‘ಆಪರೇಷನ್ ಸೈಬರ್ ಶೀಲ್ಡ್’ ಅಡಿ ಕಾರ್ಯಾಚರಣೆ: ಅಪರಾಧಕ್ಕೆ ಹುಬ್ಬಳ್ಳಿ ಸಿಮ್
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಖಾಸಗಿ ಟೆಲಿಕಾಂ ಕಂಪನಿಯ ಸಿಮ್ ಸ್ಟೋರ್ನಲ್ಲಿ ಖರೀದಿಸಿದ ಐದು ಮೊಬೈಲ್ ಸಿಮ್ಕಾರ್ಡ್ ಸಂಖ್ಯೆಗಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಸೈಬರ್ ಅಪರಾಧ ಕೃತ್ಯಗಳಲ್ಲಿ ಬಳಕೆ ಆಗಿದ್ದು ಗೊತ್ತಾಗಿದೆ.ಅವುಗಳ ಪರಿಶೀಲನೆಗೆ ಬೆಂಗಳೂರಿನ ಸೈಬರ್ ಅಪರಾಧ ನಿಯಂತ್ರಣ ಘಟಕವು ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸ್ ಘಟಕಕ್ಕೆ ಮಾಹಿತಿ ರವಾನಿಸಿ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಖಾಸಗಿ ಟೆಲಿಕಾಂ ಕಂಪನಿಯ ಸಿಮ್ ಸ್ಟೋರ್ನಲ್ಲಿ ಖರೀದಿಸಿದ ಐದು ಮೊಬೈಲ್ ಸಿಮ್ಕಾರ್ಡ್ ಸಂಖ್ಯೆಗಳು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಸೈಬರ್ ಅಪರಾಧ ಕೃತ್ಯಗಳಲ್ಲಿ ಬಳಕೆ ಆಗಿದ್ದು ಗೊತ್ತಾಗಿದೆ.ಅವುಗಳ ಪರಿಶೀಲನೆಗೆ ಬೆಂಗಳೂರಿನ ಸೈಬರ್ ಅಪರಾಧ ನಿಯಂತ್ರಣ ಘಟಕವು ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸ್ ಘಟಕಕ್ಕೆ ಮಾಹಿತಿ ರವಾನಿಸಿದ್ದು, ಇಲ್ಲಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‘ಸ್ಟೋರ್ ಏಜೆಂಟರು ಸಿಮ್ಗಳನ್ನು ಸೈಬರ್ ಅಪರಾಧದಲ್ಲಿ ಬಳಸಿಕೊಂಡು ಅಕ್ರಮ ಲಾಭ ಪಡೆದಿದ್ದು ಕಂಡುಬಂದಿದೆ. ಸಿಮ್ಗಳ ವಿತರಣೆ ಮತ್ತು ಸಕ್ರಿಯಗೊಳಿಸುವಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಿ, ಸಂಬಂಧಿತ ಸಂಸ್ಥೆ, ಏಜೆಂಟ್ ಹಾಗೂ ತನಿಖೆಯಲ್ಲಿ ಪತ್ತೆಯಾದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಟೆಲಿಕಾಂ ಸಂಸ್ಥೆಗಳಿಂದ ಗ್ರಾಹಕರ ಅರ್ಜಿ ನಮೂನೆ, ಕೆವೈಸಿ, ಇ–ಕೆವೈಸಿ ದಾಖಲೆಗಳು, ಸಿಮ್ ಸಕ್ರಿಯಗೊಳಿಸುವಿಕೆಯ ವಿವರಗಳು ಹಾಗೂ ಲಾಗ್ಗಳನ್ನು ಸಂಗ್ರಹಿಸಿ ಪರಿಶೀಲಿಸಿ’ ಎಂದು ಪೊಲೀಸರಿಗೆ ಸೈಬರ್ ಅಪರಾಧ ನಿಯಂತ್ರಣ ಘಟಕ ಸೂಚಿಸಿದೆ.ದೇಶದ ವಿವಿಧೆಡೆ ನಡೆದ ಸೈಬರ್ ಅಪರಾಧಗಳ ತಾಂತ್ರಿಕ ತನಿಖೆಯಲ್ಲಿ ಅಪರಾಧ ಕೃತ್ಯಗಳಿಗೆ ಬಳಸಲಾದ ಸಿಮ್ ಕಾರ್ಡ್ಗಳನ್ನು ವಿತರಿಸಿರುವ ಅನುಮಾನಿತ ಏಜೆಂಟರನ್ನು ಕೇಂದ್ರ ಸೈಬರ್ ಅಪರಾಧ ತನಿಖಾ ದಳ ಗುರುತಿಸಿದೆ.