ಕರುನಾಡೋತ್ಸವ: ವಚನ ಸಾಹಿತ್ಯದ ಬೇರು, ಶರಣ ಪರಂಪರೆಯ ದಾರಿದೀಪ ದೇವರದಾಸಿಮಯ್ಯ
ಹುಣಸಗಿ (ಯಾದಗಿರಿ ಜಿಲ್ಲೆ): ಹನ್ನೊಂದನೆಯ ಶತಮಾನದಲ್ಲಿ ಬೀಜರೂಪದಲ್ಲಿ ಮೊಳಕೆಹೊಡೆದ ವಚನ ಸಾಹಿತ್ಯವು 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯದ ಕ್ರಾಂತಿಯ ಯುಗವಾಯಿತು. ಈ ಮಹಾಪರಂಪರೆಗೆ ದೀಪವಿಟ್ಟು, ವಚನ ಸಾಹಿತ್ಯದ ಮೂಲಸೆಲೆಯಾಗಿದ್ದವರು ದೇವರ ದಾಸಿಮಯ್ಯನವರು. ಸಂಸ್ಕೃತ ಮುಖಿಯಾಗಿದ್ದ ಕನ್ನಡ ಸಾಹಿತ್ಯವನ್ನು ಸಾಮಾನ್ಯ ಜನರಿ

ಹುಣಸಗಿ (ಯಾದಗಿರಿ ಜಿಲ್ಲೆ): ಹನ್ನೊಂದನೆಯ ಶತಮಾನದಲ್ಲಿ ಬೀಜರೂಪದಲ್ಲಿ ಮೊಳಕೆಹೊಡೆದ ವಚನ ಸಾಹಿತ್ಯವು 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯದ ಕ್ರಾಂತಿಯ ಯುಗವಾಯಿತು. ಈ ಮಹಾಪರಂಪರೆಗೆ ದೀಪವಿಟ್ಟು, ವಚನ ಸಾಹಿತ್ಯದ ಮೂಲಸೆಲೆಯಾಗಿದ್ದವರು ದೇವರ ದಾಸಿಮಯ್ಯನವರು. ಸಂಸ್ಕೃತ ಮುಖಿಯಾಗಿದ್ದ ಕನ್ನಡ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ಸರಳವಾಗಿ ತಿಳಿಯುವಂತೆ ಆಡುನುಡಿಯಲ್ಲಿ ವಚನಗಳು ರಚಿಸಿದ್ದರಿಂದ ಕನ್ನಡ ಸಾಹಿತ್ಯದಲ್ಲಿ ವಚನವು ತನ್ನದೆಯಾದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ, ಅದು ಇಂದಿಗೂ ಪ್ರಸ್ತುತವಾಗಿದ್ದು ಜನರ ನಾಲಿಗೆಯಲ್ಲಿ ವಚನಗಳು ಸಾಲು, ಸಾರ ಅನುರಣಿಸುತ್ತಲೇ ಇವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಮನುಷ್ಯನ ಅಂತರಂಗವನ್ನು ಜಾಗೃತಗೊಳಿಸುವ ಮತ್ತು ಬದುಕಿಗೆ ನೈತಿಕ ದಾರಿಯನ್ನು ತೋರುವ ವಚನ ಸಾಹಿತ್ಯ ಚಳವಳಿಗೆ ಗಟ್ಟಿಯಾದ ಭೂಮಿಕೆ ಸಿದ್ಧಪಡಿಸಿದ ಹಿರಿಮೆ ಯಾದಗಿರಿಯ ಜಿಲ್ಲೆಯವರಾದ ದೇವರದಾಸಿಮಯ್ಯ ಅವರಿಗೆ ಸಲ್ಲುತ್ತದೆ.ವಚನ ಸಾರಸ್ವತ್ವದ ಬ್ರಹ್ಮ ಎಂದೇ ಗೌರವಿಸಿಕೊಳ್ಳುವ ದೇವರದಾಸಿಮಯ್ಯ ಅವರು ಜನಿಸಿದ್ದು ಹುಣಸಗಿ ತಾಲ್ಲೂಕಿನ ಮುದನೂರಿನಲ್ಲಿ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ. ರಾಮನಾಥನ ಭಕ್ತರಾದ ಶಂಕರಿ ಮತ್ತು ರಾಮಯ್ಯ ಎಂಬ ದಂಪತಿ ಉದರದಲ್ಲಿ ಜನಿಸಿದ್ದರು ಎಂದು ಕೆಲ ವಿದ್ವಾಂಸರು ಹೇಳುತ್ತಾರೆ. ದಾಸ, ದಾಸಯ್ಯ, ದಾಸಿಮಯ್ಯ, ದೇವದಾಸ, ಜೇಡರದಾಸಿಮಯ್ಯ, ದೇವರದಾಸಿಮಯ್ಯ... ಹೀಗೆ ಮೊದಲಾದ ಹೆಸರುಗಳಿಂದಲ್ಲೂ ಅವರನ್ನು ಕರೆಯಲಾಗುತ್ತದೆ.ಮುದನೂರು ಗ್ರಾಮದಲ್ಲಿನ ಸಭಾಭವನದಾಸಿಮಯ್ಯ ಜನಿಸಿದ್ದ ಮುದನೂರು ಗ್ರಾಮವು ಹಿಂದಿನ ಕಾಲದಿಂದಲೂ ಸುಂದರ ಪರಿಸರ ಮತ್ತು ಕ್ರಿಯಾಶೀಲವಾದ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ. ಗ್ರಾಮದಲ್ಲಿರುವ ರಾಮತೀರ್ಥ, ಲಕ್ಷಣತೀರ್ಥ, ಸಕ್ಕರೆತೀರ್ಥ, ಮರಳುತೀರ್ಥ, ಪಾಂಡವತೀರ್ಥ, ಹಾಲುತೀರ್ಥ, ಸಂಗಮತೀರ್ಥಗಳು ದೇವಾಂಗನ ಸಪ್ತಾವತಾರಗಳ ಪ್ರತೀಕವಾಗಿವೆ. ಚಿಕ್ಕ ಅಗ್ರಹಾರವಾಗಿದ್ದು ಮಾತ್ರವಲ್ಲದೇ ಅದು, ‘ದಕ್ಷಿಣವಾರಣಾಸಿ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಮುದನೂರು ದಾಸಿಮಯ್ಯ ಅವರ ಜನ್ಮಸ್ಥಳ ಮಾತ್ರವಲ್ಲದೆ ವಚನ ಸಾಹಿತ್ಯದ ಮೂಲಬೇರಾಗಿದೆ.ಮುದನೂರು ಗ್ರಾಮದಲ್ಲಿನ ಪುಷ್ಕರಣಿಮುದನೂರಿನಲ್ಲಿ ಸಿಕ್ಕ ಅಲ್ಪ ವಿದ್ಯೆಯಿಂದ ಅತೃಪ್ತರಾದ ದಾಸಿಮಯ್ಯ ಅವರು ತಮ್ಮ ಜ್ಞಾನದ ಅರಿವನ್ನು ವಿಸ್ತರಿಸಿಕೊಳ್ಳಲು ಶ್ರೀಶೈಲ ಸುಪ್ರಸಿದ್ಧ ವಿದ್ಯಾ ಕೇಂದಕ್ಕೆ ತೆರಳಿದರು. ಅಲ್ಲಿನ ಸೂರ್ಯಸಿಂಹಾಸನ ಪೀಠದ ಮೂರನೆಯ ಜಗದ್ಗುರು ಚಂದ್ರಗಂಡ ಶಿವಾಚಾರ್ಯರಿಂದ ಶೈವದೀಕ್ಷೆ ಪಡೆದು ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಿಕೊಂಡರು.ಮದುವೆ ಬಗ್ಗೆ ಆಸಕ್ತಿ ತೋರಿಸದ ದಾಸಿಮಯ್ಯ, ತಂದೆ-ತಾಯಿ, ಗುರು-ಹಿರಿಯರ ಒತ್ತಾಯಕ್ಕೆ ಮಣಿದು ದುಗ್ಗಳೆ ಅವರನ್ನು ಬಾಳ ಸಂಗಾತಿಯಾಗಿ ಮಾಡಿಕೊಂಡರು. ದಾಸಿಮಯ್ಯ ಅವರಿಗೆ ಕೇವಲ ಪತ್ನಿಯಾಗಿರದ ದುಗ್ಗಳೆ, ಅವರ ಒಲವಿನ ಕಣ್ಣಾದರು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ ರಾಮನಾಥ’ ಎಂಬ ದಾಸಿಮಯ್ಯನ ವಚನದ ಆಸೆಯದಂತೆ ಸಹಬಾಳ್ವೆಯಿಂದ ಸಂಸಾರ ನಡೆಸಿದರು. ಪತಿಗೆ ತಕ್ಕ ಸತಿಯಾಗಿ ಅವರೂ ವಚನಗಳು ರಚಿಸಿದರು.ದಾಸಿಮಯ್ಯ ಅವರು ಕಾಯಕ, ದಾಸೋಹ ಮತ್ತು ಜ್ಞಾನಬೋಧನೆ ಮಾಡುತ್ತಾ ಜನಸಾಮಾನ್ಯರು ಆಡುವ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿದರು. ದಾಸಿಮಯ್ಯ ಅವರಿಂದ ಆರಂಭವಾದ ವಚನ ಸಾಹಿತ್ಯದ ಝರಿ ಮುಂದೆ ನದಿಯಾಗಿ ವಿಸ್ತಾರಗೊಂಡು ತುಂಬು ಹರಿಯುತ್ತಾ ಸಾಗಿ, ಅದು ಬಸವಣ್ಣನವರ ಕಾಲಕ್ಕೆ ಸಮೃದ್ಧವಾಗಿ ನಾಡಿನ ತುಂಬೆಲ್ಲ ಹರಿಡಿಕೊಂಡಿತು.ಅಪ್ಪಟ ಶಿವಭಕ್ತರಾಗಿದ್ದ ದಾಸಿಮಯ್ಯ ಅವರು ರಾಮನಾಥ ದೇವರ ಹೆಸರಲ್ಲಿ ‘ರಾಮನಾಥ’ ಎಂಬ ಅಂಕಿತ ನಾಮದೊಂದಿಗೆ ನೂರಾರು ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ಸಮಾಜಮುಖಿ ಚಿಂತನೆ, ಪಂಚ ಭೂತಗಳು ಮತ್ತು ದೈವ ಶಕ್ತಿಯ ತಳುಕು ಜತೆಗೆ ಪರಸ್ಪರ ಸಹಭಾಳ್ವೆಯ ಸಮಾಜದ ಪರಿವರ್ತನೆಯ ಚಿಂತನೆ ಅಡಗಿದೆ. ಕೆಲ ವಚನಗಳಲ್ಲಿ ಸೌಮ್ಯತೆ ಮೂಲಕ ತಿಳಿಸಿದರೇ ಇನ್ನು ಕೆಲವು ವಚನಗಳಲ್ಲಿ ಶಬ್ದಗಳ ಕಠಿಣತೆಯ ಮೂಲಕ ಎಚ್ಚರಿಕೆ ಸಂದೇಶಗಳನ್ನು ನಾಡಿಗೆ ರವಾನಿಸಿದ್ದಾರೆ.10 ಮತ್ತು 11 ನೇ ಶತಮಾನದಲ್ಲಿನ ಸಂದರ್ಭದಲ್ಲಿಯೇ ಮುದನೂರು ಭೂಮಿ ಫಲವತ್ತಾಗಿದ್ದು, ಇಲ್ಲಿನ ಜಲಸಂಪತ್ತನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದರು. ಆದ್ದರಿಂದ ಇದನ್ನು ‘ತವನಿಧಿ’ ಎಂದು ಕರೆಯಲಾಗುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.