‘ಕೆಎಟಿ'ಯಲ್ಲಿ ಕನ್ನಡಕ್ಕಿರಲಿ ಅಗ್ರತಾಂಬೂಲ: ಹೈಕೋರ್ಟ್
ಬೆಂಗಳೂರು: ‘ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಕನ್ನಡದಲ್ಲಿ ಸಲ್ಲಿಸಿದ್ದ ಅರ್ಜಿಯೊಂದನ್ನು ತಿರಸ್ಕರಿಸಿದ್ದ ಕೆಎಟಿ ಆದೇಶವನ್ನು ರದ್ದುಪಡಿಸಿದೆ.‘ಪ್ರಕರಣದ ಕಡತವನ್ನು ಕನ್ನಡದಲ್ಲಿ ಸಲ್ಲಿಸಲು ಮತ್ತು ಕನ್ನಡದಲ್ಲೇ ಮಾತನಾಡಲು ನನಗೆ ಅವಕಾಶ ನೀಡುವಂತೆ ‘ಕೆಎಟಿ’ಗೆ ನಿ

ಬೆಂಗಳೂರು: ‘ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಕನ್ನಡದಲ್ಲಿ ಸಲ್ಲಿಸಿದ್ದ ಅರ್ಜಿಯೊಂದನ್ನು ತಿರಸ್ಕರಿಸಿದ್ದ ಕೆಎಟಿ ಆದೇಶವನ್ನು ರದ್ದುಪಡಿಸಿದೆ.‘ಪ್ರಕರಣದ ಕಡತವನ್ನು ಕನ್ನಡದಲ್ಲಿ ಸಲ್ಲಿಸಲು ಮತ್ತು ಕನ್ನಡದಲ್ಲೇ ಮಾತನಾಡಲು ನನಗೆ ಅವಕಾಶ ನೀಡುವಂತೆ ‘ಕೆಎಟಿ’ಗೆ ನಿರ್ದೆಶಿಸಬೇಕು’ ಎಂದು ಕೋರಿ ಕಲಬುರಗಿಯ ಛಾಯಾಗ್ರಾಹಕ ಸೂರ್ಯಕಾಂತ್ ಬಿನ್ ರಾಮಚಂದ್ರ ಕಟ್ಟೀಮನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಮತ್ತು ನ್ಯಾಯಮೂರ್ತಿ ಆರ್.ಸುಬ್ರಹ್ಮಣ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ (ಕಲಬುರಗಿ) ಪುರಸ್ಕರಿಸಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶಂಕರ ಕಟ್ಟೀಮನಿ, ‘ಕೆಎಟಿ ನಿಯಮ–1986ರ ನಿಯಮ 3ರ ಪ್ರಕಾರ ಕನ್ನಡದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ನ್ಯಾಯಮಂಡಳಿ ತನ್ನ ವಿವೇಚನೆಗೆ ಅನುಗುಣವಾಗಿ ವಿಚಾರಣೆಯಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಬಹುದು. ಅಂತಿಮ ಆದೇಶ ಮಾತ್ರ ಇಂಗ್ಲಿಷ್ನಲ್ಲಿ ಇರಬೇಕು’ ಎಂಬ ವಾದ ಮಂಡಿಸಿದ್ದರು. ಪ್ರತಿಯಾಗಿ, ರಾಜ್ಯ ಸರ್ಕಾರದ ಪರ ವಕೀಲರು ‘ಕೆಎಟಿ’ಗೆ ಸಲ್ಲಿಸಲಾಗುವ ಅರ್ಜಿಗಳು ಇಂಗ್ಲಿಷ್ ಭಾಷೆಯಲ್ಲೇ ಇರಬೇಕು’ ಎಂದು ಪ್ರತಿಪಾದಿಸಿದ್ದರು.ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈ ದಾವೆಯಲ್ಲಿ ನ್ಯಾಯಮಂಡಳಿಯು, 1986ರ ನಿಯಮಗಳ ಜೊತೆಗೆ 1990ರ ನಿಯಮಾವಳಿಯನ್ನೂ ಪರಿಗಣಿಸಬೇಕಿತ್ತು. ಆದರೆ, ಈ ಮೂಲಭೂತ ಅಂಶವನ್ನೇ ಸರಿಯಾಗಿ ಪರಿಗಣಿಸಿಲ್ಲ ಮತ್ತು ವಿವಾದಿತ ಆದೇಶ ಹೊರಡಿಸುವಲ್ಲಿ ತಪ್ಪು ಎಸಗಿದೆ’ ಎಂದು ವಿವರಿಸಿದೆ.‘ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನಿಯಮಾವಳಿ–1990ರ ನಿಯಮ 9(iii)ರ ಪ್ರಕಾರ, ನ್ಯಾಯಮಂಡಳಿಗೆ ಸಲ್ಲಿಸಲಾಗುವ ಕೈಫಿಯತ್ತು (ಸಮರ್ಥನಾ ವಾದ), ಪ್ರಮಾಣ ಪತ್ರ, ಜ್ಞಾಪನಾ ಪತ್ರ (ಮೆಮೊರ್ಯಾಂಡಂ) ಮತ್ತು ದಾಖಲೆಗಳ ಪಟ್ಟಿಯನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಸಲ್ಲಿಸಬಹುದು. 1990ರ ನಿಯಮಗಳ ನಿಯಮ 9(iii) ಮತ್ತು 1986ರ ನಿಯಮಗಳ ಪ್ರಕಾರ ಕಕ್ಷಿದಾರರು ಕನ್ನಡದಲ್ಲಿ ಅರ್ಜಿ ಸಲ್ಲಿಸಬಹುದು. ಅಂತಿಮ ಆದೇಶವು ಇಂಗ್ಲಿಷ್ನಲ್ಲಿರಬೇಕು ಎಂಬ ಷರತ್ತಿಗೆ ಒಳಪಟ್ಟು, ವಿಚಾರಣೆಯಲ್ಲಿ ಕನ್ನಡವನ್ನು ಬಳಸಲು ಅನುಮತಿಸಬಹುದು’ ಎಂದು ಸ್ಪಷ್ಟಪಡಿಸಿದೆ.‘ಪ್ರಕರಣಗಳ ವಿಲೇವಾರಿ ಮತ್ತು ನ್ಯಾಯಮಂಡಳಿಯಲ್ಲಿ ದೈನಂದಿನ ಆಡಳಿತವನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಕೆಎಟಿ ಗೆ 1990ರ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರ ಅನುಸಾರ ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಯಾವ ತಕರಾರು ಅಥವಾ ನಿರ್ಬಂಧವಿಲ್ಲ’ ಎಂದು ವಿಶದಪಡಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಟಿ 2025ರ ಜೂನ್ 5ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದೆ. ಮೂಲ ಅರ್ಜಿಯನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶಿಸಿದೆ.ಪ್ರಕರಣ: ಅರ್ಜಿದಾರರು ಕೆಎಟಿ ಗೆ ಕನ್ನಡದಲ್ಲಿ ಮೂಲ ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ನಿಯಮಗಳ ಆಚರಣೆ) ನಿಯಮಗಳು–1986ರ ನಿಯಮ 3 ಅನ್ನು ಉಲ್ಲೇಖಿಸಿ ಅರ್ಜಿಯನ್ನು ಇಂಗ್ಲಿಷ್ನಲ್ಲಿ ಸಲ್ಲಿಸುವಂತೆ ಸೂಚಿಸಿ ಅದನ್ನು ಹಿಂದಿರುಗಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.