ʼಲರ್ನ್ ಕನ್ನಡ ವಿತ್ ಆಟೊ ಕನ್ನಡಿಗ’: ಭಾಷೆ ಕಲಿಸಲು ಚಾಲಕನ ವಿಭಿನ್ನ ಪ್ರಯತ್ನ
ʼಭಾಷೆ ಜನರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು, ಗೋಡೆಯಂತಾಗಿ ಅಂತರ ಸೃಷ್ಟಿಸಬಾರದುʼ ಹೀಗೆ ಹೇಳುತ್ತಾ ಮಾತು ಆರಂಭಿಸಿದರು ಅಜ್ಜು ಸುಲ್ತಾನ್.ಹಿಂದಿ ಹೇರಿಕೆ ವಿರುದ್ಧದ ಹಾಗೂ ಮಾತೃ ಭಾಷೆಗೆ ಉತ್ತೇಜನ ನೀಡಬೇಕೆನ್ನುವ ಕೂಗು ನಾಡಿನಾದ್ಯಂತ ಜೋರಾಗಿರುವ ಹೊತ್ತಿನಲ್ಲಿ ಅವರು, ಪರಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಅವರು ʼಆಟೊ ಕನ್ನಡಿಗʼ

ʼಭಾಷೆ ಜನರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು, ಗೋಡೆಯಂತಾಗಿ ಅಂತರ ಸೃಷ್ಟಿಸಬಾರದುʼ ಹೀಗೆ ಹೇಳುತ್ತಾ ಮಾತು ಆರಂಭಿಸಿದರು ಅಜ್ಜು ಸುಲ್ತಾನ್.ಹಿಂದಿ ಹೇರಿಕೆ ವಿರುದ್ಧದ ಹಾಗೂ ಮಾತೃ ಭಾಷೆಗೆ ಉತ್ತೇಜನ ನೀಡಬೇಕೆನ್ನುವ ಕೂಗು ನಾಡಿನಾದ್ಯಂತ ಜೋರಾಗಿರುವ ಹೊತ್ತಿನಲ್ಲಿ ಅವರು, ಪರಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಅವರು ʼಆಟೊ ಕನ್ನಡಿಗʼ ಎಂದೇ ಜನಪ್ರಿಯ.ಮೂಲತಃ ಬಾಗಲಕೋಟೆಯವರಾದ ಅಜ್ಜು ಸುಲ್ತಾನ್ ಅವರ ನಿಜವಾದ ಹೆಸರು ಅಜ್ಮಲ್ ಹುಸೇನ್. 2012ಲ್ಲಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಓದಿದ್ದು ಏಳನೇ ತರಗತಿಯಾದರೂ, ವಿವಿಧ ಭಾಷೆಗಳನ್ನು ಮಾತನಾಡಬಲ್ಲರು. ಆರಂಭದಲ್ಲಿ ಬೇರೆ ಬೇರೆ ಕೆಲಸ ಮಾಡಿಕೊಂಡಿದ್ದ ಅವರು, ಆಟೊ ಏರಿದ್ದು 2018ರಲ್ಲಿ. ಸದ್ಯ ಯಲಹಂಕದ ಜಕ್ಕೂರಿನಲ್ಲಿ ನೆಲೆಸಿದ್ದಾರೆ.ಆಟೋದ ಹಿಂಬದಿ ಸೀಟಿನಲ್ಲಿ ಕೂರುವವರಿಗೆ ಸ್ಪಷ್ಟವಾಗಿ ಕಾಣುವಂತೆ ‘Learn Kannada With Auto Kannadiga’ ಎಂಬ ಚಾರ್ಟ್ ಹಾಕಿದ್ದಾರೆ. ಆಟೊದಲ್ಲಿ ಸಂಚರಿಸುವ ಪ್ರಯಾಣಿಕರು ಸುಲಭವಾಗಿ ವ್ಯವಹರಿಸಲು ನೆರವಾಗುವಂತೆ, ‘ನಮಸ್ಕಾರ ಸರ್’, ‘.. ಪ್ಲೇಸ್ಗೆ ಹೋಗ್ತೀರಾ?’, ʼಇಲ್ಲೇ ನಿಲ್ಸಿʼ, ‘ಎಷ್ಟು ಆಯ್ತು?’, ‘UPI ಇದ್ಯಾ?’ ಎಂಬಂತಹ ಸರಳ ಕನ್ನಡ ವಾಕ್ಯಗಳ ಇಂಗ್ಲಿಷ್ ಅನುವಾದ ಅದರಲ್ಲಿದೆ.ಈ ರೀತಿ ಮಾಡುವುದರಿಂದ ಯಾರಿಗಾದರೂ ಭಾಷೆಯನ್ನೇ ಕಲಿಸಿಬಿಡಬಹುದು ಎಂಬ ಭ್ರಮೆ ಅವರಿಗೆ ಇಲ್ಲ. ಆದರೆ, ಕಲಿಯುವ ಆಸಕ್ತಿ ಇರುವವವರಿಗೆ, ಭಾಷೆ ಬಾರದ ಊರಿನಲ್ಲಿ ಅನ್ಯರಿಗೆ ವ್ಯವಹರಿಸಲು ಅನುಕೂಲವಾಗಲಿದೆ ಎನ್ನುವುದು ಅವರ ಸ್ಪಷ್ಟವಾದ ಮಾತು.ಅಜ್ಜು ಸುಲ್ತಾನ್ (ಅಜ್ಮಲ್ ಹುಸೇನ್)ಚಾಲಕರೊಂದಿಗೆ ಮಾತನಾಡಲು ಬೇಕಾಗಬಹುದಾದ ವಾಕ್ಯಗಳು ಇವರು ಹಾಕಿರುವ ಚಾರ್ಟ್ನಲ್ಲಿವೆ. ಕನ್ನಡದ ಪದಗಳನ್ನೇ ಇಂಗ್ಲಿಷ್ನಲ್ಲಿ ಬರೆದು, ಅದಕ್ಕೆ ಇಂಗ್ಲಿಷ್ನಲ್ಲಿ ಯಾವ ಅರ್ಥವಿದೆ ಎಂಬುದನ್ನೂ ಸೇರಿಸಲಾಗಿದೆ. ಅದನ್ನು ನೋಡಿದ ಕೆಲವರು ಕುತೂಹಲದಿಂದ ಮಾತನಾಡಲು ಆರಂಭಿಸುತ್ತಾರೆ. ಇನ್ನಷ್ಟು ಪದಗಳನ್ನು ಕಲಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಂತಹವರೊಂದಿಗೆ ಖುಷಿಯಿಂದ ಸಂವಹನ ನಡೆಸುತ್ತೇನೆ ಎನ್ನುತ್ತಾರೆ ʼಆಟೊ ಕನ್ನಡಿಗʼ.ʼಹೊರಗಿನ ವ್ಯವಹಾರಗಳಿಗೆ ಸಂವಹನ ತುಂಬಾ ಮುಖ್ಯ. ಭಾಷೆ ಬಾರದಿದ್ದಾಗ ಕೆಲವೊಮ್ಮೆ ಅಪಾರ್ಥಗಳಾಗಿ, ಅನರ್ಥಗಳಾದ ಉದಾಹರಣೆಗಳಿವೆ. ಇಲ್ಲಿನವರೋ, ಹೊರಗಿನವರೋ.. ಒಟ್ಟಿನಲ್ಲಿ ಹೇಳಬೇಕಾದದ್ದನ್ನು ಸರಿಯಾದ ರೀತಿಯಲ್ಲಿ ಹೇಳಲಾಗದೆ, ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ ಗಲಾಟೆಗಳು ಭಾಷೆಯ ವಿಚಾರಕ್ಕೆ ತಿರುಗಿದ್ದನ್ನು ನೋಡಿದ್ದೇವೆ. ಸಮಸ್ಯೆ ಏನು?, ಸಂಘರ್ಷಕ್ಕೇನು ಕಾರಣ? ಎಂಬುದನ್ನು