ಪತ್ನಿಯನ್ನು ನಿಂದಿಸಿದ್ದೇ ಆತ್ಮಹತ್ಯೆಗೆ ಕಾರಣವಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ‘ಹೆಂಡತಿಯನ್ನು ಮೂರ್ಖಳು, ಅಪ್ರಯೋಜಕಳು ಎಂದು ಗಂಡನು ನಿಂದಿಸಿದ್ದು ಮನೋಧರ್ಮಕ್ಕೆ ಸಂಬಂಧಿಸಿದ ವಿಚಾರವೇ ಹೊರತು, ಆಕೆಯ ಆತ್ಮಹತ್ಯೆಗೆ ಇದೇ ಕಾರಣ ಎನ್ನಲಾಗದು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.‘ಮಹಿಳೆಯ ಮನಸಿನಲ್ಲಿ ಎಂಥದ್ದೇ ಆಲೋಚನೆಗಳು ಬಂದಿದ್ದರೂ, ಆರೋಪ ಸಾಬೀತು ಮಾಡಲು ನಿರ್ದಿಷ್ಟವಾದ ಪೂರಕ ಅಂಶಗಳಿಲ್ಲದಿದ್ದರೆ ಆಕೆಯ ಆತ್ಮಹತ್ಯೆಗೆ ಪತಿ ಮತ್ತ

ನವದೆಹಲಿ: ‘ಹೆಂಡತಿಯನ್ನು ಮೂರ್ಖಳು, ಅಪ್ರಯೋಜಕಳು ಎಂದು ಗಂಡನು ನಿಂದಿಸಿದ್ದು ಮನೋಧರ್ಮಕ್ಕೆ ಸಂಬಂಧಿಸಿದ ವಿಚಾರವೇ ಹೊರತು, ಆಕೆಯ ಆತ್ಮಹತ್ಯೆಗೆ ಇದೇ ಕಾರಣ ಎನ್ನಲಾಗದು’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.‘ಮಹಿಳೆಯ ಮನಸಿನಲ್ಲಿ ಎಂಥದ್ದೇ ಆಲೋಚನೆಗಳು ಬಂದಿದ್ದರೂ, ಆರೋಪ ಸಾಬೀತು ಮಾಡಲು ನಿರ್ದಿಷ್ಟವಾದ ಪೂರಕ ಅಂಶಗಳಿಲ್ಲದಿದ್ದರೆ ಆಕೆಯ ಆತ್ಮಹತ್ಯೆಗೆ ಪತಿ ಮತ್ತು ಅವರ ಕುಟುಂಬದವರೇ ಕಾರಣ ಎಂದು ನಿರ್ಧರಿಸಲಾಗದು. ಹಾಗೆ ಮಾಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಮನಮೋಹನ್ ಅವರಿದ್ದ ಪೀಠವು ಸೋಮವಾರ ಹೇಳಿದೆ.‘ನ್ಯಾಯದ ತಪ್ಪು ವ್ಯಾಖ್ಯಾನ ಮತ್ತು ಪ್ರಕ್ರಿಯೆಯ ದುರುಪಯೋಗವನ್ನು ತಡೆಗಟ್ಟುವ ದೃಷ್ಟಿಯಿಂದ ವೈವಾಹಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಪ್ರಾಯೋಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಬಹಳ ಎಚ್ಚರದಿಂದ ಆರೋಪಗಳನ್ನು ಪರಿಶೀಲಿಸಬೇಕು’ ಎಂದು ನ್ಯಾಯಪೀಠವು ತಿಳಿಸಿದೆ.ಪ್ರಕರಣ ಏನು?: 2021ರ ಜನವರಿಯಲ್ಲಿ ವಿವಾಹವಾದ ಜೋಡಿ ಮಹಾರಾಷ್ಟ್ರದ ಚಂದ್ರಪುರದಲ್ಲಿ ವಾಸಿಸುತ್ತಿದ್ದರು. 2022ರ ಫೆಬ್ರುವರಿಯಲ್ಲಿ ಕೆನಡಾಕ್ಕೆ ತೆರಳಿ ಅಲ್ಲಿಯೇ ವಾಸಿಸುತ್ತಿದ್ದರು. 2023ರ ಜೂನ್ನಲ್ಲಿ ಪತ್ನಿಯು ತಾವು ವಾಸಿಸುತ್ತಿದ್ದ ವಸತಿ ಸಂಕೀರ್ಣದ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಕೈಬರಹವಿದ್ದ ಪತ್ರ ದೊರೆತಿದ್ದು, ‘ನಾನು ಜೀವನದಲ್ಲಿ ವಿಫಲಳಾಗಿದ್ದೇನೆ. ಒಂದು ವರ್ಷವಾದರೂ ಉದ್ಯೋಗ ಹುಡುಕಿಕೊಳ್ಳಲು ಕಷ್ಟಪಡುತ್ತಿದ್ದೇನೆ. ನಾನು ಮೂರ್ಖಳು ಮತ್ತು ನಿಷ್ಪ್ರಯೋಜಕಳು ಎಂದು ನನಗೆ ಅನಿಸುತ್ತಿದೆ. ಹೀಗೆ ಬದುಕುವುದು ಇಷ್ಟವಿಲ್ಲದ್ದರಿಂದ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ. ನನ್ನ ಎಲ್ಲ ಅಂಗಾಂಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ ಮತ್ತು ಇಲ್ಲಿಯೇ ನನ್ನ ಅಂತ್ಯಸಂಸ್ಕಾರ ಮಾಡಿ. ಇದೇ ನನ್ನ ಕೊನೆಯ ಆಶಯ’ ಎಂದು ಅದರಲ್ಲಿ ಬರೆದಿತ್ತು. ಕೆನಡಾದ ಪೊಲೀಸರು ತನಿಖೆ ಪೂರ್ಣಗೊಳಿಸಿ, ಪ್ರಕರಣದಲ್ಲಿ ಪತಿಯ ಪಾತ್ರವಿಲ್ಲ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.ಆದರೆ, ಮಹಿಳೆಯ ತಂದೆ ಮಹಾರಾಷ್ಟ್ರದ ಔರಂಗಾಬಾದ್ನ ಸತಾರಾ ಪೊಲೀಸ್ ಠಾಣೆಯಲ್ಲಿ ಅಳಿಯನ ವಿರುದ್ಧ ವರದಕ್ಷಿಣೆ ಕಿರುಕುಳ, ಕ್ರೌರ್ಯ, ಉದ್ದೇಶಪೂರ್ವಕವಾಗಿ ಅವಮಾನಕ್ಕೆ ಒಳಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಮುಂಗೋಪಿಯಾಗಿದ್ದ ಅಳಿಯ ಪತ್ನಿಯನ್ನು ನಿಂದಿಸುತ್ತಿದ್ದ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು.