ಸಕ್ಕರೆ ದರ ಆಧರಿಸಿ ಕಬ್ಬಿನ ಬೆಲೆ ನಿಗದಿ ಸಾಧ್ಯವಿಲ್ಲ: ಸತೀಶ ಜಾರಕಿಹೊಳಿ
ಬೆಳಗಾವಿ: ‘ಸಕ್ಕರೆ ಮಾರಾಟ ದರ ಸ್ಥಿರವಾಗಿ ಇರುವುದಿಲ್ಲ. ಹಾಗಾಗಿ, ಸಕ್ಕರೆಯ ಪ್ರಸ್ತುತ ಮಾರಾಟ ಬೆಲೆ ಆಧಾರದಲ್ಲೇ ಕಾರ್ಖಾನೆಗಳು ಕಬ್ಬಿನ ದರ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆಯವರು ಪ್ರತಿ ಕೆ.ಜಿ ಸಕ್ಕರೆಯನ್ನು ₹50ಕ್ಕೆ ಮಾರುತ್ತಿದ್ದಾ

ಬೆಳಗಾವಿ: ‘ಸಕ್ಕರೆ ಮಾರಾಟ ದರ ಸ್ಥಿರವಾಗಿ ಇರುವುದಿಲ್ಲ. ಹಾಗಾಗಿ, ಸಕ್ಕರೆಯ ಪ್ರಸ್ತುತ ಮಾರಾಟ ಬೆಲೆ ಆಧಾರದಲ್ಲೇ ಕಾರ್ಖಾನೆಗಳು ಕಬ್ಬಿನ ದರ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆಯವರು ಪ್ರತಿ ಕೆ.ಜಿ ಸಕ್ಕರೆಯನ್ನು ₹50ಕ್ಕೆ ಮಾರುತ್ತಿದ್ದಾರೆ. ಇದು ಸ್ಥಿರವಾಗಿ ಇರುವುದಿಲ್ಲ. ಕೆಲವೊಮ್ಮೆ ಕುಸಿಯಬಹುದು. ಹಾಗಾಗಿ ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ(ಎಂಎಸ್ಪಿ)ಯನ್ನು ₹31ರಿಂದ ₹50ಕ್ಕೆ ಹೆಚ್ಚಿಸಬೇಕು. ಆಗ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಹೆಚ್ಚಿನ ದರ ನೀಡಬಹುದು. ಕಬ್ಬಿನ ಬೆಲೆಗೆ ಸಂಬಂಧಿಸಿದ ಸಂಘರ್ಷಕ್ಕೆ ಪರಿಹಾರ ಸಿಗಬಹುದು’ ಎಂದರು.‘ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆ, ದರ ನಿಗದಿ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಮಾತುಕತೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ಇನ್ನೂ ಎಂಎಸ್ಪಿ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕೇಂದ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಹೇಳಿದರು.‘ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ರೈತರ ಒಪ್ಪಿಗೆ ಮುಖ್ಯ. ಇಲ್ಲದಿದ್ದರೆ ಮಾಲೀಕರು ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮುಂದೆ ಬರುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರೈತರು ಮತ್ತು ಕಾರ್ಖಾನೆ ಮಾಲೀಕರ ಮಧ್ಯೆ ಒಮ್ಮತ ಮೂಡಬೇಕಾದ ಅಗತ್ಯವಿದೆ’ ಎಂದರು.‘ರೈತರ ಸಮಸ್ಯೆ ಬಗೆಹರಿಸುವುದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚನ್ನಮ್ಮನ ಕಿತ್ತೂರು ಮತ್ತು ಬೆಳಗಾವಿಯಲ್ಲಿ ರೈತರೊಂದಿಗೆ ಸಭೆ ನಡೆಸಿ, ಈ ವಿಷಯವನ್ನು ಕೇಂದ್ರದ ಗಮನಕ್ಕೆ ತರಲು ಪ್ರಯತ್ನಿಸಿದರು. ಸಕ್ಕರೆಯ ಎಂಎಸ್ಪಿ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸುವ ಜವಾಬ್ದಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೇಲಿದೆ. ಸಕ್ಕರೆ ಕಾರ್ಖಾನೆಯವರು ಮತ್ತು ರೈತರು ಜಂಟಿ ಸಭೆ ನಡೆಸಿ, ಎರಡು ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದರು. ನಂತರ ಯಾವ ಬೆಳವಣಿಗೆ ಆಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ರೈತ ಪ್ರತಿನಿಧಿಗಳು ನನ್ನೊಂದಿಗೆ ಮಾತನಾಡಿಲ್ಲ. ಒಂದುವೇಳೆ ಅವರು ತಮ್ಮ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕಿದ್ದರೆ, ಜಿಲ್ಲಾಧಿಕಾರಿ ಕಚೇರಿ ಜತೆಗೆ ಮಾತನಾಡಬೇಕು. ಪ್ರತಿವರ್ಷ ಕೇಂದ್ರವು ಎಫ್ಆರ್ಪಿ ಘೋಷಿಸುತ್ತದೆ. ಆದರೆ, ಆ ಮೊತ್ತ ಕಡಿಮೆ ಇದೆ’ ಎಂದರು.ರಾಜ್ಯ ಸರ್ಕಾರ ಎಸ್ಎಪಿ ಘೋಷಿಸುವುದೇ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಲಿಲ್ಲ.‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ನಿಂದ ತಯಾರಿ ಮಾಡುತ್ತಿದ್ದೇವೆ. ಆದರೆ, ಚುನಾವಣೆ ಕುರಿತು ಇನ್ನೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಅದು ಪ್ರಕಟವಾದ ನಂತರವೇ ಚುನಾವಣೆ ಪ್ರಕ್ರಿಯೆ ಬಗ್ಗೆ ಸ್ಪಷ್ಟತೆ ಸಿಗಲಿದೆ’ ಎಂದರು.‘ಡಿಸೆಂಬರ್ 15ರಂದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಹಾಗಾಗಿ ಚುನಾವಣೆ ಪ್ರಕ್ರಿಯೆಗೆ ತೊಂದರೆ ಆಗದಿರಲೆಂದು, ಸುವರ್ಣ ವಿಧಾನಸೌಧದಲ್ಲಿ ನಡೆಯಬೇಕಿದ್ದ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 7ರ ಬದಲಾಗಿ ನವೆಂಬರ್ 30ರಿಂದ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.‘ಬಳ್ಳಾರಿ ನಾಲೆ ಯೋಜನೆಗೆ ಭೂಮಿ ನೀಡಿದವರಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಳ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಮೂರು ವರ್ಷಗಳಿಂದ ಪ್ರಯತ್ನಿಸಿ, ಪರಿಹಾರ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು.‘ಗುರ್ಲಾಪುರದಲ್ಲಿ ಧರಣಿ ನಡೆಸುತ್ತಿರುವ ರೈತರು ‘ಜೈಲ್ ಭರೋ ಚಳವಳಿ’ ನಡೆಸುತ್ತಿರುವುದು ನನಗೆ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.