ಕರುನಾಡೋತ್ಸವ: ಶಾಲೆಯ ಗೋಡೆಗಳೇ ಕನ್ನಡದ ಪಾಠಶಾಲೆ
ಶಾಲೆಯೊಂದರ ತರಗತಿ ಕೊಠಡಿಗೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಕೇವಲ ಕಪ್ಪು ಹಲಗೆ, ಮೇಜು-ಕುರ್ಚಿಗಳಲ್ಲ. ಗೋಡೆಗಳೇ ಕನ್ನಡದ ಇತಿಹಾಸವನ್ನು ಹೇಳುತ್ತವೆ. ಒಂದು ಗೋಡೆಯ ಮೇಲೆ ಕನ್ನಡಾಂಬೆ, ಮತ್ತೊಂದೆಡೆ ಕನ್ನಡದ ಸಾಹಿತಿಗಳು, ಕವಿಗಳು, ರಾಜರು ಹಾಗೂ ನಾಡು-ನುಡಿಗಾಗಿ ಹೋರಾಡಿದ ಮಹನೀಯರ ಚಿತ್ರಗಳು. ಮತ್ತೊಂದು ಗೋಡೆಯ ಮೇಲೆ ಕನ್ನಡ ವರ್ಣಮಾಲೆ, ಕಾಗುಣಿತ, ವ್ಯಾಕರಣ, ಗಾದೆಗಳು,

ಶಾಲೆಯೊಂದರ ತರಗತಿ ಕೊಠಡಿಗೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಕೇವಲ ಕಪ್ಪು ಹಲಗೆ, ಮೇಜು-ಕುರ್ಚಿಗಳಲ್ಲ. ಗೋಡೆಗಳೇ ಕನ್ನಡದ ಇತಿಹಾಸವನ್ನು ಹೇಳುತ್ತವೆ. ಒಂದು ಗೋಡೆಯ ಮೇಲೆ ಕನ್ನಡಾಂಬೆ, ಮತ್ತೊಂದೆಡೆ ಕನ್ನಡದ ಸಾಹಿತಿಗಳು, ಕವಿಗಳು, ರಾಜರು ಹಾಗೂ ನಾಡು-ನುಡಿಗಾಗಿ ಹೋರಾಡಿದ ಮಹನೀಯರ ಚಿತ್ರಗಳು. ಮತ್ತೊಂದು ಗೋಡೆಯ ಮೇಲೆ ಕನ್ನಡ ವರ್ಣಮಾಲೆ, ಕಾಗುಣಿತ, ವ್ಯಾಕರಣ, ಗಾದೆಗಳು, ನುಡಿಗಟ್ಟುಗಳು... ಹೀಗೆ ಇಡೀ ಕೊಠಡಿಯೇ ಕನ್ನಡದ ಕಲಿಕಾ ಲೋಕವಾಗಿ ಮಾರ್ಪಟ್ಟಿದೆ.ಇದು ಎಚ್.ಡಿ. ಕೋಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ರೂಪುಗೊಳ್ಳುತ್ತಿರುವ ಕನ್ನಡ ಭಾಷಾ ಪ್ರಯೋಗಾಲಯಗಳ ವಿಶೇಷತೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ವಿವಿಧೆಡೆ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಭಾಷಾ ಪ್ರಯೋಗಾಲಯಗಳು ನಿರ್ಮಾಣಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಕಲಿಕೆಗೆ ಹೊಸ ಆಯಾಮ ನೀಡುವ ಜೊತೆಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಬೆಳೆಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಕನ್ನಡ ಕಲಿಕೆಗೆ ಹೊಸ ಪರಿಕಲ್ಪನೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸಿ.ಎನ್. ರಾಜು ಅವರು ಎಚ್.ಡಿ. ಕೋಟೆ ತಾಲ್ಲೂಕಿಗೆ ಅಧಿಕಾರ ವಹಿಸಿಕೊಂಡ ಬಳಿಕ ತಾಲ್ಲೂಕಿನ ಸರ್ಕಾರಿ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿ ಹಾಗೂ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕನ್ನಡ ಭಾಷೆಯನ್ನು ಕೇವಲ ಪಠ್ಯಪುಸ್ತಕದ ಮೂಲಕ ಕಲಿಸುವುದಕ್ಕಿಂತಲೂ ನೋಡುತ್ತಾ, ಓದುತ್ತಾ, ಅರ್ಥಮಾಡಿಕೊಳ್ಳುತ್ತಾ ಕಲಿಯುವಂತಹ ವಾತಾವರಣ ಕಲ್ಪಿಸಬೇಕೆಂಬ ಚಿಂತನೆ ಮೂಡಿತು.ಅದರ ಫಲವಾಗಿ ಪ್ರತಿ ಶಾಲೆಯಲ್ಲೂ ಒಂದು ಕೊಠಡಿಯನ್ನು ಕನ್ನಡದ ಕಲಿಕಾ ಕೇಂದ್ರವನ್ನಾಗಿ ರೂಪಿಸುವ ಯೋಜನೆ ರೂಪಿಸಲಾಯಿತು. ಆರಂಭಿಕವಾಗಿ ನೂರು ಶಾಲೆಗಳಲ್ಲಿ ಈ ಪ್ರಯೋಗ ಕೈಗೊಳ್ಳುವ ಉದ್ದೇಶ ಹೊಂದಲಾಗಿತ್ತು, ಅದೇ ರೀತಿ ಪ್ರಸ್ತುತ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಭಾಷಾ ಪ್ರಯೋಗಾಲಯಗಳು ಸಿದ್ಧಗೊಂಡಿವೆ.ಸಾಮಾನ್ಯವಾಗಿ ಪ್ರಯೋಗಾಲಯ ಎಂದರೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪಕರಣಗಳು ನೆನಪಾಗುತ್ತವೆ. ಆದರೆ ಇಲ್ಲಿ ಭಾಷೆಯನ್ನೇ ಪ್ರಯೋಗಾಲಯದ ವಿಷಯವನ್ನಾಗಿ ಮಾಡಲಾಗಿದೆ. ಮಕ್ಕಳಿಗೆ ಕನ್ನಡ ಭಾಷೆಯ ವಿವಿಧ ಆಯಾಮಗಳನ್ನು ಪರಿಚಯಿಸುವ ರೀತಿಯಲ್ಲಿ ತರಗತಿ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಗೋಡೆಗಳೇ ಪಾಠ ಹೇಳುತ್ತವೆ ಕನ್ನಡ ಭಾಷಾ ಪ್ರಯೋಗಾಲಯದ ಪ್ರಮುಖ ಆಕರ್ಷಣೆಯೇ ಗೋಡೆಗಳ ಮೇಲಿನ ಕಲಾಕೃತಿಗಳು. ಕನ್ನಡದ ಬಾವುಟದ ಬಣ್ಣಗಳಾದ ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಳಸಿಕೊಂಡು ಕೊಠಡಿಯನ್ನು ಆಕರ್ಷಕವಾಗಿ ಸಜ್ಜುಗೊಳಿಸಲಾಗಿದೆ.ಗೋಡೆಗಳ ಮೇಲೆ ಕನ್ನಡ ನಾಡು-ನುಡಿಯ ಇತಿಹಾಸಕ್ಕೆ ಸಂಬಂಧಿಸಿದ ಚಿತ್ರಗಳು, ಕನ್ನಡದ ಪ್ರಮುಖ ಸಾಹಿತಿಗಳು, ಕವಿಗಳು, ರಾಜರು ಹಾಗೂ ಕನ್ನಡಕ್ಕಾಗಿ ದುಡಿದ ಹೋರಾಟಗಾರರ ಭಾವಚಿತ್ರಗಳನ್ನು ಬಿಡಿಸಲಾಗಿದೆ. ಕನ್ನಡಾಂಬೆಯ ಚಿತ್ರವೂ ವಿದ್ಯಾರ್ಥಿಗಳ ಗಮನ ಸೆಳೆಯುವಂತೆ ಮೂಡಿಸಲಾಗಿದೆ.ಇದರ ಜತೆಗೆ ಕನ್ನಡ ವರ್ಣಮಾಲೆ, ಸ್ವರ-ವ್ಯಂಜನಗಳು, ಕಾಗುಣಿತ, ಪದ ರಚನೆ, ವ್ಯಾಕರಣದ ವಿವಿಧ ಅಂಶಗಳು, ಗಾದೆಗಳು, ನುಡಿಗಟ್ಟುಗಳು, ತಿಂಗಳುಗಳ ಹೆಸರುಗಳು, ಕವಿಗಳ ಪರಿಚಯ, ಕನ್ನಡದ ಮೊದಲುಗಳು ಸೇರಿದಂತೆ ಹಲವು ವಿಷಯಗಳನ್ನು ಚಿತ್ರ ಹಾಗೂ ಬರಹದ ಮೂಲಕ ಪರಿಚಯಿಸಲಾಗಿದೆ.ಹೀಗಾಗಿ ಪಠ್ಯಪುಸ್ತಕದಲ್ಲಿ ಓದಿದ ವಿಷಯವನ್ನು ವಿದ್ಯಾರ್ಥಿಗಳು ಪ್ರಯೋಗಾಲಯದ ಗೋಡೆಗಳ ಮೇಲೆ ಮತ್ತೆ ಮತ್ತೆ ನೋಡಲು ಸಾಧ್ಯವಾಗುತ್ತದೆ. ಇದರಿಂದ ಕಲಿಕೆ ಕೇವಲ ತರಗತಿಯ ಅವಧಿಗೆ ಸೀಮಿತವಾಗದೆ, ಮಕ್ಕಳ ಕಣ್ಣೆದುರಿನ ಶಾಶ್ವತ ಪಾಠವಾಗಿ ಉಳಿಯುತ್ತದೆ. ಶಿಕ್ಷಕರ ಸೃಜನಶೀಲತೆಗೆ ವೇದಿಕೆ ಪ್ರತಿ ಶಾಲೆಯ ಕನ್ನಡ ಭಾಷಾ ಪ್ರಯೋಗಾಲಯವೂ ಒಂದೇ ಮಾದರಿಯಲ್ಲಿ ಇರುವುದಿಲ್ಲ. ಆಯಾ ಶಾಲೆಯ ಶಿಕ್ಷಕರ ಕಲಾತ್ಮಕ ಕೌಶಲ್ಯ, ಸೃಜನಶೀಲತೆ ಹಾಗೂ ಲಭ್ಯವಿರುವ ಸಂಪನ್ಮೂಲಗಳಿಗೆ ಅನುಗುಣವಾಗಿ ಕೊಠಡಿಗಳನ್ನು ರೂಪಿಸಲಾಗಿದೆ.ಕೆಲವೆಡೆ ಶಿಕ್ಷಕರೇ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದರೆ, ಇನ್ನೂ ಕೆಲವು ಕಡೆ ಡ್ರಾಯಿಂಗ್ ಶೀಟ್ಗಳಲ್ಲಿ ವಿವಿಧ ವಿಷಯಗಳನ್ನು ಚಿತ್ರಿಸಿ ಪ್ರದರ್ಶಿಸಲಾಗಿದೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬಣ್ಣ, ಚಿತ್ರ ಹಾಗೂ ಸರಳ ವಾಕ್ಯಗಳನ್ನು ಬಳಸಿರುವುದು ವಿಶೇಷ.‘ನೋಡಿ ಕಲಿಯುವುದು, ಓದಿ ತಿಳಿಯುವುದು, ಹೇಳಿ ಅಭ್ಯಾಸ ಮಾಡುವುದು’ ಎಂಬ ರೀತಿಯಲ್ಲಿ ಭಾಷಾ ಕಲಿಕೆಯನ್ನು ಆಸಕ್ತಿದಾಯಕವಾಗಿಸುವ ಪ್ರಯತ್ನ ಇಲ್ಲಿ ಕಂಡುಬರುತ್ತದೆ.ದೇವಲಾಪುರ ಕಾಲೋನಿ ಶಾಲೆಯ ಶಿಕ್ಷಕ ರಾಘವೇಂದ್ರ ಅವರ ಪ್ರಕಾರ, ಕನ್ನಡ ಭಾಷೆಯ ವೈವಿಧ್ಯತೆ, ವ್ಯಾಕರಣ, ಗಾದೆ, ನುಡಿಗಟ್ಟು, ತಿಂಗಳುಗಳು, ಕವಿಗಳ ಪರಿಚಯ ಸೇರಿದಂತೆ ಹಲವು ವಿಷಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಯೋಗಾಲಯದಲ್ಲಿ ಅಳವಡಿಸಲಾಗಿದೆ.ಶಿಕ್ಷಕರೇ ಹೊತ್ತ ವೆಚ್ಚ ಕನ್ನಡ ಭಾಷಾ ಪ್ರಯೋಗಾಲಯದ ನಿರ್ಮಾಣಕ್ಕೆ ಶಿಕ್ಷಕರ ಆಸಕ್ತಿಯೂ ಪ್ರಮುಖ ಕಾರಣವಾಗಿದೆ. ಒಂದು ಪ್ರಯೋಗಾಲಯ ನಿರ್ಮಿಸಲು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸುಮಾರು ₹30 ಸಾವಿರದಿಂದ ₹40 ಸಾವಿರದವರೆಗೆ ವೆಚ್ಚವಾಗುತ್ತಿದೆ.