ಬಡತನ ಇಳಿಕೆ ಮತ್ತು ಆದಾಯ ಅಸಮಾನತೆ: ಭಾರತದ ಆರ್ಥಿಕತೆಯ ಎರಡು ಮುಖಗಳು
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ 2011ರಿಂದ 2023ರ ಅವಧಿಯಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರರ. ಈ ಅವಧಿಯಲ್ಲಿ ಕಡು ಬಡತನದ ಪ್ರಮಾಣ ಶೇ 27.1ರಿಂದ ಶೇ 2.6ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ನ ವರದಿ ತಿಳಿಸಿದೆ. ಇಷ್ಟೇ ಪ್ರಮಾಣದಲ್ಲಿ ಬಡತನವನ್ನು ಕಡಿಮೆ ಮಾಡಿದ ಮತ್ತೊಂದು ದೇಶ ಚೀನಾ. ಆದರೆ, 80 ಕೋಟಿಗೂ ಹೆಚ್ಚು ಜನರನ್ನು ಬಡ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ 2011ರಿಂದ 2023ರ ಅವಧಿಯಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರರ. ಈ ಅವಧಿಯಲ್ಲಿ ಕಡು ಬಡತನದ ಪ್ರಮಾಣ ಶೇ 27.1ರಿಂದ ಶೇ 2.6ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ನ ವರದಿ ತಿಳಿಸಿದೆ. ಇಷ್ಟೇ ಪ್ರಮಾಣದಲ್ಲಿ ಬಡತನವನ್ನು ಕಡಿಮೆ ಮಾಡಿದ ಮತ್ತೊಂದು ದೇಶ ಚೀನಾ. ಆದರೆ, 80 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಹೊರತರಲು ಚೀನಾಕ್ಕೆ ಸುಮಾರು 40 ವರ್ಷಗಳು ಹಿಡಿದಿದ್ದವು.ಭಾರತದಲ್ಲಿ ಬಡತನ ಇಳಿದಿದ್ದರೂ, 1990ರ ದಶಕದಲ್ಲಿ ಜಾಗತಿಕ ಮಾರುಕಟ್ಟೆಗೆ ಆರ್ಥಿಕತೆ ತೆರೆದುಕೊಂಡ ಬಳಿಕ ಆದಾಯ ಮತ್ತು ಸಂಪತ್ತಿನ ಅಸಮಾನತೆ ಗಣನೀಯವಾಗಿ ಹೆಚ್ಚಿದೆ. 2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತವು ಅತ್ಯಂತ ಹೆಚ್ಚಿನ ಅಸಮಾನತೆ ಹೊಂದಿರುವ ದೇಶಗಳ ಪೈಕಿ ಒಂದು.ಭಾರತದಲ್ಲಿ ತೀವ್ರ ಬಡತನ ಪ್ರಮಾಣ ಶೇ 2.6ಕ್ಕೆ ಇಳಿಕೆ–ವಿಶ್ವಬ್ಯಾಂಕ್ ವರದಿವಿಶ್ವಬ್ಯಾಂಕ್ ವರದಿ ಹೇಳುವುದೇನು?ದಿನವೊಂದಕ್ಕೆ 3 ಡಾಲರ್ ಎಂಬ ಬಡತನದ ಮಿತಿಯನ್ನು ಆಧರಿಸಿ ಲೆಕ್ಕ ಹಾಕಿದಾಗ, 2011ರಿಂದ 2023ರ ಅವಧಿಯಲ್ಲಿ ಭಾರತದ ತೀವ್ರ ಬಡತನದ ಪ್ರಮಾಣ ಶೇ. 27.1ರಿಂದ ಶೇ. 2.6ಕ್ಕೆ ಇಳಿದಿದೆ. ಆಹಾರ, ನೀರು, ವಸತಿ ಮತ್ತು ಬಟ್ಟೆಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಗತ್ಯವಿರುವ ಕನಿಷ್ಠ ಸಂಪನ್ಮೂಲಗಳೂ ಇಲ್ಲದ ಸ್ಥಿತಿಯನ್ನು ತೀವ್ರ ಬಡತನ ಎಂದು ಪರಿಗಣಿಸಲಾಗುತ್ತದೆ.