ಹೂಡಿಕೆ, ಮೂಲಸೌಕರ್ಯ, ಪೂರಕ ಪರಿಸರ ಕ್ವಾಂಟಮ್ ಕ್ಷೇತ್ರದ ಎಂಜಿನ್: ಪ್ರೊ. ಅರಿಂದಮ್
ಭಾರತವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿಸಲು ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಮತ್ತು ಹೂಡಿಕೆ ಅಗತ್ಯವೆಂದು ಪ್ರೊ. ಅರಿಂದಮ್ ಘೋಷ್ ವಿವರಿಸಿದ್ದಾರೆ.ದೇಶದ ಕ್ವಾಂಟಮ್ ಯೋಜನೆಯ ಹಾದಿಯಲ್ಲಿ ಸರಿಯಾದ ಪೂರಕ ವ್ಯವಸ್ಥೆಯೊಂದಿಗೆ ಐಟಿ ನಗರಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಸಂಶೋಧನೆ, ಸ್ಟಾರ್ಟ್ಅಪ್, ಪೂರಕ ಉದ್ಯಮ ಹಾಗೂ ಸರ್ಕಾರದ ಬೆಂಬಲದೊಂದಿಗೆ ಜಾಗತಿಕ

ಭಾರತವನ್ನು ಕ್ವಾಂಟಮ್ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿಸಲು ಮೂಲಸೌಕರ್ಯ ಅಭಿವೃದ್ಧಿ, ಸಂಶೋಧನೆ ಮತ್ತು ಹೂಡಿಕೆ ಅಗತ್ಯವೆಂದು ಪ್ರೊ. ಅರಿಂದಮ್ ಘೋಷ್ ವಿವರಿಸಿದ್ದಾರೆ.ದೇಶದ ಕ್ವಾಂಟಮ್ ಯೋಜನೆಯ ಹಾದಿಯಲ್ಲಿ ಸರಿಯಾದ ಪೂರಕ ವ್ಯವಸ್ಥೆಯೊಂದಿಗೆ ಐಟಿ ನಗರಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಸಂಶೋಧನೆ, ಸ್ಟಾರ್ಟ್ಅಪ್, ಪೂರಕ ಉದ್ಯಮ ಹಾಗೂ ಸರ್ಕಾರದ ಬೆಂಬಲದೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಸದ್ದು ಮಾಡುತ್ತಿದ್ದರೂ, ಅಪ್ಲಿಕೇಷನ್ ಮಾತ್ರ ಈವರೆಗೂ ಸ್ಪಷ್ಟವಾಗಿಲ್ಲ. ಈ ವಿಷಯ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ವಾಂಟಮ್ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಅರಿಂದಮ್ ಘೋಷ್ ಅವರು ತಮ್ಮ ಅನಿಸಿಕೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.ಕ್ವಾಂಟಮ್ ತಂತ್ರಜ್ಞಾನ ಕುರಿತು ಇಡೀ ಜಗತ್ತೇ ಅಪಾರ ನಿರೀಕ್ಷೆ ಹೊತ್ತಿದೆ. ಹೀಗಿದ್ದರೂ ಜಾಗತಿಕ ನಿರೀಕ್ಷೆಗೆ ತಕ್ಕಂತೆ ಇದರ ಅಪ್ಲಿಕೇಷನ್ಗಳು ಸಿದ್ಧವಾಗಿಲ್ಲವೇಕೆ?