ಗೌರಿಬಿದನೂರು: ಕೆ.ಎನ್.ವೆಂಕಟಕೃಷ್ಣ ರಾವ್ ಸೇವೆಗೆ ಒಲಿದ ರಾಜ್ಯೋತ್ಸವ ಗರಿ
ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1940ರಲ್ಲಿ ಜನಿಸಿದ ಕೆ.ಎನ್.ವೆಂಕಟಕೃಷ್ಣ ರಾವ್ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.1964ರಿಂದ 2017ರವರೆಗೆ ಸತತ 53 ವರ್ಷ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಶಿಕ್ಷಣ ಆಡಳಿತ

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1940ರಲ್ಲಿ ಜನಿಸಿದ ಕೆ.ಎನ್.ವೆಂಕಟಕೃಷ್ಣ ರಾವ್ ಅವರು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.1964ರಿಂದ 2017ರವರೆಗೆ ಸತತ 53 ವರ್ಷ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಶಿಕ್ಷಣ ಆಡಳಿತ, ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಪ್ರವೇಶ ಪರೀಕ್ಷೆ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಸರಳ ವ್ಯಕ್ತಿತ್ವದೊಂದಿಗೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸಿರುವ ಅವರ ಸಾಧನೆ ಗಮನಾರ್ಹವಾಗಿದೆ.ಕರ್ನಾಟಕದಲ್ಲಿ 1987ರಲ್ಲಿ ಆರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆಗೆ ವಿಶ್ವಾಸಾರ್ಹ ಹಾಗೂ ಪಾರದರ್ಶಕ ಸ್ವರೂಪ ನೀಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. 1988ರಿಂದ 1993ರವರೆಗೆ ಈ ಪ್ರವೇಶ ಪ್ರಕ್ರಿಯೆ ನೇತೃತ್ವ ವಹಿಸಿದ್ದ ಅವರು, ವ್ಯವಸ್ಥೆಯನ್ನು ಸುಸೂತ್ರವಾಗಿ ರೂಪಿಸಿ ದೇಶದ ಇತರ ರಾಜ್ಯಗಳಿಗೂ ಮಾದರಿಯಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ.1994ರಿಂದ 1996ರವರೆಗೆ ನಿಯೋಜನೆ ಮೇರೆಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸಿದ ಅವರು, ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕಳಂಕವಿಲ್ಲದೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ.1996ರಲ್ಲಿ ರಾಜ್ಯದಲ್ಲಿ ಆರಂಭವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಸಚಿವರಾಗಿ ನೇಮಕಗೊಂಡ ಅವರು ವಿಶ್ವವಿದ್ಯಾಲಯದ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ತಳಹದಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿಭಾವಂತರಾದ ಇವರು, ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿಯಲ್ಲಿ 1972ರಲ್ಲಿ ರಾಜ್ಯ ಪ್ರಶಸ್ತಿ, ತಮ್ಮ ಪಿಎಚ್.ಡಿ. ಪ್ರಬಂಧದ ಬಗ್ಗೆ ರಾಷ್ಟ್ರಮಟ್ಟದಲ್ಲಿ 1983ರಲ್ಲಿ ಪ್ರೊ.ಲಿಯೊನಾರ್ಡ್ಸ್ ಪ್ರಶಸ್ತಿ, ಭಾರತೀಯ ಎಂಜಿನಿಯರಿಂಗ್ ಸಂಸ್ಥೆಯಿಂದ 2017ರಲ್ಲಿ ವರ್ಷದ ಶ್ರೇಷ್ಠ ಎಂಜಿನಿಯರ್ಯೆಂದು ಪ್ರಶಸ್ತಿ, ಸುರ್ವೆ ಅಕಾಡೆಯಮಿಯಿಂದ ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ ಮತ್ತು 2018ರಲ್ಲಿ ವಿ.ಟಿ.ಯು ವತಿಯಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದ ಸಾಧನೆಗೆ ಸನ್ಮಾನ ಪಡೆದಿದ್ದಾರೆ. 2024ರಲ್ಲಿ ಬೆಂಗಳೂರಿನ ಸಿ.ಎಂ.ಆರ್. ವಿಶ್ವವಿದ್ಯಾಲಯದಿಂದ ಗಣ್ಯ ಶಿಕ್ಷಣ ತಜ್ಞರೆಂದು ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಗೌರವಿಸಿದೆ.261031-16-1777445532