ಟಿಡಿಆರ್: ಸಂಪೂರ್ಣ ಡಿಜಿಟಲೀಕರಣ
ಪ್ರಜಾವಾಣಿ ವಾರ್ತೆಬೆಂಗಳೂರು: ರಸ್ತೆಗಳ ವಿಸ್ತರಣೆ ಮತ್ತು ಹೊಸ ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.‘ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರು

ಪ್ರಜಾವಾಣಿ ವಾರ್ತೆಬೆಂಗಳೂರು: ರಸ್ತೆಗಳ ವಿಸ್ತರಣೆ ಮತ್ತು ಹೊಸ ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.‘ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಗಳ ವಿಸ್ತರಣೆ ಮತ್ತು ಹೊಸ ರಸ್ತೆಗಳ ನಿರ್ಮಾಣವು ಅತ್ಯಂತ ತುರ್ತು ಮತ್ತು ಅನಿವಾರ್ಯ ಹೆಜ್ಜೆಯಾಗಿದೆ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸುವ ಟಿಡಿಆರ್ ವ್ಯವಸ್ಥೆಯು ಸಂಪೂರ್ಣವಾಗಿ ಕಡತಗಳ ಮೂಲಕ ನಡೆಯುತ್ತಿದ್ದರಿಂದ, ಸರಿಯಾದ ಟ್ರ್ಯಾಕಿಂಗ್ ಮತ್ತು ಪಾರದರ್ಶಕ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಟಿಡಿಆರ್ ವ್ಯವಸ್ಥೆಯ ಮೇಲೆ ಅಪನಂಬಿಕೆ ಹಾಗೂ ಅತೃಪ್ತಿ ಇತ್ತು’ ಎಂದರು.ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಹಾಗೂ ಭೂಮಾಲೀಕರು ಹಾಗೂ ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಪ್ರಸ್ತುತ ಮಹತ್ವದ ಹೆಜ್ಜೆ ಇಡಬೇಕಾಗಿದೆ. ಅದರಂತೆ, ರಸ್ತೆ ಮತ್ತು ಆಸ್ತಿಯ ವಿವರಗಳ ಪ್ರಾಥಮಿಕ ಹಂತದಿಂದ ಹಿಡಿದು, ಎಲ್ಲಾ ಹಂತಗಳ ಪರಿಶೀಲನೆ ಮುಗಿದು ಅಂತಿಮವಾಗಿ ಟಿಡಿಆರ್ ಪ್ರಮಾಣಪತ್ರ ವಿತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಅಗತ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಟಿಡಿಆರ್ ಮಂಜೂರಾತಿ ಮಾತ್ರವಲ್ಲದೆ, ಅದರ ವಹಿವಾಟು (ಖರೀದಿ-ಮಾರಾಟ) ಮತ್ತು ಅಂತಿಮ ಬಳಕೆಯ ಪ್ರಕ್ರಿಯೆಯನ್ನೂ ಡಿಜಿಟಲ್ ವೇದಿಕೆಗೆ ತರಬೇಕು. ಈ ಹೈಟೆಕ್ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ನಾಗರಿಕರು ತಮ್ಮ ಕಡತಗಳು ಯಾವ ಹಂತದಲ್ಲಿವೆ ಎಂಬುದನ್ನು ಆನ್ಲೈನ್ ಮೂಲಕವೇ ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಜೊತೆಗೆ ಮಧ್ಯವರ್ತಿಗಳ ಹಸ್ತಕ್ಷೇಪ, ಅನಗತ್ಯ ವಿಳಂಬ ಮತ್ತು ಸಾರ್ವಜನಿಕರಿಗೆ ಆಗುವ ಕಿರುಕುಳಕ್ಕೆ ಮುಕ್ತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.‘ಟಿ.ಡಿ.ಆರ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಮರಳಿ ವಿಶ್ವಾಸ ಮೂಡಿಸಲು, ಈ ವ್ಯವಸ್ಥೆಯನ್ನು ಅತ್ಯಂತ ಕಾರ್ಯಸಾಧ್ಯ ಹಾಗೂ ಜನಸ್ನೇಹಿಯಾಗಿಸಲು ಅನುಕೂಲವಾಗಲಿದೆ. ಪಾರದರ್ಶಕ ಮತ್ತು ತ್ವರಿತವಾಗಿ ಆನ್ಲೈನ್ ವ್ಯವಸ್ಥೆಯ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ನಗರದಲ್ಲಿ ಸುಗಮ ಸಂಚಾರಕ್ಕೆ ಬೇಕಾದ ಬೃಹತ್ ಮೂಲಸೌಕರ್ಯಗಳನ್ನು ಸೃಷ್ಟಿಸಲು ಇದು ದಾರಿ ಮಾಡಿಕೊಡಲಿದೆ’ ಎಂದರು.