ಬಸವ ಪೂರ್ವ ಯುಗದಲ್ಲಿರುವ ಮುದನೂರಿನ ದೇವರ ದಾಸಿಮಯ್ಯ ಅವರ ಕ್ಷೇತ್ರವಾಗಿರುವ ಚಿಕ್ಕಮುದನೂರಿನಲ್ಲಿ 10 ಹಾಗೂ ಹಿರೇ ಮುದನೂರಿನಲ್ಲಿ 11 ಶಾಸನಗಳು ಲಭ್ಯವಾಗಿವೆ. ಕಲ್ಯಾಣ ಚಾಲುಕ್ಯರ ದೊರೆ ಆರನೇ ವಿಕ್ರಮಾದಿತ್ಯನ ಕಾಲದ್ದು ಹಾಗೂ 12ನೇ ಶತಮಾನದ ಎರಡು ಶಾಸನಗಳು ಕೂಡಿವೆ ಎನ್ನುತ್ತಾರೆ ಶಾಸನ ಸಂಶೋಧಕರಾದ ಡಿ.ಎನ್. ಅಕ್ಕಿ ಹಾಗೂ ಪಾಟೀಲ ಬಸನಗೌಡ ಅವರು.ದೇವರ ದಾಸಿಮಯ್ಯ ಸೇರಿದಂತೆ 101 ದೇವಸ್ಥಾನಗಳ ಉತ್ಖನನವನ್ನು ಗ್ರಾಮದಲ್ಲಿ ನಡೆಯಬೇಕಿದೆ. ಅಲ್ಲದೇ ಇಲ್ಲಿನ ಪುಷ್ಕರಣಿಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕಿದೆ ಎಂಬುದು ಗ್ರಾಮದ ಚನ್ನಯ್ಯಸ್ವಾಮಿ ಹಿರೇಮಠ, ಪ್ರಭುಗೌಡ ಹರನಾಳ, ಬಸನಗೌಡ ಮಾಲಿಪಾಟೀಲ ಅವರ ಅಭಿಮತ.ಮುದನೂರು ಗ್ರಾಮದಲ್ಲಿನ ಪುಷ್ಕರಣಿಮುದನೂರಿನ ರಾಮನಾಥ ದೇವಸ್ಥಾನ: ‘11 ನೇ ಶತಮಾನದಲ್ಲಿ ನಿರ್ಮಿಸಲಾದ ರಾಮನಾಥ ದೇವಸ್ಥಾನವು ಪೂರ್ವ ಮತ್ತು ಪಶ್ಚಿಮಾಭಿಮುಖವಾದ ಗರ್ಭ ಗೃಹ ಹೊಂದಿವೆ. ಅಂತರಾಳ ಮತ್ತು ನವರಂಗ ಹೊಂದಿದ್ದು, ಉತ್ತರ ಮತ್ತು ದಕ್ಷಿಣಾಭಿಮುಖವಾಗಿ ಪ್ರವೇಶ ದ್ವಾರಗಳಿವೆ. ಒಂದು ದೇವಸ್ಥಾನದಲ್ಲಿ ರಾಮನಾಥ ಲಿಂಗವಿದ್ದು, ಅದರ ಮಧ್ಯದಲ್ಲಿ ನಂದಿ ಹಾಗೂ ಇನ್ನೊಂದು ಭಾಗದಲ್ಲಿ ಅದರ ಮುಂಭಾಗದಲ್ಲಿ ಈಚೆಗೆ ದಾಸಿಮಯ್ಯ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿಲಾಗಿದೆ’ ಎಂದು ಗ್ರಾಮಸ್ಥರಾದ ಮಲಕಣ್ಣ ಸಾಹುಕಾರ ಹೊನಮಕಲ್ಲ, ಗೋಪಾಸಿಂಗ್ ಹಜೇರಿ ಹೇಳುತ್ತಾರೆ.ಇನ್ನು ವಚನ ಸಾಹಿತ್ಯಕ್ಕೆ ಬುನಾದಿ ಹಾಕಿರುವ ಪ್ರಥಮ ವಚನಕಾರ ದೇವರ ದಾಸಿಮಯ್ಯ ಅವರ ಕ್ಷೇತ್ರ ಮುದನೂರು. ಇಲ್ಲಿ ರಾಜ್ಯದ ವಿವಿಧ ಭಾಗಳಿಂದ ಭಕ್ತರು ಬರುತ್ತಾರೆ. ಆದರೆ, ಅವರಿಗೆ ಸೂಕ್ತವಾದ ಮೂಲಸೌಕರ್ಯಗಳು ಲಭ್ಯವಾಗುತ್ತಿಲ್ಲ. ಅಂದಾಜು ₹10 ಕೋಟಿ ವೆಚ್ಚದಲ್ಲಿ ದೇವಸ್ಥಾನ ಹಾಗೂ ಪುಷ್ಕರಣಿಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಆದರೆ, ಇಂದಿಗೂ ಮೂರು ಪುಷ್ಕರಣಿಗಳು ಹಾಗೆಯೇ ಉಳಿದುಕೊಂಡಿವೆ.ಮುದನೂರು ಗ್ರಾಮದಲ್ಲಿನ ಆದ್ಯವಚನಕಾರ ದೇವರದಾಸಿಮಯ್ಯ ಅವರ ಮೂರ್ತಿ‘ಇಲ್ಲಿನ 101 ದೇವಸ್ಥಾನಗಳ ಕುರಿತು ಉತ್ಖನನ ಕಾರ್ಯ ನಡೆಯಬೇಕಿದೆ. ದೇವಸ್ಥಾನದ ಮೇಲ್ಭಾಗದಲ್ಲಿರುವ 161 ಮನೆಗಳ ಸ್ಥಳಾಂತರ ಕಾರ್ಯ ಇನ್ನೂ ನಡೆದಿಲ್ಲ. ಕೇವಲ ಮನೆಗಳಿಗೆ ಸಂಖ್ಯೆ ನೀಡಿದ್ದು, ಗ್ರಾಮದ ಹೊರವಲಯದಲ್ಲಿ ಅಂದಾಜು 10 ಎಕರೆ ಪ್ರದೇಶದಲ್ಲಿ ನಿವೇಶನ ಮಾಡಲಾಗುತ್ತಿದೆ. ಆದರೆ, ಅದು ಇನ್ನೂ ಪೂರ್ಣಗೊಳ್ಳುವುದು ಯಾವಾಗ’ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಕೃಷ್ಣಾ ರಡ್ಡಿ ಹಾಗೂ ಮಲ್ಲನಗೌಡ ನಗನೂರು, ಸೈಯದ್ ಸಾಬ ತಾಳಿಕೋಟೆ ಪ್ರಶ್ನಿಸುತ್ತಾರೆ.‘ನಮ್ಮ ಗ್ರಾಮದ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದಲ್ಲಿ ಇಲ್ಲಿ ದೊಡ್ಡ ಪ್ರಮಾಣದ ಐತಿಹಾಸಿಕ ಮಾಹಿತಿ ಕಣಜವೇ ಸಿಗುವ ಸಾಧ್ಯತೆ ಇದೆ’ ಎನ್ನುತ್ತಾರೆ ದೇವರದಾಸಿಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರಡ್ಡಿ ಚೌದ್ರಿ.‘ರಾಮತೀರ್ಥ, ಲಕ್ಷ್ಮಣ ತೀರ್ಥ, ಪಾಂಡವ ತೀರ್ಥ, ಸಂಗಮ ತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥ, ಮರಳು ತೀರ್ಥ ಎಂಬ ತೀರ್ಥಗಳಿವೆ. ರಾಮತೀರ್ಥ ಮತ್ತು ಲಕ್ಷ್ಮಣ ತೀರ್ಥ ಹೊರತುಪಡಿಸಿ ಎಲ್ಲ ತೀರ್ಥಗಳು ಹೂಳು ತುಂಬಿಕೊಂಡಿವೆ. ಅವುಗಳ ಸ್ವಚ್ಛತೆಗೆ ಇಲಾಖೆ ಕಾಳಜಿ ವಹಿಸಲಿ’ ಎನ್ನುತ್ತಾರೆ ಗ್ರಾಮಸ್ಥರಾದ ರಮೇಶ ಸಾಹುಕಾರ ಕೊಳ್ಳಿ, ಭೀಮರೆಡ್ಡಿ ಬೇಕಿನಾಳ.