ತುಮಕೂರು | ಅಗ್ರಿಗೋಲ್ಡ್: ದಾಖಲೆ ಪರಿಶೀಲನೆಗೆ ಮುಗಿಬಿದ್ದ ಜನ
ತುಮಕೂರು: ಅಗ್ರಿಗೋಲ್ಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಠೇವಣಿದಾರರ ಬಾಂಡ್ ಮತ್ತು ದಾಖಲೆ ಪರಿಶೀಲನಾ ಅಭಿಯಾನ ಶುರುವಾಗಿದ್ದು, ಪರಿಶೀಲನೆಗಾಗಿ ಜಿಲ್ಲೆಯ ಜನ ಬೆಳಗ್ಗೆಯಿಂದಲೇ ಸರತಿ ಸಾಲು ನಿಲ್ಲುತ್ತಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿ ಪರಿಶೀಲನಾ ಕೇಂದ್ರ ಆರಂಭಿಸಲಾಗಿದೆ. ಅ.27ರಿಂದ ತಾಲ್ಲೂಕ

ತುಮಕೂರು: ಅಗ್ರಿಗೋಲ್ಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಠೇವಣಿದಾರರ ಬಾಂಡ್ ಮತ್ತು ದಾಖಲೆ ಪರಿಶೀಲನಾ ಅಭಿಯಾನ ಶುರುವಾಗಿದ್ದು, ಪರಿಶೀಲನೆಗಾಗಿ ಜಿಲ್ಲೆಯ ಜನ ಬೆಳಗ್ಗೆಯಿಂದಲೇ ಸರತಿ ಸಾಲು ನಿಲ್ಲುತ್ತಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಬಳಿ ಪರಿಶೀಲನಾ ಕೇಂದ್ರ ಆರಂಭಿಸಲಾಗಿದೆ. ಅ.27ರಿಂದ ತಾಲ್ಲೂಕುವಾರು ದಾಖಲೆ ಪರಿಶೀಲಿಸಲಾಗುತ್ತಿದೆ. ಸೋಮವಾರದ ತನಕ ಒಂದು ತಾಲ್ಲೂಕು ಸಹ ಪೂರ್ಣಗೊಂಡಿಲ್ಲ. ಆಂಧ್ರಪ್ರದೇಶ ಸರ್ಕಾರ ರಚಿಸಿದ ಸಿಐಡಿ ತಂಡದ ಇನ್ಸ್ಪೆಕ್ಟರ್ ಮತ್ತು ಮೂವರು ಜನ ಹೆಡ್ ಕಾನ್ಸ್ಟೆಬಲ್ಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ, ಅಗ್ರಿಗೋಲ್ಡ್ ಕಂಪನಿ ಏಜೆಂಟರು ನೆರವಾಗಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 59 ಸಾವಿರ ಜನ ಹಣ ಹೂಡಿಕೆ ಮಾಡಿದ್ದಾರೆ. ತುಮಕೂರು ತಾಲ್ಲೂಕಿನಲ್ಲಿ ಅಧಿಕ 14,800 ಠೇವಣಿದಾರರಿದ್ದಾರೆ. ಕಳೆದ ಐದು ದಿನಗಳಿಂದ ಕೊರಟಗೆರೆ ತಾಲ್ಲೂಕಿನ ಜನರ ದಾಖಲೆ ಪರಿಶೀಲಿಸಲಾಗುತ್ತಿದೆ. 27ರಂದು 123 ಜನರ ದಾಖಲೆ ಪಡೆದು, ಸ್ವೀಕೃತಿ ನೀಡಲಾಗಿದೆ. 28ರಂದು 114, 29ರಂದು 331, 30ರಂದು 337, 31ರಂದು 300 ಮಂದಿಯ ದಾಖಲೆ ಸ್ವೀಕರಿಸಲಾಗಿದೆ.ಒಂದು ತಾಲ್ಲೂಕಿಗೆ ಇಂತಿಷ್ಟು ದಿನ ಎಂದು ನಿಗದಿ ಪಡಿಸಲಾಗಿದೆ. ನಿಗದಿತ ದಿನದಂದು ಕೇಂದ್ರದ ಬಳಿ ಬರುವಂತೆ ಠೇವಣಿದಾರರಿಗೆ ಸೂಚಿಸಲಾಗಿದೆ. ಸಮರ್ಪಕ ಮಾಹಿತಿ ಕೊರತೆಯಿಂದ ವಿವಿಧ ತಾಲ್ಲೂಕುಗಳ ಸಾವಿರಾರು ಜನರು ಕೇಂದ್ರದ ಬಳಿ ಜಮಾಯಿಸುತ್ತಿದ್ದಾರೆ. ಮಕ್ಕಳು, ಯುವಕ–ಯುವತಿಯರು, ವೃದ್ಧರು ಇಡೀ ದಿನ ಕಾಯುತ್ತಿದ್ದಾರೆ.₹5 ಸಾವಿರದಿಂದ ₹1 ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಶೇ 12 ಬಡ್ಡಿ ನೀಡಲಾಗುವುದು ಎಂದು ಕಂಪನಿಯವರು ತಿಳಿಸಿದ್ದರು. ಇದನ್ನು ನಂಬಿದ ಜನ ಕೋಟ್ಯಂತರ ರೂಪಾಯಿ ಹಣ ನೀಡಿದ್ದರು. 2014ರ ಕೊನೆಯಲ್ಲಿ ಹಣ ಸಿಗದೆ ಹೂಡಿಕೆದಾರರು ಕಂಗಾಲಾಗಿದ್ದರು. ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ರಚಿಸಿದ ಸಿಐಡಿ ತಂಡ ಈಗ ದಾಖಲೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದೆ. 2027ರ ಜನವರಿ 9ರ ತನಕ ದಾಖಲೆ ಪರಿಶೀಲನೆ ಕಾರ್ಯ ನಡೆಯಲಿದೆ. ಬಳಿಕ ಜಿಲ್ಲೆಯ ಜನ ಎಷ್ಟು ಹಣ ಹೂಡಿಕೆ ಮಾಡಿದ್ದರು ಎಂಬುದರ ಕುರಿತು ನಿಖರ ಮಾಹಿತಿ ಸಿಗಲಿದೆ.‘2008ರಲ್ಲಿ ₹50 ಸಾವಿರ ಹೂಡಿಕೆ ಮಾಡಲಾಗಿತ್ತು. ಆರು ವರ್ಷದ ನಂತರ ₹1 ಲಕ್ಷ ಬರಬೇಕಾಗಿತ್ತು. ಕೊನೆಯ ಸಮಯದಲ್ಲಿ ಕಂಪನಿಗೆ ಬೀಗ ಹಾಕಲಾಯಿತು. 15ರಿಂದ 17 ವರ್ಷ ಕಂಪನಿ ಕೆಲಸಗಳು ಚೆನ್ನಾಗಿ ನಡೆದಿದ್ದವು. ಎರಡು ಬಾರಿ ಬಡ್ಡಿಯ ಜತೆಗೆ ಠೇವಣಿ ಹಣ ವಾಪಸ್ ಪಡೆದಿದ್ದೆ. ಮೂರನೇ ಸಲ ಹಣ ಕಳೆದುಕೊಂಡಿದ್ದೇನೆ’ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳ್ಳಾರ ಗ್ರಾಮದ ರಾಘವೇಂದ್ರ ಗುಪ್ತಾ ಪ್ರತಿಕ್ರಿಯಿಸಿದರು. ತಾಲ್ಲೂಕುವಾರು ದಿನಾಂಕ ನಿಗದಿ:ನ.2ರಿಂದ 7ರವರೆಗೆ ಚಿಕ್ಕನಾಯಕನಹಳ್ಳಿ 9ರಿಂದ 13ರವರೆಗೆ ತುರುವೇಕೆರೆ 16ರಿಂದ 21ರವರೆಗೆ ಶಿರಾ 23ರಿಂದ 28ರವರೆಗೆ ತಿಪಟೂರು. ನ.30ರಿಂದ ಡಿ.5ರವರೆಗೆ ಮಧುಗಿರಿ ಡಿ.7ರಿಂದ 11ರವರೆಗೆ ಕುಣಿಗಲ್ 14ರಿಂದ 19ರವರೆಗೆ ಗುಬ್ಬಿ 21ರಿಂದ 26ರವರೆಗೆ ಪಾವಗಡ 28ರಿಂದ 2027ರ ಜನವರಿ 9ರವರೆಗೆ ತುಮಕೂರು ತಾಲ್ಲೂಕಿನ ಠೇವಣಿದಾರರ ದಾಖಲೆ ಪರಿಶೀಲನೆ ಕಾರ್ಯ ನಡೆಯಲಿದೆ.