ನೋಡದೆ ಆಟೊ ಚಾಲಕರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತದೆ. ನಮ್ಮ ನಾಡು, ಇಲ್ಲಿನ ಜನರ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದಾಗಿ ಪ್ರಸಾರ ಮಾಡುವ ಪ್ರಯತ್ನಗಳೂ ನಡೆಯುತ್ತವೆ. ಅಂತಹ ಘಟನೆಗಳು ತುಂಬಾ ಬೇಸರ ಮೂಡಿಸಿದವು. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸಿದಾಗ, ಕನ್ನಡ ಕಲಿಸುವ ಉಪಾಯ ತಲೆಗೆ ಬಂತುʼ ಎಂದು ಹೇಳಿದ್ದಾರೆ.ʼಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಆಟೊ ಏರುವವರಲ್ಲಿ ಅನ್ಯ ಭಾಷಿಕರ ಸಂಖ್ಯೆಯೂ ಸಾಕಷ್ಟು ಇರುತ್ತದೆ. ಅವರು, ಸಂವಹನಕ್ಕೆ ತಮ್ಮದೇ ಭಾಷೆ ಬಳಸುವುದು, ಅದು ಭಾಷಾ ಸಂಘರ್ಷಕ್ಕೆ ದಾರಿ ಮಾಡಿಕೊಡುವುದನ್ನು ಕಂಡಿದ್ದೆ. ಕೆಲವರು ಸಂವಹನಕ್ಕೆ ಪರಿತಪಿಸುವುದನ್ನೂ ನೋಡಿದ್ದೆ. ಅದು, ಕನ್ನಡ ಕಲಿಸುವ ನನ್ನ ಉದ್ದೇಶವನ್ನು ಇನ್ನಷ್ಟು ದೃಢ ಮಾಡಿತುʼ ಎಂದು ವಿವರಿಸಿದ್ದಾರೆ.ʼಆಟೊ ಏರುವ ಪ್ರತಿಯೊಬ್ಬರನ್ನೂ ಮಾತನಾಡಿಸುತ್ತೇನೆ. ಕನ್ನಡೇತರರಾಗಿದ್ದರೆ ಅವರಿಗೆ ಕನ್ನಡ ಕಲಿಯುವ ಆಸಕ್ತಿ ಇದೆಯೇ ಎಂದು ಕೇಳುತ್ತೇನೆ. ಆರಂಭದಲ್ಲಿ, ಈ ರೀತಿ ಮಾಡುವಾಗ, ಅವರಿಗೆ ಅಗತ್ಯವಿರುವಷ್ಟನ್ನು ಹೇಳಿಕೊಡುತ್ತಿದ್ದೆ. ಜೊತೆಗೆ, ಬೆಂಗಳೂರಿನಲ್ಲಿ ವ್ಯವಹರಿಸಲು ಯಾವೆಲ್ಲ ಪದಗಳು ಬೇಕಾಗುತ್ತವೆ ಎಂಬುದನ್ನು ಅವರನ್ನೇ ಕೇಳಿ ಪಟ್ಟಿಯನ್ನೂ ಮಾಡಿಕೊಳ್ಳುತ್ತಿದ್ದೆ. ನಂತರ, ಚಾರ್ಟ್ನಲ್ಲಿ ಸೇರಿಸಿದೆʼ ಎಂದು ಮತ್ತಷ್ಟು ಹಂಚಿಕೊಂಡಿದ್ದಾರೆ.ಅಜ್ಜು ಅವರ ಕಾರ್ಯಕ್ಕೆ ಹಲವು ಚಾಲಕರು, ಬೆಂಗಳೂರು ನಗರ ಪೊಲೀಸ್, ಡ್ಯಾಶ್ ಕ್ಯಾಮ್ ಕಂಪನಿ, ಚಾಲಕ ಸಂಘಟನೆಗಳೂ ಕೈಜೋಡಿಸಿದ್ದರ ಫಲವಾಗಿ ‘ಲರ್ನ್ ಕನ್ನಡ ವಿತ್ ಆಟೊ ಕನ್ನಡಿಗ’ ಚಾರ್ಟ್ ಇಂದು 50 ಸಾವಿರ ಆಟೊಗಳು, ಹಲವಾರು ಕ್ಯಾಬ್ಗಳನ್ನು ತಲುಪಿದೆ. ಕನ್ನಡ ಪರ ಸಂಘಟನೆಗಳೂ ಕೈ ಜೋಡಿಸಿದರೆ ಈ ಪ್ರಯತ್ನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು ಎಂಬುದು ಅವರ ಅಭಿಪ್ರಾಯ.ಅಂದಹಾಗೆ, ಆರಂಭದಲ್ಲಿ ಒಂದು ಚಾರ್ಟ್ಗೆ 20 ರೂ ಆಗುತ್ತಿತ್ತು. ಆ ದರ ಇದೀಗ ತುಸು ಹೆಚ್ಚಾಗಿದೆ ಎನ್ನುವ ಅಜ್ಜು ಸುಲ್ತಾನ್ ಅವರಿಗೆ, ಕನ್ನಡ ಸೇವೆ ಮಾಡುತ್ತಿರುವ ಸಾರ್ಥಕದ ಭಾವವಿದೆ.ಅಪ್ಪಟ ಆರ್ಸಿಬಿ ಅಭಿಮಾನಿಯೂ ಆಗಿರುವ ಅಜ್ಜು, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳಿದ್ದಾಗ ಆರ್ಸಿಬಿ ಜೆರ್ಸಿ ತೊಟ್ಟು ಬಂದವರಿಗೆ ಫ್ರೀ ಸರ್ವೀಸ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯವಾಗಿರುವ ಇವರು, ಆಟೊ ಚಾಲಕರ ಸಮಸ್ಯೆಗಳು, ಟ್ರಾಫಿಕ್ ಸಮಸ್ಯೆ ಮತ್ತಿತರ ವಿಚಾರಗಳ ಬಗ್ಗೆ ಆಗಾಗ್ಗೆ ಧ್ವನಿ ಎತ್ತಿದ್ದಾರೆ.ಅವರ ಕನ್ನಡ ಸೇವೆಗೆ ಕೈಜೋಡಿಸಲು ಬಯಸುವವರು, ಸಾಮಾಜಿಕ ಮಾಧ್ಯಮಗಳ ಮೂಲಕ ಕೈಜೋಡಿಸಬಹುದು. ಸಂಪರ್ಕ ಸಂಖ್ಯೆ: 7975656818ಚಾರ್ಟ್ನಲ್ಲಿ ಏನಿದೆ?ಚಾರ್ಟ್ನಲ್ಲಿ ಹದಿನಾಲ್ಕು ಸರಳ ವಾಕ್ಯಗಳ ಜೊತೆಗೆ, ಅಜ್ಜು ಅವರ ಸಾಮಾಜಿಕ ಮಾಧ್ಯಮ ಪುಟಗಳ ಲಿಂಕ್ ಇದೆ. ಕನ್ನಡ ಧ್ವಜ, ʼಆಟೊ ರಾಜʼ ಶಂಕರ್ ನಾಗ್ ಅವರ ಚಿತ್ರಗಳಿವೆ. ಎರಡು ಕ್ಯೂಆರ್ ಕೋಡ್ಗಳನ್ನೂ ನೀಡಲಾಗಿದೆ. ಅವುಗಳನ್ನು ಸ್ಕ್ಯಾನ್ ಮಾಡಿದರೆ, ಅಜ್ಜು ಅವರ ಇನ್ಸ್ಟಾಗ್ರಾಮ್ ಪುಟಗಳು ತೆರೆದುಕೊಳ್ಳಲಿವೆ. ಅಲ್ಲಿ, ಆಟೊ ಒಳಗೆ ಹಾಗೂ ಹೊರಗೆ ಮಾತನಾಡಬಹುದಾದ ಸರಳ ವಾಕ್ಯಗಳ ವಿಡಿಯೊಗಳು ಸಿಗುತ್ತವೆ.ಆಟೊ ಚಾಲಕರಿಗೂ ಶಂಕರ್ ನಾಗ್ಗೂ ವಿಶೇಷ ನಂಟು1980ರಲ್ಲಿ ತೆರೆಕಂಡ ʼಆಟೊ ರಾಜʼ ಸಿನಿಮಾದಲ್ಲಿ ನಟಿಸಿದ್ದ ಶಂಕರ್ ನಾಗ್ ಚಾಲಕ ಪಾತ್ರಕ್ಕೆ ಜೀವ ತುಂಬಿದ್ದರು. ಖಾಕಿ ಸಮವಸ್ತ್ರವನ್ನು ಪೂರ್ತಿಯಾಗಿ ತೊಟ್ಟು ಅಭಿನಯಿಸುವ ಮೂಲಕ, ಜನಸಾಮಾನ್ಯರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದರು. ಮೇಲಿನ ಷರ್ಟ್ ಅಷ್ಟೇ ಧರಿಸಿ ʼಶೂಟಿಂಗ್ ರಾಜʼ ಆಗಿರಲಿಲ್ಲ ಅವರು. ಕೆಲಸದ ಮೇಲಿನ ಅವರ ಬದ್ಧತೆ, ಜನಪರ ಚಿಂತನೆಗಳೂ ಅವರನ್ನು ಆಟೊ ಚಾಲಕರ ಆರಾಧ್ಯರನ್ನಾಗಿಸಿವೆ.ರಾಜ್ಯೋತ್ಸವ ನಿತ್ಯೋತ್ಸವವಾಗಲಿ- ಅಜ್ಜು ಸುಲ್ತಾನ್ (ಅಜ್ಮಲ್ ಹುಸೇನ್), ಆಟೊ ಕನ್ನಡಿಗರಾಜ್ಯೋತ್ಸವ ನವೆಂಬರ್ 1ಕ್ಕೆ ಸೀಮಿತವಾಗಬಾರದು. ಅಭಿಮಾನ ನಿತ್ಯವೂ ಇರಬೇಕು. ಕನ್ನಡವನ್ನು ಬಳಸುವುದರಿಂದ ಬೆಳೆಸಬಹುದು. ಬಳಸದಿದ್ದರೆ ಭಾಷೆ ಉಳಿಯಲ್ಲ. ಹಾಗಾಗಿ, ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು.ಶಂಕರ್ ನಾಗ್ ಜನ್ಮದಿನ ಆಟೊ ಚಾಲಕರನ ದಿನವೆಂದು ಘೋಷಿಸಬೇಕೇ?ಈ ವಿಚಾರವಾಗಿ ಹಲವು ಸಂಘಟನೆಗಳು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ನಗರದ. ಕೆಲವು ನಿಲ್ದಾಣಗಳಿಗೆ ಕಾರ್ಪೊರೇಟ್ ಸಂಸ್ಥೆಗಳ ಹೆಸರಿಡಲಾಗಿದೆ. ಆದರೆ, ಬೆಂಗಳೂರಿಗೆ ಮೆಟ್ರೋ ಕನಸು ಕಂಡಂತಹ ಶಂಕ್ರಣ್ಣ ಅವರ ಹೆಸರನ್ನು ಒಂದು ಮೆಟ್ರೊ ನಿಲ್ದಾಣಕ್ಕಾದರೂ ಇಟ್ಟಿಲ್ಲ. ಇನ್ನೂ ಏಕೆ ಈ ವಿಚಾರದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಶಂಕರ್ ನಾಗ್ ಅವರ ಜನ್ಮದಿನವನ್ನು (ನವೆಂಬರ್ 9) ಆಟೊ ಚಾಲಕರ ದಿನವನ್ನಾಗಿ ಘೋಷಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಮನವಿವೆ.ಅಜ್ಜು ಸುಲ್ತಾನ್ (ಅಜ್ಮಲ್ ಹುಸೇನ್)