ಮಾಲಿನ್ಯ ಮುಕ್ತ ದೀಪಾವಳಿ | ದಿಯಾ ಮಿರ್ಜಾ ವಿಡಿಯೊಗೆ ಕೊಕ್: BMCಗೆ ಕೋರ್ಟ್ ತರಾಟೆ
ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನಡೆಸಿದ ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಅಭಿಯಾನಕ್ಕಾಗಿ ನಟಿ ದಿಯಾ ಮಿರ್ಜಾ ಅವರು ಮಾಡಿದ್ದ ವಿಡಿಯೊ ಕುರಿತು ಉಂಟಾದ ವಿವಾದದ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ದಿಯಾ ಮಿರ್ಜಾ ವಿಡಿಯೊ ಕುರಿತು ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸಾಟಮ್ ನೀಡಿದ್ದ ಹೇಳಿಕೆಗಳ ಬಗ್ಗೆ ಹೈಕೋರ್ಟ್ ನ್ಯ

ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನಡೆಸಿದ ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಅಭಿಯಾನಕ್ಕಾಗಿ ನಟಿ ದಿಯಾ ಮಿರ್ಜಾ ಅವರು ಮಾಡಿದ್ದ ವಿಡಿಯೊ ಕುರಿತು ಉಂಟಾದ ವಿವಾದದ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ದಿಯಾ ಮಿರ್ಜಾ ವಿಡಿಯೊ ಕುರಿತು ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸಾಟಮ್ ನೀಡಿದ್ದ ಹೇಳಿಕೆಗಳ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ಪೀಠವು ಬೇಸರ ವ್ಯಕ್ತಪಡಿಸಿದೆ. ಜೊತೆಗೆ ಅಳಿಸಿಹಾಕಲಾದ ವಿಡಿಯೊವನ್ನು ಮರುಸ್ಥಾಪಿಸುವಂತೆ ಬಿಎಂಸಿಗೆ ತಾಕೀತು ಮಾಡಿದೆ.‘ಪರಿಸರ ಸಂರಕ್ಷಣೆ, ವಾಯು ಮತ್ತು ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ತಯಾರಿಸಿದ ವಿಡಿಯೊ ಕುರಿತು ಅನಗತ್ಯವಾಗಿ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸಿದ್ದು ಅತ್ಯಂತ ದುರದೃಷ್ಟಕರ’ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳನ್ನು ಆಯ್ಕೆ ಮಾಡುವಲ್ಲಿ ಬಿಎಂಸಿ ಆಯುಕ್ತರ ನಿರ್ಧಾರವು ಸರಿಯಾಗಿದೆ. ಆದರೆ, ಈ ವಿಷಯದಲ್ಲಿ ಅನಗತ್ಯವಾದ ಇತರ ವಿವಾದಗಳನ್ನು ಎಳೆದು ತಂದಿರುವುದು ದುರದೃಷ್ಟಕರ ಎಂದೂ ನ್ಯಾಯಪೀಠ ಹೇಳಿದೆ.‘ಸಮಾಜದಲ್ಲಿ ಜಾತ್ಯತೀತ ಮನೋಭಾವ ಇರಬೇಕು. ಪ್ರತಿಯೊಬ್ಬರೂ ಇದನ್ನು ಪೋಷಿಸಬೇಕೆಂದು ಸಂವಿಧಾನವು ನಿರೀಕ್ಷಿಸುತ್ತದೆ. ವಿಡಿಯೊವನ್ನು ಅಳಿಸಿಹಾಕಿದ್ದರೆ, ಅದನ್ನು ಮತ್ತೆ ಅಪ್ಲೋಡ್ ಮಾಡುವುದು ಸೂಕ್ತ’ ಎಂದು ಕೋರ್ಟ್ ತಿಳಿಸಿದೆ.ಅಮೀತ್ ಸಾಟಮ್ ಅವರು ವಿಡಿಯೊದಲ್ಲಿ ಮಿರ್ಜಾ ಅವರ ಇರುವಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಹಬ್ಬವನ್ನು ಹೇಗೆ ಆಚರಿಸ ಬೇಕೆಂದು ದಿಯಾ ಮಿರ್ಜಾ ಅವರಿಂದ ಕಲಿಯಬೇಕಿಲ್ಲ. ನಮ್ಮ ಸಂಪ್ರದಾಯಗಳು ಸಂಸ್ಕೃತಿಯೊಂದಿಗೆ ಆಳವಾಗಿ ಬೇರೂರಿವೆ’ ಎಂದು ಅಮೀತ್ ಹೇಳಿದ್ದರು. ಇದರ ಬೆನ್ನಲ್ಲೇ ಬಿಎಂಸಿ ವಿಡಿಯೊವನ್ನು ಡಿಲೀಟ್ ಮಾಡಿತ್ತು.