ಮಹಿಳೆಯರ ಮೊದಲ ಟೆಸ್ಟ್ಗೆ ‘ಚಿನ್ನ’ದ ಹೊಳಪು: ಸಿಕ್ಸರ್ಗೆ ಬನಾರಸ್ ಸೀರೆಯ ಗೌರವ
ಬೆಂಗಳೂರು: ‘ಅವತ್ತು ನಾನು ಹೊಡೆದ ಸಿಕ್ಸರ್ಗೆ ಬನಾರಸ್ ಸೀರೆ ಕಾಣಿಕೆಯಾಗಿ ಲಭಿಸಿತ್ತು’–ಭಾರತ ಮಹಿಳಾ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕಿ, ಬೆಂಗಳೂರಿನ ಶಾಂತಾ ರಂಗಸ್ವಾಮಿ ಅವರ ಮನದಾಳ ದಿಂದ ಹೊರಹೊಮ್ಮಿದ ಒಂದು ಸುಂದರ ನೆನಪು ಇದು. ವನಿತೆ ಯರ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಗಳಿಸಿದ್ದ ಆ ಪ್ರಥಮ ಸಿಕ್ಸರ್ಗೆ ಈಗ ‘ಚಿನ್ನದ ಹೊಳಪು’ ತುಂಬಿದೆ.1976ರ ಅ. 3

ಬೆಂಗಳೂರು: ‘ಅವತ್ತು ನಾನು ಹೊಡೆದ ಸಿಕ್ಸರ್ಗೆ ಬನಾರಸ್ ಸೀರೆ ಕಾಣಿಕೆಯಾಗಿ ಲಭಿಸಿತ್ತು’–ಭಾರತ ಮಹಿಳಾ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕಿ, ಬೆಂಗಳೂರಿನ ಶಾಂತಾ ರಂಗಸ್ವಾಮಿ ಅವರ ಮನದಾಳ ದಿಂದ ಹೊರಹೊಮ್ಮಿದ ಒಂದು ಸುಂದರ ನೆನಪು ಇದು. ವನಿತೆ ಯರ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಗಳಿಸಿದ್ದ ಆ ಪ್ರಥಮ ಸಿಕ್ಸರ್ಗೆ ಈಗ ‘ಚಿನ್ನದ ಹೊಳಪು’ ತುಂಬಿದೆ.1976ರ ಅ. 31 ರಿಂದ ನವೆಂಬರ್ 2ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣ (ಆಗಿನ್ನೂ ಕೆಎಸ್ಸಿಎ ಮೈದಾನ)ದಲ್ಲಿ ಮೊದಲ ಮಹಿಳಾ ಟೆಸ್ಟ್ ಪಂದ್ಯ ನಡೆದಿತ್ತು. ಶಾಂತಾ ರಂಗಸ್ವಾಮಿ ಅವರು ಭಾರತ ತಂಡದ ನಾಯಕಿಯಾಗಿದ್ದರು. ಲೂಯಿಸ್ ಬ್ರೌನ್ ನಾಯಕತ್ವದ ವೆಸ್ಟ್ ಇಂಡೀಸ್ ಮಹಿಳಾ ತಂಡದ ಎದುರಿನ ಆ ಪಂದ್ಯವು ಡ್ರಾ ಆಗಿತ್ತು. ಅವರು ಅವತ್ತು ಸಿಕ್ಸರ್ ಹೊಡೆದಾಗ ಚೆಂಡು ಹೋಗಿ ಬಿದ್ದ ಗ್ಯಾಲರಿಗೆ ‘ಶಾಂತಾ ರಂಗಸ್ವಾಮಿ’ ಎಂದು ಹೆಸರಿಡಲಾಗಿದೆ. 50 ವರ್ಷಗಳ ಹಿಂದಿನ ಆ ಐತಿಹಾಸಿಕ ಪಂದ್ಯದ ಕುರಿತು ಕನ್ನಡತಿ ಶಾಂತಾ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.