ಹಾಲಿನ ದರ ಹೆಚ್ಚಳದ ಪಾಲು ರೈತರಿಗೆ: ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಹಾಲಿನ ದರ ಪರಿಷ್ಕರಣೆಯ ಫಲ ನೇರವಾಗಿ ಹೈನುಗಾರರಿಗೆ ಸಿಗಲಿದೆ. ರಾಜ್ಯದ ಒಟ್ಟು ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿರುವ ಅವರು, ಹೆಚ್ಚಿಸಿರುವ ₹8ರ ಹೆಚ್ಚಳದಲ್ಲಿ ₹7 ನೇರವಾ

ಬೆಂಗಳೂರು: ಹಾಲಿನ ದರ ಪರಿಷ್ಕರಣೆಯ ಫಲ ನೇರವಾಗಿ ಹೈನುಗಾರರಿಗೆ ಸಿಗಲಿದೆ. ರಾಜ್ಯದ ಒಟ್ಟು ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು ₹1,850 ಕೋಟಿಯಿಂದ ₹2,100 ಕೋಟಿವರೆಗೆ ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆಯಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿರುವ ಅವರು, ಹೆಚ್ಚಿಸಿರುವ ₹8ರ ಹೆಚ್ಚಳದಲ್ಲಿ ₹7 ನೇರವಾಗಿ ಹೈನುಗಾರರಿಗೆ ತಲುಪಲಿದೆ. ದರ ಪ್ರತಿ ಲೀಟರ್ಗೆ ₹35ರಿಂದ ₹42ಕ್ಕೆ ಏರಿಕೆಯಾಗಲಿದೆ. ಸರ್ಕಾರ ನೀಡುವ ₹ 5 ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹47 ಕೈಸೇರಲಿದೆ. ಇದರಿಂದ ದಿನಕ್ಕೆ 10 ಲೀಟರ್ ಹಾಲು ಪೂರೈಸುವ ರೈತನಿಗೆ ತಿಂಗಳಿಗೆ ಸುಮಾರು ₹2,100 ಹೆಚ್ಚುವರಿ ಆದಾಯ ಸಿಗಲಿದೆ’ ಎಂದಿದ್ದಾರೆ.‘ಕರ್ನಾಟಕದಲ್ಲಿ ಒಟ್ಟು 28.84 ಲಕ್ಷ ಹೈನುಗಾರರಿದ್ದಾರೆ. ಕೆಎಂಎಫ್ ಸದಸ್ಯರಲ್ಲಿ ಶೇ 67ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರು. ಅವರ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ಒದಗಿಸುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.‘ಜಾನುವಾರುಗಳ ಮೇವು ಮತ್ತು ಹಿಂಡಿ ದರದಲ್ಲಿ ಹೆಚ್ಚಳ, ಇಂಧನ ಹಾಗೂ ಪ್ಯಾಕೇಜಿಂಗ್ ವೆಚ್ಚದ ಏರಿಕೆ ಹಾಗೂ ಬರಗಾಲದ ಪರಿಣಾಮ ದೈನಂದಿನ ಹಾಲಿನ ಸಂಗ್ರಹಣೆಯಲ್ಲಿ ಕುಸಿತ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ಹೈನುಗಾರರ ನೆರವಿಗೆ ನಿಲ್ಲುವ ಸದುದ್ದೇಶದಿಂದ ಪ್ರತಿ ಲೀಟರ್ ಹಾಲಿನ ದರವನ್ನು ಭಾನುವಾರದಿಂದ (ನ. 1) ₹8ರಷ್ಟು ಹೆಚ್ಚಿಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ 'ನಂದಿನಿ' ಹಾಲು ಹಾಗೂ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದಿದ್ದಾರೆ. ‘ನೆರೆ ರಾಜ್ಯಗಳಿಗಿಂತ ಕಡಿಮೆ ದರ’ ‘ದರ ಪರಿಷ್ಕರಣೆಯ ನಂತರವೂ ನಂದಿನಿ ಟೋನ್ಡ್ ಹಾಲಿನ ದರ ಪ್ರತಿ ಲೀಟರ್ಗೆ ₹54 ಇದ್ದು ದೇಶದ ಹಲವು ಪ್ರಮುಖ ಡೈರಿ ಬ್ರ್ಯಾಂಡ್ಗಳಿಗಿಂತ ಕಡಿಮೆಯಿದೆ’ ಎಂದು ಶಿವಕುಮಾರ್ ಪ್ರತಿಪಾದಿಸಿದ್ದಾರೆ. ‘ನಂದಿನಿ ಶುಭಂ ( ಶೇ 4.5 ಕೊಬ್ಬಿನಾಂಶ) ಹಾಲಿನ ದರ 60 ಇದ್ದು ಇತರೆ ಹತ್ತು ರಾಜ್ಯಗಳ ಸರಾಸರಿ ದರವಾದ ₹62.80ಕ್ಕಿಂತ ಕಡಿಮೆಯೇ ಇದೆ’ ಎಂದೂ ಹೇಳಿದ್ದಾರೆ.