ಚರ್ಚೆ | ಪ್ರತಿರೋಧವೇ ಪ್ರಜಾಪ್ರಭುತ್ವದ ಭರವಸೆ–ಬಿ.ಕೆ.ಹರಿಪ್ರಸಾದ್
ಒಬ್ಬ ಜನಪ್ರಿಯ ನಾಯಕನ ರಾಜಕೀಯ ಇಚ್ಛೆಯೇ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಲು ಆರಂಭಿಸಿದಾಗ ನಿಜವಾದ ಅಪಾಯ ಎದುರಾಗುತ್ತದೆ. ನ್ಯಾಯಾಂಗವು ಅಧಿಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಳೆದುಕೊಂಡಾಗ, ಚುನಾವಣಾ ಆಯೋಗವು ಆಡಳಿತ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿದಾಗ, ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ನಿಯಂತ್ರಿಸುವ ಅಸ್ತ್ರಗಳಾದಾಗ, ಮಾಧ್ಯಮಗಳು

ಒಬ್ಬ ಜನಪ್ರಿಯ ನಾಯಕನ ರಾಜಕೀಯ ಇಚ್ಛೆಯೇ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಲು ಆರಂಭಿಸಿದಾಗ ನಿಜವಾದ ಅಪಾಯ ಎದುರಾಗುತ್ತದೆ. ನ್ಯಾಯಾಂಗವು ಅಧಿಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಳೆದುಕೊಂಡಾಗ, ಚುನಾವಣಾ ಆಯೋಗವು ಆಡಳಿತ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿದಾಗ, ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ನಿಯಂತ್ರಿಸುವ ಅಸ್ತ್ರಗಳಾದಾಗ, ಮಾಧ್ಯಮಗಳು ಪ್ರಭುತ್ವದ ತಪ್ಪುಗಳನ್ನು ಪ್ರಶ್ನಿಸುವುದನ್ನೇ ನಿಲ್ಲಿಸಿದಾಗ ಪ್ರಜಾಪ್ರಭುತ್ವ ಒಳಗಿನಿಂದಲೇ ಶಿಥಿಲಗೊಳ್ಳುತ್ತದೆಜಗತ್ತಿನ ಅತಿ ದೊಡ್ಡ ಚುನಾವಣಾ ಪ್ರಜಾಪ್ರಭುತ್ವವಾಗಿರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ. ಜನತಂತ್ರದ ನಿಜವಾದ ಪರೀಕ್ಷೆಯು ಆಡಳಿತದಲ್ಲಿರುವ ಪಕ್ಷ ಎಷ್ಟು ಚುನಾವಣೆಗಳನ್ನು ಗೆಲ್ಲುತ್ತದೆ ಎಂಬುದರಲ್ಲಿಲ್ಲ; ಆ ಪಕ್ಷವನ್ನು ಸೋಲಿಸುವ ಸ್ವಾತಂತ್ರ್ಯ ಮತ್ತು ಅವಕಾಶ ಜನರಿಗೆ ಎಷ್ಟರಮಟ್ಟಿಗೆ ಉಳಿದಿದೆ ಎಂಬುದರಲ್ಲಿದೆ. ಜನಾದೇಶವು ಸರ್ಕಾರ ನಡೆಸುವ ಅಧಿಕಾರವನ್ನು ನೀಡುತ್ತದೆಯೇ ಹೊರತು, ಆ ಅಧಿಕಾರವನ್ನು ನಿಯಂತ್ರಿಸಬೇಕಾದ ಸಾಂವಿಧಾನಿಕ ಸಂಸ್ಥೆಗಳನ್ನೇ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪರವಾನಗಿಯನ್ನಲ್ಲ. ಚುನಾವಣೆಗಳು ನಡೆಯುತ್ತಿವೆ ಎಂಬ ಒಂದೇ ಕಾರಣಕ್ಕೆ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಭಾವಿಸುವುದು ಅಪಾಯಕಾರಿ ಸರಳೀಕರಣ.ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಭ್ರಷ್ಟಾಚಾರ, ಜನರನ್ನು ಮೂರ್ಖರನ್ನಾಗಿಸುವ, ಅಂಧಭಕ್ತರನ್ನು ಸೃಷ್ಟಿಸುವ ರಾಜಕಾರಣ ಚಾಲ್ತಿಯಲ್ಲಿದೆ. ಕೆಲ ದೇಶಗಳ ವಿದ್ಯಾವಂತ ನಾಗರಿಕರು ಕರಿಯ-ಬಿಳಿಯ, ಬಲ-ಎಡ ಕಾರಣಗಳಿಗಾಗಿ ‘ಹುಚ್ಚು ನಾಯಕತ್ವ’ವನ್ನು ಬೆಂಬಲಿಸಿದ್ದನ್ನು ಜಗತ್ತು ಕಂಡಿದೆ. ಹುಚ್ಚು ನಾಯಕತ್ವ ಹಲವು ದೇಶಗಳಲ್ಲಿ ಇದ್ದರೂ, ಅಲ್ಲಿನ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿಲ್ಲ. ಅದಕ್ಕೆ ಕಾರಣ, ಆ ದೇಶದ ‘ವ್ಯವಸ್ಥೆ’ಯು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದೆ. ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಸ್ವತಂತ್ರ ನ್ಯಾಯಾಂಗ, ವಿರೋಧ ಪಕ್ಷಗಳ ಹಕ್ಕುಗಳು, ಕಾರ್ಯಾಂಗ, ತನಿಖಾ ಸಂಸ್ಥೆಗಳ ಸಾಂವಿಧಾನಿಕ ಕಾರ್ಯನಿರ್ವಹಣೆ, ನಾಗರಿಕ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಗುಣಮಟ್ಟವನ್ನು ನಿರ್ಧರಿಸುತ್ತವೆ.ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಜನಪ್ರಿಯ ನಾಯಕರನ್ನು ಅಧಿಕಾರಕ್ಕೆ ತರುವುದರಲ್ಲಿ ಮಾತ್ರವಲ್ಲ, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಜನರ ಹಕ್ಕನ್ನು ರಕ್ಷಿಸುವುದರಲ್ಲಿಯೂ ಇದೆ. 2022ರಲ್ಲಿ ಬ್ರೆಜಿಲ್ನ ಅಧ್ಯಕ್ಷ ಬಲಪಂಥೀಯ ನಾಯಕ ಜೈರ್ ಬೋಲ್ಸೊನಾರೊ ಅವರನ್ನು ಸೋಲಿಸಿ ಅಧಿಕಾರಕ್ಕೆ ಬಂದ ಎಡಪಂಥೀಯ ನಾಯಕ ಲೂಲಾ ಡ ಸಿಲ್ವಾ, ಈ ಬಾರಿಯ ಚುನಾವಣೆಯಲ್ಲೂ ಮತ್ತೆ ಜನಾದೇಶ ಪಡೆದಿದ್ದಾರೆ. ಇತ್ತ ಇಸ್ರೇಲ್ನಲ್ಲಿ ಬೆಂಜಮಿನ್ ನೆತನ್ಯಾಹು ಅವರ ಯುದ್ಧನೀತಿಗಳು ಮತ್ತು ಆಡಳಿತದ ವಿರುದ್ಧ ಜನರು ಮತ ಚಲಾಯಿಸಿದ್ದಾರೆ. ಈ ಬೆಳವಣಿಗೆಗಳು ಮಹತ್ವದ ಸತ್ಯವೊಂದನ್ನು ಸಾರುತ್ತವೆ. ಅಧಿಕಾರ ಯಾವ ನಾಯಕನ ಶಾಶ್ವತ ಸ್ವತ್ತೂ ಅಲ್ಲ. ತಮ್ಮ ತೀರ್ಪಿನ ಮೂಲಕ ಆಡಳಿತವನ್ನು ಪ್ರಶ್ನಿಸುವ, ಸರ್ಕಾರವನ್ನು ಬದಲಾಯಿಸುವ ಹಾಗೂ ಬಯಸಿದ ನಾಯಕತ್ವವನ್ನು ಮತ್ತೆ ಆಯ್ಕೆ ಮಾಡುವ ಜನರ ಸಾಂವಿಧಾನಿಕ ಅವಕಾಶ ಉಳಿದಿರುವುದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ.ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ನಿರ್ಧಾರಗಳು ವಿವಾದಕ್ಕೆ ಕಾರಣವಾಗಿವೆ. ಆದರೆ, ಅಲ್ಲಿ ಅಧ್ಯಕ್ಷರ ರಾಜಕೀಯ ಪ್ರಾಬಲ್ಯವೇ ಅಂತಿಮ ಅಧಿಕಾರವಲ್ಲ. ಸ್ವತಂತ್ರ ನ್ಯಾಯಾಂಗ, ಶಾಸಕಾಂಗ, ಒಕ್ಕೂಟ ವ್ಯವಸ್ಥೆಯ ರಾಜ್ಯ ಸರ್ಕಾರಗಳು, ನಾಗರಿಕ ಸಂಘಟನೆಗಳು ಮತ್ತು ಮುಕ್ತ ಮಾಧ್ಯಮಗಳು ಕಾರ್ಯಾಂಗದ ಅಧಿಕಾರವನ್ನು ಪ್ರಶ್ನಿಸುವ ಸಾಂವಿಧಾನಿಕ ಅವಕಾಶಗಳನ್ನು ಹೊಂದಿವೆ. ಇದಕ್ಕೆ, ಈ ವರ್ಷದ ಫೆ.20ರಂದು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮಹತ್ವದ ನಿದರ್ಶನ. ರಾಷ್ಟ್ರೀಯ ಹಿತಾಸಕ್ತಿ ಹೆಸರಿನಲ್ಲಿ ಟ್ರಂಪ್ ವಿಧಿಸಿದ್ದ ಆಮದು ಸುಂಕಗಳಿಗೆ 1977ರ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ಅಧಿಕಾರವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. ಒಬ್ಬ ನಾಯಕನ ರಾಜಕೀಯ ಇಚ್ಛೆಯೇ ದೇಶದ ಕಾನೂನಾಗಿ ಮಾರ್ಪಡುವುದನ್ನು ತಡೆಯುವ ಸಾಂಸ್ಥಿಕ ನಿಯಂತ್ರಣಗಳೇ ಪ್ರಜಾಪ್ರಭುತ್ವದ ನಿಜವಾದ ರಕ್ಷಾ ಕವಚ.ಭಾರತದಲ್ಲಿ ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ನ್ಯಾಯಾಂಗಕ್ಕೆ ಸ್ವತಂತ್ರ ಸ್ಥಾನಮಾನ ನೀಡಿದೆ. ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವನ್ನು ಸ್ಥಾಪಿಸಿದೆ. ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ತನಿಖೆ ಮಾಡಲು ವಿವಿಧ ಸಂಸ್ಥೆಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ಸಂಸ್ಥೆಗಳು ಕೇವಲ ಸಂವಿಧಾನದಲ್ಲಿ ಉಲ್ಲೇಖವಾಗಿರುವುದರಿಂದ ಮಾತ್ರವೇ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದಿಲ್ಲ. ಅವು ರಾಜಕೀಯ ಒತ್ತಡದಿಂದ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿವೆಯೇ, ಎಲ್ಲರಿಗೂ ಸಮಾನವಾಗಿ ಕಾನೂನನ್ನು ಅನ್ವಯಿಸುತ್ತಿವೆಯೇ, ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಧೈರ್ಯ ಹೊಂದಿವೆಯೇ ಎಂಬುದು ಪ್ರಜಾಪ್ರಭುತ್ವದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಆದರೆ, ಭಾರತದಲ್ಲಿ ಇಂದು ಚುನಾವಣಾ ಆಯೋಗದ ಕಾರ್ಯವೈಖರಿ, ಎಸ್ಐಆರ್, ಕೇಂದ್ರ ತನಿಖಾ ಸಂಸ್ಥೆಗಳ ಬಳಕೆ, ನ್ಯಾಯಾಂಗದ ಸ್ವಾಯತ್ತೆ, ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ವಿರೋಧ ಪಕ್ಷಗಳ ರಾಜಕೀಯ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.ಚುನಾವಣಾ ಪ್ರಜಾಪ್ರಭುತ್ವದ ಮೂಲಾಧಾರವೇ ಮತದಾನದ ಹಕ್ಕು. ಆ ಹಕ್ಕನ್ನು ನಿರ್ಧರಿಸುವ ಮತದಾರರ ಪಟ್ಟಿಯ ಪರಿಷ್ಕರಣೆ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ನಾಗರಿಕರ ರಾಜಕೀಯ ಹಕ್ಕಿಗೆ ಸಂಬಂಧಿಸಿದ ಸಾಂವಿಧಾನಿಕ ಜವಾಬ್ದಾರಿ. ನಕಲಿ ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಎಷ್ಟು ಮುಖ್ಯವೋ, ಅರ್ಹ ಮತದಾರರ ಹೆಸರುಗಳು ಕೈಬಿಟ್ಟುಹೋಗದಂತೆ ರಕ್ಷಿಸುವುದೂ ಅಷ್ಟೇ ಮುಖ್ಯ. ಮತದಾರರ ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ದೇಶದಾದ್ಯಂತ ಎಸ್ಐಆರ್ ಹೆಸರಿನಲ್ಲಿ ಆಯೋಗವು 15 ಕೋಟಿಯಷ್ಟು ಮತದಾರರ ಹೆಸರುಗಳನ್ನು ತೆಗೆದುಹಾಕಿದೆ. ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸಾಂವಿಧಾನಿಕ ಸಂಸ್ಥೆಗಳು ಸಮರ್ಪಕ ಉತ್ತರ ನೀಡಬೇಕೇ ಹೊರತು, ಸಾರ್ವಜನಿಕ ಆತಂಕವನ್ನು ನಿರ್ಲಕ್ಷಿಸಬಾರದು. ಜನರ ತೀರ್ಪನ್ನು ರಕ್ಷಿಸಬೇಕಾದ ಚುನಾವಣಾ ಆಯೋಗವೇ ರಾಜಕೀಯ ಪ್ರಭಾವಕ್ಕೆ ಒಳಗಾದರೆ, ಚುನಾವಣೆಗಳು ನಡೆಯುತ್ತಿದ್ದರೂ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆ ಕುಸಿಯುತ್ತದೆ.ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವು ಕಾನೂನಿನ ವ್ಯಾಖ್ಯಾನಕಾರನಷ್ಟೇ ಅಲ್ಲ; ಅಧಿಕಾರದ ಮಿತಿಯನ್ನು ನಿರ್ಧರಿಸುವ ಸಾಂವಿಧಾನಿಕ ರಕ್ಷಕ. ಶಾಸಕಾಂಗ ಮತ್ತು ಕಾರ್ಯಾಂಗ ಬಹುಮತದ ಬಲದಿಂದ ನಿರ್ಧಾರಗಳನ್ನು ಕೈಗೊಳ್ಳಬಹುದು. ಆದರೆ ಆ ನಿರ್ಧಾರಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಾಗ ಅವುಗಳನ್ನು ತಡೆಯುವ ಸ್ವಾತಂತ್ರ್ಯ ನ್ಯಾಯಾಂಗಕ್ಕಿರಬೇಕು. ನ್ಯಾಯಾಧೀಶರ ನೇಮಕಾತಿ, ಪ್ರಕರಣಗಳ ವಿಚಾರಣೆಯ ಆದ್ಯತೆ, ನ್ಯಾಯಾಂಗದ ಮೇಲಿನ ರಾಜಕೀಯ ಒತ್ತಡ ಮತ್ತು ನ್ಯಾಯದಾನದಲ್ಲಿನ ವಿಳಂಬದಂತಹ ಪ್ರಶ್ನೆಗಳು ಕೇವಲ ಆಡಳಿತಾತ್ಮಕ ಸಮಸ್ಯೆಗಳಲ್ಲ; ಅವು ನ್ಯಾಯಾಂಗದ ಸ್ವಾಯತ್ತೆ ಮತ್ತು ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಗಂಭೀರ ಸಾಂವಿಧಾನಿಕ ಪ್ರಶ್ನೆಗಳು.ಭಾರತದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಚರ್ಚೆಯಾಗುತ್ತಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದಂತಹ ಸಂಸ್ಥೆಗಳು ಕಾನೂನು ಉಲ್ಲಂಘನೆ, ಆರ್ಥಿಕ ಅಪರಾಧ, ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡುವ ಮಹತ್ವದ ಹೊಣೆಯನ್ನು ಹೊತ್ತಿವೆ. ಭ್ರಷ್ಟಾಚಾರದ ಆರೋಪದ ಮೇಲೆ 2014ರಿಂದ ಕೇಂದ್ರದ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿದ್ದ ವಿಪಕ್ಷಗಳ 25 ಮುಖಂಡರು ಬಿಜೆಪಿ ಸೇರಿದ್ದರು. ಈ ಪೈಕಿ 23 ಮಂದಿಯ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ಸ್ಥಗಿತಗೊಂಡಿದೆ. ಹಾಗಾಗಿಯೇ ಐ.ಟಿ-ಇ.ಡಿಗಳು ಬಿಜೆಪಿಯ ವಾಶಿಂಗ್ ಮಷೀನ್ ಆಗಿವೆ ಎಂದು ನಾನು ಗಟ್ಟಿಯಾಗಿ ಹೇಳಬಲ್ಲೆ.ಒಬ್ಬ ಜನಪ್ರಿಯ ನಾಯಕನ ರಾಜಕೀಯ ಇಚ್ಛೆಯೇ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸಲು ಆರಂಭಿಸಿದಾಗ ನಿಜವಾದ ಅಪಾಯ ಎದುರಾಗುತ್ತದೆ. ನ್ಯಾಯಾಂಗವು ಅಧಿಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಳೆದುಕೊಂಡಾಗ, ಚುನಾವಣಾ ಆಯೋಗವು ಆಡಳಿತ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿದಾಗ, ತನಿಖಾ ಸಂಸ್ಥೆಗಳು ರಾಜಕೀಯ ವಿರೋಧಿಗಳನ್ನು ನಿಯಂತ್ರಿಸುವ ಅಸ್ತ್ರಗಳಾದಾಗ ಮತ್ತು ಮಾಧ್ಯಮಗಳು ಪ್ರಭುತ್ವದ ತಪ್ಪುಗಳನ್ನು ಪ್ರಶ್ನಿಸುವುದನ್ನೇ ನಿಲ್ಲಿಸಿದಾಗ ಪ್ರಜಾಪ್ರಭುತ್ವ ಒಳಗಿನಿಂದಲೇ ಶಿಥಿಲಗೊಳ್ಳುತ್ತದೆ.ಪ್ರಜಾಪ್ರಭುತ್ವದ ಸಾಂವಿಧಾನಿಕ ಆಶಯಗಳನ್ನು ಬುಡಮೇಲು ಮಾಡುವ, ದುರ್ಬಲಗೊಳಿಸುವ ಪ್ರಯತ್ನಗಳು ಹೆಚ್ಚಾದಂತೆ, ಅವುಗಳ ವಿರುದ್ಧದ ಜನಪ್ರತಿರೋಧವೂ ತೀವ್ರಗೊಳ್ಳುತ್ತಿದೆ. ಇದು ಕೇವಲ ಭಾರತದ ವಿದ್ಯಮಾನವಲ್ಲ; ಜಗತ್ತಿನ ವಿವಿಧ ದೇಶಗಳಲ್ಲಿ ಕಂಡುಬರುತ್ತಿರುವ ಬೆಳವಣಿಗೆ. ನೇಪಾಳ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಲ್ಲಿ ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ನಾಗರಿಕ ಹಕ್ಕುಗಳ ಪ್ರಶ್ನೆಗಳನ್ನಿಟ್ಟುಕೊಂಡು ಯುವಜನರು ಬೀದಿಗಿಳಿದಿದ್ದಾರೆ. ಕೆಲವು ದೇಶಗಳಲ್ಲಿ ಇಂತಹ ಜನಾಂದೋಲನಗಳು ಸರ್ಕಾರಗಳ ಬದಲಾವಣೆಗೂ ಕಾರಣವಾಗಿವೆ. ಭಾರತದಲ್ಲಿಯೂ ಯುವಜನರ ಪ್ರತಿಭಟನೆಗಳು, ಎಸ್ಐಆರ್ ವಿರುದ್ಧದ ಹೋರಾಟಗಳು ಹಾಗೂ ಮತದಾನದ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಚಳವಳಿಗಳು ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಜನರಲ್ಲಿ ಮೂಡುತ್ತಿರುವ ಕಾಳಜಿಯನ್ನು ಪ್ರತಿಬಿಂಬಿಸುತ್ತವೆ.ಪ್ರಜಾಪ್ರಭುತ್ವದ ಅಂತಿಮ ರಕ್ಷಕರು ಕೇವಲ ಸಾಂವಿಧಾನಿಕ ಸಂಸ್ಥೆಗಳಲ್ಲ; ಸಂವಿಧಾನದ ಆಶಯ ಗಳಿಗೆ ಬದ್ಧರಾಗಿರುವ ಜಾಗೃತ ನಾಗರಿಕರೂ ಹೌದು. ಜನರು ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಹೊಂದಿರುವಂತೆಯೇ, ಅದರ ನಿರ್ಧಾರಗಳನ್ನು ಪ್ರಶ್ನಿಸುವ ಮತ್ತು ಜನಾದೇಶದ ಮೂಲಕ ಅದನ್ನು ಬದಲಾಯಿಸುವ ಸ್ವಾತಂತ್ರ್ಯವನ್ನೂ ಹೊಂದಿದ್ದಾರೆ. ಅಧಿಕಾರ ಎಷ್ಟೇ ಪ್ರಬಲವಾಗಿದ್ದರೂ ಅದು ಜನರಿಗಿಂತ ದೊಡ್ಡದಲ್ಲ; ಸಂವಿಧಾನಕ್ಕಿಂತ ಮೇಲಲ್ಲ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಶಕ್ತಿಗಳಿಗೆ ಜನತಂತ್ರದೊಳಗಿನಿಂದಲೇ ಪ್ರತಿರೋಧ ಹುಟ್ಟುತ್ತದೆ. ಆ ಪ್ರತಿರೋಧವೇ ಪ್ರಜಾಪ್ರಭುತ್ವದ ಭವಿಷ್ಯದ ಭರವಸೆ.ಲೇಖಕ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷಎಸ್ಐಆರ್ ವಿರುದ್ಧ ಪ್ರತಿಭಟನೆಪ್ರಜಾಪ್ರಭುತ್ವದ ಮಹತ್ವ ಸಾರಿದ ಕಾಂಗ್ರೆಸ್ಸ್ವಾತಂತ್ರ್ಯ ಹೋರಾಟದ ಪರಂಪರೆ ಹೊಂದಿರುವ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಐತಿಹಾಸಿಕ ಪಾತ್ರ ವಹಿಸಿದೆ. ಸಾರ್ವತ್ರಿಕ ವಯಸ್ಕ ಮತದಾನ ಸ್ವತಂತ್ರ ನ್ಯಾಯಾಂಗ ಚುನಾವಣಾ ಆಯೋಗ ಒಕ್ಕೂಟ ವ್ಯವಸ್ಥೆ ಮತ್ತು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಂತಹ ಸಾಂವಿಧಾನಿಕ ಸಂಸ್ಥೆಗಳು ಹಾಗೂ ಮೌಲ್ಯಗಳು ನೆಲೆಯೂರಲು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಮಹತ್ವದ ಕೊಡುಗೆ ನೀಡಿವೆ. 1975ರ ತುರ್ತು ಪರಿಸ್ಥಿತಿ ನಮ್ಮ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಗಂಭೀರವಾದ ಅಪವಾದವಾಗಿದ್ದರೂ 1977ರಲ್ಲಿ ಜನರ ತೀರ್ಪನ್ನು ಒಪ್ಪಿಕೊಂಡು ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸಿದ್ದು ಭಾರತದ ಪ್ರಜಾಸತ್ತಾತ್ಮಕ ಪರಂಪರೆಯ ಮಹತ್ವವನ್ನು ಸಾರುತ್ತದೆ. //