ಸುಸ್ಥಿರ ಬೆಂಗಳೂರಿಗೆ ‘ವೈಎಫ್ಪಿ’ ಹೆಗಲು
ಬೆಂಗಳೂರು: ಅದೊಂದು 600ಕ್ಕೂ ಹೆಚ್ಚು ಸ್ವಯಂ ಸೇವಕರ ಪಡೆ. ಬೆಂಗಳೂರಿನ ಬೆಳವಣಿಗೆ ಸುಸ್ಥಿರವಾಗಿರಬೇಕು. ಇಲ್ಲಿನ ಪ್ರತಿಯೊಂದು ರಸ್ತೆ, ಉದ್ಯಾನ, ಶಾಲೆಗಳು ದೇಶಕ್ಕೆ ಮಾದರಿಯಾಗಬೇಕು ಎಂಬುದು ಅದರ ಸಂಕಲ್ಪ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ 12 ವರ್ಷಗಳಿಂದ ದುಡಿಯುತ್ತಿರುವ ‘ಯೂತ್ ಫಾರ್ ಪರಿವರ್ತನ್’, ಸೇವೆಯ ಸಾರ್ಥಕತೆಯನ್ನು 10 ಸಾವಿರಕ್ಕೂ ಹೆಚ್ಚು ಜನರ

ಬೆಂಗಳೂರು: ಅದೊಂದು 600ಕ್ಕೂ ಹೆಚ್ಚು ಸ್ವಯಂ ಸೇವಕರ ಪಡೆ. ಬೆಂಗಳೂರಿನ ಬೆಳವಣಿಗೆ ಸುಸ್ಥಿರವಾಗಿರಬೇಕು. ಇಲ್ಲಿನ ಪ್ರತಿಯೊಂದು ರಸ್ತೆ, ಉದ್ಯಾನ, ಶಾಲೆಗಳು ದೇಶಕ್ಕೆ ಮಾದರಿಯಾಗಬೇಕು ಎಂಬುದು ಅದರ ಸಂಕಲ್ಪ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ 12 ವರ್ಷಗಳಿಂದ ದುಡಿಯುತ್ತಿರುವ ‘ಯೂತ್ ಫಾರ್ ಪರಿವರ್ತನ್’, ಸೇವೆಯ ಸಾರ್ಥಕತೆಯನ್ನು 10 ಸಾವಿರಕ್ಕೂ ಹೆಚ್ಚು ಜನರ ಎದೆಯಲ್ಲಿ ಬಿತ್ತಿದೆ. ಜನರ ಕಣ್ಣನ್ನು ತೆರೆಸಿದೆ. 2014ರ ಜೂನ್ 3ರಂದು ವಕೀಲ ಅಮಿತ್ ಅಮರ್ನಾಥ್ ಅವರು ಆರಂಭಿಸಿದ ಸಂಘಟನೆ ರಸ್ತೆ, ಉದ್ಯಾನಗಳ ಸ್ವಚ್ಛತೆ, ಶಾಲೆಗಳಿಗೆ ಸುಣ್ಣ– ಬಣ್ಣ ಹಾಗೂ ದುರಸ್ತಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಲ್ಲಿನ ಸ್ವಯಂ ಸೇವಕರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳು. ವಾರಾಂತ್ಯದಲ್ಲಿ ಸೇರಿ ಯಾವುದೇ ಹಣವನ್ನು ಪಡೆಯದೇ ದಾನಿಗಳು ಇಲ್ಲವೇ ತಮ್ಮ ದುಡಿಮೆಯ ಹಣವನ್ನು ಹಾಕಿ ಸ್ಪೂರ್ತಿದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವು ವಾರದ ಹಿಂದಷ್ಟೇ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮಾಗಡಿ ರಸ್ತೆಯ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ಎದುರು ಅನೈರ್ಮಲ್ಯದಿಂದ ಕೂಡಿದ್ದ ಪಾದಚಾರಿ ಮಾರ್ಗವನ್ನು ಸುಂದರೀಕರಣಗೊಳಿಸಿದ್ದು, ನಾಗರಿಕರಿಂದ ಪ್ರಶಂಸೆ ಪಡೆದಿದ್ದಾರೆ. ಮೂತ್ರ ವಿಸರ್ಜನಾ ತಾಣವಾಗಿದ್ದ ಸ್ಥಳದಲ್ಲಿ ಕಲೆಯು ಅರಳಿದೆ. ಕುವೆಂಪು, ದ.ರಾ.ಬೇಂದ್ರೆ, ಸ್ವಾಮಿ ವಿವೇಕಾನಂದ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬೇಡ್ಕರ್, ಸರ್ ಎಂ.ವಿಶ್ವೇಶ್ವರಯ್ಯ, ಡಾ.