ಕೆಲವು ಶಾಲೆಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ನೆರವು ನೀಡಿದ್ದರೆ, ಕೆಲವು ಶಾಲೆಗಳಲ್ಲಿ ಶಿಕ್ಷಕರೇ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಪ್ರಯೋಗಾಲಯ ನಿರ್ಮಿಸಿದ್ದಾರೆ.ತಾಲ್ಲೂಕಿನ ಬೆಳಗನಹಳ್ಳಿ, ಕೋಳಗಾಲ ಸೇರಿದಂತೆ ಹಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಒಟ್ಟಾಗಿ ಸಂಪನ್ಮೂಲ ಕ್ರೋಡೀಕರಿಸಿ ಕೊಠಡಿಗಳನ್ನು ಸಿದ್ಧಪಡಿಸಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಬೇಕು ಎಂಬ ಶಿಕ್ಷಕರ ಬದ್ಧತೆಗೆ ಇದು ಉದಾಹರಣೆಯಾಗಿದೆ. ಗಡಿ ತಾಲ್ಲೂಕಿನಲ್ಲಿ ಕನ್ನಡದ ಕಾಳಜಿಎಚ್.ಡಿ. ಕೋಟೆ ತಾಲ್ಲೂಕು ಕೇರಳ ಗಡಿಗೆ ಹೊಂದಿಕೊಂಡಿರುವುದರಿಂದ ಗಡಿ ಭಾಗದ ಹಲವು ಗ್ರಾಮಗಳಲ್ಲಿ ಬೇರೆ ಭಾಷೆಗಳ ಪ್ರಭಾವವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸುವುದು ಅಗತ್ಯವಾಗಿದೆ.ಕನ್ನಡ ಭಾಷಾ ಪ್ರಯೋಗಾಲಯಗಳು ಮಕ್ಕಳಲ್ಲಿ ಭಾಷೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಗೌರವ ಬೆಳೆಸುವ ಕೇಂದ್ರಗಳಾಗಬಹುದು ಎಂಬ ಆಶಯವನ್ನು ಶಿಕ್ಷಕರು ವ್ಯಕ್ತಪಡಿಸುತ್ತಾರೆ.ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳತ್ತ ಪೋಷಕರು ಹಾಗೂ ಮಕ್ಕಳ ಒಲವು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಹಾಗೂ ಸೃಜನಶೀಲ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ.ಈ ನಿಟ್ಟಿನಲ್ಲಿ ಕನ್ನಡ ಭಾಷಾ ಪ್ರಯೋಗಾಲಯಗಳು ಕೇವಲ ಭಾಷಾ ಕಲಿಕೆಯ ಸಾಧನವಲ್ಲ; ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿಭಿನ್ನ ಕಲಿಕಾ ಅನುಭವ ನೀಡುವ ಪ್ರಯತ್ನವೂ ಆಗಿದೆ.