ತಾಯಿಕರುಳಿನ ಕಣ್ಗಾವಲಿರಲಿ
ಗಾಂಧಾರ ದೇಶದ ರಾಜ ತನ್ನ ಮಗಳನ್ನು ಧೃತರಾಷ್ಟ್ರನಿಗೆ ಧಾರೆಯೆರೆದು ಕೊಡಬೇಕೆಂದು ನಿಶ್ಚಯಿಸಿ ಬಿಟ್ಟ ಗಳಿಗೆ ಮಹಾಭಾರತ ದುರಂತದ ಮೂಲಬಿಂದು. ಸತ್ಯವತಿ, ಕುಂತಿಯರ ಮುಂದುವರಿಕೆಯಾಗಿ ಗಾಂಧಾರಿಗರ್ಭ ಕುದಿದು ಸ್ಫೋಟಗೊಂಡ ಪರಿಣಾಮ ಗೊತ್ತೇ ಇದೆ. ಆದರೆ, ಧೃತರಾಷ್ಟ್ರನಿಗೆ ತನ್ನಂಥ ಕನಸುಗಣ್ಣಿನ ರಾಜಕುಮಾರಿ ಸಹಧರ್ಮಿಣಿಯಾಗಲು ಒಪ್ಪಿದ್ದೇ ಹೆಣ್ಣಿನ ತ್ಯಾಗ, ಸಹನೆ ಮತ್ತು ಪಾತಿವ್ರ

ಗಾಂಧಾರ ದೇಶದ ರಾಜ ತನ್ನ ಮಗಳನ್ನು ಧೃತರಾಷ್ಟ್ರನಿಗೆ ಧಾರೆಯೆರೆದು ಕೊಡಬೇಕೆಂದು ನಿಶ್ಚಯಿಸಿ ಬಿಟ್ಟ ಗಳಿಗೆ ಮಹಾಭಾರತ ದುರಂತದ ಮೂಲಬಿಂದು. ಸತ್ಯವತಿ, ಕುಂತಿಯರ ಮುಂದುವರಿಕೆಯಾಗಿ ಗಾಂಧಾರಿಗರ್ಭ ಕುದಿದು ಸ್ಫೋಟಗೊಂಡ ಪರಿಣಾಮ ಗೊತ್ತೇ ಇದೆ. ಆದರೆ, ಧೃತರಾಷ್ಟ್ರನಿಗೆ ತನ್ನಂಥ ಕನಸುಗಣ್ಣಿನ ರಾಜಕುಮಾರಿ ಸಹಧರ್ಮಿಣಿಯಾಗಲು ಒಪ್ಪಿದ್ದೇ ಹೆಣ್ಣಿನ ತ್ಯಾಗ, ಸಹನೆ ಮತ್ತು ಪಾತಿವ್ರತ್ಯದ ಸಾಕ್ಷ್ಯ ಎಂಬಂತೆ ವ್ಯಾಖ್ಯಾನಿಸಿದ ಗಂಡುದೃಷ್ಟಿಯನ್ನು ಅಲ್ಲಾಡಿಸಿದ ಮತ್ತೊಂದು ಅಭಿಮತವಿದೆ. ತನ್ನ ಜೀವನ ಸಂಗಾತಿಯಾಗುವವನು ಹೇಗಿದ್ದರೆ ಚೆನ್ನ ಎಂದು ನಾನಾ ಬಗೆಯ ಬಣ್ಣದ ಕನಸುಗಳನ್ನು ಕಂಡಿದ್ದ ಗಾಂಧಾರಿ ಹುಟ್ಟುಗುರುಡನ ವೈಕಲ್ಯವನ್ನು ಜೀವನಪರ್ಯಂತ ನೋಡಿಕೊಳ್ಳುತ್ತ ಎದೆಯೊಳಗಿನ ಪ್ರತಿಮಾತ್ಮಕ ಚೆಲುವನ್ನು ವಿರೂಪಗೊಳಿಸಿಕೊಳ್ಳಲು ಒಪ್ಪದೇ ಮದುವೆಗೆ ಮೊದಲೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಂಡಿನ ನಿರ್ಧಾರಕ ವ್ಯವಸ್ಥೆಯ ವಿರುದ್ಧ ಸಾತ್ವಿಕವಾಗಿಸೆಟೆದುಬಿಟ್ಟಳು ಎಂಬ ವಾದವಿದೆ. ವಾಸ್ತವವಾಗಿ ಇದು ಗಂಡಿಗೆ ಅರ್ಥವಾಗದ ಹೆಣ್ಣಿನ ಸುಪ್ತ ಆಕ್ರೋಶದ ನೆಲೆ.ಭಾರತೀಯ ಕುಟುಂಬಗಳ ಸಾಮಾಜಿಕ ಸ್ವರೂಪದ ಚರಿತ್ರೆಯನ್ನು ಗಮನಿಸಿ; ಹೆಣ್ಣು, ಗಂಡು ಸಾಮ್ರಾಜ್ಯದ ಸಾವಿರಾರು ಸವಾಲುಗಳನ್ನು ನಿರ್ವಹಿಸಿರುವ ಬಗೆ ಹೀಗೆಯೇ ಇದೆ. ಸಾವಿತ್ರಿಯು ಗೆದ್ದದ್ದು ತನ್ನ ಗಂಡನ ಸಾವನ್ನು ಅನ್ನುವುದು ಲೋಕಸತ್ಯ ಮಾತ್ರ. ಅಹಲ್ಯೆ ಕಲ್ಲಾದದ್ದು ತಾಂತ್ರಿಕವಾಗಿ ಅಷ್ಟೇ. ಸೀತೆ ತನ್ನ ತಪ್ಪೇನೂ ಇಲ್ಲದೆ ಕಾಡಿಗೆ ಹೋಗಿದ್ದು ಆಕೆಗೆ ನೈತಿಕ ಗೆಲುವನ್ನೇ ತಂದಿದೆ. ದ್ರೌಪದಿಯಂತೂ ತನ್ನ ಮೌನ ಮತ್ತು ಸಿಡುಕಿನ ಮೂಲಕ ಅಂದುಕೊಂಡದ್ದನ್ನು ಸಾಧಿಸುತ್ತಾಳೆ. ಅಕ್ಕನ ದಿಟ್ಟತನ ಆಧ್ಯಾತ್ಮಿಕ ಆಕ್ರೋಶ, ಇಹಪರಗಳಲ್ಲಿ ಗಂಡುಹೆಣ್ಣು ಭಿನ್ನತೆಯನ್ನು ಕಳೆದುಕೊಂಡು ಒಂದಾಗುವ ಸಾಧ್ಯತೆ. ಬಡತನ ಸಿರಿತನ ಮೇಲುಕೀಳುಗಳನ್ನು ಮೀರಿ ಅಲಕ್ಷಿತರೂ ಅನಾಮಿಕರೂ ಆಗಿರುವ ಸಾವಿರಾರು ಮಹಿಳಾ ಚೇತನಗಳು ಸಮಾಜವನ್ನು ನೈತಿಕವಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ಗಂಡಿನ ಸುಪರ್ದಿಗೆ ಸಿಗದಂತೆ ನಿರ್ವಹಿಸಿವೆ. ತಂತ್ರನಾಗರಿಕತೆಯ ಉತ್ತುಂಗದ ಹಾದಿಯಲ್ಲಿರುವ ಮನುಷ್ಯ ನೈತಿಕ ಅವನತಿಯಿಂದ ಪಾರಾಗಬೇಕಾದರೆ ಹೆಣ್ಣು ವಜ್ರಸುಮ ಸಮಾನವಾದ ಅಂತಃಕರಣವನ್ನು ಪ್ರದರ್ಶಿಸಬೇಕಾಗಿದೆ.ಅರಮನೆಯಿಂದ ಹೊರಬಿದ್ದ ಸಿದ್ಧಾರ್ಥನ ಹೊರಳು ಹಾದಿಯ ತುಂಬ ಬೆಳುದಿಂಗಳನ್ನು ಅರಸುವ ಆಕಾಂಕ್ಷೆ ಇದ್ದರೆ, ಯಶೋಧರೆಗೆ ರಾಹುಲನನ್ನು ಬೆಳೆಸಬೇಕಾದರೆ ಕಡುಕಷ್ಟದ ಕತ್ತಲಕೋಟೆಯಷ್ಟೇ ಕಾಣುತ್ತಿತ್ತು. ಗಂಡು ಚರಿತ್ರೆಯು ಬುದ್ಧವಿಕಾಸದ ಸಂಕಥನಗಳನ್ನು ಹೇಳುವಾಗ ತೋರುವ ಉಮೇದನ್ನು ಯಶೋಧರೆಯ ಸಾಂಸಾರಿಕ ಬದ್ಧತೆಯ ವಿಷಯದಲ್ಲಿ ತೋರುವುದಿಲ್ಲ. ಕುಟುಂಬವು ಒಡೆದೊಡೆದು ಕಾಲಕಸವಾಗಿರುವ ಈ ಹೊತ್ತಿನಲ್ಲಿ ಹೆಣ್ಣು ಯಶೋಧರೆಯು ಮಡಿಲತಾರೆಯಂತಿದ್ದ ರಾಹುಲನಿಗೆ ಒಡಲಾಸರೆಯಾದಂತೆ ನಿಲ್ಲಬೇಕಾಗಿದೆ. ತಾಯಿಕರುಳು ಸಂಜೆ ಹಣತೆಯೂ ಇರುಳ ಚುಕ್ಕಿಯೂ ಆಗಿ ದಾರಿ ತಪ್ಪಿದ ಮಕ್ಕಳಿಗೆ ತೋರುದೀಪವಾಗಬೇಕು. ತಾಯಿಯ ಗೈರುಹಾಜರಿಯಲ್ಲೂ ಅವಳ ಪ್ರಾತ್ಯಕ್ಷಿಕೆ ಎದ್ದು ಕಾಣುತ್ತದೆ. ಅಪ್ಪನ ವ್ಯಕ್ತಿತ್ವದ ಪ್ರಭಾವಕ್ಕಿಂತ ಅವ್ವನ ಅಂತಃಕರಣವೇ ಮಕ್ಕಳ ಬಾಳಿನ ದೃಷ್ಟಿಯನ್ನು ಸೃಷ್ಟಿಸುತ್ತದೆ. ಹೆಣ್ಣು ನಮ್ಮ ಸಮಾಜದ ಮಧುರ ಮೌಲ್ಯಗಳ ಪ್ರತೀಕ.ತಾಯ್ತನವು ಹೊತ್ತು ಹೆತ್ತು ಸಾಕುವುದಕ್ಕೆ ಸೀಮಿತವಾದ ಪರಂಪರೆ ನಮ್ಮದಲ್ಲ. ನಿತ್ಯವೂ ವರದಿಯಾಗುವ ಮಕ್ಕಳ ದುರಂತಗಳನ್ನು ನೆನೆದರೆ ಅವರು ಹೋಗಿಬರುವ ಜಾಗ ವೇಗಗಳೆಲ್ಲ ಕಣ್ಣಿಗೆ ರಾಚುತ್ತವೆ. ಅಲ್ಲಿಗೆಲ್ಲ ಹೋಗದಂತೆ ಕಣ್ಣಗಲಿಸಿಯೇ ತಡೆಯುತ್ತಿದ್ದ ಅವ್ವನ ಎಚ್ಚರ ಈಗೀಗ ಸಡಿಲಗೊಂಡಂತಾಗಿದೆ. ಕಣ್ಣಂಚಿನ ಪರದೆಯನ್ನು ಆಗಾಗ್ಗೆ ಸರಿಸಿ ಗಾಂಧಾರಿ ನೂರೊಂದು ಮಕ್ಕಳ ಚಲನವಲನಗಳನ್ನು ಗಮನಿಸಿ ಕೆಟ್ಟದ್ದನ್ನು ತಡೆದಿದ್ದರೆ ದೇಶವನ್ನು ಮಹಾದುರಂತವೊಂದರಿಂದ ಕಾಪಾಡಿದ ಕೀರ್ತಿಮಾತೆಯಾಗುತ್ತಿದ್ದಳು. ತಾಯಂದಿರ ಕಣ್ಣಗಲದ ಎಚ್ಚರದಲ್ಲಿ ಬೆಳೆದವರು ಲೋಕದ ಕಣ್ಣುಗಳಾಗುತ್ತಾರೆ. ಒಳಗಣ್ಣನ್ನೂ ಕಳೆದುಕೊಂಡಿದ್ದ ಧೃತರಾಷ್ಟ್ರ ಪ್ರೇಮದಲ್ಲಿ ಮಕ್ಕಳು ನಿತ್ಯದುಃಖಿಗಳಾಗಿ ಉಳಿಯುತ್ತಾರೆ. ಅವರು ಎಲ್ಲರ ಬೆಳಕಾಗಿ, ನಾಡಿನ ಕಣ್ಣಾಗಿ ಬದುಕಲು ತಾಯಿಕರುಳು ನೈತಿಕ ನೆರಳಾಗಿ ಬೆಂಬಲಿಸಬೇಕು.