‘ಬೆಂಗಳೂರಿನಲ್ಲಿ ನಡೆದ ಪಂದ್ಯವು ಅಧಿಕೃತವಾಗಿ ಮೊದಲ ಟೆಸ್ಟ್ ಆಗಿತ್ತು. ಆದರೆ ನಮ್ಮ ತಂಡವು ಅದಕ್ಕಿಂತ ಮುಂಚೆಯೇ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಕೆಲವು ವಿಚಿತ್ರ ಕಾರಣಗಳಿಗಾಗಿ ಅವುಗಳಿಗೆ ಟೆಸ್ಟ್ ಮಾನ್ಯತೆಯನ್ನು ನೀಡಲಾಗಿಲ್ಲ. ಆಗ ಆಡಿದ್ದು ಪೂರ್ಣ ಸಾಮರ್ಥ್ಯದ ತಂಡವಲ್ಲ ಎಂಬ ಕಾರಣ ನೀಡಲಾಗಿದೆ. ಆದರೆ ನ್ಯೂಜಿಲೆಂಡ್ ಎದುರು 527 ರನ್ ಗಳಿಸಿದ್ದೆ. ಡಯಾನಾ ಎಡುಲ್ಜಿ 20 ವಿಕೆಟ್ ಪಡೆದಿದ್ದರು. ಆಗ ನನಗೆ ಲೂನಾ ಮೊಪೆಡ್ ಕಾಣಿಕೆಯಾಗಿ ಕೊಟ್ಟಿದ್ದರು’ ಎಂದು ಶಾಂತಾ ನೆನಪಿಸಿಕೊಳ್ಳುತ್ತಾರೆ.‘ಬೆಂಗಳೂರು ಟೆಸ್ಟ್ ಆಡುವ ಮುನ್ನ ನಮಗೆ ಅನುಭವ ಚೆನ್ನಾಗಿ ಆಗಿತ್ತು. ಇಲ್ಲಿಗೆ ಬಂದ ವೆಸ್ಟ್ ಇಂಡೀಸ್ ತಂಡದ ಆಟಗಾರ್ತಿಯರು ಹೂ ಈಸ್ ಸಾಮಿ.. ಎಂದು ಎಲ್ಲರನ್ನೂ ಕೇಳುತ್ತಿದ್ದರು. ನನ್ನ ಬ್ಯಾಟಿಂಗ್ ಬಗ್ಗೆ ತಿಳಿದಿದ್ದ ಅವರು ಈ ರೀತಿ ವಿಚಾರಣೆ ನಡೆಸಿದ್ದರು. ಅವರ ಬಾಯಲ್ಲಿ ರಂಗಸ್ವಾಮಿ ಎಂಬುದು ಸಾಮಿ ಆಗಿತ್ತು. ಅವರೆಲ್ಲರೂ ದೈಹಿಕವಾಗಿ ಬಹಳ ಸುದೃಢರಾಗಿದ್ದರು. ಅವರ ಕೆರಿಬಿಯನ್ ಕೇಶಶೈಲಿಯನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಕೂಗಿದ್ದರು. ಆಗ ಚಿನ್ನಸ್ವಾಮಿ ಕ್ರೀಡಾಂಗಣದ ಒಂದು ಭಾಗದ ಗ್ಯಾಲರಿಯ ನವೀಕರಣ ನಡೆಯುತ್ತಿತ್ತು. ಉಳಿದ ಭಾಗದಲ್ಲಿ ಜನರಿಗೆ ಕೂಡಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಟಿಕೆಟ್ ಖರೀದಿಸಿ ಪಂದ್ಯ ನೋಡಿದ್ದರು’ ಎಂದು 72 ವರ್ಷದ ಶಾಂತಾ ನೆನಪಿಸಿಕೊಂಡರು.ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 274 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತವು 99 ಓವರ್ಗಳಲ್ಲಿ 6ಕ್ಕೆ269 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.‘ಅವತ್ತು ನಾನು ಕ್ರೀಸ್ಗೆ ಬಂದಾಗ ನಮ್ಮ ತಂಡವು 3 ವಿಕೆಟ್ಗಳಿಗೆ 120 ರನ್ ಗಳಿಸಿತ್ತು. ಅರ್ಧಶತಕ ಗಳಿಸಿದ್ದ ಶೋಭಾ ಪಂಡಿತ್ ಮತ್ತು ಫೌಜಿಯಾ ಖಲೀಲ್ ಉತ್ತಮ ಆಟದಿಂದ ಸ್ಕೋರ್ ಚೆನ್ನಾಗಿತ್ತು. ಆದ್ದರಿಂದ ನನಗೆ ಬೀಡುಬೀಸಾಗಿ ಆಡುವ ಹುಮ್ಮಸ್ಸು ಹೆಚ್ಚಿತು. ಈಗಿನ ಟಿ20 ಮಾದರಿಯ ಬ್ಯಾಟಿಂಗ್ ಮಾಡಿದೆ. ಕೋಚ್ ಲಾಲಾ ಅಮರನಾಥ್ ಇದರಿಂದ ಅಸಮಾಧಾನಗೊಂಡಿದ್ದರು. ರೇಡಿಯೊ ಕಾಮೆಂಟ್ರಿಯಲ್ಲಿ ಜನರ ಮನರಂಜನೆಗಾಗಿ ಆಡುತ್ತಿದ್ದಾರೆ’ ಎಂದಿದ್ದರು.‘ಪೆಟ್ರೆಸಿಯಾ ವಿಟಕರ್ ಬೌಲಿಂಗ್ನಲ್ಲಿ ಎಸೆತವೊಂದನ್ನು ಫ್ರಂಟ್ಫೂಟ್ ಲಾಫ್ಟ್ ಮಾಡಿದ್ದೆ. ಚೆಂಡು ಮಿಡ್ ವಿಕೆಟ್ ಮತ್ತು ಲಾಂಗ್ ಆನ್ ಎರಡರ ನಡುವೆ ಇದ್ದ ಗ್ಯಾಲರಿಗೆ ಹೋಗಿಬಿತ್ತು. ಅದೇ ದಿನ ಕ್ರೀಡಾಂಗಣದಲ್ಲಿ ಪದ್ಮಾವತಿ ಸೋಷಿಯಲ್ ಕ್ಲಬ್ನವರು ಬನಾರಸ್ ಸೀರೆ ಕೊಟ್ಟು ಸನ್ಮಾನಿಸಿದರು’ ಎಂದು ಸ್ಮರಿಸಿಕೊಂಡರು.‘ಕಲ್ಪನಾ ವೆಂಕಟಾಚಾರ್ ಅವರು ಆ ಪಂದ್ಯದ ಸಂದರ್ಭದಲ್ಲಿ ಸ್ವಯಂಸೇವಾ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಪ್ರೇಕ್ಷಕರಿಗೆ ಸ್ಕೋರ್ಕಾರ್ಡ್ಗಳನ್ನು ಬರೆದು ಒಂದು ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಅದಾಗಿ ಕೆಲವು ಕಾಲದ ನಂತರ ಅವರೂ (ಕಲ್ಪನಾ) ಭಾರತ ತಂಡದಲ್ಲಿ ಆಡಿದರು’ ಎಂದು ನೆನಪಿಸಿಕೊಂಡರು.‘ಅಂದು ನಾವೆಲ್ಲ ಸೇರಿ ಆರಂಭಿಸಿದ ಮಹಿಳಾ ಕ್ರಿಕೆಟ್ ಅಭಿಯಾನ ಇವತ್ತು ಚೆನ್ನಾಗಿ ಬೆಳೆಯುತ್ತಿದೆ. ಇವತ್ತಿನ ವೈಭವಕ್ಕೆ ಅಡಿಪಾಯ ಹಾಕಿದ ಹೆಮ್ಮೆ ನಮಗಿದೆ. ಇವತ್ತು ಆಟಗಾರ್ತಿಯರಿಗೆ ಎಲ್ಲ ರೀತಿಯ ಸೌಲಭ್ಯಗಳು, ಹಣಕಾಸು ಸಿಗುತ್ತಿದೆ. ಅವುಗಳನ್ನು ಬಳಸಿಕೊಂಡು ಬೆಳೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ತಾರೆಯಾಗಿ ಬೆಳೆದರೂ ಸರಳತೆ ಮತ್ತು ಮಾನವೀಯತೆಯನ್ನು ಉಳಿಸಿ ಕೊಳ್ಳುವುದು ಮುಖ್ಯ’ ಎಂದು ಶಾಂತಾ ಯುವಜನರಿಗೆ ಸಲಹೆ ನೀಡುತ್ತಾರೆ.ಅಂದಹಾಗೆ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಕಳೆದ 50 ವರ್ಷಗಳಲ್ಲಿ ಮಹಿಳೆಯರ ಮತ್ತೊಂದು ಟೆಸ್ಟ್ ಪಂದ್ಯ ನಡೆದಿಲ್ಲ. ಆದರೆ ಟಿ20, ಏಕದಿನ ಮತ್ತು ಡಬ್ಲ್ಯುಪಿಎಲ್ ಪಂದ್ಯಗಳು ಆಯೋಜನೆಯಾಗಿವೆ.‘ಬಿಸಿಸಿಐ ಸಮಾರಂಭ ಮಾಡಬೇಕಿತ್ತು’ಭಾರತದಲ್ಲಿ ಮಹಿಳೆಯರ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆದು 50 ವರ್ಷ ತುಂಬಿದ ಸಂದರ್ಭದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಸಮಾರಂಭ ಮಾಡಬೇಕಿತ್ತು. ತಂಡದ ಆಟಗಾರ್ತಿಯರನ್ನು ಕರೆಸಿ ಮಾತನಾಡಲು ಅವಕಾಶ ಕೊಡಬೇಕಿತ್ತು. ಮೊದಲ ಟೆಸ್ಟ್ ತಂಡದ ಸಾಧನೆಯನ್ನು ಗುರುತಿಸುವ ಉತ್ತಮ ಕಾರ್ಯ ಇದಾಗುತ್ತಿತ್ತು ಎಂದು ಮಾಜಿ ಆಟಗಾರ್ತಿ ಡಯನಾ ಎಡುಲ್ಜಿ ಹೇಳಿದ್ದಾರೆ.ಶಾಂತಾ ರಂಗಸ್ವಾಮಿ