ನೀವು ಲಕ್ಷವಾದರೆ ನಾವು ಕೋಟಿ..! ಗಡಿ ಕನ್ನಡಿಗರ ಭಾವನೆ ವಿಶ್ವಕ್ಕೆ
ಬೆಳಗಾವಿ: ನಗರದಲ್ಲಿ ಭಾನುವಾರ ನಡೆದ ಅದ್ಧೂರಿ ರಾಜ್ಯೋತ್ಸವ, ಗಡಿ ಕನ್ನಡಿಗರ ಭಾವನೆಗಳನ್ನು ವಿಶ್ವಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾತು. ಎಂಇಎಸ್ ಪುಂಡರು ನೀಡಿದ ಕಿರುಕುಳಕ್ಕೂ ಕನ್ನಡ ಕುವರರು ಸೌಜನ್ಯದ ಮೂಲಕವೇ ಠಕ್ಕರ್ ಕೊಟ್ಟರು. ಪಾಲಿಕೆಯಿಂದ ಅನುಮತಿ ಪಡೆದ 80ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೂ ಸೇರಿದಂತೆ 150ಕ್ಕೂ ಹೆಚ್ಚು ರೂಪಕಗಳು ಒಂದಿಲ್ಲೊಂದು ಸಂದೇಶ ನೀಡಿದವು.

ಬೆಳಗಾವಿ: ನಗರದಲ್ಲಿ ಭಾನುವಾರ ನಡೆದ ಅದ್ಧೂರಿ ರಾಜ್ಯೋತ್ಸವ, ಗಡಿ ಕನ್ನಡಿಗರ ಭಾವನೆಗಳನ್ನು ವಿಶ್ವಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾತು. ಎಂಇಎಸ್ ಪುಂಡರು ನೀಡಿದ ಕಿರುಕುಳಕ್ಕೂ ಕನ್ನಡ ಕುವರರು ಸೌಜನ್ಯದ ಮೂಲಕವೇ ಠಕ್ಕರ್ ಕೊಟ್ಟರು. ಪಾಲಿಕೆಯಿಂದ ಅನುಮತಿ ಪಡೆದ 80ಕ್ಕೂ ಹೆಚ್ಚು ಸ್ತಬ್ಧಚಿತ್ರಗಳೂ ಸೇರಿದಂತೆ 150ಕ್ಕೂ ಹೆಚ್ಚು ರೂಪಕಗಳು ಒಂದಿಲ್ಲೊಂದು ಸಂದೇಶ ನೀಡಿದವು.ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಮಹಾನ್ ಚಕ್ರವರ್ತಿ, ದಕ್ಷಿಣಾ ಪಥೇಶ್ವರನಾದ ಇಮ್ಮಡಿ ಪುಲಿಕೇಶಿ ಅವರ ಭಾವಚಿತ್ರ ಒಳಗೊಂಡ ಸ್ತಬ್ಧಚಿತ್ರ. ವೈರಿಗಳನ್ನು ವೀರಾವೇಶದಿಂದ ನೋಡುವಂತೆ ಇದ್ದ ಚಕ್ರವರ್ತಿಯ ಭಾವಚಿತ್ರದ ಕೆಳಗೆ ಬರೆದ ಸಾಲುಗಳು ಇನ್ನೂ ಸೊಗಸಾಗಿದ್ದವು.‘ಏಕ್ ಮರಾಠಾ ಲಾಕ್ ಮರಾಠಾ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಘೋಷಣೆ ಕೂಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರ ಸಂಖ್ಯೆ ಬೆರಳೆಣಿಕೆಗೆ ಬಂದಿದ್ದೇ ಇದಕ್ಕೆ ಕಾರಣ. ನಾಡದ್ರೋಹಿಗಳ ಈ ಘೋಷಣೆ ವಿರುದ್ಧ ‘ನೀವು ಲಕ್ಷ ಅಂದರೆ ನಾವು ಕೋಟಿ, ಕನ್ನಡದ ಮುಂದೆ ಇಲ್ಲ ಯಾವುದೂ ಸಾಟಿ’ ಎಂಬ ಸಾಲುಗಳು ಇಮ್ಮಡಿ ಪುಲಿಕೇಶಿಯ ಭಾವಚಿತ್ರದ ಕೆಳಗೆ ರಾರಾಜಿಸಿದವು.ಗರುಡನ ಮೇಲೆ ಪ್ರತಿಷ್ಠಾಪಿಸಿದ್ದ ಭುವನೇಶ್ವರಿ ಪೀಠ, ಸಿಂಹಾಸನದ ನೆತ್ತಿ ಮೇಲೆ ಇಮ್ಮಡಿ ಪುಲಕೇಶಿ, ಅದರ ಮೇಲೆ ಭಾರತವನ್ನು ಆಳಿದ ಪ್ರದೇಶಗಳ ನಕಾಶೆ... ಇದೆಲ್ಲವೂ ಒಂದೇ ಸ್ತಬ್ದಚಿತ್ರದಲ್ಲಿ ಇದ್ದವು. ಅದರಲ್ಲೂ ಗರುಡನ ರೆಕ್ಕೆಗಳು ಹಾರಾಡುವಂತೆ ಮಾಡಿದ ಯುವಕರ ಕೌಶಲಕ್ಕೆ ತಲೆದೂಗದವರೇ ಇಲ್ಲ.‘ನಮ್ಮ ವಿರುದ್ಧ ಒಂದಾದವರ ಸಂಖ್ಯೆಯೇ ಹೇಳುತ್ತದೆ ನಮ್ಮ ಶಕ್ತಿ ಎಷ್ಟಿತ್ತೆಂದು’ ಎಂಬ ಮಜಗಾವಿ ಕನ್ನಡ ಬಳಗದ ಸಾಲುಗಳು ಇನ್ನೂ ಅರ್ಥಪೂರ್ಣವಾಗಿದ್ದವು.ಕನ್ನಡದ ಕವಿ– ಪುಂಗವರು, ಸಾಮ್ರಾಟ್ ಶ್ರೀಕೃಷ್ಣದೇವರಾಯ, ಕನ್ನಡದ ಮೊದಲ ದೊರೆ ಮಯೂರ ವರ್ಮ, ನಾಡನ್ನಾಳಿದ ದೊರೆಗಳು, ಐತಿಹಾಸಿಕ ಪುರುಷರು, ಹಲಸಿ ದೇವಸ್ಥಾನ, ಕಮಲ ಬಸದಿ, ಸುವರ್ಣ ವಿಧಾನಸೌಧ, ಹಿಂಡಲಗಾ ಜೈಲು ಸೇರಿದಂತೆ ಜಿಲ್ಲೆಯ ಹಲವು ಸ್ಥಳಗಳ ಸ್ತಬ್ಧಚಿತ್ರಗಳು ರೋಮಾಂಚನ ಮೂಡಿಸಿದವು. ಪ್ರತಿಯೊಂದ ಡಾಲ್ಬಿಯ ಹಿಂದೆ ಕನ್ನಡಮಾತೆಯ ಬೃಹತ್ ಸ್ತಬ್ಧಚಿತ್ರಗಳನ್ನು ನೋಡಲು ಕಣ್ಣುಗಳೆರಡು ಸಾಲದಾದವು.ಮುಗಿಲು ಮುಟ್ಟಿದ ಜೈಕಾರಮೆರವಣಿಗೆಯುದ್ದಕ್ಕೂ ನಗರದೆಲ್ಲೆಡೆ ಜೈಕಾರಗಳು ಮುಗಿಲು ಮುಟ್ಟಿದವು. ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಗರ್ಭಿಣಿಯರು, ಪುಟಾಣಿ ಮಕ್ಕಳನ್ನು ಹೊತ್ತುಕೊಂಡ ತಾಯಂದಿರೂ ಹೆಜ್ಜೆ ಹಾಕಿದ್ದು ವಿಶೇಷ.ಎಲ್ಲಿ ನೋಡಿದರೂ ಜನ, ಎತ್ತ ನೋಡಿದರೂ ಸಂಭ್ರಮ, ನೆಲ ನಡುಗಿಸುವಂಥ ಸಂಗೀತ, ಹಾಡು, ಯುವಜನರ ನೃತ್ಯೋತ್ಸಾಹ, ಉಕ್ಕೇರಿ ಬಂದ ಅಭಿಮಾನದ ಹೊಳೆ. ಕೂಲಿ ಕಾರ್ಮಿಕರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಎಲ್ಲರೂ ಎಲ್ಲರೂ ಕನ್ನಡ ಬಾವುಟ ಹೋಲುವ ವೇಷವನ್ನೇ ಧರಿಸಿ ಕುಣಿದು ಕುಪ್ಪಳಿಸಿದರು. ನಗರದ ರಸ್ತೆಗಳು, ವೃತ್ತಗಳು, ಚೌಕಗಳು, ಮನೆಯ ಮಹಡಿಗಳು ಕಿಕ್ಕಿರಿದು ತುಂಬಿದವು.ಜಂಬೂ ಸವಾರಿಯ ಅಂದಮೈಸೂರು ದಸರೆಯಲ್ಲಿ ನಡೆಯುವ ಜಂಬೂ ಸವಾರಿ ಹೋಲುವ ಸ್ತಬ್ಧಚಿತ್ರವಂತೂ ಕಣ್ಣಿನ ಎವೆ ಇಕ್ಕದಂತೆ ನೋಡುವಷ್ಟು ಸುಂದರವಾಗಿ ಮೂಡಿಬಂತು. ಈ ಬಾರಿ ಅಂಬಾರಿ ಹೊತ್ತ ಪ್ರಶಾಂತ ಆನೆ, ಅಕ್ಕಪಕ್ಕದ ಕುಮ್ಕಿ ಆನೆಗಳನ್ನು ಹೋಲುವ ಸ್ತಬ್ಧಚಿತ್ರಗಳು ಜನಸಂದಣಿಯಲ್ಲಿ ಬರುತ್ತಿದ್ದರೆ ಥೇಟ್ ದಸರೆ ಮೆರವಣಿಗೆಯನ್ನೇ ಕಣ್ಣು ತುಂಬಿಕೊಂಡಂತಾಯಿತು.ಸಂಭ್ರಮಗಳ ಮಧ್ಯೆಯೂ ನಾಡಿನ ಜನರ ಬದುಕಿನ ಸಂಕಷ್ಟ ಬಿಂಬಿಸುವ ಸ್ತಬ್ಧಚಿತ್ರಗಳೂ ಇದ್ದವು. ಭೀಕರ ಬರಗಾಲ ಬಿದ್ದ ಕಾರಣ ರೈತರು ಎದುರಿಸುತ್ತಿರುವ ಸಂಕಷ್ಟ, ನಾಶವಾದ ಬೆಳೆ, ನಿರ್ಲಕ್ಷ್ಯ ಮಾಡಿದ ಸರ್ಕಾರ, ಆತ್ಮಹತ್ಯೆಗೆ ಶರಣಾದ ರೈತ... ಎಲ್ಲವೂ ಮನ ಕಲಕುವಂತಿದ್ದವು.261103-21-744524163