ಕ್ವಾಂಟಮ್ ತಂತ್ರಜ್ಞಾನ ಎಂಬುದೇ ವಿಶಾಲವಾದ ಕ್ಷೇತ್ರ. ಕ್ವಾಂಟಮ್ ಕಂಪ್ಯೂಟಿಂಗ್ ಎಂಬುದು ಅದರ ಒಂದು ಅಂಗವಷ್ಟೇ. ಇದರಲ್ಲಿರುವ ಇನ್ನಿತರ ಪ್ರಮುಖ ಉಪ ಕ್ಷೇತ್ರಗಳೆಂದರೆ ಕ್ವಾಂಟಮ್ ಸೆನ್ಸಿಂಗ್ ಮತ್ತು ಕ್ವಾಂಟಮ್ ಕಮ್ಯುನಿಕೇಷನ್. ಈ ಕ್ಷೇತ್ರಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಸಾಧನಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಅದರಲ್ಲೊಂದು ಕ್ವಾಂಟಮ್ ಆಧಾರಿತ ನಿಖರ ಗಡಿಯಾರ. ಏಕ ಫೋಟಾನ್ ಶೋಧಕ ಎಂಬ ಕ್ವಾಂಟಮ್ ಸೆನ್ಸಿಂಗ್ ಉತ್ಪನ್ನಗಳೂ ಅಭಿವೃದ್ಧಿಗೊಂಡಿವೆ. ಆದರೆ ಈ ಕ್ಷೇತ್ರ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿರುವುದರಿಂದ ಕೈಗಾರಿಕೆ ಮತ್ತು ಸಮಾಜವನ್ನು ಬದಲಿಸಬಲ್ಲ ಶ್ರೇಷ್ಠ ಗುಣಮಟ್ಟದ ತಂತ್ರಜ್ಞಾನದ ಅಭಿವೃದ್ಧಿ ಈವರೆಗೂ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ, ಹಾರ್ಡ್ವೇರ್ ಅಭಿವೃದ್ಧಿಯಲ್ಲಿ ಆಗಬೇಕಿರುವ ಪ್ರಗತಿ. ಟ್ರಾನ್ಸಿಸ್ಟರ್ ಹಂತದಿಂದ ಈಗಿರುವ ಕಂಪ್ಯೂಟರ್ ಹಂತವನ್ನು ತಲುಪಲು ಸುಮಾರು ನಾಲ್ಕು ದಶಕಗಳು ಬೇಕಾದವು. ಆದರೆ ಕ್ವಾಂಟಮ್ ಕಂಪ್ಯೂಟಿಂಗ್ ಆರಂಭವಾಗಿಯೇ ಹತ್ತು ವರ್ಷಗಳಾಗಿವೆ. ಆದರೆ, ಹಿಂದಿನ ಕಂಪ್ಯೂಟರ್ಗಳಿಗೆ ಹೋಲಿಸಿದಲ್ಲಿ ಕ್ವಾಂಟಮ್ ಪ್ರಾಸೆಸರ್ ಅಭಿವೃದ್ಧಿ ಹೆಚ್ಚು ಚುರುಕಾಗಿದೆ. ಇದಕ್ಕೆ ಪೂರಕವಾಗಿರುವುದು ಸೆಮಿಕಂಡಕ್ಟರ್ ಕ್ಷೇತ್ರದಲ್ಲಾಗಿರುವ ಆವಿಷ್ಕಾರಗಳು. ಬಹಳಷ್ಟು ವಾಣಿಜ್ಯ ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಇನ್ನು ಕೆಲವೇ ವರ್ಷಗಳಲ್ಲಿ ವಾಸ್ತವವಾಗಿ ಬದಲಾಗಲಿದೆ. ಈ ಕ್ಷೇತ್ರದಲ್ಲಿ ಅಮೆರಿಕ, ಚೀನಾದಂಥ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲಿ ನಿಲ್ಲಲಿದೆ?ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಅಮೆರಿಕ, ಚೀನಾದಂತ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲಿ ನಿಲ್ಲಲಿದೆ?ಈ ಕ್ಷೇತ್ರದಲ್ಲಿ ಭಾರತ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಿದ್ದರೂ, ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಐಬಿಎಂ, ರಿಗೆಟ್ಟಿ ಹಾಗೂ ಇತರ ಕಂಪನಿಗಳು ಈಗಾಗಲೇ ಕ್ವಾಂಟಮ್ ಪ್ರಾಸೆಸರ್ಗಳನ್ನು ಅಭಿವೃದ್ಧಿಪಡಿಸಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿವೆ. ಆದರೆ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳು ಹೆಚ್ಚು ದೃಢವಾಗಿವೆ. ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅಟಾಮಿಕ್ ಗಡಿಯಾರ ಸಹಿತ ಹಲವು ವಸ್ತುಗಳ ಅಭಿವೃದ್ಧಿ ಆಗಿದೆ. ಭಾರತದ ಕೆಲ ಸ್ಟಾರ್ಟ್ಅಪ್ಗಳು ಈಗಾಗಲೇ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರವನ್ನು ಪ್ರವೇಶಿಸಿವೆ.ಇಲ್ಲಿ ಗಮನಿಸಬೇಕಿರುವುದು ಸಾಮಾನ್ಯ ಕಂಪ್ಯೂಟರ್ಗಳಂತೆ ಕ್ವಾಂಟಮ್ ತಂತ್ರಜ್ಞಾನವನ್ನು ನೋಡುವಂತಿಲ್ಲ. ಭದ್ರತೆ, ರಕ್ಷಣೆ, ಗೂಢಲಿಪಿ ಹಾಗೂ ಯೋಜನಾಬದ್ಧ ಸಂಶೋಧನೆ ಕ್ಷೇತ್ರದಲ್ಲಿ ಇದರ ಬಳಕೆ ಹೆಚ್ಚಾಗಿ ಇರುವುದರಿಂದ ಯಾವ ದೇಶಗಳೂ ಈ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಮುಂದಾಗುವುದಿಲ್ಲ. ಹೀಗಾಗಿ ಭಾರತ ತನ್ನದೇ ಆದ ಕ್ವಾಂಟಮ್ ಕಂಪ್ಯೂಟರ್ ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಭಾರತಕ್ಕೆ ಏಕೆ ಸವಾಲು?ಎಲೆಕ್ಟ್ರಾನಿಕ್ ಸಾಧನ ಅಭಿವೃದ್ಧಿಯಲ್ಲಿ ವೋಲ್ಟ್ ಮೀಟರ್ ಎಂಬುದು ಪುಟ್ಟ ಸಾಧನ. ಅದನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗ ಕ್ವಾಂಟಮ್ ಕಂಪ್ಯೂಟಿಂಗ್ ತುಸು ಕಷ್ಟದ ಮಾತು. ಇದಕ್ಕೆ ದೇಶಿಯವಾಗಿ ಗುಣಮಟ್ಟದ ಉಪಕರಣಗಳ ಅಭಿವೃದ್ಧಿ ಹೆಚ್ಚು ಮಾಡಬೇಕಿದೆ. ಈಗಲೂ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಪರಿಸರ ವ್ಯವಸ್ಥೆಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಬೇಕಾದ ಅಗತ್ಯ ಇದೆ. ಹೀಗಾಗಿ ಬೆಳವಣಿಗೆ ಮಂದಗತಿಯಲ್ಲಿ ಸಾಗಿದೆ.ಬೆಂಗಳೂರು ಭಾರತದ ಕ್ವಾಂಟಮ್ ತಂತ್ರಜ್ಞಾನ ಕೇಂದ್ರಬಿಂದುವಾಗಲಿದೆಯೇ?ಖಂಡಿತಾ... ಬೆಂಗಳೂರು ಈಗಾಗಲೇ ಕ್ವಾಂಟಮ್ ತಂತ್ರಜ್ಞಾನ ಹಬ್ ಆಗುವ ದಿಕ್ಕಿನಲ್ಲೇ ಸಾಗಿದೆ. ಬೆಂಗಳೂರು ಈಗಾಗಲೇ ಸ್ಟಾರ್ಟ್ಅಪ್ಗಳ ಸ್ವರ್ಗವಾಗಿದೆ. ಸಂಶೋಧನಾ ಕೇಂದ್ರಗಳಿವೆ, ಸರ್ಕಾರದ ಬೆಂಬಲವೂ ಇದೆ. ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳಿವೆ, ಮೂಲಸೌಕರ್ಯಗಳ ಪರಸ್ಪರ ಹಂಚಿಕೆ ಇದೆ. ಹೀಗಾಗಿ ಜಗತ್ತಿನಲ್ಲಿ ಕೇಂಬ್ರಿಜ್, ಷಿಕಾಗೊ, ಸೋಲ್ ಸೇರಿದಂತೆ ಸುಮಾರು 45 ಕ್ವಾಂಟಮ್ ಕ್ಲಸ್ಟರ್ಗಳಿವೆ. ಇಂಥ ಪೂರಕ ಪರಿಸರ ವ್ಯವಸ್ಥೆ ಬೆಂಗಳೂರಿನಲ್ಲಿದೆ.ಕ್ವಾಂಟಮ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕ್ವಿಪಿಎಐ ಸೇರಿದಂತೆ ಹಲವು ಕಂಪನಿಗಳು ಬೆಂಗಳೂರಿನಲ್ಲಿವೆ. ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಸಂಶೋಧನಾ ಸಂಸ್ಥೆ, ಐಸಿಟಿಎಸ್, ಎನ್ಸಿಬಿಎಸ್ ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳಿವೆ. ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಸರ್ಕಾರದ ಬೆಂಬಲ ಇರುವುದರಿಂದ ದೇಶದಲ್ಲೇ ಬೆಂಗಳೂರು ಮುಂಚೂಣಿಯಲ್ಲಿದೆ. ಬೆಂಗಳೂರು ಮತ್ತು ಅಮರಾವತಿ ನಡುವೆ ಪೈಪೋಟಿ ಹೇಗಿದೆ?ಇದನ್ನು ಪೈಪೋಟಿ ಎಂದು ನಾನು ಕರೆಯುವುದಿಲ್ಲ. ಏಕೆಂದರೆ ಬೆಂಗಳೂರು ಮತ್ತು ಅಮರಾವತಿ ನಗರಗಳ ಕ್ವಾಂಟಮ್ ಹಬ್ಗಳ ಕಾರ್ಯವಿಧಾನ ಬೇರೆಯದ್ದೇ ಆಗಿದೆ. ಆಂಧ್ರಪ್ರದೇಶದ ಅಮರಾವತಿಯಲ್ಲಿ ಆರಂಭಿಸಲಾಗಿರುವ ಕ್ವಾಂಟಮ್ ನಗರದಲ್ಲಿ ಟಾಪ್–ಡೌನ್ ಮಾದರಿ ಅನುಸರಿಸಲಾಗುತ್ತಿದೆ. ಕ್ವಾಂಟಮ್ ಕಂಪ್ಯೂಟರ್ ಅಳವಡಿಸುವುದು, ಅದರ ಉಪಯೋಗ ಪಡೆದುಕೊಳ್ಳಲು ಕಂಪನಿಗಳು ಹಾಗೂ ಸಂಸ್ಥೆಗಳನ್ನು ಆಹ್ವಾನಿಸುವುದು ಅಲ್ಲಿಯ ಕಾರ್ಯವಿಧಾನ. ಆದರೆ ಬೆಂಗಳೂರಿನದ್ದು ಬೇರೆ. ಇಲ್ಲಿ ಇಡೀ ಕ್ವಾಂಟಮ್ ಜಗತ್ತನ್ನೇ ಸಿದ್ಧಪಡಿಸಲಾಗುತ್ತಿದೆ. ಸಣ್ಣ ಹಾರ್ಡ್ವೇರ್ನಿಂದ ಹಿಡಿದು, ತಂತ್ರಾಂಶ ಹಾಗೂ ಅಪ್ಲಿಕೇಷನ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿರುವುದು ಬೆಂಗಳೂರಿನ ಬಲವಾದ ಸಂಶೋಧನಾ ಸಂಸ್ಕೃತಿ ಮತ್ತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಮೂಲಸೌಕರ್ಯ.ಹೀಗಾಗಿ ಈ ಎರಡೂ ಪದ್ಧತಿಗಳು ಕ್ವಾಂಟಮ್ ಬೆಳವಣಿಗೆಗೆ ಅಗತ್ಯ. ಎರಡು ನಗರಗಳ ಪೈಪೋಟಿ ಬದಲಾಗಿ, ಜತೆಗೂಡಿ ಕೆಲಸ ಮಾಡಿದರೆ ಮಾತ್ರ ಭಾರತದ ಬೆಳವಣಿಗೆಗೆ ಪೂರಕ.ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಐಐಎಸ್ಸಿ ಕೊಡುಗೆ ಏನು?ಕ್ವಾಂಟಮ್ ತಂತ್ರಜ್ಞಾನವು ಕೇವಲ ಕಂಪ್ಯೂಟರ್ ವಿಜ್ಞಾನ ಅಥವಾ ಭೌತವಿಜ್ಞಾನದಿಂದಷ್ಟೇ ನಡೆಯುವುದಿಲ್ಲ. ಇದಕ್ಕೆ ಗಣಿತಜ್ಞರು ಬೇಕು, ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಗಳು, ರಸಾಯನವಿಜ್ಞಾನ ಹಾಗೂ ಜೀವವಿಜ್ಞಾನಿಗಳೂ ಅಗತ್ಯ. ಆ ಎಲ್ಲಾ ವಿಷಯಗಳ ಸಂಶೋಧನಾ ವಿಭಾಗಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರವು ಕ್ವಾಂಟಮ್ ಸಂಶೋಧನಾ ಪಾರ್ಕ್ ಅನ್ನು ಇದೇ ಆವರಣದಲ್ಲಿ ಸ್ಥಾಪಿಸಿದೆ. ಇದುವೇ ಬೃಹದಾಕಾರವಾಗಿ ಬೆಳೆದು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಆಗಿ ರೂಪುಗೊಂಡಿದೆ.ಇದಕ್ಕೆ ಪೂರಕವಾಗಿ ಐಐಎಸ್ಸಿ ಕೂಡಾ ಕ್ವಾಂಟಮ್ ವಿಷಯವನ್ನು ಶಿಕ್ಷಣ ರೂಪದಲ್ಲಿ ವಿದ್ಯಾರ್ಥಿಗಳು, ಬೋಧಕ ವೃಂದ ಹಾಗೂ ವಿಶ್ವವಿದ್ಯಾಲಯಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.ಕ್ವಾಂಟಮ್ ತಂತ್ರಜ್ಞಾನವು ರಾಷ್ಟ್ರ ನಿರ್ಮಾಣದಲ್ಲಿ ಹೇಗೆ ನೆರವಾಗಲಿದೆ?ದೇಶವನ್ನು ಆತ್ಮನಿರ್ಭರವನ್ನಾಗಿಸಲು ಕ್ವಾಂಟಮ್ ತಂತ್ರಜ್ಞಾನ ಅತ್ಯಗತ್ಯ. ರಕ್ಷಣಾ ಇಲಾಖೆಯಿಂದ ಹಿಡಿದು ಬಾಹ್ಯಾಕಾಶದವರೆಗೆ, ಕ್ವಾಂಟಮ್ ಸೆನ್ಸರ್ಗಳು ಜಿಪಿಎಸ್ ಇಲ್ಲದಿದ್ದರೂ ಸ್ವತಂತ್ರವಾಗಿ ಮಾಹಿತಿ ನೀಡುವಷ್ಟರ ಮಟ್ಟಿಗೆ ಬೆಳೆಯಲಿದೆ. ಸದ್ಯ ಭಾರತವು ಹಲವು ವೈಜ್ಞಾನಿಕ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕ್ವಾಂಟಮ್ ತಂತ್ರಜ್ಞಾನದಿಂದ ಅವುಗಳೆಲ್ಲವನ್ನೂಇಲ್ಲಿಯೇ ತಯಾರಿಸಲು ಸಾಧ್ಯ. ಇದರಿಂದ ದೇಶದ ತಯಾರಿಕಾ ವಲಯವೂ ಬೆಳೆಯಲಿದೆ.ಹಾಗಿದ್ದರೆ ರಾಷ್ಟ್ರೀಯ ಕ್ವಾಂಟಮ್ ಮಿಷನ್ನ ಪಾತ್ರವೇನು?ದೇಶದ ತಂತ್ರಜ್ಞಾನ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ ವೇದಿಕೆಯನ್ನು ಒದಗಿಸಲಿದೆ. ಭಾರತದ ಕ್ವಾಂಟಮ್ ಪಯಣವು ಸಣ್ಣ ಸಂಶೋಧನಾ ಕಾರ್ಯಕ್ರಮಗಳ ಮೂಲಕ ಆರಂಭಗೊಂಡಿದ್ದು, ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ. ಈ ಮಿಷನ್ ಮೂಲಕವೇ ಸಂಶೋಧನೆ, ಮೂಲಸೌಕರ್ಯ, ಸ್ಟಾರ್ಟ್ಅಪ್ ಹಾಗೂ ಜಾಗತಿಕ ಪಾಲುದಾರಿಕೆಗೆ ಹಣ ಒದಗಿಸಲಾಗುತ್ತಿದೆ.ಕ್ವಾಂಟಮ್ ಎಂಬುದೇ ಸದ್ಯ ದುಬಾರಿಯಾಗಿರುವುದರಿಂದ ಇದರ ಹಾರ್ಡ್ವೇರ್ ಅನ್ನು ಹಂಚಿಕೊಳ್ಳುವ ವ್ಯವಸ್ಥೆ ಅತ್ಯಗತ್ಯ. ಇಂಥ ಸೌಲಭ್ಯ ಸ್ಟಾರ್ಟ್ಅಪ್ಗಳಿಂದ ಸಾಧ್ಯವಿಲ್ಲ. ಹೀಗಾಗಿ ಇಂಥ ಸ್ಟಾರ್ಟ್ಅಪ್ಗಳನ್ನೂ ಒಳಗೊಂಡು ಸರ್ಕಾರದ ಕ್ವಾಂಟಮ್ ಯೋಜನೆಯು ಜಾಗತಿಕ ಪಾಲುದಾರಿಕೆಯೊಂದಿಗೆ ಪೂರಕ ಉದ್ಯಮ ಸ್ವರೂಪಿ ಪರಿಸರ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತದೆ.ಕ್ವಾಂಟಮ್ ತಂತ್ರಜ್ಞಾನದಲ್ಲಿ ಭವಿಷ್ಯ ಕಂಡುಕೊಳ್ಳ ಬಯಸುವ ವಿದ್ಯಾರ್ಥಿಗಳು ಏನು ಓದಬೇಕು?ಕ್ವಾಂಟಮ್ ಎಂಬುದು ಒಂದು ವಿಷಯಕ್ಕೆ ಸಂಬಂಧಿಸಿದ್ದಲ್ಲ. ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಭೌತವಿಜ್ಞಾನ, ಗಣಿತ, ರಸಾಯನವಿಜ್ಞಾನ ಹಾಗೂ ಜೈವಿಕ ವಿಜ್ಞಾನದ ವಿದ್ಯಾರ್ಥಿಗಳೂ ಈ ವಿಷಯವನ್ನು ಕಲಿಯಬಹುದು. ಇದರಲ್ಲಿ ಬಹುಮುಖ್ಯವೇನೆಂದರೆ ತಮ್ಮ ಆಯ್ಕೆಯ ವಿಷಯವನ್ನು ಆಳವಾಗಿ ಕಲಿಯುವುದು ಮತ್ತು ಅದರೊಂದಿಗೆ ಐಚ್ಛಿಕ ವಿಷಯವಾಗಿ ಕ್ವಾಂಟಮ್ ತಂತ್ರಜ್ಞಾನವನ್ನು ಕೌಶಲವಾಗಿ ಅರಿಯುವುದು ಅಗತ್ಯ. ಕ್ವಾಂಟಮ್ ವಿಷಯದ ಜ್ಞಾನವಿದ್ದಲ್ಲಿ ಮತ್ತು ಈ ತಂತ್ರಜ್ಞಾನ ಹಲವು ಉದ್ಯಮಗಳಿಗೆ ಅಗತ್ಯವಿರುವುದರಿಂದ ವೃತ್ತಿ ಆಯ್ಕೆಯೂ ವಿಶಾಲವಾಗಿರಲಿದೆ.ಮುಂದಿನ 10 ವರ್ಷಗಳಲ್ಲಿ ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆ ಹೇಗಿರಲಿದೆ?ಕ್ವಾಂಟಮ್ ಕಂಪ್ಯೂಟಿಂಗ್ನ ಭವಿಷ್ಯವನ್ನು ಈಗ ನಿರ್ಧರಿಸುವುದು ಕಷ್ಟ. ಏಕೆಂದರೆ ಸಾಂಪ್ರದಾಯಿಕ ಕಂಪ್ಯೂಟರ್ಗಳ ಆರಂಭದ ದಿನಗಳಲ್ಲಿ ಅದನ್ನು ಕ್ಯಾಲ್ಯುಕ್ಲೇಟರ್ಗಳಂತೆ ಬಳಸಲು ಪರಿಚಯಿಸಲಾಯಿತು. ಆದರೆ ಅಂದಿನ ಉದ್ದೇಶಕ್ಕೂ ಹಾಗೂ ಇಂದಿನ ಬಳಕೆಗೂ ಹೋಲಿಕೆಯೇ ಇಲ್ಲದಂತೆ ಕಂಪ್ಯೂಟರ್ ಜಗತ್ತು ಬೆಳೆದಿದೆ. ಜತೆಗೆ ಸಮಾಜವನ್ನೂ ಸಂಪೂರ್ಣವಾಗಿ ಬದಲಿಸಿದೆ.ಇದರ ಮುಂದಿನ ಮೈಲಿಗಲ್ಲು ‘ಕ್ವಾಂಟಮ್ ಅಡ್ವಾಂಟೇಜ್’. ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಇದು ಪರಿಚಯಗೊಳ್ಳಲಿದೆ. ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ತಂತ್ರಜ್ಞಾನ ಒಗ್ಗೂಡುವ ಈ ತಂತ್ರಜ್ಞಾನವನ್ನು ಬರಮಾಡಿಕೊಳ್ಳಲು ಸದ್ಯ ನಾವು ಸಿದ್ಧರಾಗಬೇಕಿದೆ. ಇದರಲ್ಲಿ ಕ್ವಾಂಟಮ್ ಪ್ರಾಸೆಸರ್ಗಳು ವಿದ್ಯುತ್ ಬಳಕೆಯ ಪ್ರಮಾಣವನ್ನು ತಗ್ಗಿಸಿದರೆ, ಕೃತಕ ಬುದ್ಧಿಮತ್ತೆ ಅದನ್ನು ಇನ್ನಷ್ಟು ವೇಗವನ್ನಾಗಿಸಲಿದೆ.ಭಾರತವು ಕ್ವಾಂಟಮ್ ಜಗತ್ತಿನ ನಾಯಕತ್ವ ವಹಿಸಲಿದೆಯೇ?ಭಾರತವು ಹೂಡಿಕೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಮುಂಚೂಣಿಗೆ ಬಂದು ನಿಲ್ಲಲಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಅಗತ್ಯ. ಅಮೆರಿಕದಲ್ಲಿ ಯಾವುದೇ ಯೋಜನೆಗಾದರೂ ಸರ್ಕಾರ ಒಂದು ಶತಕೋಟಿ ಡಾಲರ್ ಹೂಡಿಕೆ ಮಾಡಿದರೆ, ಕಂಪನಿಗಳೂ ಅಷ್ಟೇ ಪ್ರಮಾಣದ ಹೂಡಿಕೆ ಮಾಡುತ್ತವೆ. ಆದರೆ ಭಾರತದ ಪರಿಸ್ಥಿತಿ ಭಿನ್ನ. ಇಲ್ಲಿ ಸರ್ಕಾರ ₹1 ಸಾವಿರ ಕೋಟಿ ಹೂಡಿದರೆ, ಖಾಸಗಿಯವರ ಹೂಡಿಕೆ ಪಾಲು ಕೇವಲ ₹2 ಕೋಟಿ ಮಾತ್ರ. ಒಂದೊಮ್ಮೆ ಭಾರತವು ಪೂರಕ ಪರಿಸರವನ್ನು ಸೃಷ್ಟಿಸಿದರೆ, ಕ್ವಾಂಟಮ್ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿರದಿರಲು ಕಾರಣವೇ ಇಲ್ಲ.