ಭಾರತದ ಮೂರು ಅಧಿಕೃತ ಕುಟುಂಬ ಸಮೀಕ್ಷೆಗಳ ಮಾಹಿತಿಯನ್ನು ಬಳಸಿ ವಿಶ್ವಬ್ಯಾಂಕ್ ಬಡತನದ ಪ್ರಮಾಣವನ್ನು ಲೆಕ್ಕಹಾಕಿದೆ. ದಿನಕ್ಕೆ 4.2 ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ 2011ರಲ್ಲಿ ಶೇ 57.7ರಷ್ಟಿತ್ತು. 2023ರ ವೇಳೆಗೆ ಇದು ಶೇ 16.1ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಸುಮಾರು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ.ಮುಂದಿನ ವರ್ಷಗಳಲ್ಲೂ ಭಾರತದಲ್ಲಿ ಬಡತನ ಕಡಿಮೆಯಾಗಲಿದೆ. ಆದರೆ, ಇಳಿಕೆಯ ವೇಗ ನಿಧಾನವಾಗಬಹುದು ಎಂದು ವಿಶ್ವಬ್ಯಾಂಕ್ನ ವರದಿ ತಿಳಿಸಿದೆ. ದಿನಕ್ಕೆ 4.20 ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವವರ ಪ್ರಮಾಣ 2026ರಲ್ಲಿ ಶೇ 14.2ರಷ್ಟಿದ್ದು, 2028ರ ವೇಳೆಗೆ ಶೇ 12.1ಕ್ಕೆ ಇಳಿಯುವ ನಿರೀಕ್ಷೆಯಿದೆ. ಜನರ ಖರ್ಚು ಹೆಚ್ಚಿರುವುದು, ಮಹಿಳೆಯರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆತಿರುವುದು ಮತ್ತು ಆಹಾರ ಸಬ್ಸಿಡಿಯಂತಹ ಸರ್ಕಾರಿ ನೆರವು ಯೋಜನೆಗಳು ವಿಸ್ತರಿಸಿರುವುದು ಬಡತನ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ.ಭಾರತದ ಬಡತನ ಇಳಿಕೆಯ ವೇಗ12 ವರ್ಷಗಳಲ್ಲಿ ಸುಮಾರು 50 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದು ಮಹತ್ವದ ಸಾಧನೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬಡತನ ಕಡಿಮೆಯಾದ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಅದು ತಿಳಿಸಿದೆ.ಭಾರತದಲ್ಲಿ ಬಡತನದ ಪ್ರಮಾಣವನ್ನು ಲೆಕ್ಕಹಾಕಲು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ನಡೆಸಿದ ಕುಟುಂಬಗಳ ಬಳಕೆ ವೆಚ್ಚ ಸಮೀಕ್ಷೆಯ ಮಾಹಿತಿಯನ್ನು ವಿಶ್ವಬ್ಯಾಂಕ್ ಬಳಸಿದೆ. ಕಳೆದ ನವೆಂಬರ್ನಲ್ಲಿ ಕೇರಳಂ ರಾಜ್ಯವು ತೀವ್ರ ಬಡತನದಿಂದ ಮುಕ್ತವಾಗಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಕೇರಳಂ, ಇಂತಹ ಘೋಷಣೆ ಮಾಡಿದ ದೇಶದ ಮೊದಲ ರಾಜ್ಯವಾಗಿದೆ.ಭಾರತದ ಹಿಂದಿನ ಯೋಜನಾ ಆಯೋಗದ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಸಂತೋಷ್ ಮೆಹ್ರೋತ್ರಾ ಪ್ರಕಾರ, ಜಿ20 ರಾಷ್ಟ್ರಗಳ ಪೈಕಿ ಭಾರತ ಮಾತ್ರ ಕೆಳ ಮಧ್ಯಮ ಆದಾಯದ ದೇಶವಾಗಿದೆ. ಜನಸಂಖ್ಯೆಯ ಪ್ರಮಾಣ ಹೆಚ್ಚಿರುವುದರಿಂದ ದೇಶದಲ್ಲಿ ಬಡವರ ಸಂಪೂರ್ಣ ಸಂಖ್ಯೆಯೂ ಇನ್ನೂ ಜಗತ್ತಿನಲ್ಲೇ ಅತ್ಯಧಿಕವಾಗಿದೆ ಎಂದು ಅವರು ಹೇಳಿದ್ದಾರೆ.ವಿಶ್ವಬ್ಯಾಂಕ್ನ ಬಡತನ ವಿಶ್ಲೇಷಣೆಯ ವಿಶ್ವಾಸಾರ್ಹತೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸುರಜಿತ್ ಭಲ್ಲಾ ಸಮರ್ಥಿಸಿಕೊಂಡಿದ್ದಾರೆ. ಕೊಳ್ಳುವ ಸಾಮರ್ಥ್ಯದ ಸಮಾನತೆಯ ಆಧಾರದ ಮೇಲೆ ಪ್ರತಿ ದೇಶದ ತಲಾ ಬಳಕೆ ವೆಚ್ಚವನ್ನು ಲೆಕ್ಕಹಾಕಿ ಬಡತನದ ಪ್ರಮಾಣವನ್ನು ವಿಶ್ವಬ್ಯಾಂಕ್ ನಿರ್ಧರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜು ಹೆಚ್ಚಿಸಿದ ವಿಶ್ವಬ್ಯಾಂಕ್ಬಡತನ ಕಡಿಮೆಯಾಗಿದ್ದು ಹೇಗೆ?ಭಾರತದಲ್ಲಿ ಬಡತನ ಇಳಿಕೆಗೆ ಹಲವು ಆರ್ಥಿಕ ಬೆಳವಣಿಗೆಗಳು ಮತ್ತು ಸರ್ಕಾರಿ ಯೋಜನೆಗಳ ಕೊಡುಗೆಯೂ ಇದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 1990ರ ದಶಕದ ಆರಂಭದಲ್ಲಿ ಭಾರತ ತನ್ನ ಆರ್ಥಿಕತೆಯನ್ನು ಮುಕ್ತಗೊಳಿಸಿದ ಬಳಿಕ, ದೇಶದಲ್ಲಿ ಆರ್ಥಿಕ ಬೆಳವಣಿಗೆ ವೇಗ ಪಡೆದುಕೊಂಡಿತು. ಅಂದಿನಿಂದ ಮೂರು ದಶಕಗಳಿಗೂ ಹೆಚ್ಚು ಈ ಬೆಳವಣಿಗೆ ಮುಂದುವರಿದಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಬಡತನ ಕಡಿಮೆ ಮಾಡಲು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಗ್ರಾಮೀಣ ಜನರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಖಾತರಿಪಡಿಸುವ ‘ನರೇಗಾ’ ಯೋಜನೆ ಜಾರಿಯಾಯಿತು. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರವು ನೇರ ನಗದು ವರ್ಗಾವಣೆ, ಉಚಿತ ಪಡಿತರ ಮತ್ತು ವಸತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿತು. ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಯನ್ನು ಮೊಟಕುಗೊಳಿಸಿದ್ದರೂ, ಪ್ರಸ್ತುತ ಸರ್ಕಾರ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣವೂ ಹೆಚ್ಚಾಗಿದೆ. ಪೈಪ್ ಮೂಲಕ ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಗ್ರಾಮೀಣ ಕುಟುಂಬಗಳ ಪ್ರಮಾಣ 2019ರ ಆಗಸ್ಟ್ನಲ್ಲಿ ಶೇ. 17ಕ್ಕಿಂತ ಕಡಿಮೆ ಇತ್ತು. ಈಗ ಅದು ಶೇ. 82ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ತಿಳಿಸಿವೆ. ಸುರಕ್ಷಿತ ಕುಡಿಯುವ ನೀರಿನಿಂದ ಕಾಯಿಲೆಗಳು ಕಡಿಮೆಯಾಗಿ, ಕುಟುಂಬಗಳ ಆದಾಯ ಹೆಚ್ಚಲು ನೆರವಾಗಿರಬಹುದು ಎಂದು ಅರ್ಥಶಾಸ್ತ್ರಜ್ಞರಾದ ಸುರಜಿತ್ ಭಲ್ಲಾ ಮತ್ತು ಕರಣ್ ಭಾಸಿನ್ ಅವರು 2024ರಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನದಲ್ಲಿ ಹೇಳಿದ್ದಾರೆ.ಬಡತನ ಇಳಿಕೆಯ ನಡುವೆಯೂ ಆತಂಕ ಏಕೆ?ಸರ್ಕಾರ 80 ಕೋಟಿ ಜನರಿಗೆ ಉಚಿತವಾಗಿ ನೀಡುತ್ತಿರುವ ಆಹಾರ ಧಾನ್ಯಗಳು ಅವರ ಕ್ಯಾಲೊರಿ ಅಗತ್ಯವನ್ನು ಮಾತ್ರ ಪೂರೈಸುತ್ತವೆ. ಪೌಷ್ಟಿಕಾಂಶದ ಸುಧಾರಣೆಗೆ ಬಡವರನ್ನು ಗುರುತಿಸಿ, ಅವರಿಗೆ ಸಮತೋಲಿತ ಆಹಾರ ಸಬ್ಸಿಡಿ ಒದಗಿಸಬೇಕು ಎಂದು ಭಲ್ಲಾ ಮತ್ತು ಭಾಸಿನ್ ತಮ್ಮ 2025ರ ಸಂಶೋಧನೆಯಲ್ಲಿ ಸಲಹೆ ನೀಡಿದ್ದಾರೆ.ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಅನಿರ್ದಿಷ್ಟಾವಧಿವರೆಗೆ ಉಚಿತ ಆಹಾರ ಒದಗಿಸುವುದು ಸರ್ಕಾರಕ್ಕೆ ಆರ್ಥಿಕವಾಗಿ ಸುಸ್ಥಿರವೇ ಎಂಬ ಪ್ರಶ್ನೆಯೂ ಇದೆ.2014ರಿಂದ ಸರ್ಕಾರ ಬಡತನದ ಪ್ರಮಾಣವನ್ನು ಲೆಕ್ಕಹಾಕುವುದನ್ನು ನಿಲ್ಲಿಸಿ, ವಿಶ್ವಬ್ಯಾಂಕ್ನ ಅಂದಾಜುಗಳನ್ನು ಅವಲಂಬಿಸಿದೆ ಎಂದು ಸಂತೋಷ್ ಮೆಹ್ರೋತ್ರಾ ಟೀಕಿಸಿದ್ದಾರೆ. ಭಾರತದಂತಹ ವೈವಿಧ್ಯಮಯ ದೇಶಕ್ಕೆ ಅಂತರರಾಷ್ಟ್ರೀಯ ಸಂಸ್ಥೆಯ ಸಾಮಾನ್ಯ ಮಾನದಂಡವೊಂದೇ ಸಾಕಾಗದು. ಬಳಕೆಯ ಮಾದರಿ ಕಾಲಕ್ಕೆ ತಕ್ಕಂತೆ ಬದಲಾಗುವುದರಿಂದ ದೇಶವೇ ತನ್ನದೇ ಬಡತನದ ಅಳತೆಯ ಮಾನದಂಡ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.ಆದರೆ, ವಿಶ್ವಬ್ಯಾಂಕ್ನ ಅಂದಾಜುಗಳನ್ನು ಅಂತಿಮವಾಗಿ ಪ್ರಕಟಿಸುವ ಮೊದಲು ಆಯಾ ದೇಶಗಳ ವಿದ್ವಾಂಸರು ಮತ್ತು ಸರ್ಕಾರಗಳು ಪರಿಶೀಲಿಸುತ್ತವೆ. ಹೀಗಾಗಿ ಭಾರತದ ಬಡತನದ ದತ್ತಾಂಶವನ್ನು ಪ್ರಶ್ನಿಸಲು ಸೈದ್ಧಾಂತಿಕ ಆಧಾರವಿಲ್ಲ ಎಂದು ಸುರಜಿತ್ ಭಲ್ಲಾ ಹೇಳಿದ್ದಾರೆ.