ಮಕ್ಕಳು ಶಾಲೆಗೆ ಬಂದಾಗ ಪುಸ್ತಕ ತೆರೆಯುವ ಮುನ್ನವೇ ಗೋಡೆಗಳ ಮೇಲಿನ ಚಿತ್ರಗಳು ಅವರ ಗಮನ ಸೆಳೆಯುತ್ತವೆ. ಚಿತ್ರಗಳನ್ನು ನೋಡಿ ಪ್ರಶ್ನಿಸುವ, ಶಿಕ್ಷಕರ ಬಳಿ ವಿವರಣೆ ಕೇಳುವ ಹಾಗೂ ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಅರ್ಥೈಸಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತದೆ.ಕನ್ನಡದ ಮೇಲಿನ ಪ್ರೀತಿ ಬಾಲ್ಯದಲ್ಲೇ “ಕನ್ನಡದ ಬಗೆಗಿನ ಪ್ರೀತಿಯನ್ನು ಬಾಲ್ಯದಲ್ಲೇ ಮಕ್ಕಳಲ್ಲಿ ಮೂಡಿಸಬೇಕು. ಕನ್ನಡವನ್ನು ಕೇವಲ ಒಂದು ವಿಷಯವಾಗಿ ಕಲಿಸುವುದಕ್ಕಿಂತ, ಭಾಷೆಯೊಂದಿಗೆ ಮಕ್ಕಳಿಗೆ ಭಾವನಾತ್ಮಕ ಸಂಬಂಧ ಬೆಳೆಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಬದಲಿಸಿ, ಮಕ್ಕಳನ್ನೂ ಪೋಷಕರನ್ನೂ ಶಾಲೆಯತ್ತ ಸೆಳೆಯುವ ಉದ್ದೇಶದಿಂದ ಇಂತಹ ಪ್ರಯತ್ನ ಕೈಗೊಳ್ಳಲಾಗಿದೆ. ಕೆಲವು ಶಾಲೆಗಳಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ಪ್ರಯೋಗಾಲಯಗಳನ್ನು ಉದ್ಘಾಟಿಸಿದ್ದು, ಇನ್ನೂ ಹಲವು ಶಾಲೆಗಳಿಗೆ ನಾನೇ ತೆರಳಿ ಉದ್ಘಾಟಿಸಿದ್ದೇನೆ,” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಹೇಳುತ್ತಾರೆ.“ಮಕ್ಕಳ ಕಲಿಕೆಗೆ ಪೂರಕ” “ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗುವ ಇಂತಹ ಪ್ರಯತ್ನಗಳು ಆಶಾದಾಯಕವಾಗಿವೆ. ಕನ್ನಡ ಭಾಷಾ ಪ್ರಯೋಗಾಲಯಗಳು ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಸುವುದರ ಜತೆಗೆ ಸರ್ಕಾರಿ ಶಾಲೆಗಳತ್ತ ಗಮನ ಸೆಳೆಯುವಂತಾಗಲಿ,” ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ್ ಅಭಿಪ್ರಾಯಪಡುತ್ತಾರೆ.ಕನ್ನಡದ ಇತಿಹಾಸವನ್ನೂ ತಿಳಿಯಬಹುದು“ನಮ್ಮ ಶಾಲೆಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ತೆರೆದಿರುವುದು ನಮಗೆ ತುಂಬಾ ಸಂತೋಷವಾಗಿದೆ. ಕನ್ನಡ ವರ್ಣಮಾಲೆಯಿಂದ ಹಿಡಿದು ಕನ್ನಡದ ಇತಿಹಾಸದವರೆಗೂ ಹಲವು ವಿಷಯಗಳನ್ನು ಇಲ್ಲಿ ನೋಡಬಹುದು. ಗೋಡೆಯ ಮೇಲಿನ ಚಿತ್ರಗಳನ್ನು ನೋಡುತ್ತಾ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇದರಿಂದ ಕನ್ನಡ ಭಾಷೆಯ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ.”