ಮತ್ತೆ ಮೊಳಗಿತು ಕನ್ನಡ ಡಿಂಡಿಮ: ನಾಡದ್ರೋಹಿಗಳ ಸೊಲ್ಲಡಗಿಸಿದ ಕನ್ನಡಿಗರ ಸಂಭ್ರಮ
ಬೆಳಗಾವಿ: ರಾಜ್ಯದ ದಕ್ಷಿಣದ ಗಡಿ ಮೈಸೂರಿನಲ್ಲಿ ದಸರೆ ನಡೆದಷ್ಟೇ ವೈಭವದಿಂದ, ಉತ್ತರದ ಗಡಿ ಬೆಳಗಾವಿಯಲ್ಲಿ ರಾಜ್ಯೋತ್ಸವವೂ ನಡೆಯುತ್ತದೆ. ಅಕ್ಟೋಬರ್ 31ರ ರಾತ್ರಿ 12ರಿಂದ ನವೆಂಬರ್ 1ರ ರಾತ್ರಿ 12ರವರೆಗೆ ಸುದೀರ್ಘ ಮೆರವಣಿಗೆ ನಡೆಸಿದ ಇತಿಹಾಸ ರಾಜ್ಯದ ಬೇರೆಲ್ಲೂ ಇಲ್ಲ. ಅಷ್ಟರಮಟ್ಟಿಗೆ ಇಲ್ಲಿ ಕನ್ನಡ ಕಿಚ್ಚು ಹೊತ್ತಿಕೊಂಡಿದೆ, ಕನ್ನಡದ ಕೆಚ್ಚೆದೆ ಬೆಳೆದಿದೆ.

ಬೆಳಗಾವಿ: ರಾಜ್ಯದ ದಕ್ಷಿಣದ ಗಡಿ ಮೈಸೂರಿನಲ್ಲಿ ದಸರೆ ನಡೆದಷ್ಟೇ ವೈಭವದಿಂದ, ಉತ್ತರದ ಗಡಿ ಬೆಳಗಾವಿಯಲ್ಲಿ ರಾಜ್ಯೋತ್ಸವವೂ ನಡೆಯುತ್ತದೆ. ಅಕ್ಟೋಬರ್ 31ರ ರಾತ್ರಿ 12ರಿಂದ ನವೆಂಬರ್ 1ರ ರಾತ್ರಿ 12ರವರೆಗೆ ಸುದೀರ್ಘ ಮೆರವಣಿಗೆ ನಡೆಸಿದ ಇತಿಹಾಸ ರಾಜ್ಯದ ಬೇರೆಲ್ಲೂ ಇಲ್ಲ. ಅಷ್ಟರಮಟ್ಟಿಗೆ ಇಲ್ಲಿ ಕನ್ನಡ ಕಿಚ್ಚು ಹೊತ್ತಿಕೊಂಡಿದೆ, ಕನ್ನಡದ ಕೆಚ್ಚೆದೆ ಬೆಳೆದಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಒಂದಾಗಿ ಹಾಡಿ, ಕುಣಿದು, ಕುಪ್ಪಳಿಸುತ್ತ ಕನ್ನಡಮ್ಮನ ತೇರು ಎಳೆದರು.ಬೆಳಗಾವಿಯಲ್ಲಿ ಇಷ್ಟು ದೊಡ್ಡಮಟ್ಟದ ರಾಜ್ಯೋತ್ಸವ ಆಚರಿಸಲು ಐತಿಹಾಸಿಕ ಕಾರಣಗಳಿವೆ. 1980ರಲ್ಲಿ ಇದೇ ಬೆಳಗಾವಿಯಲ್ಲಿ ಬೃಹತ್ ಪ್ರಮಾಣದ ಗೋಕಾಕ ಚಳವಳಿ ನಡೆಯಿತು. ಆಗ ಆರು ಜನ ಕನ್ನಡಿಗರು ಎರಡೂವರೆ ಕಿಲೋಮೀಟರ್ವರೆಗೆ ಮೊಣಕಾಲುಗಳ ಮೇಲೆಯೇ ನಡೆದು, ಕನ್ನಡಕ್ಕಾಗಿ ದಾರಿಯುದ್ದಕ್ಕೂ ರಕ್ತ ಚೆಲ್ಲಿದರು. ಮಾರನೇ ದಿನವೇ ನಟ ಡಾ.ರಾಜ್ಕುಮಾರ್ ಬೆಳಗಾವಿಗೆ ಬಂದು ಚಳವಳಿಯಲ್ಲಿ ಧುಮುಕಿದರು. ಆ ದಿನ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಗಿದಪ್ಪಿ ಸೇರಿದ ಕನ್ನಡ ಮನಸ್ಸುಗಳು ಇಂದಿಗೂ ಸಡಿಲಗೊಂಡಿಲ್ಲ.ಕನ್ನಡಿಗರು ದಿಟ್ಟರಾಗಿ ನಿಲ್ಲುವುದಕ್ಕೆ ಇನ್ನೊಂದು ಕಾರಣ ಮಹಾರಾಷ್ಟ್ರ ಏಕೀಕರಣ ಸಮಿತಿ. ಬೆಳಗಾವಿ, ಬೀದರ್, ಭಾಲ್ಕಿ, ಕಾರವಾರ, ನಿಪ್ಪಾಣಿಗಳೆಲ್ಲವೂ ಮಹಾರಾಷ್ಟ್ರ ಸೇರಬೇಕು ಎಂದು ಎಂಇಎಸ್ ದಶಕಗಳಿಂದ ಹೋರಾಟ ಮಾಡುತ್ತಲೇ ಇದೆ. ಈ ಗಡಿ ತಂಟೆಯಲ್ಲಿ ನಡೆದ ಲಾಠಿಚಾರ್ಜುಗಳೆಷ್ಟೋ, ಗೋಲಿಬಾರ್ಗಳೆಷ್ಟೋ, ಸತ್ತವರ ಸಂಖ್ಯೆ ಎಷ್ಟೋ ಎಲ್ಲಕ್ಕಿಲ್ಲ. 2002ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲೆ ದಾವೆ ಹೂಡಿದ್ದೇ ತಡ; ಕನ್ನಡದ ಮನಸ್ಸುಗಳೆಲ್ಲ ಭುಗಿಲೆದ್ದು ನಿಂತವು, ಎಚ್ಚೆತ್ತುಕೊಂಡವು. ಅಂದಿನಿಂದ ಇಂದಿನವರೆಗೂ ಅದ್ಧೂರಿ ರಾಜ್ಯೋತ್ಸವದ ಮೂಲಕವೇ ಎಂಇಎಸ್ನ ಪುಂಡರಿಗೆ ಉತ್ತರ ಕೊಡುತ್ತ ಬಂದಿವೆ.ಒಂದು ಕಾಲಕ್ಕೆ ಕರಾಳ ದಿನ ಆಚರಿಸಲು ಲಕ್ಷ ಜನರನ್ನು ಸೇರಿಸುತ್ತಿದ್ದ ಎಂಇಎಸ್ ಈಗ ಹೇಳ ಹೆಸರಿಲ್ಲದಂತಾಗಿದೆ. ಬೆರಳೆಣಿಕೆಯಷ್ಟು ಪುಂಡ ನಾಯಕರು ಇನ್ನೂ ಇದ್ದಾರೆ. ಈಗಲೂ ಪ್ರತಿಭಟನೆಗೆ ಅವಕಾಶ ಪಡೆದು ಕರಾಳ ದಿನ ಆಚರಿಸುತ್ತಲೇ ಇದ್ದಾರೆ. ಆದರೆ, ಕನ್ನಡಿಗರ ಅಬ್ಬರದ ನಡುವೆ ಅವರ ಸೊಲ್ಲು ಅಡಗಿಹೋಗಿದೆ.ಎಂಇಎಸ್ ಬೆಂಬಲದಿಂದಲೇ ಐವರು ಶಾಸಕರು, 40 ಮಂದಿ ಪಾಲಿಕೆ ಸದಸ್ಯರು ಆಯ್ಕೆಯಾಗುತ್ತಿದ್ದ ದಿನಗಳಿದ್ದವು. ಆದರೆ, ಎರಡು ದಶಕಗಳಿಂದ ಈಚೆಗೆ ಅವರ ಸಂಖ್ಯೆಯನ್ನು ಶೂನ್ಯಕ್ಕೆ ತಂದು ನಿಲ್ಲಿಸಿದ್ದು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿ.ಈ ಮಣ್ಣಲ್ಲಿ ಮೂಡಿದ ಸ್ವಾಭಿಮಾನ. ತಾಯ್ನಾಡು, ತಾಯ್ನುಡಿಗೆ ಎಲ್ಲಿ ಧಕ್ಕೆ ಬಂದಿದೆಯೋ ಅಲ್ಲೇ ಹೊತ್ತು ಮೆರೆಸಬೇಕು ಎಂದು ಕನ್ನಡ ಮನಸ್ಸುಗಳು ಛಲ ತೊಟ್ಟು ನಿಂತಿದ್ದೇ ಇದಕ್ಕೆ ಕಾರಣ. ಕನ್ನಡ ಮಾತನಾಡಲು ಹೆದರುತ್ತಿದ್ದ ಈ ನೆಲದಲ್ಲಿ ಈಗ ನೂರಕ್ಕೂ ಹೆಚ್ಚು ಕನ್ನಡ ಸಂಘಟನೆಗಳಿವೆ. ಇಡೀ ನಗರ ಕನ್ನಡದ ತೊಟ್ಟಿಲಾಗಿದೆ. ಈ ಬಾರಿ ಕೂಡ ಶನಿವಾರ ರಾತ್ರಿ 12ಕ್ಕೆ ರಾಣಿ ಚನ್ನಮ್ಮ ವೃತ್ತದಲ್ಲಿ ನಾಡದೇವಿ ಭುವನೇಶ್ವರಿಯ ವೈಭವಕ್ಕೆ ಚಾಲನೆ ದೊರೆಯಿತು. ಝಗಮಗಿಸುವ ವಿದ್ಯುದ್ದೀಪಾಲಂಕಾರ, ಬಾಣಬಿರುಸುಗಳ ಅಬ್ಬರ ರಂಜಿಸಿತ. ಮೇಯರ್ ಪ್ರೀತಿ ಕಾಮಕರ ಆದಿಯಾಗಿ ಪಾಲಿಕೆಯ ಸದಸ್ಯರು, ಕನ್ನಡ ಹೋರಾಟಗಾರರು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು.ಭಾನುವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ಮಾಡುತ್ತಿದ್ದಂತೆಯೇ ವೈಭವೋಪೇತ ಮೆರವಣಿಗೆ ಆರಂಭವಾಯಿತು. ನಗರದೆಲ್ಲೆಡೆ ಜೈಕಾರಗಳು ಮುಗಿಲು ಮುಟ್ಟಿದವು. ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು.ಎಲ್ಲಿ ನೋಡಿದರೂ ಜನ, ಎತ್ತ ನೋಡಿದರೂ ಸಂಭ್ರಮ, ನೆಲ ನಡುಗಿಸುವಂಥ ಸಂಗೀತ, ಹಾಡು, ಯುವಜನರ ನೃತ್ಯೋತ್ಸಾಹ, ಉಕ್ಕೇರಿ ಬಂದ ಅಭಿಮಾನದ ಹೊಳೆ. ರಾಜ್ಯೋತ್ಸವ ಬಂದರೆ ಸಾಕು ಕೂಲಿ ಕಾರ್ಮಿಕರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಎಲ್ಲರೂ ಎಲ್ಲರೂ ಕನ್ನಡ ಬಾವುಟ ಹೋಲುವ ವೇಷವನ್ನೇ ಧರಿಸಿ ಕುಣಿಯುವುದು ಸರ್ವೇ ಸಾಮಾನ್ಯ.ಯುವಕರು ಹಣೆಗೆ ಕೆಂಪು– ಹಳದಿ ತಿಲಕ ಇಟ್ಟುಕೊಂಡರೆ; ಯುವತಿಯರು ತಾವೇನೂ ಕಮ್ಮಿ ಇಲ್ಲ ಎಂಬಂತೆ ಬಿಳಿ ಕೆನ್ನೆಗಳ ಮೇಲೆ ಕನ್ನಡದ ಬಣ್ಣ ಬಳಿದುಕೊಂಡರು. ನಗರದ ರಸ್ತೆಗಳು, ವೃತ್ತಗಳು, ಚೌಕಗಳು, ಮನೆಯ ಮಹಡಿಗಳು ಕಿಕ್ಕಿರಿದು ತುಂಬಿದವು.ನಾಡದೇವಿ ಭುವನೇಶ್ವರಿ, ಕನ್ನಡ ನೆಲವನ್ನಾಳಿದ ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಹಳಗನ್ನಡ ಕವಿಗಳು, ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಹಂಪಿಯ ಕಲ್ಲಿನ ರಥ, ಕದಂಬರ ದೇವಸ್ಥಾನ, ಸುವರ್ಣವಿಧಾನಸೌಧ ಹೀಗೆ; ಬರೋಬ್ಬರಿ 150 ರೂಪಕಗಳು ನಾಡಾಡಿಗಳನ್ನು ಬರಸೆಳೆದವು.ಇನ್ನೊಂದು ಅಚ್ಚರಿಯನ್ನು ನೀವು ಗಮನಿಸಲೇಬೇಕು. ಲಕ್ಷಲಕ್ಷ ಜನ ಕಿಕ್ಕಿರಿದು ಸೇರುತ್ತಾರೆ. ಯುವತಿಯರು, ಮಹಿಳೆಯರು, ಗರ್ಭಿಣಿಯರು, ಪುಟಾಣಿ ಮಕ್ಕಳನ್ನು ಹೊತ್ತುಕೊಂಡ ತಾಯಂದಿರೂ ಪಾಲ್ಗೊಳ್ಳುತ್ತಾರೆ. ಆದರೆ, ಒಂದೇ ಒಂದು ಅಹಿತಕರ ಘಟನೆ ನಡೆದ ಇತಿಹಾಸವೇ ಇಲ್ಲ! ಅಷ್ಟರ ಮಟ್ಟಿಗೆ ಕನ್ನಡಿಗರು ಕನ್ನಡಿಗರನ್ನು ಕಾಯುತ್ತಾರೆ.