ಕನ್ನಡ ರಾಜ್ಯೋತ್ಸವ: 'ಎಚ್ಎಂಟಿ ಕನ್ನಡಿಗ' ಕೈಗಡಿಯಾರ ನಾಳೆ ಬಿಡುಗಡೆ
ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಕಂಪನಿಯು ಕನ್ನಡ ರಾಜ್ಯೋತ್ಸವದ ನಿಮಿತ್ತ ‘ಎಚ್ಎಂಟಿ ಕನ್ನಡಿಗ’ ಎನ್ನುವ ಸರಣಿಯ ಕೈಗಡಿಯಾರಗಳನ್ನು ತಯಾರು ಮಾಡಿದೆ.ಬೆಂಗಳೂರಿನ ಎಚ್ಎಂಟಿ ಆಟದ ಮೈದಾನದಲ್ಲಿ ಭಾನುವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಕೈಗಡಿಯಾರಗಳನ್ನು ಬಿಡುಗಡೆ ಮಾಡಲಿದ್ದಾ

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಕಂಪನಿಯು ಕನ್ನಡ ರಾಜ್ಯೋತ್ಸವದ ನಿಮಿತ್ತ ‘ಎಚ್ಎಂಟಿ ಕನ್ನಡಿಗ’ ಎನ್ನುವ ಸರಣಿಯ ಕೈಗಡಿಯಾರಗಳನ್ನು ತಯಾರು ಮಾಡಿದೆ.ಬೆಂಗಳೂರಿನ ಎಚ್ಎಂಟಿ ಆಟದ ಮೈದಾನದಲ್ಲಿ ಭಾನುವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಕೈಗಡಿಯಾರಗಳನ್ನು ಬಿಡುಗಡೆ ಮಾಡಲಿದ್ದಾರೆ. ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಚ್ಎಂಟಿಯು ಕೇಂದ್ರ ಸರ್ಕಾರದ ಕಾರ್ಖಾನೆಯಾದರೂ ಮೊದಲಿನಿಂದಲೂ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಗೆ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಈ ರಾಜ್ಯೋತ್ಸವಕ್ಕೆ ಐದು ಅತ್ಯುತ್ತಮ ಗುಣಮಟ್ಟದ ಕೈಗಡಿಯಾರಗಳನ್ನು ಕರ್ನಾಟಕಕ್ಕೆ ನೀಡುತ್ತಿದೆ’ ಎಂದು ಹೇಳಿದರು.ಚೈನು ಮತ್ತು ಬೆಲ್ಟ್ ನಮೂನೆಗಳಲ್ಲಿ ಇವು ಲಭ್ಯವಾಗಲಿವೆ. ಇವುಗಳ ಬೆಲೆ ₹3,500ರಿಂದ ₹3,600ರವರೆಗೆ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ರೇಡಿಯಂ ಹೊಳಪು ಇರುವಂತಹ ಈ ಕೈಗಡಿಯಾರಗಳು ಕನ್ನಡಿಗರಿಗೆ ಬಹಳ ಇಷ್ಟವಾಗುತ್ತವೆ ಎಂಬ ವಿಶ್ವಾಸ ನನಗಿದೆ ಎಂದರು.ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್ಗಳನ್ನು ಅಳವಡಿಸಲಾಗಿದೆ. ಒಂದು ಬೆಲ್ಟಿನ ಬೆಲೆ ₹450 ಇದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡಿಗರ ಮನರಂಜಿಸಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಏರ್ಪಾಟು ಮಾಡಲಾಗಿದೆ. ಸುಮಾರು 30 ಪ್ರಮುಖ ಕನ್ನಡ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.