ಸಿಇಸಿ–ಎಸ್ಐಆರ್ ಪ್ರತಿಭಟನೆಯಲ್ಲಿ ಭಾಗಿ: ಇಮ್ರಾನ್ ಖಾನ್ ಬೇಷರತ್ ಕ್ಷಮೆಯಾಚನೆ
ಮುಂಬೈ:ಎಸ್ಐಆರ್ ಅಕ್ರಮ ಆರೋಪ ಸಂಬಂಧ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ ಅವರನ್ನು ಬಾಂಬೆ ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.‘ಚುನಾವಣಾ ಆಯುಕ್ತ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ನಾಗರಿಕರಿಗೆ ಮಾತ್ರವೇ ಹಕ್ಕು ಇರುತ್ತದೆ. ಹೊರತು ವಿದೇಶಿ ಪ್ರಜೆಗಲ್ಲ' ಎಂದು ನ್ಯಾಯಪೀಠ

ಮುಂಬೈ:ಎಸ್ಐಆರ್ ಅಕ್ರಮ ಆರೋಪ ಸಂಬಂಧ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್ ಅವರನ್ನು ಬಾಂಬೆ ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.‘ಚುನಾವಣಾ ಆಯುಕ್ತ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ನಾಗರಿಕರಿಗೆ ಮಾತ್ರವೇ ಹಕ್ಕು ಇರುತ್ತದೆ. ಹೊರತು ವಿದೇಶಿ ಪ್ರಜೆಗಲ್ಲ' ಎಂದು ನ್ಯಾಯಪೀಠ ಹೇಳಿದೆ. ಅದರ ಬೆನ್ನಲೇ ಇಮ್ರಾನ್ ಖಾನ್ ಅವರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಹಾಗೂ ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ಪೀಠವು ಈ ಬಗ್ಗೆ ವಿಚಾರಣೆ ನಡೆಸಿತು. ‘ಭಾರತದ ಉದಾರತೆ ಎಷ್ಟಿದೆಯೆಂದರೆ; ಸಾಗರೋತ್ತರ ಭಾರತೀಯ ಪೌರತ್ವ (ಒಸಿಐ) ಕಾರ್ಡ್ ಹೊಂದಿರುವ ಅಮೆರಿಕ ಪ್ರಜೆಯಾಗಿರುವ ಇಮ್ರಾನ್ ಅವರನ್ನು ತಕ್ಷಣವೇ ಗಡಿಪಾರು ಮಾಡಲಿಲ್ಲ. ಬದಲಾಗಿ ಅವರಿಗೆ ನೋಟಿಸ್ ನೀಡಿ ದೇಶ ತೊರೆಯಲು ಸಮಯ ನೀಡಲಾಗಿದೆ‘ ಎಂದು ಪೀಠವು ಅಭಿಪ್ರಾಯಪಟ್ಟಿದೆ. ‘ಭಾರತದಲ್ಲಿ ಇಮ್ರಾನ್ ಅವರು ಮುಂದಿನ ದಿನಗಳಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಅವರ ಪರ ಇರುವ ವಕೀಲ ವೆಂಕಟೇಶ್ ಧೊಹಾಂಡ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಬೇಷರತ್ ಕ್ಷಮೆಯಾಚಿಸಿದ್ದಾರೆ.ಇಮ್ರಾನ್ ಖಾನ್ ಅವರಿಗೆ ಅ. 28ರ ಒಳಗೆ ದೇಶವನ್ನು ತೊರೆಯುವಂತೆ ಮುಂಬೈನ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್ಆರ್ಆರ್ಒ) ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿ ಇಮ್ರಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ಡಿಸೆಂಬರ್ 7ಕ್ಕೆ ಮೂಂದೂಡಿದೆ.