ಪ್ರಜಾವಾಣಿ ಕರುನಾಡೋತ್ಸವ| ಸಂಚಿ ಹೊನ್ನಮ್ಮ: ಸ್ತ್ರೀಪರ ಚಿಂತನೆಯ ಕಾವ್ಯ ಕೋಗಿಲೆಮತ್ತೊಂದೆಡೆ, ಭಾರತದ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿ ಇನ್ನೂ ಕಳವಳಕಾರಿಯಾಗಿದೆ ಎಂದು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಹೇಳಿದ್ದಾರೆ. ಭಾರತವು ಜಿಡಿಪಿಯ ಶೇ 1ಕ್ಕಿಂತ ಸ್ವಲ್ಪ ಹೆಚ್ಚು ಹಣವನ್ನು ಮಾತ್ರ ಸಾರ್ವಜನಿಕ ಆರೋಗ್ಯಕ್ಕೆ ವೆಚ್ಚ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಣಕಾಸಿನ ಕೊರತೆ ಹಾಗೂ ಹೆಚ್ಚಿನ ಒತ್ತಡವಿದೆ. ಆರೋಗ್ಯ ವೆಚ್ಚದ ಹೊರೆಯನ್ನು ನಾಗರಿಕರೇ ಭರಿಸಬೇಕಾಗಿರುವುದರಿಂದ ಲಕ್ಷಾಂತರ ಜನರು ಬಡತನ ಅಥವಾ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಭಾರತದಲ್ಲಿ ಬೆಲೆ ಏರಿಕೆಗೆ ಹೋಲಿಸಿದರೆ ಕಾರ್ಮಿಕರ ವೇತನದಲ್ಲಿ ಅದೇ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ವಿಶ್ವಬ್ಯಾಂಕ್ ವರದಿ ಪ್ರಕಾರ, 2023ರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಶೇ. 10ರಷ್ಟು ಕಾರ್ಮಿಕರ ವೇತನವು ಅತಿ ಕಡಿಮೆ ವೇತನ ಪಡೆಯುವ ಶೇ. 10ರಷ್ಟು ಕಾರ್ಮಿಕರ ವೇತನಕ್ಕಿಂತ 13 ಪಟ್ಟು ಹೆಚ್ಚಿತ್ತು.ತೀವ್ರ ಬಡತನ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆ. ಆದರೆ, ದೇಶದಲ್ಲಿ ಇನ್ನೂ 23.3 ಕೋಟಿ ಜನರು ದಿನಕ್ಕೆ 4.2 ಡಾಲರ್ಗಿಂತ ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ, ಬಡತನ ನಿವಾರಣೆಯಲ್ಲಿ ಭಾರತ ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದು ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಉಪನ್ಯಾಸಕ ನಿತಿನ್ ಕುಮಾರ್ ಭಾರ್ತಿ ಹೇಳಿದ್ದಾರೆ.ಆದಾಯದ ಅಂತರ ಏಕೆ ಹೆಚ್ಚುತ್ತಿದೆ?ದೇಶದ ಆರ್ಥಿಕತೆ ಬೆಳೆದರೂ ಅದರ ಲಾಭ ಎಲ್ಲರಿಗೂ ಸಮಾನವಾಗಿ ತಲುಪುತ್ತಿಲ್ಲ. ಶ್ರೀಮಂತರಿಗೆ ಹೆಚ್ಚಿನ ಪಾಲು ಸಿಗುತ್ತಿರುವುದರಿಂದ ಆದಾಯದ ಅಂತರ ಹೆಚ್ಚುತ್ತಿದೆ ಎಂದು ನಿತಿನ್ ಕುಮಾರ್ ಭಾರ್ತಿ ಹೇಳಿದ್ದಾರೆ.2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ದೇಶದ ಒಟ್ಟು ಆದಾಯದಲ್ಲಿ ಶ್ರೀಮಂತ ಶೇ. 10ರಷ್ಟು ಜನರ ಪಾಲು ಶೇ. 