ಬಸವನಬಾಗೇವಾಡಿ: 42 ಅಂಗನವಾಡಿಗಳಿಗಿಲ್ಲ ಸ್ವಂತ ಕಟ್ಟಡ
ಬಸವನಬಾಗೇವಾಡಿ: ಪಟ್ಟಣದ 48 ಅಂಗನವಾಡಿ ಕೇಂದ್ರಗಳ ಪೈಕಿ 42 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮೀಣ ಭಾಗದಲ್ಲಿಯೂ 16 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಮತ್ತೊಂದೆಡೆ, ಹಲವು ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಮೂಲಸೌಲಭ್ಯಗಳ ಕೊರತೆಯಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಅನಾರೋಗ್ಯದ ಭೀತಿಯಲ್ಲೇ ಆಟ, ಪಾಠ ಕಲಿಯುವಂತಾಗಿದೆ.ತಾಲ

ಬಸವನಬಾಗೇವಾಡಿ: ಪಟ್ಟಣದ 48 ಅಂಗನವಾಡಿ ಕೇಂದ್ರಗಳ ಪೈಕಿ 42 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮೀಣ ಭಾಗದಲ್ಲಿಯೂ 16 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಮತ್ತೊಂದೆಡೆ, ಹಲವು ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಮೂಲಸೌಲಭ್ಯಗಳ ಕೊರತೆಯಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಅನಾರೋಗ್ಯದ ಭೀತಿಯಲ್ಲೇ ಆಟ, ಪಾಠ ಕಲಿಯುವಂತಾಗಿದೆ.ತಾಲ್ಲೂಕಿನ ಒಟ್ಟು 226 ಅಂಗನವಾಡಿ ಕೇಂದ್ರಗಳ ಪೈಕಿ 126 ಸ್ವಂತ ಕಟ್ಟಡಗಳಲ್ಲಿ, 16 ಶಾಲಾ ಕಟ್ಟಡಗಳಲ್ಲಿ, 5 ಪಂಚಾಯಿತಿ ಕಟ್ಟಡಗಳಲ್ಲಿ, 10 ಸಮುದಾಯ ಭವನಗಳಲ್ಲಿ ಹಾಗೂ ಒಂದು ಆರೋಗ್ಯ ಉಪಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದ 68 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿವೆ. ವಿಪರ್ಯಾಸವೆಂದರೆ ಪಟ್ಟಣದ 48 ಅಂಗನವಾಡಿ ಕೇಂದ್ರಗಳ ಪೈಕಿ 42 ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮೀಣ ಭಾಗದಲ್ಲಿಯೂ 16 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.ಬಸವನಬಾಗೇವಾಡಿ ಪಟ್ಟಣದ ಇಂದಿರಾನಗರದ ಅಂಗನವಾಡಿ ಕೇಂದ್ರ ಸ್ವಂತ ಕಟ್ಟಡ ಹೊಂದಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದೆ. ಶೌಚಾಲಯ ಹದಗೆಟ್ಟಿದ್ದು, ಒಳಾಂಗಣ ಮತ್ತು ಹೊರಾಂಗಣದಲ್ಲಿಯೂ ಸ್ವಚ್ಛತೆ ಮರೆಯಾಗಿದೆ. ಶಿಕ್ಷಕಿ ನಿಯಮಿತವಾಗಿ ಹಾಜರಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಮಕ್ಕಳ ಹಾಜರಾತಿ ವಿರಳವಾಗಿದೆ.ಇವಣಗಿ ಗ್ರಾಮದ ವಾಲ್ಮೀಕಿ ಭವನದ ಸಮೀಪದ ಮೂರು ಅಂಗನವಾಡಿ ಕೇಂದ್ರಗಳ ಮಧ್ಯದ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ದುರ್ವಾಸನೆ ಹಾಗೂ ಕಲುಷಿತ ವಾತಾವರಣ ಮಕ್ಕಳ ಆರೋಗ್ಯಕ್ಕೆ ಅಪಾಯ ತಂದೊಡ್ಡಿದೆ. ರಾಜನಾಳ ಗ್ರಾಮದ ಅಂಗನವಾಡಿಯಲ್ಲಿಯೂ ಇದೇ ಸ್ಥಿತಿ ಇದೆ. ಇವು ಕೇವಲ ಒಂದೆರಡು ಗ್ರಾಮಗಳ ಸಮಸ್ಯೆಗಳಲ್ಲ. ತಾಲ್ಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಕಟ್ಟಡ, ಶೌಚಾಲಯ, ಸ್ವಚ್ಛತೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.ಈ ಬಗ್ಗೆ ಮಾಹಿತಿ ಪಡೆಯಲು ಸಿಡಿಪಿಒ ಶಿಲ್ಪಾ ಹಿರೇಮಠ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಒಂದು ವಾರ ರಜೆಯಲ್ಲಿರುವುದಾಗಿ ತಿಳಿಸಿ, ಸೂಕ್ತ ಮಾಹಿತಿ ಒದಗಿಸಲಿಲ್ಲ.ಶಂಕರಗೌಡ ಬಿರಾದಾರ ಅಧ್ಯಕ್ಷ ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಪರಿಶೀಲಿಸಿ ಸ್ವಚ್ಚತೆ ಸ್ವಂತ ಕಟ್ಟಡ ದುರಸ್ತಿ ಹಾಗೂ ಮೂಲಸೌಲಭ್ಯ ಕಲ್ಪಿಸಿ ಆರೋಗ್ಯಕರ ಕಲಿಕಾ ವಾತಾವರಣ ಒದಗಿಸಬೇಕು - ‘ವರದಿ ಪಡೆದು ಪರಿಹಾರ ಕ್ರಮ’ ಬಸವನಬಾಗೇವಾಡಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಕುರಿತು ಮೇಲ್ವಿಚಾರಕರು ಹಾಗೂ ಪಿಡಿಒಗಳ ಜಂಟಿ ಸಮಿತಿ ರಚಿಸಿ ಪರಿಶೀಲನಾ ವರದಿ ಪಡೆದು ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಗ್ರಾಮಠಾಣ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗುವುದು. ಸಿಗದಿದ್ದರೆ ಶಾಲಾಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುವುದು. ಪಟ್ಟಣದಲ್ಲಿ ನಿವೇಶನ ಅಥವಾ ಬಡಾವಣೆಗಳ ಸಾರ್ವಜನಿಕ ಸೌಲಭ್ಯ (ಸಿಎ) ಜಾಗ ಪಡೆಯುವ ಕುರಿತು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ‘ಪ್ರಜಾವಾಣಿ’ಗೆ ತಿಳಿಸಿದರು.