ದಾಸಿಮಯ್ಯ ಅವರ ವಚನಗಳು:ಕರಿಯನಿತ್ತಡೆ ಒಲ್ಲೆ ಸಿರಿಯ ನಿತ್ತಡೆ ಒಲ್ಲೆಹಿರಿದಪ್ಪ ರಾಜ್ಯ ನಿತ್ತಡೆ ಒಲ್ಲೆನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತೊಡೆನಿಮ್ಮ ನಿತ್ತೆ ಕಾಣಾ ರಾಮನಾಥಕತ್ತೆ ಬಲ್ಲೂದೆ ಕಸ್ತೂರಿಯ ವಾಸನೆತೊತ್ತು ಬಲ್ಲೊಳಾ ಗುರುಹಿರಿಯರುತ್ತಮನೆಂದುಭಕ್ತಿಯನರಿಯದ ವ್ಯರ್ಥ ಜೀವಿಗಳುನಿಮ್ಮನೆತ್ತ ಬಲ್ಲಿರೈ ರಾಮನಾಥಅರ್ಥ ಉಂಟೆಂದು ಅಹಂಕರಿಸಿ ಮಾಡುವವನ ಭಕ್ತಿ ತೊತ್ತಿನ ಕೂಟದತೋರ್ಯಮೇಳದಂತೆತನು ಮನ ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯಮನೆಯ ಕೂಳು ಶುನಕನಾ ಬಾಯ ಎಲುವ ಶುನಕ ತಿಂದಂತೆ ಕಾಣಾ ರಾಮನಾಥಕಾಯ ನಿಮ್ಮ ದಾನ ಜೀವ ನಿಮ್ಮ ದಾನಕಾಯ ಜೀವ ಉಳ್ಳಲ್ಲಿಯೇ ನಿಮ್ಮ ಪೂಜಿಸದ ನಾಯಿಗಳನೆನೆಂಬೆ ರಾಮನಾಥಸತಿ ಪತಿಗಳಲ್ಲಿ ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷವ ಬೆರೆತಂತೆ ಕಾಣಾ ರಾಮನಾಥಅಂತರಂಗ ಬಹಿರಂಗದಲ್ಲಿಸರ್ವಾಚಾರ ಸಂಪತ್ತಿನ ಆಚರಣೆಯನರಿಯದಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿಅಂತರಂಗದ ಜಪವ ಹೇಳುವನೊಬ್ಬಆಚಾರದ್ರೋಹಿ ನೋಡಾ, ರಾಮನಾಥ.ಆಡಬಾರದ ಬಯಲುಸೂಡಬಾರದ ಬಯಲುನುಡಿಯಬಾರದ ಬಯಲುಹಿಡಿಯಬಾರದ ಬಯಲುಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.ಮುದನೂರು ಗ್ರಾಮದಲ್ಲಿನ ಪುಷ್ಕರಣಿಮಾರ್ಗ: ಮುದನೂರು ಗ್ರಾಮಕ್ಕೆ ತೆರಳಲು ಯಾದಗಿರಿ, ವಿಜಯಪಯರ ಮತ್ತು ಕಲಬುರಗಿಯಿಂದ ಬಸ್ ವ್ಯವಸ್ಥೆ ಇದೆ. ಹುಣಸಗಿ ಹಾಗೂ ಕೆಂಭಾವಿಯಿಂದಲೂ ಬಸ್ ಮೂಲಕ ತಲುಪಬಹುದು.