ಸಂಗತ: ಗಾಂಧೀಜಿ ಮುಖಕ್ಕೆ ಮಸಿ ಬಳಿದಂತಾಗಿದೆ
ಬೆಂಗಳೂರಿನಲ್ಲಿ ದಾಂಧಲೆಕೋರರು ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಲೇಖಕ-ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಮೇಲೆ ದಾಳಿ ನಡೆಸಿದ್ದು ಬಹಳ ದೊಡ್ಡ ತಪ್ಪು. ಕಳೆದ ಹಲವು ವರ್ಷಗಳಲ್ಲಿ ಸಂಘ ಪರಿವಾರದ ಫ್ಯಾಕ್ಟರಿಯಿಂದ ಹೊರಬರುತ್ತಿರುವ ಸಾಲು ಸಾಲು ಫ್ಯಾಸಿಸ್ಟ್ ಸಿನಿಮಾಗಳ ಆಟಗಳಿಗೆ ಯಾವುದೇ ಅಡ್ಡಿಯಾಗಿಲ್ಲ; ಆಗಬಾರದು ಕೂಡ. ಅವುಗಳ ಸತ್ತ್ವ ಮತ್ತು ಕಲಾತ್ಮಕತೆಯ ಕಿಮ್ಮತ್ತೆಷ್ಟು ಎ

ಬೆಂಗಳೂರಿನಲ್ಲಿ ದಾಂಧಲೆಕೋರರು ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಲೇಖಕ-ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಮೇಲೆ ದಾಳಿ ನಡೆಸಿದ್ದು ಬಹಳ ದೊಡ್ಡ ತಪ್ಪು. ಕಳೆದ ಹಲವು ವರ್ಷಗಳಲ್ಲಿ ಸಂಘ ಪರಿವಾರದ ಫ್ಯಾಕ್ಟರಿಯಿಂದ ಹೊರಬರುತ್ತಿರುವ ಸಾಲು ಸಾಲು ಫ್ಯಾಸಿಸ್ಟ್ ಸಿನಿಮಾಗಳ ಆಟಗಳಿಗೆ ಯಾವುದೇ ಅಡ್ಡಿಯಾಗಿಲ್ಲ; ಆಗಬಾರದು ಕೂಡ. ಅವುಗಳ ಸತ್ತ್ವ ಮತ್ತು ಕಲಾತ್ಮಕತೆಯ ಕಿಮ್ಮತ್ತೆಷ್ಟು ಎನ್ನುವುದು ಬೇರೆ ವಿಷಯ.ಹಾಗೆಯೇ ತಮಗೂ, ತಮ್ಮ ಸಂಘದವರಿಗೂ ಸುಖ ನೀಡುವ ಮಿಥ್ಯಾಸತ್ಯಗಳನ್ನು ಬಿತ್ತರಿಸಲು ಕಾರ್ಯಪ್ಪ ಅಂಥವರಿಗೆ ಎಂದಿಗೂ ಅವಕಾಶವಿರಲಿ. ಅವರ ನಾಟಕವನ್ನು ನೋಡಿ, ಅದನ್ನು ಅತ್ಯಂತ ಕಟುವಾಗಿ (ಆದರೆ ಘನವಾದನುಡಿಗಟ್ಟಿನಲ್ಲಿ) ಟೀಕಿಸಿ, ವಿಶ್ಲೇಷಿಸಲು ನಮಗೆ ಸ್ವಾತಂತ್ಯವಿರಲಿ. ಮತ್ತು, ಅವರಂತಲ್ಲದೆ, ಸತ್ಯವನ್ನು ಶೋಧಿಸಿಕೊಳ್ಳುತ್ತ ಅವರಂಥವರ ನಾಟಕ, ಸಿನಿಮಾಗಳನ್ನು ಎಲ್ಲ ರೀತಿಯಲ್ಲಿಯೂ ಮೀರಿಸುವ ಸತ್ಯ-ಸತ್ತ್ವಯುತ ಕೃತಿಗಳನ್ನು ಬಿತ್ತರಿಸಲು, ಆಡಲು ನಮಗೂ ಅವಕಾಶವಿರಲಿ.