ಬಳ್ಳಾರಿ–ವಿಜಯನಗರ ಜಿಲ್ಲೆಗಳಲ್ಲಿ ಹಿರಿಯರಿಗೆ ನ್ಯುಮೋಕಾಕಲ್ ಲಸಿಕೆ
ಹರಿಶಂಕರ್ ಆರ್.ಬಳ್ಳಾರಿ: ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ನ್ಯುಮೋಕಾಕಲ್ ಲಸಿಕೆಯನ್ನು ಈಗ 60 ವರ್ಷ ಮೇಲ್ಪಟ್ಟವರಿಗೂ ವಿಸ್ತರಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಪ್ರಸ್ತಾವಗಳಿಗೆ ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ’ವು ಅನುಮೋದನೆ ನೀಡಿದೆ.ಈ ಯೋಜನೆಯ ಅಡಿಯಲ್ಲಿ ಎರಡೂ ಜಿಲ್ಲೆಗಳ

ಹರಿಶಂಕರ್ ಆರ್.ಬಳ್ಳಾರಿ: ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ನ್ಯುಮೋಕಾಕಲ್ ಲಸಿಕೆಯನ್ನು ಈಗ 60 ವರ್ಷ ಮೇಲ್ಪಟ್ಟವರಿಗೂ ವಿಸ್ತರಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಪ್ರಸ್ತಾವಗಳಿಗೆ ‘ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ’ವು ಅನುಮೋದನೆ ನೀಡಿದೆ.ಈ ಯೋಜನೆಯ ಅಡಿಯಲ್ಲಿ ಎರಡೂ ಜಿಲ್ಲೆಗಳಿಂದ ಒಟ್ಟು 45 ಸಾವಿರ ಹಿರಿಯ ನಾಗರಿಕರಿಗೆ ₹15.75 ಕೋಟಿ ವೆಚ್ಚದಲ್ಲಿ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 23,500 ಹಿರಿಯರಿಗೆ ಲಸಿಕೆ ನೀಡುವ ಗುರಿ ಇದ್ದು, ಯೋಜನಾ ವೆಚ್ಚ ₹8.22 ಕೋಟಿಯಾಗಲಿದೆ. ಕಂಪ್ಲಿ, ಕುರುಗೋಡು, ಸಿರುಗುಪ್ಪ, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳು ಇದರ ವ್ಯಾಪ್ತಿಯಲ್ಲಿವೆ.ವಿಜಯನಗರ ಜಿಲ್ಲೆಯ 21,500 ಹಿರಿಯರನ್ನು ಗುರಿಯಾಗಿಸಲಾಗಿದ್ದು, ವೆಚ್ಚ ₹7.52 ಕೋಟಿ. ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮತ್ತು ಹೊಸಪೇಟೆ ತಾಲ್ಲೂಕುಗಳು ಇದರಲ್ಲಿ ಸೇರಿವೆ.ಎರಡೂ ಯೋಜನೆಗಳು ಅಲ್ಪಾವಧಿಯವು (ಒಂದು ವರ್ಷಕ್ಕಿಂತ ಕಡಿಮೆ). ಆಯಾ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳೇ ಈ ಯೋಜನೆಯನ್ನು ಜಾರಿಗೆ ತರಲಿವೆ.ಯೋಜನೆಯ ಉದ್ದೇಶ: ನ್ಯುಮೋಕಾಕಲ್ ಸೋಂಕುಗಳಿಂದ ಹಿರಿಯರನ್ನು ರಕ್ಷಿಸುವುದು ಮತ್ತು ಸೋಂಕಿನಿಂದ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಯೋಜನೆಯ ಮೂಲ ಉದ್ದೇಶ.ಸದ್ಯ ನಿಯಮಿತ ಲಸಿಕಾ ಕಾರ್ಯಕ್ರಮದಡಿ ಐದು ವರ್ಷದೊಳಗಿನ ಮಕ್ಕಳಿಗೆ ಮತ್ತು 10 ಹಾಗೂ 16 ವರ್ಷದ ಹದಿಹರೆಯದವರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ, ನ್ಯುಮೋಕಾಕಲ್ ಕಾಯಿಲೆಯ ತೀವ್ರತೆಯನ್ನು ಹೆಚ್ಚಿಸುವ ದೀರ್ಘಕಾಲಿಕ ಕಾಯಿಲೆಗಳೂ ಹೆಚ್ಚುತ್ತಿವೆ. ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಉದ್ದೇಶಿತ ಲಸಿಕೆ ಅಗತ್ಯ ಎಂದು ಯೋಜನೆಯಲ್ಲಿ ವಿವರಿಸಲಾಗಿದೆ.ಅಪಾಯ ಹೆಚ್ಚಿರುವ ಹಿರಿಯರಿಗೆ ‘ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ (ಪಿಸಿವಿ)’ ನೀಡಿದರೆ ಸೋಂಕು, ತೊಡಕುಗಳು, ಆಸ್ಪತ್ರೆ ದಾಖಲಾತಿ ಮತ್ತು ಸಾವುಗಳನ್ನು ತಗ್ಗಿಸಬಹುದು ಎಂಬುದು ಇಲಾಖೆಗಳ ವಾದ. ಬಾಲ್ಯದಲ್ಲಿ ನ್ಯುಮೋಕಾಕಲ್ ಲಸಿಕಾ ಕಾರ್ಯಕ್ರಮ ಜಾರಿಯಲ್ಲಿರುವ ದೇಶಗಳು, ಸ್ಥಳೀಯ ರೋಗಭಾರ ಮತ್ತು ವೆಚ್ಚ ಪರಿಣಾಮಕಾರಿತ್ವವನ್ನು ಆಧರಿಸಿ ವಯಸ್ಕರ ಲಸಿಕೆಯನ್ನು ಪರಿಗಣಿಸಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ಮಾರ್ಗದರ್ಶನಕ್ಕೆ ಇದು ಅನುಗುಣವಾಗಿದೆ ಎಂದೂ ಪ್ರಸ್ತಾವಗಳಲ್ಲಿ ಹೇಳಲಾಗಿದೆ. ಇತ್ತೀಚೆಗೆ ನಡೆದ ಕೆಎಂಇಆರ್ಸಿ 32ನೇ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ, ಹೇಳಿದರು.ಏನಿದು ನ್ಯುಮೋಕೋಕಲ್ ಸೋಂಕು ಮತ್ತು ಲಸಿಕೆ?ನ್ಯುಮೋಕೋಕಲ್ ಬ್ಯಾಕ್ಟೀರಿಯಾದಿಂದ ಶ್ವಾಸಕೋಶದ ಸೋಂಕು, ನ್ಯುಮೋನಿಯಾ ಹಾಗೂ ಮೆನಿಂಜೈಟಿಸ್ ಉಂಟಾಗುತ್ತದೆ.ಜ್ವರ, ತೀವ್ರ ಕೆಮ್ಮು, ಎದೆನೋವು ಮತ್ತು ಉಸಿರಾಟದ ತೊಂದರೆ ಇದರ ಮುಖ್ಯ ಲಕ್ಷಣಗಳು. ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕುಂದುವ ಕಾರಣ, ಸೋಂಕಿನ ಅಪಾಯ ತಡೆಯಲು ನ್ಯುಮೋಕೋಕಲ್ ಲಸಿಕೆ ಅತ್ಯಂತ ನಿರ್ಣಾಯಕವಾಗಿದ್ದು ಇದು ಗಂಭೀರ ತೊಡಕುಗಳನ್ನು ಹಾಗೂ ಸಾವು-ನೋವುಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.ಇತ್ತೀಚೆಗೆ ನಡೆದ ಕೆಎಂಇಆರ್ಸಿ 32ನೇ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದೆ ನಾಗೇಂದ್ರ ಪ್ರಸಾದ್.ಕೆ, ಜಿಲ್ಲಾಧಿಕಾರಿ261104-25-1169865402