ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ; ಬೌದ್ಧ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಒತ್ತಾಯ
ವಾಡಿ (ಕಲಬುರಗಿ ಜಿಲ್ಲೆ): ‘ಮಾನಸಿಕ ಗುಲಾಮಗಿರಿ ಎಂಬುದು ಮನುಷ್ಯನ ಸ್ವತಂತ್ರ ಆಲೋಚನೆ, ವಿವೇಚನೆ ಮತ್ತು ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡು, ಅಂಧಶ್ರದ್ಧೆಯೊಂದಿಗೆ ವ್ಯವಸ್ಥೆಯೊಂದಕ್ಕೆ ಕುರುಡಾಗಿ ಶರಣಾಗುವಂತೆ ಮಾಡುವ ಸ್ಥಿತಿಯಾಗಿದೆ. ಇಂತಹ ಮಾನಸಿಕ ಗುಲಾಮಗಿರಿಗೆ ಬುದ್ಧನ ವೈಚಾರಿಕತೆ ಮಾತ್ರ ಚಿಕಿತ್ಸೆ ನೀಡಬಲ್ಲದು’ ಎಂದು ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾ

ವಾಡಿ (ಕಲಬುರಗಿ ಜಿಲ್ಲೆ): ‘ಮಾನಸಿಕ ಗುಲಾಮಗಿರಿ ಎಂಬುದು ಮನುಷ್ಯನ ಸ್ವತಂತ್ರ ಆಲೋಚನೆ, ವಿವೇಚನೆ ಮತ್ತು ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡು, ಅಂಧಶ್ರದ್ಧೆಯೊಂದಿಗೆ ವ್ಯವಸ್ಥೆಯೊಂದಕ್ಕೆ ಕುರುಡಾಗಿ ಶರಣಾಗುವಂತೆ ಮಾಡುವ ಸ್ಥಿತಿಯಾಗಿದೆ. ಇಂತಹ ಮಾನಸಿಕ ಗುಲಾಮಗಿರಿಗೆ ಬುದ್ಧನ ವೈಚಾರಿಕತೆ ಮಾತ್ರ ಚಿಕಿತ್ಸೆ ನೀಡಬಲ್ಲದು’ ಎಂದು ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಝನ್ ಮಾಂಕ್ ಶಾಕು ಬೋಧಿಧಮ್ಮ ಹೇಳಿದರು.ಅಂತರರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಭಾರತ, ಗ್ಲೋಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್ ಅಮೆರಿಕ, ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂಘ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ ಸನ್ನತಿ (ಕನಗನಹಳ್ಳಿ) ಆಶ್ರಯದಲ್ಲಿ ಭಾನುವಾರ ಸನ್ನತಿಯಲ್ಲಿ ಜರುಗಿದ ‘ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ’ಯ ಸಂಪನ್ನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.‘26 ದಿನಗಳ ಕಾಲ ರಾಜ್ಯದಾದ್ಯಂತ ಯಾತ್ರೆ ನಡೆದಿದ್ದು, ಜನರಿಂದ ಅದ್ಭುತ ಬೆಂಬಲ ವ್ಯಕ್ತವಾಗಿದೆ. ಬೌದ್ಧ ಧರ್ಮದ ಅನುಯಾಯಿಗಳು ಸನಾತನ ಧರ್ಮದ ಸಂಕೋಲೆಗಳಿಂದ ಮುಕ್ತರಾಗಲು ಹೆಣಗಾಡುತ್ತಿದ್ದಾರೆ. ದೈನಂದಿನ ಜೀವನದಲ್ಲಿ ಸನಾತನ ಧರ್ಮದ ಅಂಧಶ್ರದ್ದೆಗಳು ನಮ್ಮನ್ನು ಮುನ್ನಡೆಸುತ್ತಿವೆ. ಮಾನಸಿಕ ಗುಲಾಮಗಿರಿ ನಮ್ಮನ್ನು ಆಳಲು ನಾವು ಯಾವುದೇ ಕಾರಣಕ್ಕೂ ಬಿಡಬಾರದು’ ಎಂದು ಹೇಳಿದರು.‘ಅನೇಕ ಧರ್ಮಗಳಲ್ಲಿ ಆಚರಿಸಲಾಗುವ ಮೂಢನಂಬಿಕೆಗಳು, ಕಟ್ಟುಪಾಡುಗಳು ಮನುಷ್ಯನ ಮನಸ್ಸನ್ನು ಭಯ ಹಾಗೂ ಅಜ್ಞಾನದ ಗುಲಾಮಗಿರಿಗೆ ತಳ್ಳುತ್ತವೆ. ಆದರೆ, ಬೌದ್ಧ ಧರ್ಮವು ಇಂತಹ ಬಾಹ್ಯ ಆಚರಣೆಗಳಿಗಿಂತ ಪ್ರಜ್ಞೆ ಮತ್ತು ಕರುಣೆಗೆ ಹೆಚ್ಚಿನ ಒತ್ತು ನೀಡುತ್ತದೆ. 22 ಪ್ರತಿಜ್ಞೆಗಳು ನಮ್ಮ ಮನೆಯ ಗೋಡೆಗಳಲ್ಲಿ ಇರಬೇಕು’ ಎಂದು ಸಲಹೆ ನೀಡಿದರು.‘ಸನ್ನತಿಯಲ್ಲಿ ಬೌದ್ಧ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ನಿರ್ಮಿಸಿ ಇಡೀ ಪ್ರದೇಶವನ್ನು ಜಗತ್ತು ಆಕರ್ಷಿಸುವಂತೆ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಹೊನ್ನೂರು ಮಹಾವನ ಬುದ್ಧವಿಹಾರದ ಭಂತೆ ಬುದ್ಧರತ್ನ ಪ್ರಾಸ್ತವಿಕವಾಗಿ ಮಾತನಾಡಿ, ‘ರಾಜ್ಯದ ತುಂಬಾ 5000 ಕಿ.ಮೀ ಸಂಚಾರ ಮಾಡಿದ್ದು ಪ್ರಜ್ಞೆ ಬೆಳೆಸುವುದೇ ಯಾತ್ರೆಯ ಮುಖ್ಯ ಉದ್ದೇಶವಾಗಿದೆ’ ಎಂದರು.ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಕೆನಡಾ ದೇಶದಿಂದ ಬಂದಿದ್ದ ಬೌದ್ಧ ಭಿಕ್ಕುಗಳ ಭಾಗವಹಿಸಿದ್ದರು.ಪ್ರಮುಖರಾದ ಸುರೇಶ ಹಾದಿಮನಿ, ಮರಿಯಪ್ಪ ಚಟ್ಟರಕರ, ಅರುಣಕುಮಾರ, ರಾಹುಲ್ ಹಳಿಮನಿ, ಸಂದೀಪ ಕಟ್ಟಿ, ಮಲ್ಲಪ್ಪ ಹೊಸ್ಮನಿ, ಬಸವರಾಜ ಬೆಣ್ಣೂರ, ಸೂರ್ಯಕಾಂತ ರದ್ದೆವಾಡಿ, ಶರಣಬಸ್ಸು ಶಿರೂರಕರ, ಶ್ರೀಕಾಂತ ಶಿಂಧೆ, ಸಾಬಣ್ಣ ಬನ್ನಟ್ಟಿ, ಅಣದೂರಿನ ಧಮ್ಮಾನಂದ, ನರಸಿಪುರದ ಭಂತೆ ಭೋದಿರತ್ನ, ಬೆಂಗಳೂರಿನ ಭಂತೆ ಜ್ಞಾನ ಲೋಕ, ಚಾಮರಾಜ ನಗರದ ಭಂತೆ ಧಮ್ಮಾ ತಿಸ್ಸಾ, ಯಳಂದೂರಿನ ಭಂತೆ ಬುದ್ಧರತ್ನ, ಚಿತ್ರದುರ್ಗದ ಬಸವ ನಾಗಿದೇವ ಶರಣರು ಸೇರಿದಂತೆ ಕೆನಡಾ, ಅಮೆರಿಕ ಸೇರಿದಂತೆ ವಿವಿಧ ದೇಶಗಳಿಂದ ಭಂತೇಜಿ, ಉಪಾಸಕ,ಉಪಾಸಕಿಯರು ಆಗಮಿಸಿದ್ದರು.ಸುರೇಶ ಹಾದಿಮನಿ, ಮಲ್ಲಪ್ಪ ಹೊಸ್ಮನಿ ಇತರರು ದ್ವಜಾರೋಹಣ ನೇರವೇರಿಸಿದರು. ನೀಲಕಂಠ ಬಡಿಗೇರ, ಮಾರುತಿ ಕಂಠಿ ಪ್ರಾರ್ಥಿಸಿದರು, ಭಾಗಪ್ಪ ಯಾದಗಿರಿ ರಾಜು ಸಂಕಾ ನಿರೂಪಿಸಿ, ವಂದಿಸಿದರು.