58ರಷ್ಟಿದೆ. ಆದರೆ, ಜನಸಂಖ್ಯೆಯ ಅರ್ಧದಷ್ಟಿರುವ ಬಡವರ ಪಾಲು ಕೇವಲ ಶೇ. 15.ಜಾತಿ ವ್ಯವಸ್ಥೆಯ ಪ್ರಭಾವ, ಕೆಲವರ ಕೈಯಲ್ಲಿ ಆಸ್ತಿ ಹೆಚ್ಚಾಗಿ ಕೇಂದ್ರೀಕೃತವಾಗಿರುವುದು ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ದೀರ್ಘಕಾಲ ಸರಿಯಾದ ಗಮನ ನೀಡದಿರುವುದು ಹಿಂದುಳಿದ ಸಮುದಾಯಗಳ ಪ್ರಗತಿಗೆ ಅಡ್ಡಿಯಾಗಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಸಾಕಷ್ಟು ಹಣ ಹೂಡಿಕೆ ಮಾಡದಿರುವುದರಿಂದ ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಭದ್ರತೆ ಪಡೆಯುವುದು ಕಷ್ಟವಾಗುತ್ತಿದೆ ಎಂದು ಭಾರ್ತಿ ಅಭಿಪ್ರಾಯಪಟ್ಟಿದ್ದಾರೆ.ಆದಾಯ ಅಸಮಾನತೆ ಮತ್ತು ಉದ್ಯೋಗಾವಕಾಶಗಳ ಕೊರತೆಯಿಂದ ಯುವಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಯುವ ನಿರುದ್ಯೋಗದ ಪ್ರಮಾಣ 2025ರ ಏಪ್ರಿಲ್ನ ಶೇ 13.8 ಇದ್ದರೆ 2026ರ ಮಾರ್ಚ್ನಲ್ಲಿ ಶೇ 15.2ಕ್ಕೆ ಏರಿದೆ.ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ 'ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ–2026' ವರದಿಯ ಪ್ರಕಾರ, 15ರಿಂದ 25 ವರ್ಷದೊಳಗಿನ ಪದವೀಧರರಲ್ಲಿ ಶೇ 40ರಷ್ಟು ಮತ್ತು 25ರಿಂದ 29 ವರ್ಷದೊಳಗಿನವರಲ್ಲಿ ಶೇ 20ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಪಡೆದವರಲ್ಲಿ ನಿರುದ್ಯೋಗದ ಪ್ರಮಾಣ ಶೇ 29.4ರಷ್ಟಿದೆ.ಕರುನಾಡೋತ್ಸವ: ತಮಿಳುನಾಡಿಗೆ ಸೇರಿದ್ದರೂ ಕನ್ನಡ ಅಸ್ಮಿತೆ ಉಳಿಸಿಕೊಂಡ ‘ತಾಳವಾಡಿ’ಬಡತನ ಇಳಿದರೂ ಅಸಮಾನತೆಆರ್ಥಿಕ ಬೆಳವಣಿಗೆಯ ಲಾಭ ಎಲ್ಲರಿಗೂ ಸಮಾನವಾಗಿ ತಲುಪಿದರೆ ಸಾಮಾನ್ಯ ಕುಟುಂಬಗಳ ಬದುಕು ಸುಧಾರಿಸುತ್ತದೆ. ಇದರಿಂದ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ನಿತಿನ್ ಕುಮಾರ್ ಭಾರ್ತಿ ಹೇಳಿದ್ದಾರೆ. ಅಸಮಾನತೆ ಹೆಚ್ಚಾದರೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ವಸತಿ ಮತ್ತು ಉದ್ಯೋಗ ಪಡೆಯುವ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಸಿಗುವುದಿಲ್ಲ. ಸಂಪತ್ತು ಕೆಲವೇ ಜನರ ಕೈಯಲ್ಲಿ ಸೇರಿದರೆ, ಸರ್ಕಾರದ ನೀತಿ ನಿರ್ಧಾರಗಳ ಮೇಲೂ ಅವರ ಪ್ರಭಾವ ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.