ಜನಪ್ರತಿನಿಧಿಗಳು ಬದ್ಧತೆ ಪ್ರದರ್ಶಿಸಿ: ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ
ಶಿರಸಿ: ‘ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಎಂಬುದು ಬೃಹತ್ ಭ್ರಷ್ಟಾಚಾರದ, ನೀರೇ ಇಲ್ಲದ ಯೋಜನೆಯಾಗಿದ್ದು, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಘೋಷಣೆ ಮಾಡದಿರುವುದನ್ನು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ ಹಾಗೂ ವ್ಯಂಗ್ಯವಾಡಿದ್ದಾರೆ’ ಎಂದು ಬೇಡ್ತಿ- ಅಘನಾಶಿನಿ ಸಮಿತಿ ತಿಳಿಸಿದೆ.ಈ ಕುರಿತು

ಶಿರಸಿ: ‘ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಎಂಬುದು ಬೃಹತ್ ಭ್ರಷ್ಟಾಚಾರದ, ನೀರೇ ಇಲ್ಲದ ಯೋಜನೆಯಾಗಿದ್ದು, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಘೋಷಣೆ ಮಾಡದಿರುವುದನ್ನು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ ಹಾಗೂ ವ್ಯಂಗ್ಯವಾಡಿದ್ದಾರೆ’ ಎಂದು ಬೇಡ್ತಿ- ಅಘನಾಶಿನಿ ಸಮಿತಿ ತಿಳಿಸಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯು, ‘ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರ ಮುಂದೆ ಹಲವು ಗಂಭೀರ ಪ್ರಶ್ನೆಗಳನ್ನು ಇಟ್ಟಿದೆ. ಪಕ್ಷಭೇದ ಮರೆತು ಉತ್ತರ ಕನ್ನಡದ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಮುಂದೆ ನಿಂತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದೆ.‘ಒಂದು ವರ್ಷದಿಂದ ಸಮಿತಿಯು ನೂರಾರು ಸಭೆ, ಧರಣಿ, ಪಾದಯಾತ್ರೆ ಹಾಗೂ ನಿಯೋಗಗಳ ಮೂಲಕ ಹೋರಾಟ ನಡೆಸುತ್ತಿದ್ದು, ಜನಪ್ರತಿನಿಧಿಗಳು ಕೇವಲ ಬೆಂಬಲ ನೀಡುತ್ತಾರೆಯೇ ಹೊರತು ಯೋಜನೆಗೆ ತಡೆ ಬಿದ್ದಿಲ್ಲ. ನೀರಾವರಿ ಇಲಾಖೆಗಳು ತಮ್ಮ ಪಾಡಿಗೆ ತಾವು ಕಾರ್ಯಾಚರಿಸುತ್ತಿವೆ’ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.‘ಈಗಾಗಲೇ ಜಿಲ್ಲಾ ಪಂಚಾಯಿತಿ, ನದಿ ಕಣಿವೆಯ ಎಲ್ಲ ಪಂಚಾಯಿತಿಗಳು ಹಾಗೂ ಸಹಕಾರ ರೈತ ಸಂಘಗಳು ಯೋಜನೆಯನ್ನು ಕೈಬಿಡಲು ನಿರ್ಣಯ ಕೈಗೊಂಡಿವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸರ್ಕಾರಕ್ಕೆ ಪತ್ರ ಬರೆದಿದ್ದು, ಖ್ಯಾತ ಪರಿಸರ ವಿಜ್ಞಾನಿಗಳು ಹಾಗೂ ನೀರಾವರಿ ತಜ್ಞರು ಈ ನದಿ ಕಣಿವೆಗಳನ್ನು ನಾಶಮಾಡದಂತೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಧೈರ್ಯವಾಗಿ ನಿಂತು ಸವಾಲುಗಳನ್ನು ಎದುರಿಸಬೇಕಾದ ಅಗತ್ಯವಿದೆ’ ಎಂದು ಸಮಿತಿ ಪ್ರತಿಪಾದಿಸಿದೆ.‘ಜನಪ್ರತಿನಿಧಿಗಳು ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ನೀರಾವರಿ ಹಾಗೂ ಅರಣ್ಯ ಸಚಿವರು, ನೀರಾವರಿ ಇಲಾಖೆ ಮತ್ತು ಎನ್ಡಬ್ಲುಡಿಎ ಅಧಿಕಾರಿಗಳು, ವನ್ಯಜೀವಿ, ಜೀವವೈವಿಧ್ಯ, ಸಿಆರ್ಝಡ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪುನಃ ಭೇಟಿಯಾಗಿ ಮನವರಿಕೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದೆ.‘ಹಾವೇರಿ ಜಿಲ್ಲೆಯಲ್ಲಿ ಜಾರಿಯಾಗಿರುವ ವಿಫಲ ನೀರಾವರಿ ಯೋಜನೆಗಳ ಮಾಹಿತಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ, ಗಂಗಾವಳಿ, ಅಘನಾಶಿನಿ, ವರದಾ ಜಲಾಶಯ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಲ್ಲಿ ಜಾರಿಯಾದ ಕಿರು ನೀರಾವರಿ, ಕೆರೆ ತುಂಬಿಸುವ ಹಾಗೂ ಕುಡಿಯುವ ನೀರಿನ ಯೋಜನೆಗಳ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದೆ.