ಹೊಸಪೇಟೆ| ಮಹಿಳಾ, ಸೈಬರ್ ಠಾಣೆ ಶೀಘ್ರ ಸ್ಥಾಪನೆ: ಸಚಿವ ಬಸವಂತಪ್ಪ ಭರವಸೆ
ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಹಿಳಾ ಮತ್ತು ಸೈಬರ್ ಪೊಲೀಸ್ ಠಾಣೆ ಸ್ಥಾಪಿಸುವ ಅಗತ್ಯ ಇದ್ದು, ಅದನ್ನು ಶೀಘ್ರ ಕಾರ್ಯಗತಗೊಳಿಸಲಾಗುವುದು, ಇನ್ನೂ 60 ವಸತಿಗೃಹ ನಿರ್ಮಾಣಕ್ಕೆ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.ಇಲ್ಲಿನ ಪೊಲೀಸ್

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಹಿಳಾ ಮತ್ತು ಸೈಬರ್ ಪೊಲೀಸ್ ಠಾಣೆ ಸ್ಥಾಪಿಸುವ ಅಗತ್ಯ ಇದ್ದು, ಅದನ್ನು ಶೀಘ್ರ ಕಾರ್ಯಗತಗೊಳಿಸಲಾಗುವುದು, ಇನ್ನೂ 60 ವಸತಿಗೃಹ ನಿರ್ಮಾಣಕ್ಕೆ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.ಇಲ್ಲಿನ ಪೊಲೀಸ್ ಪರೇಡ್ ಮೈದಾನ ಬಳಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 36 ವಸತಿ ಗೃಹಗಳನ್ನು ಉದ್ಘಾಟಿಸಿ, ಪೊಲೀಸ್ ಕುಟುಂಬದವರಿಗೆ ಮನೆಯ ಕೀಲಿ ಹಸ್ತಾಂತರಿಸಿ ಸೋಮವಾರ ಅವರು ಮಾತನಾಡಿದರು.ಇಲ್ಲಿ ಇನ್ನೂ 24 ವಸತಿಗೃಹಗಳ ನಿರ್ಮಾಣ ಆರಂಭವಾಗಿದೆ. ಮತ್ತೆ 60 ವಸತಿಗೃಹಗಳನ್ನು ಇಲ್ಲಿ ನಿರ್ಮಿಸಲು ಗೃಹ ಸಚಿವರ ಮನವೊಲಿಸಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಇಲ್ಲಿ ಕಲ್ಯಾಣ ಮಂಟಪವನ್ನು ಸಹ ನಿರ್ಮಿಸಿದರೆ ಪೊಲೀಸರಿಗೆ ಅನುಕೂಲವಾಗುತ್ತದೆ, ಅದರ ಬಗ್ಗೆ ಸಹ ಪ್ರಯತ್ನಿಸಲಾಗುವುದು ಎಂದರು.ವಸತಿಗೆ ನಿವೇಶನ ಮೀಸಲು: ರಾಜ್ಯದಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಆದ್ಯತೆ ನೀಡಿ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಶೇ 10ರಿಂದ 15ರಷ್ಟು ನಿವೇಶನಗಳನ್ನು ಪೊಲೀಸ್ ವಸತಿಗೃಹಗಳಿಗೆ ಮೀಸಲಿಡುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಪ್ರಯತ್ನಿಸುವುದಾಗಿ ಸಚಿವ ಬಸವಂತಪ್ಪ ಹೇಳಿದರು.ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಸೈಬರ್, ಮಹಿಳಾ ಪೊಲೀಸ್ ಠಾಣೆ ನಿವೇಶನಕ್ಕೆ ಮಂಜೂರಾತಿ ಪಡೆದು ಒಂದೆರಡು ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು. ಸದ್ಯ ಕೆಕೆಆರ್ಡಿಬಿಯಿಂದ ದೊರೆತಿರುವ ₹10 ಕೋಟಿಗೆ ಸರ್ಕಾರ ₹10 ಕೋಟಿ ಮ್ಯಾಚಿಂಗ್ ಅನುದಾನ ನೀಡಿದರೆ ಇಲ್ಲಿ ಹೆಚ್ಚುವರಿಯಾಗಿ 60 ಮನೆಗಳನ್ನು ಪೊಲೀಸರಿಗೆ ನಿರ್ಮಿಸಿಕೊಡಬಹುದು ಎಂದರು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಪೊಲೀಸ್ ಕಲ್ಯಾಣ ಮಂಟಪ, ಅತಿಥಿಗೃಹಕ್ಕೆ ಬೇಡಿಕೆ ಇದೆ, ಹೊಸಪೇಟೆಯಲ್ಲಿ ಸ್ಥಳ ಸಿಗುವುದು ಕಷ್ಟ, ಇಲ್ಲವಾದರೆ ತಾಲ್ಲೂಕು ಕೇಂದ್ರಗಳಲ್ಲಿ ಇದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಇನ್ನಷ್ಟು ವಸತಿ ಗೃಹಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ್, ‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಡಿ.ವೆಂಕಟರಮಣ, ಕಾರ್ಯನಿರ್ವಾಹಕ ಎಂಜಿನಿಯರ್ ವೀರಭದ್ರಪ್ಪ ಇದ್ದರು. 1 ವರ್ಷದ ಕಾಯುವಿಕೆ, ಕ್ಷಣದಲ್ಲಿ ಈಡೇರಿಕೆಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಒಂದು ವರ್ಷದ ಹಿಂದೆಯೇ ಮೂರು ಬ್ಲಾಕ್ಗಳ ಈ ಪೊಲೀಸ್ ವಸತಿಗೃಹಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿತ್ತು. ಆದರೆ ಉದ್ಘಾಟನೆಯ ಭಾಗ್ಯ ಮಾತ್ರ ಬಂದಿರಲಿಲ್ಲ. ಭಾನುವಾರ ಕನ್ನಡ ರಾಜ್ಯೋತ್ಸವ ಸಮಾರಂಭದ ಬಳಿಕ ಸಚಿವರು ಮತ್ತು ಶಾಸಕರಲ್ಲಿ ಮಾಧ್ಯಮದವರು ಈ ಬಗ್ಗೆ ಕೇಳಿದ್ದರು. ತಕ್ಷಣ ವಸತಿಗೃಹಗಳ ಉದ್ಘಾಟನೆ ಮತ್ತು ಕೀಲಿ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.