ಅಷ್ಟರಮೇಲೆ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೃತಿಯೊಂದರ ಪ್ರಕಟಣೆಗೋ ಪ್ರಯೋಗಕ್ಕೋ ತಡೆಯೊಡ್ಡುವ ಸ್ವಾತಂತ್ರ್ಯವೂ ನಮಗಿದೆ. ಆದರೆ, ಹಾಗೆ ಮಾಡುವುದು ಅಗ್ಗವಾದ ತಂತ್ರಗಾರಿಕೆ ಆಗುತ್ತದೆ, ಅಷ್ಟೇ. ನಮಗೆ ಆಗದ, ನಾವು ಒಪ್ಪದ ಕೃತಿಯ ದೋಷಗಳನ್ನು ಇಕ್ಕಿಮೆಟ್ಟು ವಂಥ ಸತ್ತ್ವವಿರುವ ಕಲಾಕೃತಿಯನ್ನು ರಚಿಸುವುದು, ಬಿತ್ತರಿಸುವುದೇ ನಿಜ ಧರ್ಮಯುತವಾದ ಮಾರ್ಗ. ‘ಗದರ್: ಏಕ್ ಪ್ರೇಮ್ ಕಥಾ’ ಮತ್ತು ‘ಧುರಂಧರ್’ ಥರದ ಸಿನಿಮಾಗಳಿಗೆ, ‘ವೀರ್-ಜಾ಼ರಾ’, ‘ಇಕ್ಕೀಸ್’, ‘ಮುಲ್ಕ್’ಥರದ ಸಿನಿಮಾಗಳು ಉತ್ತರವಾಗಬೇಕೇ ಹೊರತು ಕೋರ್ಟು-ಕಚೇರಿಗಳಲ್ಲಿ ಹೂಡುವ ದಾವೆಗಳಲ್ಲ.ದಾಳಿ ನಡೆಸಿದವರ ಪಕ್ಷದ ನಾಯಕರು ‘ಬಿಜೆಪಿ-ಸಂಘ ಪರಿವಾರದ್ದು ದ್ವೇಷದ ಮಂತ್ರ, ನಮ್ಮದು ಪ್ರೇಮದ ಮಂತ್ರ’ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಹಿಂಬಾಲಕರ ನಡೆ ಅದಕ್ಕೆ ತದ್ವಿರುದ್ಧವಾದ್ದಾಗಿದೆ. ಮೊನ್ನೆ ನಡೆದ ದಾಳಿಯಿಂದ ಗಾಂಧೀಜಿ ಮುಖಕ್ಕೇ ಮಸಿ ಬಳಿದಂತಾಗಿದೆ.ಹೀಗೆಲ್ಲ ದಾಳಿ ಮಾಡುವುದು ಹಿಂದೂತ್ವ, ಲಿಂಗಾಯತ, ಇಸ್ಲಾಂ, ಕ್ರೈಸ್ತ, ಬೌದ್ಧ ಮುಂತಾದ ಮತಗಳ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ವಿವಿಧ ದೇಶದ ಮೂಲಭೂತವಾದಿಗಳ ನೀಚತನ-ಪಾಖಂಡಿತನದಿಂದ ಬೇರೆಯಾದ್ದಲ್ಲ.ಬೆಂಗಳೂರಿನ ಪೊಲೀಸರು ಈಗ ಈ ಪಾಖಂಡಿತನಕ್ಕೆ ತಲೆಬಾಗಿದ್ದಾರೆ; ಕಾನೂನು ಮತ್ತು ಶಾಂತಿಪಾಲನೆಯ ನೆವ ನೀಡಿ ನಾಟಕದ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಇದು ಅವರಿಂದ ಆಗುತ್ತಿರುವ ಕರ್ತವ್ಯಲೋಪವೇ ಸರಿ. ಬೇರೆ ಬೇರೆ ಕಡೆಯ ಪ್ರಭುತ್ವ ಮತ್ತು ಸರ್ಕಾರಗಳಿಂದ ಈ ತರಹದ ಲೋಪವಾಗುತ್ತಿರುವುದು ಇದೇನೂ ಮೊದಲಸಲವಲ್ಲ.ಇಸ್ಲಾಮೀಯ ಮೂಲಭೂತವಾದಿಗಳಿಗೆ ಮಣಿದು ರಾಜೀವ್ ಗಾಂಧಿ ಸರ್ಕಾರ ಸಲ್ಮಾನ್ ರಶ್ದಿ ಅವರ ‘ಸಟಾನಿಕ್ ವರ್ಸಸ್’ ಕಾದಂಬರಿಯನ್ನು ನಿಷೇಧಿಸಿದ್ದು; ಈಚೆಗೆ, ಹೆಚ್ಚುಕಡಿಮೆ ಮಾರಣಾಂತಿಕವಾದ ದಾಳಿಗೆ ತುತ್ತಾದ ರಶ್ದಿ ಅವರಿಗೆ ಇಂದಿಗೂ ಕೊಲೆಯ ಬೆದರಿಕೆ ಇರುವುದು; ಬಾಂಗ್ಲಾದೇಶದ ಸರ್ಕಾರ ತಸ್ಲಿಮಾ ನಸ್ರೀನ್ ಅವರನ್ನು ದೇಶದಿಂದ ಹೊರಹಾಕಿದ್ದು; ಪಶ್ಚಿಮ ಬಂಗಾಳ ದಲ್ಲಿ ಹಿಂದೆ ಇದ್ದ ಎಡರಂಗದ ಹಾಗೂ ಟಿಎಂಸಿ ಸರ್ಕಾರಗಳು ಆಕೆಗೆ ಸರಿಯಾದ ಕಾಪು ನೀಡದೇ ಇದ್ದುದರಿಂದ ಆಕೆ ಆ ರಾಜ್ಯವನ್ನೇ ಬಿಟ್ಟು ಹೋದದ್ದು; ಹಿಂದೆ, ಕೇರಳಂ ರಾಜ್ಯದಲ್ಲಿ ಕ್ರೈಸ್ತ ಮತಾಂಧರು ‘ದ ಲಾಸ್ಟ್ ಟೆಂಪ್ಟೇಷನ್ ಆಫ್ ಕ್ರೈಸ್ಟ್’ ಚಲನಚಿತ್ರದ ವಿರುದ್ಧ ಉಗ್ರವಾಗಿ ಪ್ರತಿಭಟಿಸಿ, ಅದರ ನಿಷೇಧ ಆಗುವಂತೆ ನೋಡಿ ಕೊಂಡದ್ದು; ಹಿಂದೂತ್ವ-ಸಂಘ ಪರಿವಾರ-ಬಿಜೆಪಿ ಫ್ಯಾಸಿಸ್ಟ್ ಧೋರಣೆಯನ್ನು ವಿರೋಧಿಸುವ ಅಥವಾ ಅದಕ್ಕೆ ಒಗ್ಗದಿರುವ ಎಂ.ಎಫ್. ಹುಸೇನ್, ಮುನವ್ವರ್ ಫಾರೂಕಿ, ಕುನಾಲ್ kAಮ್ರಾ, ವೀರ್ ದಾಸ್, ಆನಂದ ಪಟವರ್ಧನ್, ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಪಡುಕೋಣೆ, ಪೆರುಮಾಳ್ ಮುರುಗನ್ ಮುಂತಾದ ಕಲಾವಿದರಿಗೆ ಬಜರಂಗದಳ, ವಿಶ್ವಹಿಂದೂ ಪರಿಷತ್ಗಳಿಂದಲೋ, ಜಾತಿವಾದಿಗಳಿಂದಲೋ ಕೊಲೆಯ ಬೆದರಿಕೆ, ಅವರ ಕಲೆಯ ಸರ್ವನಾಶದ ಬೆದರಿಕೆ ಬಂದದ್ದು; ಇದೇ ಹಿಂದೂತ್ವವಾದಿ ಫ್ಯಾಸಿಸ್ಟರ ದಾಳಿಯಿಂದಾಗಿ ಜೆಎನ್ಯು, ಜಾಧವಪುರ, ಅಶೋಕ, ಅಜೀಂ ಪ್ರೇಮ್ಜೀ ಥರದ ವಿಶ್ವವಿದ್ಯಾಲಯಗಳಲ್ಲಿಯೂ, ಇತರ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿಯೂ ಮುಕ್ತವಾದ ಆಲೋಚನೆ, ಸಂವಾದಕ್ಕೆ ಅವಕಾಶವಿಲ್ಲವಾಗಿ, ಭಯದ ವಾತಾವರಣವಿರುವುದು – ಇದೆಲ್ಲ ನಮ್ಮ ಕಣ್ಣಮುಂದೆಯೇ ಇದೆ.ಅಷ್ಟೇಕೆ, ಬೆಂಗಳೂರಿನಲ್ಲಿಯೇ, ಪ್ಯಾಲೆಸ್ತೀನೀಯರ ಹಕ್ಕುಗಳನ್ನು ಬೆಂಬಲಿಸಿ, ಇಸ್ರೇಲ್ ಎಂಬ ಅಸುರೀ ರಾಷ್ಟ್ರವನ್ನು ವಿರೋಧಿಸಿ ನಡೆಯಲಿದ್ದ ಅನೇಕ ಸಭೆಗಳನ್ನು (ಕೇವಲ ಒಳಾಂಗಣಗಳಲ್ಲಿ ನಡೆಯಲಿದ್ದುವನ್ನು ಕೂಡ) ಪೊಲೀಸರೇ ಧಮಕಿ ಹಾಕಿ ತಡೆಯೊಡ್ಡಿದ್ದಾರೆ; ಫ್ರೀಡಂ ಪಾರ್ಕೊಂದನ್ನು ಬಿಟ್ಟರೆ ಬೇರೆಲ್ಲಿಯೂ ಪ್ರತಿಭಟನೆಯ ಸಭೆಗಳನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್ ಆಜ್ಞೆಯಿದೆ ಎಂದು ಹೇಳುತ್ತ, ಊರಿನ ಬೇರೆಡೆ, ಎಸ್ಐಆರ್ ವಿರುದ್ಧದ ಸಭೆಗಳೂ ಸೇರಿದಂತೆ ಶಾಂತಿಯುತವಾದ ಸಭೆಗಳನ್ನು ನಡೆಸುವವರ ಮೇಲೆ ಬರ್ಬರವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.ಒಂದು ಕಡೆ ಎಲ್ಲ ಬಣ್ಣ, ಎಲ್ಲ ಬಣಗಳ ಅನಾಗರಿಕ ದಾಳಿಕೋರರು, ಮತ್ತೊಂದು ಕಡೆ ಕರ್ತವ್ಯಲೋಪ ಎಸಗುವ, ದೌರ್ಜನ್ಯ ಮಾಡುವ ಪ್ರಭುತ್ವಗಳು, ಸರ್ಕಾರಗಳು. ಇಂಥಲ್ಲಿ ನಾಗರಿಕತೆ, ಸಭ್ಯತೆ, ಶುದ್ಧ ಹೃದಯವಂತಿಕೆಯ ಕಲೆ, ಧೀಶಕ್ತಿ ಎಲ್ಲಿ?