ಬೆಂಗಳೂರು | ಈಜುಕೊಳ ದುರಂತ: ಇಬ್ಬರು ವಿದೇಶಿಗರ ಸಾವು
ಬೆಂಗಳೂರು: ಹಲಸೂರು ಠಾಣಾ ವ್ಯಾಪ್ತಿಯ ‘ಕಾನ್ರಾಡ್’ ಪಂಚತಾರಾ ಹೋಟೆಲ್ನ ಈಜುಕೊಳದಲ್ಲಿ ಸಂಭವಿಸಿದ ವಿದ್ಯುತ್ ಆಘಾತದಲ್ಲಿ ಇಬ್ಬರು ವಿದೇಶಿಗರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಸ್ಲೊವಾಕಿಯಾದ ಓರಿಯಾಟ್ (45) ಮತ್ತು ಜರ್ಮನ್ನ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತಪಟ್ಟವರು.ಅಮೆರಿಕದ ಮ್ಯಾಥ್ಯು (41) ಹಾಗೂ ಈಜುಕೊಳದ ಲೈಫ್ಗಾರ್ಡ್ ಆಗಿ ಕೆಲಸ ಮಾಡುತ್ತಿದ್

ಬೆಂಗಳೂರು: ಹಲಸೂರು ಠಾಣಾ ವ್ಯಾಪ್ತಿಯ ‘ಕಾನ್ರಾಡ್’ ಪಂಚತಾರಾ ಹೋಟೆಲ್ನ ಈಜುಕೊಳದಲ್ಲಿ ಸಂಭವಿಸಿದ ವಿದ್ಯುತ್ ಆಘಾತದಲ್ಲಿ ಇಬ್ಬರು ವಿದೇಶಿಗರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಸ್ಲೊವಾಕಿಯಾದ ಓರಿಯಾಟ್ (45) ಮತ್ತು ಜರ್ಮನ್ನ ಅಲೆಕ್ಸಾಂಡರ್ ಮ್ಯಾಕ್ಸಿಲನ್ (59) ಮೃತಪಟ್ಟವರು.ಅಮೆರಿಕದ ಮ್ಯಾಥ್ಯು (41) ಹಾಗೂ ಈಜುಕೊಳದ ಲೈಫ್ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ತಿವಾರಿ (28) ಅವರು ಗಾಯಗೊಂಡಿದ್ದು, ಇಬ್ಬರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ಪಂಚತಾರಾ ಹೋಟೆಲ್ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದೆ ಎಂಬುದಾಗಿ ಆರೋಪಿಸಿ ಮೃತ ಅಲೆಕ್ಸಾಂಡರ್ ಮ್ಯಾಕ್ಸಿಲನ್ ಅವರ ಪತ್ನಿ ಹಲಸೂರು ಠಾಣೆಗೆ ದೂರು ನೀಡಿದ್ದಾರೆ. ಆ ದೂರನ್ನು ಆಧರಿಸಿ, ಹೋಟೆಲ್ ಆಡಳಿತ ಮಂಡಳಿ ಹಾಗೂ ನಿರ್ವಹಣಾ ಸಿಬ್ಬಂದಿ ವಿರುದ್ಧ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.‘ಓರಿಯಾಟ್ ಹಾಗೂ ಅಲೆಕ್ಸಾಂಡರ್ ಹೋಟೆಲ್ನಲ್ಲಿ ಕಳೆದ ಕೆಲವು ದಿನಗಳ ವಾಸ್ತವ್ಯ ಮಾಡಿದ್ದರು. ಹೋಟೆಲ್ ಮೂರನೇ ಮಹಡಿಯಲ್ಲಿ ಇರುವ ಈಜುಕೊಳಕ್ಕೆ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಇಳಿದಿದ್ದರು. ಆ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದಾರೆ. ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದ ಅಮೆರಿಕದ ಮ್ಯಾಥ್ಯು, ಈಜುಕೊಳದ ಲೈಫ್ಗಾರ್ಡ್ ರಾಹುಲ್ ತಿವಾರಿ ಸಹ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈಜುಕೊಳದ ಸುತ್ತಮುತ್ತಲಿನ ವಿದ್ಯುತ್ ಸಂಪರ್ಕ ಹಾಗೂ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.‘ಹೋಟೆಲ್ಗೆ ಬೆಸ್ಕಾಂ ಸಿಬ್ಬಂದಿಯೂ ಭೇಟಿ ಪರಿಶೀಲಿಸಿದ್ದು, ಅವರಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.