ಆತ್ಮ ಗೌರವದ ಸಮ್ಮಾನ
ಅಗತ್ಯ ಎನ್ನುವುದು ನಾವು ಭಾವಿಸುವುದರಲ್ಲಿದೆ. ಕೆಲವರಿಗೆ ಒಂದು ಹೊತ್ತಿನ ಊಟ ಮಾತ್ರ ಅಗತ್ಯವಾದರೆ ಮತ್ತೆ ಕೆಲವರಿಗೆ ಮನೆಯ ತುಂಬಾ ದವಸ ಧಾನ್ಯ; ಇನ್ನು ಕೆಲವರಿಗೆ ಧನ, ಕನಕ, ವಸ್ತು, ವಾಹನಗಳು; ಅವರವರ ಆದ್ಯತೆಗಳಾಗಿದ್ದಾಗ ಅವು ಅವರ ಅಗತ್ಯವಾಗಿರುತ್ತವೆ.ಆಗ ದೇಶವಿನ್ನೂ ಮಹಾರಾಜರ ಕೈಲಿತ್ತು. ‘ಚಾರು ಚಿಂತಾಮಣಿ’ ಗ್ರಂಥದ ಕರ್ತೃವಾದ ರಾಮನಾಥ ಒಬ್ಬ ತರ್ಕ ಸಿದ್ಧಾಂತಿ, ಮಹಾ

ಅಗತ್ಯ ಎನ್ನುವುದು ನಾವು ಭಾವಿಸುವುದರಲ್ಲಿದೆ. ಕೆಲವರಿಗೆ ಒಂದು ಹೊತ್ತಿನ ಊಟ ಮಾತ್ರ ಅಗತ್ಯವಾದರೆ ಮತ್ತೆ ಕೆಲವರಿಗೆ ಮನೆಯ ತುಂಬಾ ದವಸ ಧಾನ್ಯ; ಇನ್ನು ಕೆಲವರಿಗೆ ಧನ, ಕನಕ, ವಸ್ತು, ವಾಹನಗಳು; ಅವರವರ ಆದ್ಯತೆಗಳಾಗಿದ್ದಾಗ ಅವು ಅವರ ಅಗತ್ಯವಾಗಿರುತ್ತವೆ.ಆಗ ದೇಶವಿನ್ನೂ ಮಹಾರಾಜರ ಕೈಲಿತ್ತು. ‘ಚಾರು ಚಿಂತಾಮಣಿ’ ಗ್ರಂಥದ ಕರ್ತೃವಾದ ರಾಮನಾಥ ಒಬ್ಬ ತರ್ಕ ಸಿದ್ಧಾಂತಿ, ಮಹಾನ್ ಜ್ಞಾನಿ, ಅಧ್ಯಯನದಲ್ಲಿ ಸದಾ ತೊಡಗಿಕೊಂಡಿದ್ದವನು. ಇದ್ದದ್ದು ಊರ ಹೊರಗಿನ ಗುಡಿಸಲಲ್ಲಿ. ನೋಡುಗರಿಗೆ ಅವರ ಬಡತನ ಎದ್ದುಕಾಣುತ್ತಿತ್ತು. ಮನೆವಾರ್ತೆಯ ಜವಾಬ್ದಾರಿಯೆಲ್ಲಾ ಆತನ ಪತ್ನಿಯದ್ದಾಗಿತ್ತು. ಬರವಣಿಗೆ, ಜ್ಞಾನ, ತರ್ಕ ಇಂಥಾ ವಿಷಯಗಳಿಂದ ಒಂದಿಷ್ಟು ಹಣ ಸಿಗುತ್ತಿತ್ತು. ಅದು ಅವರ ಮಕ್ಕಳಿಗೆ ಸಾಕಾಗುತ್ತಿತ್ತು.ಒಮ್ಮೆ ರಾಮನಾಥನ ಪತ್ನಿ ಹುಣಸೆ ಚಿಗುರು ಕುಯ್ಯುತ್ತಿದ್ದುದನ್ನು ನೋಡಿದ ದೊಡ್ಡ ಮಗ, ‘ಅಮ್ಮಾ, ಇವತ್ತೂ ಹುಣಸೆ ಚಿಗುರಿನ ಅಡುಗೆಯೇ? ಬೇರೆ ಏನೂ ಇಲ್ಲವೆ’ ಎಂದು ಜಗಳ ಮಾಡಿದ. ‘ಮರದಲ್ಲಿ ಬೇಕಾದಷ್ಟು ಹುಣಸೆ ಚಿಗುರಿದೆ, ನಾಲಿಗೆಗೆ ರುಚಿಯೆನ್ನಿಸುವ ಖಾದ್ಯವನ್ನು ಮಾಡುವೆ, ನಿನಗೆ ಇನ್ನೇನು ಬೇಕು?’ ಎಂದಳು ತಾಯಿ. ಮಗನಿಗೆ ಅಸಮಾಧಾನ ಆದರೂ ಮನೆಯ ಪರಿಸ್ಥಿತಿ ನೆನೆದು ಸುಮ್ಮನಾದ.ಈ ವಿಷಯವನ್ನು ಯಾರೋ ರಾಜನಿಗೆ ಮುಟ್ಟಿಸಿದರು. ಅಂಥಾ ಜ್ಞಾನಿಯ ಪರಿಸ್ಥಿತಿ ಹೀಗಿದೆಯೇ? ಈಗಲೇ ಏನಾದರೂ ಪರಿಹಾರ ಒದಗಿಸಬೇಕು ಎಂದು ರಾಮನಾಥನ ಮನೆಗೆ ರಾಜ ಬಂದ. ಆನೆ, ಕುದುರೆ, ಭಟರ ಸಮೇತ ಬಂದ ರಾಜನನ್ನು ಪ್ರಶಾಂತನಾಗಿಯೇ ಸ್ವಾಗತಿಸುತ್ತಾನೆ ರಾಮನಾಥ. ಆಗ ರಾಜ, ‘ಸರಸ್ವತಿ ಪುತ್ರರಾದ ನಿಮ್ಮ ಈ ಸ್ಥಿತಿಯನ್ನು ತಿಳಿದು ಬಂದಿರುವೆ. ಕೇಳಿ, ನಿಮಗೆ ಏನು ಬೇಕು?’ ಎನ್ನುತ್ತಾನೆ. ‘ನನ್ನ ಅಗತ್ಯಗಳನ್ನೆಲ್ಲಾ ನನ್ನ ಹೆಂಡತಿ ಪೂರೈಸುತ್ತಿದ್ದಾಳೆ. ನನಗೆ ಯೋಚಿಸಲು ಸಮಯ ಮತ್ತು ಬರೆಯಲು ಬೇಕಾಗುವ ಏಕಾಂತ ಇದ್ದರೆ ಅಷ್ಟು ಸಾಕು’ ಎನ್ನುತ್ತಾನೆ ರಾಮನಾಥ. ಅಸಮಾಧಾನದಿಂದ, ‘ರಾಜನಾದ ನಾನು ನಿನ್ನ ಮನೆಯ ಬಾಗಿಲಿಗೆ ಬಂದು ಕೊಡುವೆನೆಂದರೂ ಬೇಡವೆನ್ನುತ್ತೀಯಲ್ಲಾ!’ ಎಂದಾಗ, ರಾಮನಾಥ, ‘ನನ್ನ ಅಗತ್ಯ ಏನೂ ಇಲ್ಲ. ನನ್ನಾಕೆಗೆ ಏನಾದರೂ ಬೇಕಿದ್ದರೆ ಕೊಡು’ ಎನ್ನುತ್ತಾನೆ. ಆಗ ಆಕೆ, ‘ನನ್ನ ಬಟ್ಟೆಗಳು ಇನ್ನೂ ಹರಿದಿಲ್ಲ, ಅಡುಗೆ ಮನೆಯ ಮಡಿಕೆಗಳು ಒಡೆದಿಲ್ಲ, ಮನೆಯೂ ಸೋರುತ್ತಿಲ್ಲ. ಸುತ್ತಲಿನ ಕಾಡು ಒಂದಿಲ್ಲಾ ಒಂದು ಆಹಾರವನ್ನು ಒದಗಿಸುತ್ತಲೇ ಇದೆ. ನನ್ನಲ್ಲಿ ದುಡಿಯುವ ಶಕ್ತಿ ಚೆನ್ನಾಗೇ ಇದೆ. ನನ್ನ ಗಂಡನ ಆರೋಗ್ಯ ಆಯಸ್ಸು ಗಟ್ಟಿಯಾಗಿದೆ, ಅವರಲ್ಲಿ ಜ್ಞಾನ ಇರುವವರೆಗೂ ನನಗೆ ಬೇರೆ ಯಾವ ಅಗತ್ಯವೂ ಇಲ್ಲ’ ಎನ್ನುತ್ತಾಳೆ.ಯಾರೋ ಕೊಡುತ್ತೇನೆ ಎಂದಾಕ್ಷಣ ಸ್ವಾಭಿಮಾನವನ್ನೂ ಮರೆತು ಬೇಡುವ ಸ್ಥಿತಿಯನ್ನು ತಲುಪುವ ಮನುಷ್ಯನ ಮನಃಸ್ಥಿತಿ ಎಷ್ಟು ಕೆಟ್ಟದು! ಸಂಪತ್ತು ಕೇವಲ ಹಣ ಮಾತ್ರವಲ್ಲ ಎಂದು ಹೇಳಿದ ಆ ಮಹಾತಾಯಿಯ ಅಚಲವಾದ ನಿಲುವಿಗೆ ಬೆರಗಾದ ರಾಜ ಆಕೆಯ ಕಾಲಿಗೆ ನಮಿಸಿ, ‘ನಿನ್ನ ಆತ್ಮತೃಪ್ತಿಯ ಎದುರು ನನ್ನಲ್ಲಿರುವ ಸಂಪತ್ತು ಏನೂ ಅಲ್ಲ’ ಎನ್ನುತ್ತಾನೆ.ಎಲ್ಲರಲ್ಲೂ ಯಾವುದಕ್ಕೋ ಒಂದಕ್ಕೆ ಕೊರತೆ ಇದ್ದೇ ಇರುತ್ತದೆ. ಆದರೆ, ಅದನ್ನೂ ಮೀರಿ ಆತ್ಮಗೌರವದಿಂದ ಮನುಷ್ಯ ಪಡೆದುಕೊಳ್ಳುವ ಸಮ್ಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ.