ಕರುನಾಡೋತ್ಸವ | ಡಾ.ಬಿ.ಎಲ್.ವೇಣು ಸರ್ಕಲ್; ಕನ್ನಡಾಭಿಮಾನದ ತಾಣ
ಹಿರಿಯ ಸಾಹಿತಿ, ಕಾದಂಬರಿಕಾರ ಬಿ.ಎಲ್.ವೇಣು ಅವರು ಚಿತ್ರದುರ್ಗದಲ್ಲಿ ವಿಹಾರ ಮಾಡುತ್ತಿದ್ದ ಸ್ಥಳ ‘ಡಾ.ಬಿ.ಎಲ್.ವೇಣು’ ವೃತ್ತವಾಗಿ ಪ್ರಸಿದ್ಧಿ ಪಡೆದಿದೆ. ಚಿತ್ರದುರ್ಗದ ಮುನಿಸಿಪಲ್ ಕಾಲೊನಿಯ ಮನೆಯಿಂದ ಗೆಳೆಯರ ಜೊತೆ ಹೊರಡುತ್ತಿದ್ದ ಅವರು ತುರುವನೂರು ರಸ್ತೆಯ ಮೂಲಕ ಗೋನೂರು ಸರ್ಕಲ್ವರೆಗೂ ವಾಕಿಂಗ್ ಮಾಡುತ್ತಿದ್ದರು. ಹಸಿರು ಪರಿಸರದಲ್ಲಿ ಓಡಾಡಿ ವಾಪಸ್ ಬರುತ್ತ

ಹಿರಿಯ ಸಾಹಿತಿ, ಕಾದಂಬರಿಕಾರ ಬಿ.ಎಲ್.ವೇಣು ಅವರು ಚಿತ್ರದುರ್ಗದಲ್ಲಿ ವಿಹಾರ ಮಾಡುತ್ತಿದ್ದ ಸ್ಥಳ ‘ಡಾ.ಬಿ.ಎಲ್.ವೇಣು’ ವೃತ್ತವಾಗಿ ಪ್ರಸಿದ್ಧಿ ಪಡೆದಿದೆ. ಚಿತ್ರದುರ್ಗದ ಮುನಿಸಿಪಲ್ ಕಾಲೊನಿಯ ಮನೆಯಿಂದ ಗೆಳೆಯರ ಜೊತೆ ಹೊರಡುತ್ತಿದ್ದ ಅವರು ತುರುವನೂರು ರಸ್ತೆಯ ಮೂಲಕ ಗೋನೂರು ಸರ್ಕಲ್ವರೆಗೂ ವಾಕಿಂಗ್ ಮಾಡುತ್ತಿದ್ದರು. ಹಸಿರು ಪರಿಸರದಲ್ಲಿ ಓಡಾಡಿ ವಾಪಸ್ ಬರುತ್ತಿದ್ದರು. ಹಳೇ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕೆಳಗಿರುವ ಈ ಜಾಗ ಈಗ ಡಾ.ಬಿ.ಎಲ್.ವೇಣು ಸರ್ಕಲ್ ಎಂಬ ಹೆಸರು ಪಡೆದಿದೆ. ಅವರ ಅಭಿಮಾನಿಗಳ, ಸಾರ್ವಜನಿಕರು ಒತ್ತಾಯದ ಮೇರೆಗೆ ನಗರಸಭೆ ಆ ಸ್ಥಳಕ್ಕೆ ನಾಮಕರಣ ಮಾಡಿ ಆದೇಶ ಹೊರಡಿಸಿದೆ. 2014ರಲ್ಲಿ ಬಿ.ಕಾಂತರಾಜ್ ಅವರು ಅಧ್ಯಕ್ಷರಾಗಿದ್ದಾಗ ನಾಮಕರಣ ಮಾಡಲಾಯಿತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಆಂಜನೇಯ ಅವರ ಸಮ್ಮುಖದಲ್ಲಿ ವೃತ್ತವನ್ನು ಉದ್ಘಾಟನೆ ಮಾಡಲಾಯಿತು.81 ವರ್ಷ ವಯಸ್ಸಿನಲ್ಲೂ ಬರವಣಿಗೆಯಲ್ಲಿ ತೊಡಗಿರುವ ಬಿ.ಎಲ್.ವೇಣು ಅವರು ವಯಸ್ಸಿನ ಕಾರಣಕ್ಕೆ ಈಗ ಅವರು ವಾಕಿಂಗ್ಗೆ ತೆರಳುತ್ತಿಲ್ಲ. ಆದರೆ ಅವರು ವಾಕ್ ಮಾಡುತ್ತಿದ್ದ ಜಾಗ ಈಗ ಆಕರ್ಷಣೆಯ ತಾಣವಾಗಿದೆ. ಹೊರಗಿನಿಂದ ಬಂದವರು ಈ ತಾಣವನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ. ಅವರ ಓದುಗರು, ಅಭಿಮಾನಿಗಳು, ಅವರ ಚಲನಚಿತ್ರಗಳನ್ನು ನೋಡಿದವರು ಆ ಜಾಗವನ್ನು ಕಂಡು ಆನಂದ ಅನುಭವಿಸುತ್ತಾರೆ. ಬಿ.ಎಲ್.ವೇಣು ಸರ್ಕಲ್ ಸುತ್ತಲೂ ಪ್ರಮುಖ ಹೋಟೆಲ್ಗಳಿದ್ದು ಪ್ರವಾಸಿಗರು ಅಲ್ಲಿ ತಂಗುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ವೇಣು ಸರ್ಕಲ್ನ ಬರಹ ಕಂಡಾಗ ಸಂತಸ ವ್ಯಕ್ತಪಡಿಸುತ್ತಾರೆ. ‘ನನ್ನ ಗಮನಕ್ಕೆ ಬಾರದ ರೀತಿಯಲ್ಲಿ ನಗರಸಭೆಯಿಂದ ಸರ್ಕಲ್ ಮಾಡಿದ್ದರು. ನಾನು ಬದುಕಿದ್ದಾಗಲೇ ಸರ್ಕಲ್ ಮಾಡಿದ್ದಾರೆ ಎಂಬ ಸಂತಸವೂ ಇದೆ. ಸಮಾನ್ಯವಾಗಿ ತೀರಿಹೋದ ನಂತರ ಗೌರವ ಕೊಡುತ್ತಾರೆ. ಆದರೆ ಅದನ್ನು ನೋಡಲು ಅವರು ಬದುಕೇ ಇರುವುದಿಲ್ಲ. ಬದುಕಿದ್ದಾಗಲೇ ಮಾಡಿದ್ದು ಉತ್ತಮ ಕಾರ್ಯವಾಗಿದೆ’ ಎಂದು ಡಾ.ಬಿ.ಎಲ್.ವೇಣು ಅವರು ಸಂತಸ ವ್ಯಕ್ತಪಡಿಸಿದರು.ಅಪರೂಪದ ಕಾದಂಬರಿಕಾರ: ಕನ್ನಡ ಸಾಹಿತ್ಯ ಲೋಕ, ಚಲನಚಿತ್ರ ರಂಗದಲ್ಲಿ ಡಾ. ಬಿ.ಎಲ್.ವೇಣು ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ. ಐತಿಹಾಸಿಕ ಕಾದಂಬರಿಗಳ ಮೂಲಕ ವೇಣು ಅವರು ಜನಮಾನಸದಕ್ಕೆ ಹತ್ತಿರವಾಗಿದ್ದಾರೆ. ಚಲನಚಿತ್ರ ರಂಗದ ಅತ್ಯಂತ ಶ್ರೇಷ್ಠ ಕಥೆಗಾರರು, ಚಿತ್ರಕಥೆ-ಸಂಭಾಷಣೆಕಾರರಾಗಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಮಣ್ಣಿನ ಗುಣವನ್ನು ಸದಾ ಜೊತೆಯಲ್ಲೇ ಇಟ್ಟುಕೊಂಡಿರುವ ಅಪರೂಪದ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಐದು ದಶಕಗಳಿಂದ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ವಿವಿಗಳಲ್ಲೂ ಅವರ ಬಹರಗಳು ಪಠ್ಯವಾಗಿರುವುದು ವಿಶೇಷ. ಈಗಲೂ ಬರವಣಿಗೆ ಮುಂದುವರಿಸುತ್ತಿರುವ ಅವರು ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.ವೃತ್ತಿರಂಗಭೂಮಿ ನಟರಾಗಿದ್ದ ಲಕ್ಷ್ಮಯ್ಯ– ಹಾರ್ಮೋನಿಯಂ ವಾದಕಿ ಸುಶೀಲಮ್ಮ ದಂಪತಿಯ ಪುತ್ರರಾಗಿ ಬಿ.ಎಲ್.ವೇಣು ಅವರು 1945, ಮೇ 27ರಂದು ಜನಿಸಿದರು. ಕಲೆಯ ಒಡೆನಾಟ ಹುಟ್ಟಿನಿಂತಲೇ ಇತ್ತು. ಪದವಿ ಪೂರೈಸಿದ ನಂತರ ಅವರು ಕಲ್ಯಾಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ತಮ್ಮ ಬರವಣಿಗೆ ಕೈಂಕರ್ಯವನ್ನೂ ಮುಂದುವರಿಸಿದರು.'ಗಂಡುಗಲಿ ಮದಕರಿ ನಾಯಕ', 'ಚಿತ್ರದುರ್ಗದ ವೀರ ಪಾಳೇಗಾರರು', 'ರಾಜಾ ಸುರಪುರದ ವೆಂಕಟಪ್ಪನಾಯಕ' ಮುಂತಾದ ಐತಿಹಾಸಿಕ ಕಾದಂಬರಿಗಳು ಸಾಹಿತ್ಯ ಲೋಕದಲ್ಲಿ ಮೈಲಿಗಲ್ಲುಗಳಾಗಿವೆ. 'ಬಣ್ಣಗಳು', 'ದೊಡ್ಡಮನೆ ಎಸ್ಟೇಟ್', 'ಪ್ರೇಮ ಮದುವೆ ಮತ್ತು ಶೀಲ', 'ನೀಲವರ್ಣ', 'ದಲಿತಾವತಾರ' ಮುಂತಾದ ಕಥಾಸಂಕಲನಗಳನ್ನು ನೀಡಿದ್ದಾರೆ. ಕಾದಂಬರಿಗಳು, ನಾಟಕಗಳು, ಅಂಕಣ ಬರಹಗಳ ಮೂಲಕ ಸಾಹಿತ್ಯಪ್ರೇಮಿಗಳ ಮನಸ್ಸಿನಲ್ಲುಳಿದಿದ್ದಾರೆ.ಅವರ ಅಕ್ಷರಗಳು ಬೆಳ್ಳಿತೆರೆಯ ಮೇಲೂ ಅದ್ಭುತ ಯಶಸ್ಸು ಕಂಡವು. ಕನ್ನಡದ ಖ್ಯಾತ ನಟರು ಮತ್ತು ನಿರ್ದೇಶಕರ ಚಿತ್ರಗಳಿಗೆ ಇವರು ಕಥೆ, ಚಿತ್ರಕಥೆ ಹಾಗೂ ಮೊನಚಾದ ಸಂಭಾಷಣೆಗಳನ್ನು ಬರೆದಿದ್ದಾರೆ. ಡಾ. ರಾಜ್ಕುಮಾರ್ ಅಭಿನಯದ 'ದೇವ', ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ 'ಒಲವಿನ ಉಡುಗೂರೆ', ಹಿರಿಯ ನಟ ವಿಷ್ಣುವರ್ಧನ್ ಅಭಿನಯದ 'ವೀರಪ್ಪನಾಯ್ಕ', ವಿಜಯ್ ರಾಘವೇಂದ್ರ ಅವರ 'ಕಲ್ಲರಳಿ ಹೂವಾಗಿ' ಮುಂತಾದ ಚಿತ್ರಗಳಿಗೆ ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ.