ತ್ರಿಭಾಷಾ ಸೂತ್ರದಿಂದ ಮೆಟ್ರೊ ಫಲಕದವರೆಗೆ: ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಸಮರ
ಹಿಂದಿ ಹೇರಿಕೆ ವಿರುದ್ಧದ ಹೋರಾಟ ಕೇವಲ ಭಾಷೆಗೆ ಸೀಮಿತವಾಗಿಲ್ಲ, ಅದು ಪ್ರಾದೇಶಿಕ ಭಾಷೆಗಳ ಅಸ್ಮಿತೆ, ಶಿಕ್ಷಣದ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಹೋರಾಟದ ಬೇರುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ದಕ್ಷಿಣ ಭಾರತದ ಭಾಷಾ ಚಳವಳಿಗಳ ಇತಿಹಾಸವನ್ನು ಗಮನಿಸ

ಹಿಂದಿ ಹೇರಿಕೆ ವಿರುದ್ಧದ ಹೋರಾಟ ಕೇವಲ ಭಾಷೆಗೆ ಸೀಮಿತವಾಗಿಲ್ಲ, ಅದು ಪ್ರಾದೇಶಿಕ ಭಾಷೆಗಳ ಅಸ್ಮಿತೆ, ಶಿಕ್ಷಣದ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಹೋರಾಟದ ಬೇರುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೊದಲು ದಕ್ಷಿಣ ಭಾರತದ ಭಾಷಾ ಚಳವಳಿಗಳ ಇತಿಹಾಸವನ್ನು ಗಮನಿಸಬೇಕಾಗುತ್ತದೆ.ಮದ್ರಾಸ್ನಲ್ಲಿ ಪ್ರಾರಂಭವಾದ ಹೋರಾಟಹಿಂದಿ ಭಾಷೆ ಕಡ್ಡಾಯ ಕಲಿಕೆ ವಿರುದ್ಧದ ಹೋರಾಟವು ದೇಶ ಸ್ವಾತಂತ್ರ್ಯ ಪಡೆಯುವ ಮೊದಲೇ ಆರಂಭವಾಗಿತ್ತು. 1937ರಲ್ಲಿ ಮದ್ರಾಸ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಸಿ. ರಾಜಗೋಪಾಲಾಚಾರಿ ಅವರು ಶಾಲೆಗಳಲ್ಲಿ ಹಿಂದಿ ಬೋಧನೆಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿಗೆ ತಂದರು. ಇದಕ್ಕೆ ತಮಿಳು ಭಾಷಾ ಹೋರಾಟಗಾರರು, ಸ್ವಾಭಿಮಾನ ಚಳವಳಿಯ ಮುಖಂಡರು ಮತ್ತು ದ್ರಾವಿಡ ಚಿಂತಕರು ತೀವ್ರ ವಿರೋಧ ವ್ಯಕ್ತಪಡಿಸಿದರು.1938ರಲ್ಲಿ ಈ ವಿರೋಧ ದೊಡ್ಡ ಜನಾಂದೋಲನವಾಗಿ ಬೆಳೆಯಿತು. ಸಾವಿರಾರು ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಂಡರು. ಪೆರಿಯಾರ್ ಇ.ವಿ. ರಾಮಸ್ವಾಮಿ, ಮರೈಮಲೈ ಅಡಿಗಳರ್ ಮತ್ತು ಸಿ.ಎನ್. ಅಣ್ಣಾದುರೈ ಸೇರಿದಂತೆ ಅನೇಕ ಮುಖಂಡರು ಹಿಂದಿ ಕಡ್ಡಾಯ ಬೋಧನೆಯ ವಿರುದ್ಧ ಧ್ವನಿ ಎತ್ತಿದರು.ಈ ಹೋರಾಟವು ಭಾಷಾ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ಅಸ್ಮಿತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಗಳನ್ನೂ ಮುನ್ನೆಲೆಗೆ ತಂದಿತು. ಮುಂದಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯದ ಬೆಳವಣಿಗೆಯ ಮೇಲೂ ಇದರ ಪ್ರಭಾವ ಬೀರಿತು.ಬಹುಸಂಖ್ಯಾತರು ಮಾತನಾಡುತ್ತಾರೆ ಎಂಬ ಒಂದೇ ಕಾರಣಕ್ಕೆ ಒಂದು ಭಾಷೆಯನ್ನು ಇತರರ ಮೇಲೆ ಹೇರಬಾರದು ಎಂಬುದು ಹಿಂದಿ ವಿರೋಧಿ ಹೋರಾಟಗಾರರ ಪ್ರಮುಖ ವಾದವಾಗಿತ್ತು. ಜನಸಂಖ್ಯೆಯ ಆಧಾರದ ಮೇಲೆ ಭಾಷೆಯೊಂದಕ್ಕೆ ವಿಶೇಷ ಸ್ಥಾನ ನೀಡಿದರೆ, ಇತರ ಭಾಷೆಗಳನ್ನು ಮಾತನಾಡುವ ಜನರು ಆಡಳಿತ ಮತ್ತು ಉದ್ಯೋಗಾವಕಾಶಗಳಲ್ಲಿ ಹಿಂದುಳಿಯುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಧ್ವನಿ:ಮದ್ರಾಸ್ ಪ್ರಾಂತ್ಯದಲ್ಲಿ ಆರಂಭವಾದ ಹಿಂದಿ ವಿರೋಧಿ ಚಳವಳಿಯ ಪ್ರತಿಧ್ವನಿ ಕರ್ನಾಟಕದಲ್ಲಿಯೂ ಕೇಳಿಬಂತು. ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಮತ್ತು ಪ್ರಾದೇಶಿಕ ಅಸ್ಮಿತೆಯ ಪರವಾಗಿ ಚಿಂತಕರು ಹಾಗೂ ಸಾಹಿತಿಗಳು ಧ್ವನಿ ಎತ್ತಿದರು.ರಾಷ್ಟ್ರಕವಿ ಕುವೆಂಪು ಅವರು ಭಾಷಾ ವೈವಿಧ್ಯ ಮತ್ತು ಕನ್ನಡದ ಅಸ್ತಿತ್ವದ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಕನ್ನಡದ ಮೇಲೆ ಮತ್ತೊಂದು ಭಾಷೆಯ ಪ್ರಾಬಲ್ಯ ಬೆಳೆದರೆ ಕನ್ನಡದ ಬೆಳವಣಿಗೆಗೆ ಧಕ್ಕೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು.ಬಹುತ್ವವನ್ನು ಒಪ್ಪಿಕೊಂಡು ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂಬ ವಿಚಾರ ಕನ್ನಡ ಚಳವಳಿಗಳ ಪ್ರಮುಖ ಆಶಯವಾಯಿತು. ಭಾರತದ ಏಕತೆ ಎಂದರೆ ಭಾಷಾ ಏಕರೂಪತೆ ಅಲ್ಲ; ಬದಲಾಗಿ ವಿವಿಧ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ಸಮಾನ ಗೌರವ ದೊರೆಯಬೇಕು ಎಂಬ ನಿಲುವು ಈ ಚರ್ಚೆಯ ಕೇಂದ್ರದಲ್ಲಿತ್ತು.ತ್ರಿಭಾಷಾ ಸೂತ್ರಕ್ಕೆ ಕುವೆಂಪು ವಿರೋಧ:ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಕುರಿತು ಕರ್ನಾಟಕದಲ್ಲಿ ದೀರ್ಘಕಾಲದಿಂದ ಚರ್ಚೆಗಳು ನಡೆಯುತ್ತಿವೆ. ಕುವೆಂಪು ಅವರು ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸುವ ಪ್ರಸ್ತಾವದ ವಿರುದ್ಧ ಕವಿತೆಯ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಭಾಷಾ ಕಲಿಕೆಯ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಹೊರೆ ಹಾಕಬಾರದು ಎಂಬುದು ಅವರ ನಿಲುವಾಗಿತ್ತು.ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿ ಕಲಿಯುವ ಅವಕಾಶ ದೊರೆಯಬೇಕು ಎಂಬ ಬೇಡಿಕೆಗಳು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದವು.ಆದರೆ, ತ್ರಿಭಾಷಾ ಸೂತ್ರದ ಕುರಿತು ಎಲ್ಲರ ನಿಲುವು ಒಂದೇ ಆಗಿರಲಿಲ್ಲ. ಕೆಲವರು ಇತರ ಭಾರತೀಯ ಭಾಷೆಗಳನ್ನು ಕಲಿಯುವುದರಿಂದ ಪರಸ್ಪರ ಸಂವಹನ ಮತ್ತು ರಾಷ್ಟ್ರೀಯ ಏಕತೆ ಬಲಗೊಳ್ಳುತ್ತದೆ ಎಂದು ವಾದಿಸಿದರೆ, ಇನ್ನು ಕೆಲವರು ಹಿಂದಿಗೆ ವಿಶೇಷ ಆದ್ಯತೆ ನೀಡುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಡ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.ನಮ್ಮ ಮೆಟ್ರೊದಲ್ಲಿ ಹಿಂದಿ ಬಳಕೆಗೆ ವಿರೋಧ:2017ರ ಜುಲೈನಲ್ಲಿ ಬೆಂಗಳೂರಿನ ನಮ್ಮ ಮೆಟ್ರೊ ನಿಲ್ದಾಣಗಳ ನಾಮಫಲಕಗಳು, ಸೂಚನಾ ಫಲಕಗಗಳಲ್ಲಿ ಹಿಂದಿ ಬಳಕೆಯ ಕುರಿತು ವಿವಾದ ತೀವ್ರಗೊಂಡಿತು. ಮೆಟ್ರೊದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿಗೂ ಸ್ಥಾನ ನೀಡಿದ್ದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೆಲವು ಮೆಟ್ರೊ ನಿಲ್ದಾಣಗಳ ಫಲಕಗಳಲ್ಲಿದ್ದ ಹಿಂದಿ ಅಕ್ಷರಗಳಿಗೆ ಮಸಿ ಬಳಿದರು. ಈ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಯಿತು. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಯಿತು.ಸಾರ್ವಜನಿಕ ಸಾರಿಗೆ ಸೇರಿದಂತೆ ಸರ್ಕಾರದ ಎಲ್ಲಾ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಹಿಂದಿಯನ್ನು ಕಡ್ಡಾಯವಾಗಿ ಬಳಸಬೇಕೆಂಬ ನೀತಿಯು ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆ ತರಬಾರದು ಎಂಬುದು ಹೋರಾಟಗಾರರ ಬೇಡಿಕೆಯಾಗಿತ್ತು.ಸಾಹಿತಿ ಚಂದ್ರಶೇಖರ ಪಾಟೀಲ ಸೇರಿದಂತೆ ಹಲವು ಕನ್ನಡಪರ ಚಿಂತಕರು ಹಿಂದಿ ಹೇರಿಕೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ತ್ರಿಭಾಷಾ ಸೂತ್ರಕ್ಕೆ ವಿರೋಧ:ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ತ್ರಿಭಾಷಾ ಸೂತ್ರದ ಕುರಿತು ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ತೀವ್ರ ಚರ್ಚೆ ಆರಂಭವಾಯಿತು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದ್ದ ಕರಡಿನಲ್ಲಿ ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಕಲಿಯಬೇಕೆಂಬ ಅರ್ಥ ನೀಡಬಹುದಾದ ಅಂಶಗಳ ಬಗ್ಗೆ ವಿರೋಧ ವ್ಯಕ್ತವಾಯಿತು.ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಹೇರಬಾರದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದರು. ತಮಿಳುನಾಡಿನ ರಾಜಕೀಯ ನಾಯಕರು ಕೂಡ ಈ ಪ್ರಸ್ತಾವದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ನೀತಿಯ ಕರಡಿನಲ್ಲಿ ಬದಲಾವಣೆ ಮಾಡಲಾಯಿತು. ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವುದಿಲ್ಲ ಎಂಬ ಸ್ಪಷ್ಟೀಕರಣ ನೀಡಿಲಾಯಿತು.ಈ ವಿವಾದವು ಶಿಕ್ಷಣ ನೀತಿಯಲ್ಲಿ ಭಾಷೆಯ ಆಯ್ಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜ್ಯಗಳ ಅಭಿಪ್ರಾಯ ಮತ್ತು ಸ್ಥಳೀಯ ಭಾಷೆಗಳ ಮಹತ್ವವನ್ನು ಪರಿಗಣಿಸಬೇಕೆಂಬ ಬೇಡಿಕೆಯನ್ನು ಬಲಪಡಿಸಿತು.ಹಿಂದಿ ಭಾಷೆ ಕಲಿಕೆಗಲ್ಲ, ಹೇರಿಕೆಗೆ ವಿರೋಧ:ಹಿಂದಿ ಹೇರಿಕೆ ವಿರುದ್ಧದ ಹೋರಾಟವನ್ನು ಹಿಂದಿ ಭಾಷೆಯನ್ನೇ ವಿರೋಧಿಸುವ ಚಳವಳಿ ಎಂದು ಅರ್ಥೈಸುವುದು ಸರಿಯಲ್ಲ. ಹಿಂದಿಯನ್ನು ಮಾತನಾಡುವ ಜನರ ಭಾಷಾ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ, ಕನ್ನಡ ಸೇರಿದಂತೆ ಇತರ ಭಾಷೆಗಳಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯಬೇಕು ಎಂಬುದು ಈ ಹೋರಾಟದ ಪ್ರಮುಖ ಆಶಯವಾಗಿದೆ.ಭಾರತವು ಅನೇಕ ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕ ಗುರುತುಗಳನ್ನು ಹೊಂದಿರುವ ದೇಶ. ಹಿಂದಿ ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿದ್ದರೂ, ಸಂವಿಧಾನವು ಅದನ್ನು ಭಾರತದ ರಾಷ್ಟ್ರ ಭಾಷೆ ಎಂದು ಘೋಷಿಸಿಲ್ಲ.ರಾಷ್ಟ್ರ ಭಾಷೆ, ಅಧಿಕೃತ ಭಾಷೆ ಮತ್ತು ರಾಜ್ಯದ ಅಧಿಕೃತ ಭಾಷೆ ಎಂಬ ಪರಿಕಲ್ಪನೆಗಳು ಒಂದೇ ಅರ್ಥವನ್ನು ಹೊಂದಿಲ್ಲ. ಕರ್ನಾಟಕದಲ್ಲಿ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸಾರ್ವಜನಿಕ ಆಡಳಿತ ಮತ್ತು ಶಿಕ್ಷಣದಲ್ಲಿ ಅದರ ಬಳಕೆಯನ್ನು ಬಲಪಡಿಸುವುದು ಭಾಷಾ ಹಕ್ಕುಗಳ ಚರ್ಚೆಯ ಪ್ರಮುಖ ಭಾಗವಾಗಿದೆ.ಭಾಷಾ ನೀತಿಯಲ್ಲಿ ಒಂದು ಭಾಷೆಗೆ ವಿಶೇಷ ಆದ್ಯತೆ ದೊರೆತಾಗ ಇತರ ಭಾಷೆಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಅಸಮಾನತೆ ಉಂಟಾಗಬಹುದೇ ಎಂಬ ಪ್ರಶ್ನೆಯೂ ಇಲ್ಲಿ ಮಹತ್ವ ಪಡೆಯುತ್ತದೆ. ಭಾಷಾ ಕಲಿಕೆಯು ಸಂವಹನದ ಅವಕಾಶಗಳನ್ನು ವಿಸ್ತರಿಸಬೇಕೇ ಹೊರತು, ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಅಡ್ಡಿಯಾಗಬಾರದು.