ಪಂಜಾಬ್ ಆಪ್ ಶಾಸಕಿ ಅಮನ್ದೀಪ್ಗೆ ಇಡಿ ಶಾಕ್ – ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕ ಬೆನ್ನಲ್ಲೇ ದಾಳಿ
– ಅಮನ್ದೀಪ್ ಕೌರ್ ಅರೋರಾ, ಕುಟುಂಬಸ್ಥರಿಗೆ ಸೇರಿದ 7 ಸ್ಥಳಗಳಲ್ಲಿ ದಾಳಿ – 2024ರ ಎಫ್ಐಆರ್ ಆಧರಿಸಿ ಇಡಿ ತನಿಖೆ ಚಂಡೀಗಢ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ (ಇಂದು) ಆಮ್ ಆದ್ಮಿ ಪಕ್ಷದ (ಎಎಪಿ) ಮೊಗಾ ಕ್ಷೇತ್ರದ ಶಾಸಕಿ ಅಮನ್ದೀಪ್ ಕೌರ್ ಅರೋರಾ (Amandeep Kaur Arora) ಹಾಗೂ ಅವರ ಕುಟುಂಬಸ್ಥರ

– ಅಮನ್ದೀಪ್ ಕೌರ್ ಅರೋರಾ, ಕುಟುಂಬಸ್ಥರಿಗೆ ಸೇರಿದ 7 ಸ್ಥಳಗಳಲ್ಲಿ ದಾಳಿ – 2024ರ ಎಫ್ಐಆರ್ ಆಧರಿಸಿ ಇಡಿ ತನಿಖೆ ಚಂಡೀಗಢ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ (ಇಂದು) ಆಮ್ ಆದ್ಮಿ ಪಕ್ಷದ (ಎಎಪಿ) ಮೊಗಾ ಕ್ಷೇತ್ರದ ಶಾಸಕಿ ಅಮನ್ದೀಪ್ ಕೌರ್ ಅರೋರಾ (Amandeep Kaur Arora) ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಸರ್ಕಾರಿ ಭೂಮಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು, ಕಂದಾಯ ದಾಖಲೆಗಳಲ್ಲಿ ಅಕ್ರಮವಾಗಿ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿರುವುದು ಹಾಗೂ ಪರಿಹಾರ ಮೊತ್ತವನ್ನ ಅಕ್ರಮವಾಗಿ ವಿತರಿಸಿರುವ ಆರೋಪಗಳ ಮೇಲೆ ದಾಳಿ ನಡೆಸಲಾಗಿದೆ. ಇಂದು ಬೆಳ್ಳಂಬೆಳಗ್ಗೆಯೇ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆಗೆ ಇಳಿದಿದೆ. ಮೊಗಾ-ಲೂಧಿಯಾನಾ ರಸ್ತೆಯಲ್ಲಿರುವ ಐಕಾನ್ ಹೈಟ್ಸ್ನಲ್ಲಿನ ಅರೋರಾ ಅವರ ಫ್ಲ್ಯಾಟ್, ದೋಸಾಂಜ್ ರಸ್ತೆಯಲ್ಲಿರುವ ಅವರ ಕ್ಯಾಂಪ್ ಕಚೇರಿ ಹಾಗೂ ನಿವಾಸ ಸೇರಿದಂತೆ ಕುಟುಂಬಸ್ಥರು, ಆಪ್ತರು ಮತ್ತು ಇತರರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು, ತೀವ್ರ ಪರಿಶೀಲನೆ ನಡೆಸಿದ್ದಾರೆ. ಅರೋರಾ ಅವರ ಪತಿ ಡಾ. ರಾಕೇಶ್ ಅರೋರಾ ಅವರಿಗೆ ಸಂಬಂಧಿಸಿದ ವ್ಯಸನಮುಕ್ತ ಚಿಕಿತ್ಸಾ ಆಸ್ಪತ್ರೆಯ ಮೇಲೂ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಶಸ್ತ್ರಸಜ್ಜಿತ ಸಿಆರ್ಪಿಎಫ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು. 2024ರ ಜೂನ್ನಲ್ಲಿ ಪಂಜಾಬ್ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಕೈಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 754ಎ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಮೊಗಾ ಜಿಲ್ಲೆಯ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿರುವುದು ಹಾಗೂ ಪರಿಹಾರ ಮೊತ್ತದ ದುರುಪಯೋಗ ನಡೆದಿದೆ ಎಂಬ ಆರೋಪಗಳು ಪ್ರಕರಣದಲ್ಲಿವೆ. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಗಳೂ ಕೇಳಿಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಕೆಟ್ ಸಿಕ್ಕ ಬೆನ್ನಲ್ಲೇ ದಾಳಿ ವೃತ್ತಿಯಲ್ಲಿ ವೈದ್ಯೆಯಾಗಿರುವ ಅಮನ್ದೀಪ್ ಕೌರ್ ಅರೋರಾ, ಎಎಪಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯೂ ಆಗಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಪಕ್ಷ ಬಿಡುಗಡೆ ಮಾಡಿರುವ ಮೊದಲ 40 ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊಗಾ ಕ್ಷೇತ್ರದಿಂದ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ. ಇತ್ತ ಇ.ಡಿ. ದಾಳಿ ನಡೆಯುತ್ತಿದ್ದಂತೆ ಅರೋರಾ ಅವರ ನಿವಾಸದ ಹೊರಗೆ ಎಎಪಿ ಕಾರ್ಯಕರ್ತರು ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಎಎಪಿ ಶಾಸಕರನ್ನು ಕಿರುಕುಳಕ್ಕೀಡುಮಾಡಲು ಮತ್ತು ಪಕ್ಷದ ನಾಯಕರ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.