ಮಂಡ್ಯ ಸಮಗ್ರ ಅಭಿವೃದ್ಧಿ: ₹1,793 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ
ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ ₹2 ಸಾವಿರ ಕೋಟಿಗೂ ಅಧಿಕ ಅನುದಾನ ಮಂಜೂರು ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಬದುಕು ಕನ್ನಂಬಾಡಿ ಕಟ್ಟೆ ಮತ್ತು ಕೃಷಿಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್
ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈಗಾಗಲೇ ₹2 ಸಾವಿರ ಕೋಟಿಗೂ ಅಧಿಕ ಅನುದಾನ ಮಂಜೂರು ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಬದುಕು ಕನ್ನಂಬಾಡಿ ಕಟ್ಟೆ ಮತ್ತು ಕೃಷಿಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ₹1793 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಗೆ ನೀರಾವರಿ ಮತ್ತು ಕೃಷಿಯಂಥ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ನಾನು ನಿರ್ವಹಿಸುತ್ತಿದ್ದ ನೀರಾವರಿ ಖಾತೆಯನ್ನು ಎನ್.ಚಲುವರಾಯಸ್ವಾಮಿ ಅವರಿಗೆ ವಹಿಸಿಕೊಟ್ಟು, ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಸೂಚಿಸಿದ್ದೇನೆ. ಜಿಲ್ಲೆಯ ಕೆರೆಗಳನ್ನು ತುಂಬಿಸುವುದು, ವಿತರಣಾ ಮತ್ತು ಪಿಕಲ್ ನಾಲೆಗಳ ಆಧುನೀಕರಣ ಮತ್ತು ದುರಸ್ತಿ, ಅಚ್ಚುಕಟ್ಟು ಪ್ರದೇಶದ ಕಡೇ ಭಾಗದ ರೈತರಿಗೆ ನೀರು ತಲುಪಿಸುವುದು ನಮ್ಮ ಆದ್ಯತೆಯಾಗಿದೆ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೂರಾರು ಕೋಟಿ ರೂಪಾಯಿಗಳಿಂದ ಸಾವಿರಾರು ಕೋಟಿ ರೂಪಾಯಿಗಳವರೆಗಿನ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಅಭಿವೃದ್ಧಿ ಕಾರ್ಯಗಳ ಪ್ರಯೋಜನ ಜನರಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.ಮಂಡ್ಯ ಅನ್ನದ ತಟ್ಟೆ:ಮಂಡ್ಯ ಜನರ ಮಾತು ನೇರ ಮತ್ತು ನಾಗಮಂಗಲದ ಬೆಣ್ಣೆ ಥರ. ಮಂಡ್ಯ ಎಂದರೆ ಅನ್ನದ ತಟ್ಟೆ, ಅಕ್ಕರೆ, ಸಕ್ಕರೆಗೆ ಪ್ರಸಿದ್ಧಿ. ನಾಲ್ವಡಿ ಮತ್ತು ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಕಟ್ಟೆ ಕಟ್ಟಿಸಿದ್ದಾರೆ. ಜಿ.ಮಾದೇಗೌಡ, ಕೆ.ಎಸ್. ಪುಟ್ಟಣ್ಣಯ್ಯ, ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟ ಸ್ಮರಣೀಯ. ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ ಮುಂತಾದ ಮಹನೀಯರು ಜಿಲ್ಲೆಗೆ ಕೊಟ್ಟ ಕೊಡುಗೆಗಳು ಅನನ್ಯ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಪ್ರಜಾಸೇವೆ ಆಂದೋಲನ’ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕ್ರಮಕೈಗೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಟೀಕಿಸುತ್ತಾರೆ. ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಎಂದು ಕುಟುಕುತ್ತಾರೆ. ಅಂಥವರಿಗೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ‘ಸಾಕ್ಷಿಗುಡ್ಡೆ’ ಸೃಷ್ಟಿಸಿ ಉತ್ತರ ಕೊಡುತ್ತೇವೆ ಎಂದು ಹೇಳಿದರು. ಶಾಸಕ ಪಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ. ಉದಯ್, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಬಿ.ಎಸ್. ಶಿವಣ್ಣ, ಎಂ.ಕೆ. ಹರೀಶ್ಬಾಬು, ಸಿ.ಡಿ.ಗಂಗಾಧರ್, ಮೂರ್ತಿ, ಎಂ.ಎಸ್.ಆತ್ಮಾನಂದ, ಬಿ.ನಾಗೇಂದ್ರಕುಮಾರ್, ಸಚಿನ್ ಚಲುವರಾಯಸ್ವಾಮಿ, ವಿಜಯಲಕ್ಷ್ಮಿ ರಘುನಂದನ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಶೋಭಾರಾಣಿ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕುಮಾರ ಸ್ವಾಗತಿಸಿದರು. *ಮಂಡ್ಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ: ಸಿಎಂ ಸಮ್ಮತಿ*ಮಂಡ್ಯ ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ಉಪಕೇಂದ್ರ ಸ್ಥಾಪಿಸುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅವರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಅಗತ್ಯ ಕ್ರಮ ಕೈಗೊಂಡು ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದಾರೆ.*‘ಪ್ರತಿ ಕ್ಷೇತ್ರದಲ್ಲೂ ಇಂದಿರಾ ಭವನ ನಿರ್ಮಿಸಿ’*ಮಂಡ್ಯ ನಗರದ ಹೊಳಲು ಸರ್ಕಲ್ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಿದರು. ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯೇಕ ‘ಇಂದಿರಾ ಭವನ’ ನಿರ್ಮಾಣವಾಗಬೇಕು. ಮಳವಳ್ಳಿಯಲ್ಲಿ ನರೇಂದ್ರಸ್ವಾಮಿ ಅವರು ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮದ್ದೂರಿನಲ್ಲಿ ಉದಯ್ ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಉಳಿದ ತಾಲ್ಲೂಕುಗಳಲ್ಲೂ ಭವನ ನಿರ್ಮಾಣವಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯಕರ್ತರಿಗೆ ಒಗ್ಗೂಡುವ ಕೇಂದ್ರ ಇರಬೇಕು ಎಂದು ಸಿಎಂ ಹೇಳಿದರು. ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. *ನಂದಿನಿ ಐಸ್ಕ್ರೀಮ್ ಘಟಕಕ್ಕೆ ಒಪ್ಪಿಗೆ*ಮಂಡ್ಯ ಜಿಲ್ಲೆಯಲ್ಲಿ ಮನ್ಮುಲ್ ವತಿಯಿಂದ ನಂದಿನಿ ಐಸ್ಕ್ರೀಮ್ ಮತ್ತು ನಂದಿನಿ ನೀರು ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವ ಸಲ್ಲಿಸಿದ್ದರು. ಈ ಘಟಕಗಳ ಸ್ಥಾಪನೆಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಂಡ್ಯ ಕೃಷಿ ವಿವಿಗೆ ₹115 ಕೋಟಿ ಮಂಜೂರು ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮವಹಿಸಲಾಗಿದೆ. ಮೈಷುಗರ್ ಕಾರ್ಖಾನೆಯಲ್ಲಿ ಬಾಯ್ಲಿಂಗ್ ಹೌಸ್ ಆಧುನೀಕರಣಕ್ಕೆ ₹60 ಕೋಟಿ ಮೀಸಲಿಡಲಾಗಿದೆ. ಮಂಡ್ಯ ತಾಲ್ಲೂಕಿನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಉದ್ಘಾಟಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.