ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ನಿರಂತರ ವಿರೋಧ: ವಿಕಾಸ ತಾಂಡೇಲ
ಕಾರವಾರ: ‘ಸಾಗರಮಾಲಾ ಯೋಜನೆ ಮೂಲಕ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ 8 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಈಗಲೂ ವಿರೋಧವಿದೆ’ ಎಂದು ಕಾರವಾರ ಮೀನುಗಾರರ ಸಂಘಟನೆಯ ಪ್ರಮುಖ ವಿಕಾಸ ತಾಂಡೇಲ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಕರಾವಳಿ ಭಾಗದಲ್ಲಿ ಸರಣಿ ಬಂದರುಗಳು ನಿರ್ಮಾಣಗೊಳ್ಳಲ

ಕಾರವಾರ: ‘ಸಾಗರಮಾಲಾ ಯೋಜನೆ ಮೂಲಕ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ 8 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಈಗಲೂ ವಿರೋಧವಿದೆ’ ಎಂದು ಕಾರವಾರ ಮೀನುಗಾರರ ಸಂಘಟನೆಯ ಪ್ರಮುಖ ವಿಕಾಸ ತಾಂಡೇಲ ಹೇಳಿದರು.ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಕರಾವಳಿ ಭಾಗದಲ್ಲಿ ಸರಣಿ ಬಂದರುಗಳು ನಿರ್ಮಾಣಗೊಳ್ಳಲಿವೆ. ಬಂದರು ನಿರ್ಮಾಣದ ಬಳಿಕ ಅದರ ಅಕ್ಕಪಕ್ಕದ ಭೂಮಿಯನ್ನು ಹಂತ ಹಂತವಾಗಿ ವಿವಿಧ ಯೋಜನೆಗೆ ಆಪೋಷನ ಪಡೆಯಲಾಗುತ್ತದೆ. ಜನರಿಗೆ ವಾಸಕ್ಕೆ ಜಾಗವಿಲ್ಲ. ಅಂತದ್ದರಲ್ಲಿ ಬಂದರು ನಿರ್ಮಿಸುತ್ತ ಹೋದರೆ ಪಶ್ಚಿಮ ಘಟ್ಟ, ಜನಜೀವನ, ಸಂಸ್ಕೃತಿ ನಾಶವಾಗಲಿದೆ. ಉತ್ತರ ಕನ್ನಡವನ್ನು ಸರ್ಕಾರ ಕಸದ ಬುಟ್ಟಿಯಂತೆ ಕಾಣುತ್ತಿದೆ. ಈ ಕಾರಣಕ್ಕೆ ರೆಡ್ ಝೋನ್ ಯೋಜನೆಗಳನ್ನು ಇಲ್ಲಿ ಹೇರಲಾಗುತ್ತದೆ’ ಎಂದು ಆರೋಪಿಸಿದರು.‘ವಾರ್ಷಿಕ 1.5 ಮಿಲಿಯನ್ ಟನ್ ಸರಕು ವಹಿವಾಟಿಗೆ ಒಂದೂವರೆ ಕಿ.ಮೀ ಉದ್ದದ ಬಂದರು ನಿರ್ಮಿಸುವುದು ಅವೈಜ್ಞಾನಿಕ ಎನಿಸುತ್ತದೆ. ನಗರದ ಹೃದಯ ಭಾಗದಲ್ಲಿ ರೆಡ್ ಝೋನ್ ಯೋಜನೆ ಜಾರಿತರುವುದು ಅಪಾಯಕಾರಿ. ಕ್ಯಾನ್ಸರ್ಕಾರಕ ಸಾಮಗ್ರಿ ವಹಿವಾಟು ಬಂದರು ಮೂಲಕ ನಡೆಯಲಿದೆ. ಇದರಿಂದ ಕಾರವಾರದ ಜನರ ಆರೋಗ್ಯ ಹದಗೆಡಲಿದೆ. ಬಂದರು ವಿಸ್ತರಣೆ ಕೇವಲ ಪರಿಸರಕ್ಕೆ ಅಷ್ಟೆ ಅಲ್ಲದೆ ಜನರ ಆರೋಗ್ಯಕ್ಕೂ ಹಾನಿಕಾರಕವಾಗಲಿದೆ’ ಎಂದರು.ಗಣಪತಿ ಮಾಂಗ್ರೆ ಮಾತನಾಡಿ, ‘ನೌಕಾನೆಲೆಗೆ ನೂರಾರು ಎಕರೆ ಕಡಲತೀರ ನೀಡಲಾಗಿದೆ. ಕಡಲತೀರ ಉಳಿಸಿಕೊಳ್ಳಲು ಪ್ರಯತ್ನಿಸದ ಜನಪ್ರತಿನಿಧಿ, ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಕು. ಮೀನುಗಾರರಿಗೆ ಪೂರಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಹಿಂದೆ ಆರ್.ವಿ.ದೇಶಪಾಂಡೆ ಸಚಿವರಾಗಿದ್ದಾಗ ಮುಂದಾಗಿದ್ದರು. ಈಗಿನ ಜನಪ್ರತಿನಿಧಿಗಳು ಮೀನುಗಾರರನ್ನು ಒಕ್ಕಲೆಬ್ಬಿಸುವ ಯೋಜನೆ ಜಾರಿಯಾಗುತ್ತಿದ್ದರೂ ಸುಮ್ಮನಿದ್ದಾರೆ. ಬಂದರು ವಿಸ್ತರಣೆ ಯೋಜನೆಗೆ ಮುಂದಾದರೆ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸುತ್ತೇವೆ’ ಎಂದರು.ಮುರಳಿ ತಾಂಡೇಲ, ಚಂದ್ರಕಾಂತ ಹರಿಕಂತ್ರ, ವಿಠ್ಠಲ ಹರಿಕಂತ್ರ, ಉದಯ ಬಾನಾವಳಿಕರ, ದಿಗಂಬರ ಹರಿಕಂತ್ರ, ವೆಂಕಟೇಶ ದುರ್ಗೇಕರ, ಉದಯ ಹರಿಕಂತ್ರ, ಇತರರು ಇದ್ದರು.‘ಜನಪ್ರತಿನಿಧಿಗಳ ಮೇಲೆ ನಂಬಿಕೆ ಇಲ್ಲ’‘ಯಾರದೋ ಲಾಭಕ್ಕೆ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುವ ವಾಣಿಜ್ಯ ಬಂದರು ವಿಸ್ತರಣೆ, ಕೇಣಿಯಲ್ಲಿ ಬಂದರು ನಿರ್ಮಾಣ ಯೋಜನೆ ಜಾರಿಗೆ ಯತ್ನ ನಡೆಯುತ್ತಿದೆ. ಯೋಜನೆ ವಿರೋಧಿಸುವ ಹೋರಾಟಗಾರರ ಸಂಖ್ಯೆ ಇಳಿಕೆಯಾಗಿದೆ, ಬಂಡವಾಳಶಾಹಿಗಳ ಪರ ನಿಲ್ಲುವವರ ಸಂಖ್ಯೆ ಹೆಚ್ಚಿದೆ. ಇವೆಲ್ಲದರ ಹಿಂದೆ ಕೆಲ ಪ್ರಭಾವಿಗಳ ಕುಮ್ಮಕ್ಕಿದೆ’ ಎಂದು ಅಂಕೋಲಾ ಮೀನುಗಾರರ ಸಂಘಟನೆಯ ಪ್ರಮುಖ ಸಂಜೀವ ಬಲೆಗಾರ ಆರೋಪಿಸಿದರು.‘ಶಾಸಕ ಸತೀಶ ಸೈಲ್ ಈವರೆಗೆ ಬಂದರು ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಸ್ಪಂದಿಸಿಲ್ಲ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದೇವೆ’ ಎಂದರು.261031-20-186633532