— ವಿನಯ್ ಕುಮಾರ್, 7ನೇ ತರಗತಿ, ದೇವಲಾಪುರ ಕಾಲೋನಿ ಶಾಲೆ ನೋಡಿ ಕಲಿಯಲು ಸುಲಭ“ನಾವು ಒಂದನೇ ಮತ್ತು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ನಲಿ-ಕಲಿ ಮಾದರಿಯಲ್ಲಿ ಪಾಠ ಕಲಿಯುತ್ತಿದ್ದೆವು. ಅದೇ ರೀತಿಯಲ್ಲಿ ಈಗ ಕನ್ನಡ ಭಾಷೆಯನ್ನು ಸುಲಭವಾಗಿ ತಿಳಿದುಕೊಳ್ಳಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಕಾಗುಣಿತದಿಂದ ಹಿಡಿದು ವ್ಯಾಕರಣದ ಹಲವು ಅಂಶಗಳನ್ನು ಚಿತ್ರಗಳ ಮೂಲಕ ತೋರಿಸಿರುವುದರಿಂದ ನೋಡಿ ಕಲಿಯಲು ತುಂಬಾ ಸುಲಭವಾಗಿದೆ.”— ಅಖುಲ್ ಗೌಡ, 7ನೇ ತರಗತಿ, ಬೆಳಗನಹಳ್ಳಿ ಶಾಲೆಒಂದು ಕೊಠಡಿ... ಒಂದು ಕನ್ನಡ ಲೋಕ ಕನ್ನಡ ಭಾಷಾ ಪ್ರಯೋಗಾಲಯದ ಕಲ್ಪನೆ ಸಣ್ಣದಾಗಿ ಕಾಣಬಹುದು. ಆದರೆ ಅದರ ಪರಿಣಾಮ ದೊಡ್ಡದಾಗುವ ಸಾಧ್ಯತೆ ಇದೆ. ಒಂದು ಕೊಠಡಿ ಕನ್ನಡದ ಇತಿಹಾಸ ಹೇಳಬಹುದು; ಒಂದು ಗೋಡೆ ವ್ಯಾಕರಣ ಕಲಿಸಬಹುದು; ಒಂದು ಚಿತ್ರ ಒಬ್ಬ ಸಾಹಿತಿಯನ್ನು ಪರಿಚಯಿಸಬಹುದು; ಒಂದು ಗಾದೆ ಬದುಕಿನ ಪಾಠ ಹೇಳಬಹುದು.ಪಠ್ಯಪುಸ್ತಕದ ಪುಟಗಳನ್ನು ಮೀರಿ ಭಾಷೆಯನ್ನು ಮಕ್ಕಳ ದೈನಂದಿನ ಕಲಿಕೆಯ ಭಾಗವಾಗಿಸುವ ಈ ಪ್ರಯತ್ನ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳಲ್ಲಿ ಇಂತಹ ಕನ್ನಡ ಪ್ರಯೋಗಾಲಯಗಳು ರೂಪುಗೊಳ್ಳುವ ಸಾಧ್ಯತೆ ಇದೆ.ಕನ್ನಡವನ್ನು ಕೇವಲ ಓದಿಸುವುದಲ್ಲ, ಕನ್ನಡವನ್ನು ಮಕ್ಕಳ ಕಣ್ಣಿಗೆ ಕಾಣುವಂತೆ, ಮನಸ್ಸಿಗೆ ತಟ್ಟುವಂತೆ ಮತ್ತು ಬದುಕಿನೊಂದಿಗೆ ಬೆಸೆಯುವಂತೆ ಮಾಡುವ ಪ್ರಯತ್ನ ಎಚ್.ಡಿ. ಕೋಟೆ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವುದು ವಿಶೇಷ ಗಮನ ಸೆಳೆದಿದೆ.ಶಾಲೆಯ ಗೋಡೆಗಳು ಮೌನವಾಗಿದ್ದರೂ, ಅವುಗಳ ಮೇಲಿನ ಅಕ್ಷರಗಳು ಮಕ್ಕಳೊಂದಿಗೆ ಮಾತನಾಡುತ್ತಿವೆ. ಚಿತ್ರಗಳು ಪಾಠ ಹೇಳುತ್ತಿವೆ. ಇತಿಹಾಸ ಪರಿಚಯವಾಗುತ್ತಿದೆ. ವ್ಯಾಕರಣ ಸುಲಭವಾಗುತ್ತಿದೆ. ಹೀಗೆ ತರಗತಿ ಕೊಠಡಿಯೊಂದೇ ನಿಧಾನವಾಗಿ ಕನ್ನಡದ ಪುಟ್ಟ ಲೋಕವಾಗಿ ರೂಪುಗೊಳ್ಳುತ್ತಿದೆ.