ಬಡತನ, ಅಸಮಾನತೆ ಕಡಿಮೆ ಮಾಡುವುದು ಹೇಗೆ?ಬಡತನ ಮತ್ತು ಅಸಮಾನತೆ ಕಡಿಮೆ ಮಾಡಲು ಸಂಪತ್ತು ಕೆಲವೇ ಜನರ ಕೈಯಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಶ್ರೀಮಂತರು ಹೆಚ್ಚು ತೆರಿಗೆ ಪಾವತಿಸುವಂತಹ ತೆರಿಗೆ ನೀತಿ ಜಾರಿಗೆ ತರಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞೆ ದೀಪಾ ಸಿನ್ಹಾ ಸಲಹೆ ನೀಡಿದ್ದಾರೆ.ಬಡತನ ಕಡಿಮೆ ಮಾಡಲು ಒಂದೇ ಯೋಜನೆ ಸಾಕಾಗುವುದಿಲ್ಲ. ಕೃಷಿ ಉತ್ಪಾದನೆ ಹೆಚ್ಚಿಸುವುದು, ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುವುದು, ಗ್ರಾಮೀಣ ಜನರಿಗೆ ನಗರಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವುದು ಮತ್ತು ಜನರ ಕೌಶಲ ಅಭಿವೃದ್ಧಿಗೆ ಹೂಡಿಕೆ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಚೀನಾದ ಅನುಭವದಿಂದ ಭಾರತ ಪಾಠ ಕಲಿಯಬಹುದು ಎಂದು ನಿತಿನ್ ಕುಮಾರ್ ಭಾರ್ತಿ ಹೇಳಿದ್ದಾರೆ.ಭಾರತದ ಸರ್ಕಾರದ ನೀತಿಗಳು ರಸ್ತೆ, ಸಾರಿಗೆ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿವೆ. ಆದರೆ, ಇವು ಶ್ರೀಮಂತ ಶೇ. 10ರಷ್ಟು ಜನರ ಅಗತ್ಯಗಳಿಗೆ ಹೆಚ್ಚು ಪೂರಕವಾಗಿವೆ. ಬಡವರು ಮತ್ತು ಸಾಮಾನ್ಯ ಜನರನ್ನು ಒಳಗೊಂಡ ಕೆಳಮಟ್ಟದ ಶೇ. 90ರಷ್ಟು ಜನರ ಅಗತ್ಯಗಳಿಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಸ್ತೆ, ಸಾರಿಗೆ ಸೌಲಭ್ಯಗಳ ಜತೆಗೆ ಜನರಿಗೆ ಉತ್ತಮ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳೂ ಅಗತ್ಯ. ಇವುಗಳ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಹಣ ಹೂಡಿಕೆ ಮಾಡಬೇಕು. ಇದಕ್ಕಾಗಿ ಹೆಚ್ಚು ಆದಾಯ ಹೊಂದಿರುವವರು ಹೆಚ್ಚಿನ ತೆರಿಗೆ ಪಾವತಿಸುವಂತಹ ನೀತಿ ಜಾರಿಗೆ ತಂದು, ಅವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆಯ ಹೊರೆ ಹಂಚಬೇಕು ಎಂದು ಭಾರ್ತಿ ಸಲಹೆ ನೀಡಿದ್ದಾರೆ.ಆಧಾರ: ವಿಶ್ವಬ್ಯಾಂಕ್ ಹಾಗೂ ಅಲ್–ಜಜೀರಾಕರುನಾಡೋತ್ಸವ: ವಚನ ಸಾಹಿತ್ಯದ ಬೇರು, ಶರಣ ಪರಂಪರೆಯ ದಾರಿದೀಪ ದೇವರದಾಸಿಮಯ್ಯ