‘ಆಪರೇಷನ್ ಸೈಬರ್ ಶೀಲ್ಡ್’ ಅಡಿ ಕಾರ್ಯಾಚರಣೆ ನಡೆಸಿ, ಅವರ ವಹಿವಾಟು ಮತ್ತು ಸಿಮ್ ವಿತರಣೆಯ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಅಂತಹ ಸಿಮ್ಗಳು ಯಾವ ರಾಜ್ಯ ಹಾಗೂ ಯಾವ ವಿತರಣಾ ಕೇಂದ್ರಗಳ ಮೂಲಕ ಖರೀದಿಯಾಗಿವೆ ಎನ್ನುವ ಮಾಹಿತಿ ಆಧರಿಸಿ, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವಿವರಗಳನ್ನು ರವಾನಿಸಿ ತನಿಖೆಗೆ ಆದೇಶಿಸಿದೆ.ಹುಬ್ಬಳ್ಳಿಯ ಟೆಲಿಕಾಂ ಮಳಿಗೆಯಲ್ಲಿ ವಿತರಿಸಲಾದ ಮೊಬೈಲ್ ಸಿಮ್ ಸಂಖ್ಯೆಗಳು 2025ರ ಜನವರಿ 15ರಿಂದ 2026ರ ಸೆಪ್ಟೆಂಬರ್ 19ರವರೆಗೆ ಗುಜರಾತ್, ಉತ್ತರ ಪ್ರದೇಶ, ಒಡಿಶಾ, ಮಹಾರಾಷ್ಟ್ರದಲ್ಲಿ ಬಳಕೆಯಾಗಿದೆ. ಅಲ್ಲದೆ, ಕರ್ನಾಟಕದ ಕೊಪ್ಪಳ, ಚಿಕ್ಕಬಳ್ಳಾಪುರ, ಬಾಗಲಕೋಟೆ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಈ ಮೊಬೈಲ್ ಸಂಖ್ಯೆಗಳಿಗೆ ಸಂಬಂಧಿಸಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆಗಳಿಂದ ಹತ್ತಾರು ಕೋಟಿ ವಂಚನೆ ನಡೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.ಸಿಮ್ಗಳನ್ನು ಖರೀದಿಸಿದವರು ಯಾರು, ಅವರ ಹಿನ್ನೆಲೆ ಏನು, ಯಾವ ಸಂದರ್ಭದಲ್ಲಿ ಸಿಮ್ ನಿಷ್ಕ್ರಿಯವಾಗಿವೆ, ಸಿಮ್ ವಿತರಣೆ ವೇಳೆ ಗ್ರಾಹಕರ ಗುರುತಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲಾಗಿದೆಯೇ, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ, ಮೊದಲೇ ಸಕ್ರಿಯಗೊಳಿಸಿದ ಸಿಮ್ಗಳನ್ನು ವಿತರಿಸಲಾಗಿದೆಯೇ, ಗ್ರಾಹಕರ ಗುರುತಿನ ದಾಖಲೆಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಅಥವಾ ಸಿಮ್ ಸ್ವಾಪ್ ತಂತ್ರಜ್ಞಾನದ ಮೂಲಕ ಮೊಬೈಲ್ ಸಂಪರ್ಕದ ನಿಯಂತ್ರಣವನ್ನು ಸೈಬರ್ ವಂಚಕರು ಪಡೆದುಕೊಂಡಿದ್ದಾರೆಯೇ ಎನ್ನುವ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‘ಸಿಮ್ ಸ್ವಾಪ್, ಅನಧಿಕೃತ ನಿಯಂತ್ರಣ’‘ಹುಬ್ಬಳ್ಳಿಯಲ್ಲಿ ದಾಖಲಾದ ಪ್ರಕರಣದ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿಮ್ಕಾರ್ಡ್ ಬ್ಲಾಕ್ ಆದಾಗ ಇಬ್ಬರು ಗ್ರಾಹಕರು ಅದನ್ನು ಸಾಮಾನ್ಯ ತಾಂತ್ರಿಕ ಸಮಸ್ಯೆ ಎಂದು ಭಾವಿಸಿ, ಹೊಸ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಆದರೆ, ವಂಚಕರು ಹಳೆಯ ಸಂಖ್ಯೆಗಳನ್ನೇ ಸೈಬರ್ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಸಿಮ್ ಸ್ವಾಪ್ ಅಥವಾ ಸಿಮ್ಗೆ ಸಂಬಂಧಿಸಿದ ಅನಧಿಕೃತ ನಿಯಂತ್ರಣ ಪಡೆಯುವ ತಂತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆ ನಡೆದಿದೆ’ ಎಂದು ಸೈಬರ್ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.