ರೈತರ ಜಮೀನು ಹರಾಜು ಖಂಡಿಸಿ ಪ್ರತಿಭಟನೆ: ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ
ತುರುವೇಕೆರೆ: ಬ್ಯಾಂಕ್ ಹರಾಜು ಮಾಡಿದ ರೈತರ ಭೂಮಿ ವಾಪಸ್ ನೀಡಬೇಕು. ಕೂಡಲೇ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೈತ ಸಂಘ, ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ಖಾಸಗಿ ಬ್ಯಾಂಕ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.‘ತಾಲ್ಲೂಕಿನ ತಾಳಕೆರೆ ಗ್ರಾಮದ ಈರಯ್ಯನವರ ಮಕ್ಕಳು ಹಾಗೂ ಮಂಗಳಮ್ಮ ಖಾಸಗಿ ಬ್ಯಾಂಕ್ನಿಂದ 2005ರಲ್ಲಿ ಟ್ರ್ಯಾಕ್ಟರ್ ಖರೀದಿಗೆ

ತುರುವೇಕೆರೆ: ಬ್ಯಾಂಕ್ ಹರಾಜು ಮಾಡಿದ ರೈತರ ಭೂಮಿ ವಾಪಸ್ ನೀಡಬೇಕು. ಕೂಡಲೇ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ರೈತ ಸಂಘ, ಪ್ರಗತಿಪರ ಸಂಘಟನೆಗಳಿಂದ ಪಟ್ಟಣದ ಖಾಸಗಿ ಬ್ಯಾಂಕ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.‘ತಾಲ್ಲೂಕಿನ ತಾಳಕೆರೆ ಗ್ರಾಮದ ಈರಯ್ಯನವರ ಮಕ್ಕಳು ಹಾಗೂ ಮಂಗಳಮ್ಮ ಖಾಸಗಿ ಬ್ಯಾಂಕ್ನಿಂದ 2005ರಲ್ಲಿ ಟ್ರ್ಯಾಕ್ಟರ್ ಖರೀದಿಗೆ ₹4.75 ಲಕ್ಷ, ಅಭಿವೃದ್ಧಿ ಸಾಲವಾಗಿ ₹80 ಸಾವಿರ ಪಡೆದಿದ್ದರು. ಸಾಲ ತೀರಿಸಲು ರೈತರಿಗೆ ನೋಟಿಸ್ ನೀಡಿಲ್ಲ. ಏಕಾಏಕಿ ಈ ಹರಾಜು ಮೂಲಕ ಕಾರ್ಪೊರೇಟ್ದಾರರಿಗೆ ಜಮೀನು ಮಾರಾಟ ಮಾಡಲಾಗಿದೆ’ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಬಿಡ್ದಾರರು ಹಾಗೂ ಬ್ಯಾಂಕ್ ಅಧಿಕಾರಿಗಳು ಲಪಟಾಯಿಸಲು ಹುನ್ನಾರ ನಡೆಸುತ್ತಿದ್ದಾರೆ. ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದರು. ರೈತ ಸಂಘದ ಪದಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳ ಜತೆಗೆ ಚರ್ಚಿಸಿದ್ದರು. ₹9 ಲಕ್ಷ ಸಾಲ ಕಟ್ಟುವಂತೆ ಸೂಚಿಸಲಾಗಿತ್ತು. ಎರಡು ವರ್ಷ ಕಳೆದರೂ ರೈತರಿಗೆ ಜಮೀನು ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಲಾಪುರ ನಾಗೇಂದ್ರ, ‘ರಾಜ್ಯದಲ್ಲಿ ಬರ ಆವರಿಸಿದೆ. ಇಂತಹ ಸಮಯದಲ್ಲಿ ರೈತರಿಗೆ ನೆರವಾಗುವ ಬದಲು, ಅವರ ಜಮೀನು ಕಿತ್ತುಕೊಳ್ಳಲಾಗುತ್ತಿದೆ. ಬ್ಯಾಂಕ್ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.ಪ್ರಭಾರ ಉಪವಿಭಾಗಾಧಿಕಾರಿ ಮೋಹನ್ ಕುಮಾರ್, ತಹಶೀಲ್ದಾರ್ ಎನ್.ಎ.ಕುಂಞ ಅಹ್ಮದ್, ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಜತೆಗೆ ಚರ್ಚಿಸಿದರು.‘15 ದಿನದ ಒಳಗೆ ಹರಾಜು ಮಾಡಿರುವ ಭೂಮಿ ವಾಪಸ್ ನೀಡಲಾಗುವುದು’ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮುಖಂಡರಾದ ರವಿಕಿರಣ್ ಪೂರ್ಣಚ್ಚಿ, ಶಂಕರಪ್ಪ, ಹಾಸನ್ ರಘು, ಲೋಕೇಶ್, ನಟರಾಜು, ಗೋವಿಂದರಾಜು ಭಾಗವಹಿಸಿದ್ದರು.