ವೃತ್ತಿ ಶಿಕ್ಷಣದಲ್ಲಿ ತಾಯ್ನುಡಿ ಕಡೆಗಣನೆ
ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವ ಮಾತಿದೆ. ಅಂದರೆ, ಉದ್ಯೋಗ ಒದಗಿಸುವ ಭಾಷೆಯಾದರೆ ಮಾತ್ರ ಕನ್ನಡ ಉಳಿಯಲು, ಬೆಳೆಯಲು ಸಾಧ್ಯವೆ?ಜಗತ್ತಿನಲ್ಲಿ ಹಲವು ಭಾಷೆಗಳು ಉದ್ಯೋಗ ದೊರಕಿಸುವ ಭಾಷೆಗಳಲ್ಲ. ಸ್ವಿಸ್–ಜರ್ಮನ್, ಯಿಡ್ಡಿಸ್ ಅಥವಾ ಭಾರತದ ಭೋಜಪುರಿ, ಮೈಥಿಲಿ ಹೀಗೆ ಹಲವು ಭಾಷೆಗಳನ್ನು ಬಹುಸಂಖ್ಯಾತರು ಬಳಸುತ್ತಿದ್ದರೂ, ಅವು ಉದ್ಯೋಗ ಪಡೆಯುವ ಭಾಷೆಗಳಾಗಿಲ್ಲ. ಹಾಗೆಂದು

ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವ ಮಾತಿದೆ. ಅಂದರೆ, ಉದ್ಯೋಗ ಒದಗಿಸುವ ಭಾಷೆಯಾದರೆ ಮಾತ್ರ ಕನ್ನಡ ಉಳಿಯಲು, ಬೆಳೆಯಲು ಸಾಧ್ಯವೆ?ಜಗತ್ತಿನಲ್ಲಿ ಹಲವು ಭಾಷೆಗಳು ಉದ್ಯೋಗ ದೊರಕಿಸುವ ಭಾಷೆಗಳಲ್ಲ. ಸ್ವಿಸ್–ಜರ್ಮನ್, ಯಿಡ್ಡಿಸ್ ಅಥವಾ ಭಾರತದ ಭೋಜಪುರಿ, ಮೈಥಿಲಿ ಹೀಗೆ ಹಲವು ಭಾಷೆಗಳನ್ನು ಬಹುಸಂಖ್ಯಾತರು ಬಳಸುತ್ತಿದ್ದರೂ, ಅವು ಉದ್ಯೋಗ ಪಡೆಯುವ ಭಾಷೆಗಳಾಗಿಲ್ಲ. ಹಾಗೆಂದು ಅವು ಅಮುಖ್ಯ ಎಂದಾಗಲೀ, ಬಳಕೆಯಲ್ಲಿಲ್ಲ ಎಂದಾಗಲೀ ತಿಳಿಯಲಾಗದು. ಭಾಷೆಯ ಹಲವು ಲಕ್ಷಣಗಳಲ್ಲಿ ಉದ್ಯೋಗವನ್ನು ಪಡೆಯಲು ಅನುಕೂಲವಾಗುವುದು ಒಂದು ಗುಣ ಮಾತ್ರ.ಭಾಷೆಯ ಇತರೆಲ್ಲ ಅಂಶಗಳು ಬದಿಗೆ ಸರಿದು, ವೃತ್ತಿಪರಶಿಕ್ಷಣ ವ್ಯವಸ್ಥೆಯು ಮಾರುಕಟ್ಟೆಯ ಉದ್ಯೋಗ ಬೇಡಿಕೆಗಳನ್ನು ಪೂರೈಸುವಂತಾದಾಗ, ‘ಅನ್ನ ಕೊಡುವುದೇ’ ಭಾಷೆಯ ಮುಖ್ಯ ಉದ್ದೇಶವೆಂದು ಅನ್ನಿಸಿಕೊಂಡಿತು. ವೃತ್ತಿಪರ ಶಿಕ್ಷಣಮುಖ್ಯವಾಗಿ, ಭಾಷಾ ಕಲಿಕೆ ಹಿಂದೆ ಸರಿಯಿತು. ವೃತ್ತಿ ಕೌಶಲವಾದರೂ ಜಾಗತಿಕ ಮಟ್ಟಕ್ಕೆ ಅನುಸಾರವಾಗಿ ಇದೆಯೇ ಎಂದು ಪರೀಕ್ಷಿಸಿದರೆ ನಿರಾಶೆಯೇ ಆಗುತ್ತದೆ. ಕಾಲದ ಜರೂರಿಗೆ ತಕ್ಕಂತೆ ಸುಧಾರಿತ ಪಠ್ಯಗಳು, ಬೋಧನಾ ವಿಧಾನ, ಕಲಿಕಾ ಪದ್ಧತಿಯನ್ನು ರೂಪಿಸಲು ನಮ್ಮ ವ್ಯಾಸಂಗದ ಕ್ರಮ ವಿಫಲವಾಗಿದೆ. ವೃತ್ತಿಪರ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯಗಳು ಸರಿಯಾದ ವೃತ್ತಿ ಕೌಶಲವನ್ನೂ ಒದಗಿಸದೆ, ಭಾಷಾಜ್ಞಾನವನ್ನೂ ನೀಡದೆ, ವೈಚಾರಿಕ ಮನೋಭಾವವನ್ನೂ ಬೆಳೆಸದೆ ಮಾರುಕಟ್ಟೆಯ ತತ್ಕಾಲೀನ ಬೇಡಿಕೆಗೆ ತಕ್ಕಂತೆ ಸರಕುಗಳನ್ನು ಪೂರೈಸುವ ಸಂಸ್ಥೆಗಳಂತಾಗಿವೆ.ವೈದ್ಯಕೀಯ, ಎಂಜಿನಿಯರಿಂಗ್ ಮುಂತಾದ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳ ಭಾಷಾ ಕಲಿಕೆ ಸ್ಥಗಿತಗೊಳ್ಳುತ್ತದೆ. ಯಾವ ಶಿಕ್ಷಣ ಕೋವಿದರು ಯಾವ ಕಾರಣದಿಂದ ವೃತ್ತಿಪರ ಕೋರ್ಸ್ಗಳ ಪಠ್ಯಕ್ರಮದಲ್ಲಿ ಭಾಷಾ ಕಲಿಕೆಯನ್ನು ಕೈಬಿಟ್ಟರೋ ತಿಳಿಯದು! ಕಲೆ, ವಿಜ್ಞಾನ, ವಾಣಿಜ್ಯ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಇತ್ಯಾದಿ ಮಾನವಿಕ ವಿಭಾಗಗಳ ವಿದ್ಯಾರ್ಥಿಗಳು ಕನಿಷ್ಠ ಎರಡು ಸೆಮಿಸ್ಟರ್ಗಳಲ್ಲಿ ಎರಡು ಭಾಷೆಗಳ ಅಧ್ಯಯನವನ್ನು ಮಾಡಬೇಕಾಗುತ್ತದೆ. ಆದರೆ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ವಾಸ್ತುಶಾಸ್ತ್ರದಂತಹ ವೃತ್ತಿಪರ ಕಾಲೇಜುಗಳ ಪಠ್ಯಕ್ರಮದಿಂದ ಭಾಷಾ ಕಲಿಕೆಯನ್ನು ಹೊರಗಿಡಲಾಗಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೊರತೆ ಮನಗಂಡು ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಕನ್ನಡವನ್ನು ಬೋಧಿಸುವ ಪ್ರಯತ್ನವನ್ನು ಮಾಡಿತ್ತು. ಹಿಂದೆಯೇ ಈ ಪ್ರಯತ್ನ ನಡೆದಿದ್ದರೂ ಕನ್ನಡ ಕಲಿಕೆ ಕಡ್ಡಾಯ ಆಗಿರಲಿಲ್ಲ. ವಿಷಾದದ ವಿಷಯವೆಂದರೆ, ಅನೇಕ ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜುಗಳು ಈ ನಿರ್ದೇಶನವನ್ನು ಪಾಲಿಸುತ್ತಿಲ್ಲ.ಎಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದರಂತೆ ಪ್ರಾಯೋಗಿಕವಾಗಿ ನಾಲ್ಕು ಕಾಲೇಜುಗಳಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತರ ಬರೆಯಲು ಅವಕಾಶ ನೀಡಲಾಯಿತು. ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ನೀಡಬೇಕು ಎನ್ನುವ ಬೇಡಿಕೆಯೂ ಇದೆ. ಆಶಯದ ದೃಷ್ಟಿಯಿಂದ ಈ ಬೇಡಿಕೆಗಳು ಸರಿ ಎನ್ನಿಸಿದರೂ ಕಾರ್ಯಸಾಧುವೇ ಎನ್ನುವ ಬಗ್ಗೆಯೂ ಆಲೋಚಿಸಬೇಕಿದೆ. ಪ್ರಾಥಮಿಕ ಹಂತದಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಅಥವಾ ಏಕರೂಪದ ಶಿಕ್ಷಣ ಪದ್ಧತಿ ಜಾರಿಗೆ ಬಂದರೆ ಕನ್ನಡ ಮಾಧ್ಯಮದ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಸೇರಬಹುದೇನೊ? ಆದರೆ, ಇದನ್ನು ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಯಾವ ಸರ್ಕಾರಕ್ಕಿದೆ? ಅಲ್ಲದೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿದ್ದು ಅಷ್ಟೇ ತ್ವರಿತವಾಗಿ ತಾಯ್ನುಡಿಯಲ್ಲಿ ಶಿಕ್ಷಣವನ್ನು ಸಜ್ಜುಗೊಳಿಸುವುದು ಅಪಾರ ಶ್ರಮದ ಕೆಲಸ ಕೂಡ.ವಿದ್ಯಾರ್ಥಿಗಳಿಗೆ ಯಾವ ಭಾಷೆಯಲ್ಲಿ ವಿಷಯ ಗ್ರಹಿಕೆಸುಲಭವೋ, ಅನುಕೂಲವೋ ಆ ಭಾಷೆಯಲ್ಲಿ ವೃತ್ತಿಪರಶಿಕ್ಷಣ ನೀಡುವುದರಲ್ಲಿ ತಪ್ಪಿಲ್ಲ. ಆ ಭಾಷೆ ವೃತ್ತಿಯನ್ನು ನಿರ್ವಹಿಸಲು ಸಾಕು. ಹಾಗೆಂದು ವೃತ್ತಿ ಶಿಕ್ಷಣ ಪಡೆದವರು ಭಾಷೆಯಲ್ಲಿ ಪರಿಣತರಾಗುವುದಿಲ್ಲ. ವೃತ್ತಿ ಶಿಕ್ಷಣ ಪಡೆಯುವುದೇ ಬೇರೆ, ಭಾಷಾ ಕಲಿಕೆಯೇ ಬೇರೆ. ವೈಯಕ್ತಿಕ ಆಸಕ್ತಿಯಿಂದ ಪಠ್ಯದಿಂದ ಹೊರತಾದ ಓದನ್ನು ರೂಢಿಸಿಕೊಳ್ಳುವವರಿರಬಹುದು. ಆದರೆ, ಹೆಚ್ಚಿನವರು ಪಠ್ಯ ಇದ್ದರಷ್ಟೇ ಭಾಷಾ ಕಲಿಕೆಗೆ ಮನಸ್ಸು ಮಾಡುತ್ತಾರೆ.ಸರಿಯಾದ ಭಾಷಾ ಜ್ಞಾನವಿಲ್ಲದೆ ವೃತ್ತಿಯಲ್ಲಿ ಉನ್ನತಿಯನ್ನು ಪಡೆಯುವುದೂ ಕಷ್ಟವೇ. ಸಂಶೋಧನಾ ವಿಷಯಗಳನ್ನು ಮಂಡಿಸಲು, ವಿಚಾರಗಳನ್ನು ಅಭಿವ್ಯಕ್ತಿಸಲು ಶಕ್ತವಾದ ಭಾಷಾಜ್ಞಾನ ಇರಬೇಕು. ಕೊಪರ್ನಿಕಸ್ ಭೂಮಿಯ ಪರಿಭ್ರಮಣದ ಬಗ್ಗೆ ಬರೆದದ್ದು ತಾನು ಪರಿಣತಿ ಹೊಂದಿದ್ದ ಲ್ಯಾಟಿನ್ ಭಾಷೆಯಲ್ಲಿ. ಆರ್ಕಿಮಿಡೀಸ್ ಗ್ರೀಕ್ ಭಾಷೆಯಲ್ಲಿ ತನ್ನ ಸಿದ್ಧಾಂತವನ್ನು ಬರೆದ. ಪ್ರತಿಷ್ಠಿತ ವೈದ್ಯಕೀಯ ಮತ್ತುತಂತ್ರಜ್ಞಾನದ ಸಂಶೋಧನೆಗಳಿಗೆ ಸಂಬಂಧಿತ ಜರ್ನಲ್ಗಳಲ್ಲಿ ಭಾರತೀಯ ವಿದ್ವಾಂಸರ ಬರಹಗಳು ವಿರಳವಾಗಿ ಕಾಣಿಸಿಕೊಳ್ಳಲು ಇತರೆಲ್ಲ ಕಾರಣಗಳ ಜೊತೆಗೆ ಭಾಷಾಜ್ಞಾನ ಕೊರತೆಯೂ ಕಾರಣ.ತಾಯ್ನುಡಿಯ ಓದನ್ನು ಗಟ್ಟಿಗೊಳಿಸಿದರೆ ವಿಚಾರ, ಸಂವೇದನೆ–ಸಂಶೋಧನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಬಹುದು. ಇದರಿಂದ ಕನ್ನಡವೂ ಬೆಳೆಯುತ್ತದೆ, ವ್ಯಕ್ತಿಯ ಉನ್ನತಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ವಿ.ವಿ.ಗಳು, ಶಿಕ್ಷಣತಜ್ಞರು ಯೋಚಿಸಬೇಕಿದೆ.