ವಿದೇಶಿ ನೆರವು: ಬಹಿರಂಗ ಚರ್ಚೆಗೆ ಬನ್ನಿ; ಮೋದಿಗೆ ರಾಹುಲ್ ಸವಾಲು
ನವದೆಹಲಿ: ದೇಶವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ವಿದೇಶಿ ನೆರವು ಪಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅರೋಪಿಸಿದ್ದಕ್ಕೆ, ತಿರುಗೇಟು ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.‘ಮೋದಿ ಅವರೇ, ನೀವು ವಿದೇಶಿ ಸಹಾಯದಿಂದಲೇ ಪ್ರಧಾನಿ ಆಗಿದ್ದೀರಿ ಮತ್ತು ಮುಂದುವರಿದ

ನವದೆಹಲಿ: ದೇಶವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ವಿದೇಶಿ ನೆರವು ಪಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅರೋಪಿಸಿದ್ದಕ್ಕೆ, ತಿರುಗೇಟು ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.‘ಮೋದಿ ಅವರೇ, ನೀವು ವಿದೇಶಿ ಸಹಾಯದಿಂದಲೇ ಪ್ರಧಾನಿ ಆಗಿದ್ದೀರಿ ಮತ್ತು ಮುಂದುವರಿದಿದ್ದೀರಿ’ ಎಂದು ಅವರು ಆರೋಪಿಸಿದ್ದಾರೆ. ‘ನಿಮ್ಮ ಆರ್ಥಿಕ ವ್ಯವಸ್ಥೆಯೇ ವಿದೇಶಿ ಪ್ರಜೆಗಳ ನಿಯಂತ್ರಣದಲ್ಲಿದೆ. ವಿದೇಶಿ ಸಾಮಾಜಿಕ ಜಾಲತಾಣಗಳು ನಿಮಗೆ ಪೂರ್ಣ ಬೆಂಬಲ ನೀಡುತ್ತಿವೆ’ ಎಂದು ಅವರು ಸೋಮವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.‘ಈ ಕುರಿತು ಬಹಿರಂಗ ಚರ್ಚೆಗಾಗಿ ನಿಮಗೆ ಸವಾಲು ಹಾಕುತ್ತಿದ್ದೇನೆ. ಯಾವುದೇ ವೇದಿಕೆ, ಯಾವುದೇ ಸಮಯದಲ್ಲಾದರೂ ಚರ್ಚೆಗೆ ನಾನು ಸಿದ್ಧ. ಧೈರ್ಯವಿದ್ದರೆ ನೀವು ಬನ್ನಿ’ ಎಂದು ಅವರು ಸವಾಲು ಹಾಕಿದ್ದಾರೆ. ‘ನೀವು ಬರುವ ಧೈರ್ಯ ಮಾಡುವುದಿಲ್ಲ ಎಂಬುದು ಗೊತ್ತಿದೆ. ಏಕೆಂದರೆ ನಿಮ್ಮ ಬಗ್ಗೆ ನನಗೆ ಸಾಕಷ್ಟು ವಿಷಯಗಳು ತಿಳಿದಿರುವುದರಿಂದ ನೀವು ಭಯಪಡುತ್ತೀರಿ’ ಎಂದು ರಾಹುಲ್ ಹೇಳಿದ್ದಾರೆ. ಗುಜರಾತ್ನಲ್ಲಿ ಶನಿವಾರ ಮಾತನಾಡಿದ್ದ ಮೋದಿ ಅವರು, ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದ್ದರು. ‘ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಹತಾಶೆಯಿಂದಿದ್ದ ಅವರು, ಈಗ ಹೊರಬಂದಿದ್ದಾರೆ. ವಿದೇಶದಲ್ಲಿ ಯಾರು ಯಾರನ್ನು ಗುಪ್ತವಾಗಿ ಭೇಟಿಯಾಗುತ್ತಿದ್ದಾರೆ? ಭಾರತ ವಿರೋಧಿ ಶಕ್ತಿಗಳು ಯಾರನ್ನು ಬೆಂಬಲಿಸುತ್ತಿವೆ? ಭಾರತದ ಶತ್ರುಗಳ ಭಾಷೆಯಲ್ಲಿ ಯಾರು ಮಾತನಾಡುತ್ತಿದ್ದಾರೆ? ಇವುಗಳನ್ನು ನಾವು ಗುರುತಿಸಬೇಕಿದೆ’ ಎಂದು ಮೋದಿ ಹೇಳಿದ್ದರು.