ಭದ್ರಾ ಮೇಲ್ದಂಡೆ ನಾಲೆ ನೀರು 2 ದಿನದಲ್ಲಿ ನಿಲ್ಲಿಸದಿದ್ದರೆ ಹೋರಾಟ:ತೇಜಸ್ವಿ ಪಟೇಲ್
ದಾವಣಗೆರೆ: ಭದ್ರಾ ಜಲಾಶಯದಿಂದ ಮೇಲ್ದಂಡೆ ನಾಲೆಗೆ ಹರಿಸುತ್ತಿರುವ 1 ಟಿಎಂಸಿ ಅಡಿ ನೀರು ಸ್ಥಗಿತಗೊಳಿಸಲು ಸರ್ಕಾರಕ್ಕೆ ಇನ್ನೂ ಎರಡು ದಿನ ಕಾಲಾವಕಾಶ ನೀಡುತ್ತೇವೆ. ಸ್ಪಂದಿಸದಿದ್ದರೆ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರು ಒಗ್ಗೂಡಿ ಹೋರಾಟ ರೂಪಿಸುತ್ತೇವೆ ಎಂದು ನೀರಾವರಿ ಸಲಹಾ ಸಮಿತಿಯ (ಐಸಿಸಿ) ರೈತ ಪ್ರತಿನಿಧಿ ತೇಜಸ್ವಿ ಪಟೇಲ್ ಎಚ್ಚರಿಕೆ ನೀಡಿದರು.‘ಭದ್ರಾ ಮ

ದಾವಣಗೆರೆ: ಭದ್ರಾ ಜಲಾಶಯದಿಂದ ಮೇಲ್ದಂಡೆ ನಾಲೆಗೆ ಹರಿಸುತ್ತಿರುವ 1 ಟಿಎಂಸಿ ಅಡಿ ನೀರು ಸ್ಥಗಿತಗೊಳಿಸಲು ಸರ್ಕಾರಕ್ಕೆ ಇನ್ನೂ ಎರಡು ದಿನ ಕಾಲಾವಕಾಶ ನೀಡುತ್ತೇವೆ. ಸ್ಪಂದಿಸದಿದ್ದರೆ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರು ಒಗ್ಗೂಡಿ ಹೋರಾಟ ರೂಪಿಸುತ್ತೇವೆ ಎಂದು ನೀರಾವರಿ ಸಲಹಾ ಸಮಿತಿಯ (ಐಸಿಸಿ) ರೈತ ಪ್ರತಿನಿಧಿ ತೇಜಸ್ವಿ ಪಟೇಲ್ ಎಚ್ಚರಿಕೆ ನೀಡಿದರು.‘ಭದ್ರಾ ಮೇಲ್ದಂಡೆ ನಾಲೆಗೆ 1 ಟಿಎಂಸಿ ಅಡಿ ನೀರು ಹರಿಸುವ ಸಂಬಂಧ ಹೊರಡಿಸಿದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತಿಗೆ ತಪ್ಪಿದ್ದಾರೆ. ಸೋಮವಾರ ಸಂಜೆಯಿಂದಲೇ ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಯುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ನಡೆದುಕೊಳ್ಳುವ ರೀತಿ ಇದಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.‘ಹಣ ಹಂಚಿ ಚುನಾವಣೆ ಎದುರಿಸುವುದನ್ನು ನೋಡಿದ್ದೇವೆ. ನೀರು ಹರಿಸಿ ರಾಜಕೀಯ ಲಾಭ ಪಡೆಯುವ ಸ್ಥಿತಿ ನಿರ್ಮಾಣ ಆಗಿರುವುದಕ್ಕೆ ಬೇಸರವಿದೆ. ಬೇಸಿಗೆ ಅಗತ್ಯಕ್ಕೆ ನೀರು ಉಳಿಸಿಕೊಳ್ಳಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನೀರು ರಾಜಕಾರಣಕ್ಕೆ ಬಳಕೆ ಆಗುತ್ತಿರುವುದಕ್ಕೆ ಬೇಸರವಿದೆ. ನೈಸರ್ಗಿಕ ಸಂಪತ್ತನ್ನು ಮುಖ್ಯಮಂತ್ರಿ ವಿವೇಚನಾರಹಿತವಾಗಿ ಬಳಸುತ್ತಿದ್ದಾರೆ’ ಎಂದು ಆರೋಪಿಸಿದರು.‘ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲಲು ರಾಜ್ಯ ಸರ್ಕಾರ ಅಚ್ಚುಕಟ್ಟು ಪ್ರದೇಶದ ರೈತರನ್ನು ನಿರ್ಲಕ್ಷ್ಯ ಮಾಡಿದೆ. ರೈತರ ಪರವಾಗಿ ಧ್ವನಿ ಎತ್ತಬೇಕಾಗಿದ್ದ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿ ಮಾತಿಗೆ ತಪ್ಪಿದ್ದು, ಸರ್ಕಾರದ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡಿದೆ’ ಎಂದರು.ರೈತ ಮುಖಂಡರಾದ ಗಂಗಾಧರ್, ನಾಗರಾಜ್, ವಿರೂಪಾಕ್ಷಪ್ಪ, ಅಲ್ಲಮಪ್ರಭು ಸ್ವಾಮಿ, ತಿಪ್ಪೇಸ್ವಾಮಿ ಹಾಜರಿದ್ದರು.‘ಚಿತ್ರದುರ್ಗಕ್ಕೆ ನೀರು: ವಿರೋಧವಿಲ್ಲ’‘ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಕೊಡುವುದಕ್ಕೆ ವಿರೋಧವಿಲ್ಲ. ಬರ ಪರಿಸ್ಥಿತಿಯಂತಹ ಸಂಕಷ್ಟದ ಸಮಯದಲ್ಲಿ ಅಚ್ಚುಕಟ್ಟು ಪ್ರದೇಶವನ್ನು ನಿರ್ಲಕ್ಷಿಸಿ ಕೈಗೊಂಡ ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಆಕ್ಷೇಪವಿದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಸ್ಪಷ್ಟಪಡಿಸಿದರು.‘ತುಂಗಾ ನದಿಯ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡುವ ಮೊದಲೇ ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಸಲು ಅವಕಾಶ ನೀಡಿದ್ದು ತಪ್ಪು. ಇದನ್ನು ಮೊದಲೇ ವಿರೋಧಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಜನರ ಮೇಲಿನ ಪ್ರೀತಿಯಿಂದ ಸರ್ಕಾರ ನೀರು ಹರಿಸುತ್ತಿಲ್ಲ. ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಕಿಡಿಕಾರಿದರು.ಸಾಧ್ಯವಾಗದ ಸಿಎಂ ಭೇಟಿಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರೈತರ ನಿಯೋಗವು ಮಂಗಳವಾರ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಿಯೋಗದ ನೇತೃತ್ವ ವಹಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕೊನೆಯ ಗಳಿಗೆಯಲ್ಲಿ ಅನಾರೋಗ್ಯದ ಕಾರಣ ನೀಡಿ ಚಿತ್ರದುರ್ಗ ಪ್ರವಾಸವನ್ನು ರದ್ದುಪಡಿಸಿದರು.‘ನಿಗದಿಯಂತೆ ಬೆಳಿಗ್ಗೆ 11ಕ್ಕೆ ಸಚಿವರ ಮನೆಯಲ್ಲಿದ್ದೆವು. ಅಲ್ಲಿಂದ ಹಿರಿಯೂರಿಗೆ ತೆರಳಿ ಮುಖ್ಯಮಂತ್ರಿ ಭೇಟಿಯಾಗಬೇಕಿತ್ತು. ಒಂದೂವರೆ ಗಂಟೆ ಕಾದರೂ ಸಚಿವರು ಸಿಗಲಿಲ್ಲ. ದೂರವಾಣಿ ಕರೆ ಕೂಡ ಸ್ವೀಕರಿಸಲಿಲ್ಲ. ಸಚಿವರು ಭುಜದ ನೋವಿನಿಂದ ಬಳಲುತ್ತಿದ್ದಾರೆ ಎಂಬ ಸಬೂಬು ಸಿಕ್ಕಿತು. ನ.4ರಂದು ಸಿಎಂ ಭೇಟಿಯಾಗುವುದಾಗಿ ಸಚಿವರು ಆಶ್ವಾಸನೆ ನೀಡಿದ್ದಾರೆ. ಅವರ ಈ ನಡೆ ಅನುಮಾನಾಸ್ಪದವಾಗಿದೆ’ ಎಂದು ತೇಜಸ್ವಿ ಪಟೇಲ್ ಬೇಸರ ವ್ಯಕ್ತಪಡಿಸಿದರು.ತೇಜಸ್ವಿ ಪಟೇಲ್, ರೈತ ಪ್ರತಿನಿಧಿ, ನೀರಾವರಿ ಸಲಹಾ ಸಮಿತಿ, ಭದ್ರಾ ಅಚ್ಚುಕಟ್ಟುಭದ್ರಾ ಅಚ್ಚುಕಟ್ಟು ಪ್ರದೇಶದ ರೈತರನ್ನು ಕೆಣಕಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಭದ್ರಾ ಮೇಲ್ದಂಡೆ ನಾಲೆಗೆ ಧಕ್ಕೆ ಆಗುವ ಮಟ್ಟಕ್ಕೆ ಹೋರಾಟ ರೂಪುಗೊಳ್ಳಲಿದೆ..