ರಾಜ್ಕುಮಾರ್ ಸೇರಿದಂತೆ ನಾಡನ್ನು ರೂಪಿಸಿದ ಮಹನೀಯರ ಭಾವಚಿತ್ರಗಳು ಗೋಡೆಗಳಲ್ಲಿ ಮೂಡಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಿದ್ದ ಸ್ಥಳವೀಗ ಸ್ವಚ್ಛಗೊಂಡು ಹೊಳೆಯುತ್ತಿದೆ. ಸಂಘಟನೆಯ ಸಮಾಜಮುಖಿ ಕೆಲಸಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಅಷ್ಟೇ ಅಲ್ಲದೆ ನೂರಾರು ಯುವಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಪರಿವರ್ತನೆಯನ್ನು ತಂದಿವೆ. ಸ್ವಚ್ಛ ಭಾರತ್ಗೂ ಮೊದಲೇ ಅಭಿಯಾನ: ಸ್ವಚ್ಛ ಭಾರತ್ ಅಭಿಯಾನ ಆರಂಭಗೊಳ್ಳುವ ವರ್ಷದ ಮುಂಚೆಯೇ ಬನಶಂಕರಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಸಂಘಟನೆಯು ಕೈಗೊಂಡಿದ್ದು ಹೆಗ್ಗಳಿಕೆಯಾಗಿದೆ. ಕಸದ ತಾಣವಾಗಿದ್ದ ಉದ್ಯಾನವನ್ನು ಅಮಿತ್, ಕೌಶಿಕ್ ದಯಾಳ್ ಮತ್ತು ತಂಡದವರು ಸುಂದರಗೊಳಿಸಿದರು. ಇದೇ ತಂಡದ ಸದಸ್ಯರು ಸೇರಿದಂತೆ ದಶಕದಿಂದಲೂ ಹೆಗಲಾಗಿರುವ 38 ಮಂದಿ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಅವರ ಜೊತೆಗೆ ನೂರಾರು ಸ್ವಯಂಸೇವಕರು ಪ್ರತಿ ಅಭಿಯಾನಕ್ಕೂ ಕೈ ಜೋಡಿಸುತ್ತಾರೆ. 7 ವರ್ಷದವರಿಂದ 82 ವರ್ಷದ ಹಿರಿಯರೂ ಸಂಘಟನೆಯ ಜೊತೆಗಿದ್ದಾರೆ. ಮನ್ಕಿಬಾತ್ನಲ್ಲಿ ಶ್ಲಾಘನೆ: ಯೂತ್ ಫಾರ್ ಪರಿವರ್ತನ್ನ ಕಾರ್ಯವು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು. ಆಕಾಶವಾಣಿಯ ‘ಮನ್ ಕಿ ಬಾತ್’ ಸರಣಿಯ 93ನೇ ಕಂತಿನಲ್ಲಿ ಸಂಘಟನೆಯ ಸೇವೆಯನ್ನು ಹೊಗಳಿದ್ದರು. ಗೋಡೆಗಳಿಗೆ ಸದಸ್ಯರಿಂದ ಚಿತ್ತಾರ ಯೂತ್ ಫಾರ್ ಪರಿವರ್ತನ್ ಸಂಘಟನೆಯ ತಂಡ ಸಂಘಟನೆಯ ಅಭಿಯಾನಗಳು.. ಬ್ಲ್ಯಾಕ್ ಸ್ಪಾಟ್ಸ್ ತೆರವು: ಕಸ ಬಿಸಾಡುವ ಸ್ಥಳಗಳನ್ನು ಗುರುತಿಸುವ ಸಂಘಟನೆಯು ರಸ್ತೆ ಪಾದಚಾರಿ ಮಾರ್ಗಗಳನ್ನು ಸುಂದರೀಕರಣಗೊಳಿಸುತ್ತದೆ. ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸುತ್ತದೆ. 400ಕ್ಕೂ ಹೆಚ್ಚು ಬ್ಲ್ಯಾಕ್ ಸ್ಪಾಟ್ಗಳನ್ನು ತ್ಯಾಜ್ಯ ಮುಕ್ತಗೊಳಿಸಿದೆ. ಸ್ವಚ್ಛ ಬೆಂಗಳೂರು: ಪಾಲಿಕೆಯ ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಸಂಘಟನೆಯ ಸ್ವಯಂಸೇವಕರು ಕೈ ಜೋಡಿಸುತ್ತಿದ್ದಾರೆ. ರಿಸೈಕ್ಲೋಥಾನ್: ನಗರದ ಶಾಲೆಗಳಲ್ಲಿ ಅರ್ಧದಷ್ಟು ಬಳಸಿದ ನೋಟ್ ಪುಸ್ತಕಗಳ ಖಾಲಿ ಹಾಳೆಗಳನ್ನು ಮರುಬಳಕೆ ಮಾಡುವ ಅಭಿಯಾನವಾಗಿದೆ. ಸಾವಿರಾರು ನೋಟ್ ಪುಸ್ತಕಗಳನ್ನು ತಯಾರಿಸಿ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದೆ. 2023ರಲ್ಲಿ 3300 ನೋಟ್ ಪುಸ್ತಕಗಳನ್ನು ಮಾಡಿತ್ತು. ಈ ವರ್ಷ 10 ಸಾವಿರ ನೋಟ್ ಪುಸ್ತಕಗಳನ್ನು ತಯಾರಿಸಿ ವಿತರಿಸಿದೆ. 900ಕ್ಕೂ ಹೆಚ್ಚು ಸ್ವಯಂಸೇವಕರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ: ಶಾಲೆಗಳಿಗೆ ಆರಂಭದಲ್ಲಿ ಬಣ್ಣ ಬಳಿಯುವುದು ಹಾಗೂ ಮೂಲಸೌಕರ್ಯಗಳನ್ನು ಉನ್ನತೀಕರಿಸಲಾಗುತ್ತಿದೆ. ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿಯ ಸಹಕಾರದಿಂದ ಈ ಕೆಲಸವನ್ನು ಮಾಡಲಾಗುತ್ತಿದೆ. ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ನೀಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ರಾಯಚೂರು ಜಿಲ್ಲೆ ಲಿಂಗಸಗೂರಿನ ಮೂರು ಶಾಲೆಗಳನ್ನು ಪೂರ್ಣವಾಗಿ ಉನ್ನತೀಕರಿಸಿದೆ. ಅನ್ನ ಸಂಕಲ್ಪ: ತಿಂಗಳಿಗೊಮ್ಮೆ ಸ್ವಯಂಸೇವಕರು ಅಡುಗೆ ಮಾಡಿ ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ಮತ್ತು ಅಗತ್ಯವಿರುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಇದಲ್ಲದೇ ರಕ್ತದಾನ ಶಿಬಿರಗಳು ಆರೋಗ್ಯ ತಪಾಸಣೆ ಸಸಿ ನೆಡುವ ಕಾರ್ಯದಲ್ಲಿಯೂ ತೊಡಗಿದ್ದಾರೆ. ‘ಸುಂದರ ಬೆಂಗಳೂರು ನಿರ್ಮಾಣವೇ ಗುರಿ’ ‘ಎಲ್ಲಿಂದಲೋ ಬಂದವರು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬೆಳೆಸಿದ ಊರನ್ನು ಸುಂದರವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ. ಸ್ವಚ್ಛತಾ ಕಾರ್ಯದಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗದು’ ಎನ್ನುತ್ತಾರೆ ಯೂತ್ ಫಾರ್ ಪರಿವರ್ತನ್ ಸಂಘಟನೆಯ ಮುಖ್ಯಸ್ಥ ಅಮಿತ್ ಅಮರನಾಥ್. ‘ಸುಂದರ ಬೆಂಗಳೂರು ನಿರ್ಮಾಣ ಪ್ರತಿಯೊಬ್ಬರ ಕನಸಾಗಬೇಕು. ಕನಿಷ್ಠ ಸುತ್ತಲ ಜಾಗವನ್ನು ಸ್ವಚ್ಛವಾಗಿ ನೋಡಿಕೊಳ್ಳುವ ಪ್ರಜ್ಞಾವಂತರಾಗಬೇಕು’ ಎನ್ನುವ ಅವರು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾರೆ. ವೃತ್ತಿಯ ಜೊತೆಯಲ್ಲಿ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಇವರೊಂದಿಗೆ ಕೈಜೋಡಿಸಲು ಸಂಪರ್ಕಕ್ಕೆ info@youthforparivarthan.org ಮೊ.95355 72258