ಪ್ರಜಾವಾಣಿ ಕರುನಾಡೋತ್ಸವ| ‘ಭರತೇಶ ವೈಭವ’ಕ್ಕೆ ಪ್ರೇರಣೆಯಾದ ‘ನಗರೇಶ್ವರ’
ಕನ್ನಡ ಸಾಹಿತ್ಯ ಲೋಕದಲ್ಲಿ ಸಾಂಗತ್ಯ ಕಾವ್ಯಕ್ಕೆ ಹೊಸ ಮೆರುಗು ನೀಡಿದ ಮಹಾಕವಿ ದಕ್ಷಿಣ ಕನ್ನಡ ಜಿಲ್ಲೆಯ ರತ್ನಾಕರವರ್ಣಿ. ಜೈನಕಾಶಿ ಎಂದೇ ಕರೆಯಲಾಗುವ ಮೂಡುಬಿದಿರೆಯ ಬೆಟ್ಗೇರಿಯಲ್ಲಿ ಸುಮಾರು 16ನೇ ಶತಮಾನದಲ್ಲಿ ಅವರ ಜನನವಾಗಿತ್ತು ಎನ್ನಲಾಗುತ್ತಿದೆ.ಜೈನ್ಪೇಟೆ-ಬೆಟ್ಗೇರಿ ಮುಖ್ಯರಸ್ತೆ ಸನಿಹದಲ್ಲಿರುವ ‘ನಗರೇಶ್ವರ' ಎಂಬ ವಿಶಿಷ್ಟ ನಾಮಾಂಕಿತದ ಮುಳಿಹುಲ್ಲಿನ ಮನೆಯಲ್ಲಿ

ಕನ್ನಡ ಸಾಹಿತ್ಯ ಲೋಕದಲ್ಲಿ ಸಾಂಗತ್ಯ ಕಾವ್ಯಕ್ಕೆ ಹೊಸ ಮೆರುಗು ನೀಡಿದ ಮಹಾಕವಿ ದಕ್ಷಿಣ ಕನ್ನಡ ಜಿಲ್ಲೆಯ ರತ್ನಾಕರವರ್ಣಿ. ಜೈನಕಾಶಿ ಎಂದೇ ಕರೆಯಲಾಗುವ ಮೂಡುಬಿದಿರೆಯ ಬೆಟ್ಗೇರಿಯಲ್ಲಿ ಸುಮಾರು 16ನೇ ಶತಮಾನದಲ್ಲಿ ಅವರ ಜನನವಾಗಿತ್ತು ಎನ್ನಲಾಗುತ್ತಿದೆ.ಜೈನ್ಪೇಟೆ-ಬೆಟ್ಗೇರಿ ಮುಖ್ಯರಸ್ತೆ ಸನಿಹದಲ್ಲಿರುವ ‘ನಗರೇಶ್ವರ' ಎಂಬ ವಿಶಿಷ್ಟ ನಾಮಾಂಕಿತದ ಮುಳಿಹುಲ್ಲಿನ ಮನೆಯಲ್ಲಿ ರತ್ನಾಕರವರ್ಣಿ ಜನಿಸಿದ್ದರು. ಆಕಸ್ಮಿಕವಾಗಿ ನಡೆದ ಘಟನೆಯೊಂದರಲ್ಲಿ ಮುಳಿಹುಲ್ಲಿನ ಮನೆ ಬೆಂಕಿಗಾಹುತಿಯಾಗಿ ಮಹತ್ವದ ದಾಖಲೆಗಳು ಸುಟ್ಟುಹೋಗಿದ್ದವು. ಆದರೆ ರತ್ನಾಕರವರ್ಣಿಯ ಸಾಹಿತ್ಯಕ್ಕೆ ಪ್ರೇರಣೆಯಾಗಿದ್ದ ಕಲ್ಲಿನ ಕೋಣೆ, ತೂಗು ಮಂಚಕ್ಕೆ ಧಕ್ಕೆ ಆಗಿಲ್ಲವಂತೆ. ತುಳುನಾಡಿನ ರಾಜ ಗಾಂಭೀರ್ಯವನ್ನು ಹೋಲುವ ಈ ಮನೆಯನ್ನು ಕಲ್ಲಿನಿಂದ ನಿರ್ಮಿಸಲಾಗಿತ್ತು. ರತ್ನಾಕರವರ್ಣಿ ಬಾಳಿ ಬದುಕಿದ್ದ ಮನೆ, ಮನೆತನದ ಬಾಂಧವ್ಯ ಅಲ್ಲಿಗೆ ಕೊನೆಯಾಗಬಾರದೆಂಬ ಉದ್ದೇಶದಿಂದ ಅದೇ ಮನೆತನದವರಾದ ಅಮ್ಮಣ್ಣಿ ಶೆಡ್ತಿ ಮತ್ತು ಸಂಕಮ್ಮ ಶೆಡ್ತಿ ಸಹೋದರಿಯರ ಶ್ರಮದ ಫಲವಾಗಿ ನಗರೇಶ್ವರ ಮನೆ ನವೀಕರಣಗೊಂಡು ರಾಜಮನೆತನವನ್ನು ಹೋಲುವ ತುಳುನಾಡಿನ ಪರಂಪರೆಯ ಸುಂದರ ಕಲ್ಲಿನ ಕಟ್ಟಡದಲ್ಲಿ ಹಂಚಿನ ಮನೆ ನಿರ್ಮಾಣಗೊಂಡಿತ್ತು.ಪ್ರಜಾವಾಣಿ ಕರುನಾಡೋತ್ಸವ| ಸಾಹಿತಿಗಳ ಊರು–ಮನೆಯ ಈಗಿನ ಸ್ಥಿತಿಗತಿ: ‘ಚದುರಂಗ‘ಭರತೇಶ ವೈಭವಕ್ಕೆ ಪ್ರೇರಣೆಯಾದ ತೂಗುಮಂಚ:ರತ್ನಾಕರವರ್ಣಿ ಶ್ರೇಷ್ಠ ಹಾಗೂ ಕ್ರಾಂತಿಕಾರಿ ಕೃತಿ ‘ಭರತೇಶ ವೈಭವ'. ಸಾಂಗತ್ಯ ಛಂದಸ್ಸಿನ ಸೊಗಡು ಹೊಂದಿರುವ ಈ ಕಾವ್ಯ ರಚನೆಗೆ ಪ್ರೇರಣೆಯಾದದ್ದು ಅವರ ನಗರೇಶ್ವರ ಮನೆಯ ಕಲ್ಲಿನ ಗೋಡೆಯ ಕೋಣೆಯಲ್ಲಿರುವ ತೂಗುಮಂಚ. ಈ ಮಂಚದಲ್ಲಿ ಕುಳಿತು ಅವರು ಕವಿತೆಯ ಕೆಲ ಸಾಲುಗಳನ್ನು ಬರೆದಿದ್ದರು ಎನ್ನಲಾಗಿದೆ.ರತ್ನಾಕರವರ್ಣಿ ಸಾಹಿತ್ಯ ಕೃಷಿ ಮಾಡಿದ ಪುರಾತನ ನಗರೇಶ್ವರ ಮನೆಗೆ ಅನೇಕ ಸ್ವಾಮೀಜಿಗಳು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಭೇಟಿ ನೀಡಿ ಈ ಮನೆಯಲ್ಲಿ ಅರಳಿದ ಸಾಹಿತ್ಯ ಕೃಷಿ, ಮನೆಯ ಪಾರಂಪರಿಕ ಸೊಬಗನ್ನು ಕಂಡು ಖುಷಿಪಟ್ಟಿದ್ದಾರೆ. 1990ರಲ್ಲಿ ಮೂಡುಬಿದಿರೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಗರೇಶ್ವರ ಮನೆಯಲ್ಲಿ ಕಯ್ಯಾರ ಕಿಂಞಣ್ಣ ರೈ ಅಧ್ಯಕ್ಷತೆಯಲ್ಲಿ ದಿನಪೂರ್ತಿ ಕವಿಗೋಷ್ಠಿ ನಡೆದಿತ್ತು.ಮೂಡುಬಿದಿರೆ ಜೈನಮಠದ ಈ ಹಿಂದಿನ ಸ್ವಾಮೀಜಿಯವರ ಜನ್ಮಸ್ಥಾನವೂ ಇದೇ ನಗರೇಶ್ವರ ಮನೆ. ಮಹಾಕವಿಯ ಹೆಸರನ್ನು ಚಿರಸ್ಥಾಯಿಗೊಳಿಸಲು ಮೂಡುಬಿದಿರೆಯಲ್ಲಿ ಅನೇಕ ಕೆಲಸಗಳು ಆಗಿವೆ. ಹಿರೇಬಸದಿಯಲ್ಲಿ 50 ವರ್ಷಗಳ ಹಿಂದೆ ಆನಡ್ಕ ಧರ್ಮಪಾಲ ಜೈನ್ ಮತ್ತು ಪಂಡಿತ ದೇವಕುಮಾರ್ ಶಾಸ್ತ್ರಿಗಳ ಪ್ರೇರಣೆಯಿಂದ ಮಹಾಕವಿ ರತ್ಕಾಕರವರ್ಣಿ ಮಂಟಪ ನಿರ್ಮಿಸಲಾಗಿತ್ತು. ಜೈನ್ ಪೇಟೆಯಲ್ಲಿ ದಿಗಂಬರ ಜೈನವಿದ್ಯಾವರ್ಧಕ ಸಂಘದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ 2018ರಲ್ಲಿ ‘ಮಹಾಕವಿ ರತ್ನಾಕರವರ್ಣಿ ಸ್ಮೃತಿ ಮಂಟಪ’ ನಿರ್ಮಿಸಲಾಗಿದೆ. ಪುರಸಭೆ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಪ್ರವೇಶ ದ್ವಾರಕ್ಕೆ ‘ಮಹಾಕವಿ ರತ್ನಾಕರವರ್ಣಿ ನಗರ' ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಆಳ್ವಾಸ್ ನುಡಿಸಿರಿ ವೇದಿಕೆಗೆ ಮಹಾಕವಿ ರತ್ನಾಕರವರ್ಣಿ ವೇದಿಕೆ ಎಂದು ಹೆಸರಿಡಲಾಗಿದೆ. ಮಹಾವೀರ ಸಂಘದ ಬೆಳ್ಳಿಹಬ್ಬ ಸಂಸ್ಮರಣ ಕಟ್ಟಡವನ್ನು ಮಹಾಕವಿ ರತ್ನಾಕರವರ್ಣಿ ಭವನ ಎಂದು ಕರೆಯಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಹಾಕವಿ ರತ್ನಾಕರವರ್ಣಿ ಹೆಸರಿನಲ್ಲಿ ಅಧ್ಯಯನ ಪೀಠ ಇದೆ.ಪುರಾತನ ನಗರೇಶ್ವರ ಮನೆಯನ್ನು ನೋಡಿಕೊಳ್ಳುತ್ತಿರುವವರು ದಿ.ನಗರೇಶ್ವರ ರವಿರಾಜ್ ಅವರ ಪತ್ನಿ ಕೇಸರಿ ಮತ್ತು ಸಹೋದರಿ ಮಣಿರತ್ನ. ಮಣಿರತ್ನ ಅವರು ಕತೆ, ಕವನಗಳನ್ನು ಬರೆಯುತ್ತಾ ಈ ಮನೆಯಲ್ಲಿ ಸಾಹಿತ್ಯಿಕ ಚಟುವಟಿಕೆ ಮುಂದುವರಿಸುತ್ತಾ ಬಂದಿದ್ದು ಅವರಿಗೆ ಕೇಸರಿ ಪ್ರೋತ್ಸಾಹ ನೀಡುತ್ತಿದ್ದಾರೆ.ಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು–ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತಹಲವು ಕಾವ್ಯ; ಅನೇಕ ನಾಮದೇಶಿ ಸೊಗಡಿನ ಭಾಷೆ ಬಳಕೆಗೆ ಹೆಸರಾಗಿರುವ ರತ್ನಾಕರವರ್ಣಿ ಹಲವು ಕಾವ್ಯಗಳನ್ನು ರಚಿಸಿದ್ದಾರೆ. ಭರತೇಶವೈಭವ, ತ್ರಿಲೋಕ ಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ ಮುಂತಾದವು ಅವರ ಗ್ರಂಥಗಳು. ರತ್ನಾಕರ, ರತ್ನಾಕರ ಅಣ್ಣ, ರತ್ನಾಕರಸಿದ್ಧ ಎಂಬ ಹೆಸರುಗಳೂ ಅವರಿಗೆ ಇದ್ದವು. ರತ್ನಾಕರವರ್ಣಿ ಕಾವ್ಯಗಳಲ್ಲಿ ಸ್ವಂತ ಜೀವನದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ತುಳು ಭಾಷೆಯಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ರತ್ನಾಕರವರ್ಣಿ ತೆಲುಗು ಭಾಷೆಯನ್ನಾಡುವ ಪ್ರದೇಶಗಳನ್ನು ಸುತ್ತಿರಬೇಕು. ಹೀಗಾಗಿ ‘ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು, ರಯ್ಯ ಮಂಚಿದೆಯೆನೆ ತೆಲುಗಾ ಅಯ್ಯಯ್ಯ ಎಂಚಪೋರ್ಲಾಂಡೆಂದು ತುಳುವರು ಮೈಯ್ಯುಬ್ಬಿ ಕೇಳಬೇಕಣ್ಣಾ’ ಎಂಬ ಸಾಲುಗಳನ್ನು ಬರೆಯಲು ಸಾಧ್ಯವಾಗಿರಬೇಕು ಎಂದು ವಿದ್ವಾಂಸರು ಹೇಳುತ್ತಾರೆ. ಭರತೇಶ ವೈಭವದಲ್ಲಿ 80 ಸಂಧಿಗಳು ಹಾಗೂ 10 ಸಾವಿರ ಪದ್ಯಗಳಿದ್ದು ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕ ಕೀರ್ತಿವಿಜಯ, ಮೋಕ್ಷವಿಜಯ ಎಂದು ಕಾವ್ಯವನ್ನು ವಿಂಗಡಿಸಲಾಗಿದೆ. ಭರತೇಶನ ಚರಿತ್ರೆಯೇ ಭರತೇಶ ವೈಭವ. ಈ ಕೃತಿ ವೈಭವ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ಮರಾಠಿ ಭಾಷೆಗಳಿಗೆ ಅನುವಾದಗೊಂಡಿದೆ. ಪ್ರಜಾವಾಣಿ ಕರುನಾಡೋತ್ಸವ| ಸಂಚಿ ಹೊನ್ನಮ್ಮ: ಸ್ತ್ರೀಪರ ಚಿಂತನೆಯ ಕಾವ್ಯ ಕೋಗಿಲೆ