶದ ಎರಡನೇ ಪೈಲ್ವಾನ ಕೂಡ ಹೌದು. 2010ರಲ್ಲಿ ಪುರುಷರ 66 ಕೆ.ಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಅವರು ವಿಶ್ವ ಚಾಂಪಿಯನ್ ಆಗಿದ್ದರು. ಈಗ ಮನೀಷಾ ಈ ಸಾಧನೆ ಮಾಡಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಮಹಿಳೆಯರ 59 ಕೆ.ಜಿ ವಿಭಾಗದ ಫೈನಲ್ನಲ್ಲಿ ಮನೀಷಾ ಅವರು 8–6ರಿಂದ ಅಮೆರಿಕದ ಅಬಿಗೆಲ್ ನಿಟ್ಟಿ ಅವರನ್ನು ಮಣಿಸಿದರು. ಇದೇ ಕುಸ್ತಿ ಕೂಟದ ಮೂರು ಬೇರೆ ಬೇರೆ ವಿಭಾಗಗಳಲ್ಲಿ ಭಾರತದ ಕುಸ್ತಿಪಟುಗಳು ಫೈನಲ್ ತಲುಪಿದ್ದರು. ಅದರಲ್ಲಿ ಮನೀಷಾ ಒಬ್ಬರೇ ಚಿನ್ನಕ್ಕೆ ಮುತ್ತಿಟ್ಟರು. ನೀಲಮ್ ಸಿರೊಹಿ (50 ಕೆ.ಜಿ) ಮತ್ತು ಕಾಜಲ್ ಧೋಚಕ್ (76 ಕೆ.ಜಿ) ಅವರು ಬೆಳ್ಳಿ ಪದಕ ಪಡೆದರು. ಫೈನಲ್ ಬೌಟ್ ಮೊದಲ ಹಂತದಲ್ಲಿ ಅಬಿಗೆಲ್ ಅವರು ಆರಂಭದಿಂದಲೇ ಆಕ್ರಮಣಕಾರಿ ಪಟ್ಟುಗಳನ್ನು ಹಾಕಿದರು. ಬಲಗಾಲಿನಿಂದ ದಾಳಿ ಮಾಡಿ ಬಿಗಿಹಿಡಿತ ಸಾಧಿಸಿದರು. ಮನೀಷಾ ಅವರ ಕಾಲನ್ನು ನಿಯಂತ್ರಿಸುವಲ್ಲಿ ಬಹುತೇಕ ಯಶಸ್ವಿಯಾದರು. ಮನೀಷಾ ಅವರು 30 ಸಕೆಂಡುಗಳೊಳಗೇ ಪಟ್ಟಿನಿಂದ ಬಿಡಿಸಿಕೊಳ್ಳಲು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸಿದರು. ಆದರೆ ಮ್ಯಾಟ್ನ ತುದಿಯತ್ತ ಅವರನ್ನು ತಳ್ಳುವಲ್ಲಿ ಅಬಿಗೆಲ್ ಯಶಸ್ವಿಯಾದರು. ನಾಲ್ಕು ಅಂಕಗಳು ಅವರಿಗೆ ದಕ್ಕಿದವು. ಈ ನಿರ್ಧಾರವನ್ನು ಮನೀಷಾ ಪ್ರಶ್ನಿಸಿದರು. ಆದರೆ ಮರುಪರಿಶೀಲನೆಯ ನಂತರದ ತೀರ್ಪು ಭಾರತದ ಪರವಾಗಿರಲಿಲ್ಲ. ಇದರಿಂದಾಗಿ ಅಮೆರಿಕ ಕುಸ್ತಿಪಟುವಿಗೆ ಮತ್ತೊಂದು ಪಾಯಿಂಟ್ ಕಾಣಿಕೆಯಾಗಿ ಲಭಿಸಿತು. ಮುಂದಿನ ಹಂತದಲ್ಲಿ ಮನೀಷಾ ಅವರು ಅಬಿಗೆಲ್ ಅವರನ್ನು ಮ್ಯಾಟ್ನಿಂದ ಹೊರದಬ್ಬಲು ಪ್ರಯತ್ನಿಸಿದರು. ಇದಕ್ಕಾಗಿ ರೆಫರಿಗಳು ಮನೀಷಾಗೆ ಎಚ್ಚರಿಕೆ ನೀಡಿದರು. ಅಬಿಗೆಲ್ 6–0 ಮುನ್ನಡೆ ಸಾಧಿಸಿದರು. ಎರಡನೇ ಅವಧಿಯಲ್ಲಿ ಮನೀಷಾ ಬದಲಾದ ತಂತ್ರಗಾರಿಕೆಯೊಂದಿಗೆ ಮ್ಯಾಟ್ ಪ್ರವೇಶಿಸಿದರು. ಈ ಬಾರಿಯೂ ಅಬಿಗಲ್ ಅವರು ಲೆಗ್ ಅಟ್ಯಾಕ್ ಪ್ರಯೋಗಿಸಿದರು. ಆದರೆ ಮನೀಷಾ ಹಿಂದಕ್ಕೆ ಜಾರಿಕೊಂಡರು. ಟೇಕ್ಡೌನ್ ಮಾಡಿದರು. ಈ ಬಾರಿ ಅಮೆರಿಕದ ಕುಸ್ತಿಪಟು ನಿರ್ಧಾರವನ್ನು ಪ್ರಶ್ನಿಸಿದರು. ಆದರೆ ಈ ಬಾರಿ ಮರುಪರಿಶೀಲನೆ ನಿರ್ಧಾರವು ಭಾರತ ಪರವಾಗಿತ್ತು. ಮನೀಷಾಗೆ ಹೆಚ್ಚುವರಿ ಅಂಕ ಲಭಿಸಿತು. ಇದರಿಂದಾಗಿ 6–6 ಸಮಬಲವಾಯಿತು.ಇದೇ ಹೊತ್ತಿನಲ್ಲಿ ಎರಡು ಪಾಯಿಂಟ್ ಗಳಿಸಲು ಸಿಕ್ಕ ಅವಕಾಶವನ್ನು ಮನೀಷಾ ಸದುಪಯೋಗಪಡಿಸಿಕೊಂಡು, 8–6ರ ಮುನ್ನಡೆ ಸಾಧಿಸಿದರು. ಬೌಟ್ ಅಂತ್ಯಕ್ಕೆ 27 ಸೆಕೆಂಡುಗಳು ಉಳಿದಿದ್ದವು. ಈ ಸಂದರ್ಭದಲ್ಲಿ ಮನೀಷಾ ಸಂಪೂರ್ಣವಾಗಿ ರಕ್ಷಣಾತ್ಮಕವಾಗಿ ಸೆಣಸಿದರು. ಯಾವುದೇ ಅಂಕವನ್ನೂ ಬಿಟ್ಟುಕೊಡಲಿಲ್ಲ. ರೆಫರಿಯು ಅಂತಿಮ ವಿಷಲ್ ಊದಿದಾಗ ಮನೀಷಾ ಸಂಭ್ರಮವೂ ಮುಗಿಲುಮುಟ್ಟಿತು. ಸಂತಸದಿಂದ ಮೇಲೆ ಜಿಗಿದರು. ಮಂಡಿಯೂರಿ ಕುಳಿತು ಮ್ಯಾಟ್ಗೆ ಮುತ್ತಿಕ್ಕಿದರು.