ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ಒಮಾನ್ನಿಂದ ಸೌರಭ್ ಚಂದ್ರಾಕರ್ ಕರೆತಂದ CBI
ನವದೆಹಲಿ: ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ನ (ಎಂಒಬಿ) ಪ್ರವರ್ತಕ, ₹6,000 ಕೋಟಿ ಮೊತ್ತದ ಹಗರಣದ ಸಂಚುಕೋರ ಸೌರಭ್ ಚಂದ್ರಾಕರ್ ಅವರನ್ನು ಸಿಬಿಐ ತಂಡವು ಒಮಾನ್ನಿಂದ ಭಾರತಕ್ಕೆ ಕರೆತಂದಿದೆ. ಸೋಮವಾರ ಅವರನ್ನು ಛತ್ತೀಸಗಢದ ರಾಯಪುರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೌರಭ್ ಚಂದ್ರಾಕರ್ ಛತ್ತೀಸಗಢದವರು. ಅಕ್ರಮ

ನವದೆಹಲಿ: ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ನ (ಎಂಒಬಿ) ಪ್ರವರ್ತಕ, ₹6,000 ಕೋಟಿ ಮೊತ್ತದ ಹಗರಣದ ಸಂಚುಕೋರ ಸೌರಭ್ ಚಂದ್ರಾಕರ್ ಅವರನ್ನು ಸಿಬಿಐ ತಂಡವು ಒಮಾನ್ನಿಂದ ಭಾರತಕ್ಕೆ ಕರೆತಂದಿದೆ. ಸೋಮವಾರ ಅವರನ್ನು ಛತ್ತೀಸಗಢದ ರಾಯಪುರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೌರಭ್ ಚಂದ್ರಾಕರ್ ಛತ್ತೀಸಗಢದವರು. ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳಿಗೆ ವೇದಿಕೆಯಾಗಿ ಎಂಒಬಿ ಕೆಲಸ ಮಾಡುತ್ತಿತ್ತು. ಈ ಜಾಲವು ದೇಶದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿತ್ತು. ಆನ್ಲೈನ್ ಬೆಟ್ಟಿಂಗ್ನಿಂದ ಬಂದ ಅಕ್ರಮ ಹಣದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅಪಾರ ಮೊತ್ತದ ಲಂಚ ನೀಡಿದ್ದರು ಎನ್ನಲಾಗಿದೆ. ರವಿ ಉಪ್ಪಲ್ ಎನ್ನುವ ಮತ್ತೊಬ್ಬ ಪ್ರಮುಖ ಆರೋಪಿಯೊಂದಿಗೆ ಚಂದ್ರಾಕರ್ ಅವರನ್ನು 2024ರ ಅಕ್ಟೋಬರ್ನಲ್ಲಿ ದುಬೈನಲ್ಲಿ ಬಂಧಿಸಲಾಗಿತ್ತು. ಸಿಬಿಐನ ಎರಡು ಪ್ರಕರಣ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಪ್ರಕರಣಗಳಲ್ಲಿ ಚಂದ್ರಾಕರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅವರ ವಿರುದ್ಧ ಹೊರಡಿಸಲಾದ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಅವರನ್ನು ರಾಯಲ್ ಒಮಾನ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.ಮಸ್ಕತ್ನಿಂದ ಲಭಿಸಿದ ಅಧಿಕೃತ ಮಾಹಿತಿ ನಂತರ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಆರೋಪಿಯ ವಿರುದ್ಧ ಸಂಗ್ರಹಿಸಿದ್ದ ಎಲ್ಲ ಸಾಕ್ಷ್ಯಗಳೊಂದಿಗೆ, ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸುವಂತೆ ಒಮಾನ್ಗೆ ಮನವಿ ಮಾಡಿತ್ತು. ಭಾರತ ಸರ್ಕಾರ, ಇಂಟರ್ಪೋಲ್, ಸಿಬಿಐ ಮತ್ತು ಒಮಾನ್ ಅಧಿಕಾರಿಗಳ ಸಮನ್ವಯದೊಂದಿಗೆ ಹಸ್ತಾಂತರ ಪ್ರಕ್ರಿಯೆ ನಡೆಯಿತು ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ದೇಶಭ್ರಷ್ಟರಾಗಿ ವಿದೇಶದಲ್ಲಿ ನೆಲಸಿರುವ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದು, ಭಾರತೀಯ ಕಾನೂನಿನ ಪ್ರಕ್ರಿಯೆ ಎದುರಿಸುವಂತೆ ಮಾಡುವ ನಿರಂತರ ಪ್ರಯತ್ನಗಳಲ್ಲಿ ಸೌರಭ್ ಚಂದ್ರಾಕರ್ ಹಸ್ತಾಂತರವು ಮಹತ್ವದ ಮೈಲಿಗಲ್ಲು ಎಂದು ಅಧಿಕಾರಿ ಹೇಳಿದ್ದಾರೆ.ಛತ್ತೀಸಗಢ ಸರ್ಕಾರದ ಮನವಿಯ ಮೇರೆಗೆ ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ನ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು. ದೇಶದ ಅತಿದೊಡ್ಡ ಅಕ್ರಮ ಬೆಟ್ಟಿಂಗ್ ಜಾಲಗಳಲ್ಲಿ ಇದೂ ಒಂದು. ದೇಶ–ವಿದೇಶಗಳಲ್ಲಿ ವಿಸ್ತರಿಸಿಕೊಂಡಿದ್ದ ಎಂಒಬಿ ಜಾಲವು ಕ್ರಿಕೆಟ್, ಫುಟ್ಬಾಲ್, ಸೇರಿದಂತೆ ಇತರೆ ಕ್ರೀಡೆ ಮತ್ತು ಕಾರ್ಯಕ್ರಮಗಳಿಗೆ ಅಕ್ರಮ ಬೆಟ್ಟಿಂಗ್ ವೇದಿಕೆಯಾಗಿ ಕಾರ್ಯನಿರ್ವಸಿ, ಬಳಕೆದಾರರಿಂದ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದೆ ಎಂದು ಸಿಬಿಐ ಹೇಳಿದೆ.